Opinion

ಎತ್ತ ಸಾಗುತ್ತಿದ್ದೇವೆ ನಾವು ? | ಮುಂದಿನ ದಿನಗಳಲ್ಲಿ ಹಾಲಿಗೆ ಹಾಹಾಕಾರ ಬಂದೇ ಬರಲಿದೆಯಾ…?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೆಲ ದಿನದ ಹಿಂದೆ ಪರಿಚಯದ ಪಶುವೈದ್ಯರು (Vetorniry doctor) ಮನೆಗೆ ಬಂದಿದ್ದರು. ಮಾತಿನ ಮಧ್ಯೆ ಅನೇಕ ಆಘಾತಕಾರಿ ವಿಷಯಗಳನ್ನ ಹೇಳಿದರು.

Advertisement
Advertisement

ಸಾಂಪ್ರದಾಯಿಕವಾಗಿ ದನ ಸಾಕುವವರೆಲ್ಲ(Cattle breeder) ದನಗಳನ್ನು ಮಾರಾಟ ಮಾಡಿ ಖಾಲಿಹಟ್ಟಿಯನ್ನು ಇಟ್ಟುಕೊಂಡಿದ್ದಾರೆ. ದಿನವೊಂದರ 500 ರಿಂದ 600 ಲೀಟರ್ನವರೆಗೆ ಸಂಗ್ರಹವಾಗುತ್ತಿದ್ದ ಹಾಲಿನ ಸೊಸೈಟಿಗಳ(Milk society) ಸಂಗ್ರಹ ಇಂದು 50 ಲೀಟರ್ ನಿಂದ ಕೆಳಗೆ ಇವೆಯಂತೆ. ಮುಂದಿನ ದಿನಗಳಲ್ಲಿ ಹಾಲಿಗೆ ಹಾಹಾಕಾರ ಬಂದೇ ಬರಲಿದೆ ಅಂತ ತಿಳಿಸಿದರು. ಯಾಕೆ ಮನುಷ್ಯರು(Human Being) ಇಷ್ಟೊಂದು ಸ್ವಾರ್ಥಿಗಳಾಗುತ್ತಾರೆ? ಎರಡು ಎಕರೆ ತೋಟ ಇರುವವನಿಗೆ 4 ಎಕ್ರೆಗೆ ವಿಸ್ತರಿಸಲು ಸಾಧ್ಯವಿದೆ ಮತ್ತು ಸಾಮರ್ಥ್ಯವಿದೆ ಅಂತಾದರೆ ಕನಿಷ್ಠ ಮನೆ ಬಳಕೆಯ ದೃಷ್ಟಿಯಿಂದಲಾದರೂ ಎರಡು ದನ ಕಟ್ಟಿಕೊಳ್ಳಲು ಸಾಧ್ಯವಿಲ್ಲವೇ? ಉತ್ತಮ ಹಾಲನ್ನು(Milk) ಸೇವಿಸಬೇಕು ಅಂತಾದರೂ ಅನಿಸುವುದಿಲ್ಲವೇ ? ಅಂತ ತಮ್ಮ ಮನಸ್ಸಿನ ದುಗುಡವನ್ನು ಹಂಚಿಕೊಂಡಿದ್ದರು. ಅವರ ಮಾತುಗಳಿಗೆ ಸಹಮತವನ್ನು ವ್ಯಕ್ತಪಡಿಸುತ್ತಾ ನನ್ನ ಯೋಚನೆಗಳು ಹಿಂದು ಹಿಂದಕ್ಕೆ ಹೋಯಿತು.

50 ವರ್ಷದ ಹಿಂದೆ ಎಲ್ಲೆಲ್ಲೂ ಗದ್ದೆ ಬೇಸಾಯ. ಗದ್ದೆ ಇದ್ದಲ್ಲೆಲ್ಲ ಹೂಡುವ ಎತ್ತುಗಳಿಲ್ಲದ ಮನೆ ಇರಲಿಲ್ಲ. ಹೆಚ್ಚಾಗಿ ಬ್ರಾಹ್ಮಣ ಸಮಾಜದಲ್ಲಿಯಂತೂ ದನಗಳು ಮತ್ತು ಎಮ್ಮೆಗಳೂ ಇಲ್ಲದ ಮನೆಯೂ ಇರಲಿಲ್ಲ. ಹಾಲು,ಮಜ್ಜಿಗೆ, ತುಪ್ಪ ಮನೆ ಬಳಕೆಗಾದರೆ,ಸೆಗಣಿ ತೋಟಕ್ಕೆ ಗದ್ದೆಗೆ ಗೊಬ್ಬರವಾಗಿ ಉಪಯೋಗ. ಔಷಧೀಯ ಉಪಯೋಗಕ್ಕಾಗಿ ನೆರೆಕೆರೆಯ ಮಂದಿ ಹಾಲು,ಮಜ್ಜಿಗಾಗಿ ಇಂತಹ ಮನೆಗಳಿಗೆ ಬಂದಾರು. ಅದೆಲ್ಲ ಸಾಮಾನ್ಯವಾಗಿ ಉಚಿತ ಸೇವೆ. ಹೀಗಿದ್ದ ನಮ್ಮ ಹೈನು ಸಂಸ್ಕೃತಿಗೆ ಕ್ಷೀರ ಕ್ರಾಂತಿಯ ಉದ್ದೇಶದಿಂದ ಜರ್ಸಿ, ಎಚ್ಎಫ್ ತಳಿಗಳನ್ನು ಪರಿಚಯಿಸಲಾಯಿತು. ಹೆಚ್ಚಾದ ಹಾಲನ್ನು ಸಮೀಪದ ಪೇಟೆಯ ಹೋಟೆಲ್ಗಳಿಗೆ ಅವರು ಹೇಳಿದ ಕ್ರಯಕ್ಕೆ ಕೊಟ್ಟು ಕೈ ಮುಗಿಯುವುದು ಮಾಮೂಲಾಗಿತ್ತು. ತದನಂತರ ನಿಶ್ಚಿತ ಮಾರುಕಟ್ಟೆಯಾಗಿ ಕೆಎಂಎಫ್ ಸೊಸೈಟಿಗಳು ಹಳ್ಳಿಯ ಮೂಲೆ ಮೂಲೆಗಳಲ್ಲಿ ಬಂದು ಹೈನುಗಾರರಿಗೆ ಒಂದಷ್ಟು ಸಹಾಯವು ಆಗಿತ್ತು.

ಸಾಕುವ ಖರ್ಚು ಏರಿದಂತೆ, ಕೊಂಡುಕೊಳ್ಳುವ ಎಲ್ಲಾ ವಸ್ತುಗಳ ಕ್ರಯ ಏರಿದ ಪ್ರಮಾಣದಲ್ಲಿ ಹಾಲಿನ ಮಾರುಕಟ್ಟೆ ಬೆಲೆ ಏರಲೇ ಇಲ್ಲ. (ಉದಾಹರಣೆಗೆ 40 ವರ್ಷದ ಹಿಂದೆ ಹಾಲಿನ ಕ್ರಯ ಲೀಟರ್ ಒಂದರ ಮೂರು ರೂಪಾಯಿ ನಮಗೆ ಸಿಗುತ್ತಿತ್ತು. ಇಂದು 34 ರೂಪಾಯಿ ನಮಗೆ ಸಿಗುತ್ತದೆ ಅಂದರೆ 11 ಪಟ್ಟು ಮಾತ್ರ ಜಾಸ್ತಿ. ದಿನಗೂಲಿ ಮಜೂರಿ ಆಗ ಮೂರು ರೂಪಾಯಿ ಇತ್ತು. ಈಗ 600 ಎಷ್ಟು ಪಟ್ಟು ಏರಿಕೆ ಎಂದು ಓದುಗರು ಲೆಕ್ಕ ಹಾಕಿಕೊಳ್ಳಿ.) ಯಾಕೆಂದರೆ ಸರಕಾರ ಕೃಷಿಕನ ದೃಷ್ಟಿಯಿಂದ ನೋಡಲೇ ಇಲ್ಲ. ಬಳಕೆದಾರನ ದೃಷ್ಟಿ ಮಾತ್ರ ಸರಕಾರಕ್ಕಾಗಲಿ, ಮಾಧ್ಯಮಗಳಿಗಾಗಲಿ ದೃಶ್ಯಮಾಧ್ಯಮಗಳಿಗಾಗಲಿ ಕಂಡದ್ದೇ ವಿನಹ, ಹೈನುಗಾರನ ಸಂಕಷ್ಟಗಳ ಕೂಗು ಯಾರಿಗೂ ಕೇಳಿಸದೆ ಹಳ್ಳಿಯ ಹೈನು ಹಟ್ಟಿಯಲ್ಲಿಯೇ ಲೀನವಾಗಿತ್ತು. ಉತ್ಪಾದನಾ ಖರ್ಚು ಕನಿಷ್ಠ ಲೀಟರ್ ಒಂದರ 60 ರೂಪಾಯಿ ಇರುವಾಗ ಕೇವಲ 30 ರೂಪಾಯಿಗಳಿಗೆ ಎಷ್ಟು ದಿನವೆಂದು ರೈತ ಹಾಲು ಕೊಟ್ಟಾನು? ಬರುವ ನಾಲ್ಕು ರೂಪಾಯಿಯ ಪ್ರೋತ್ಸಾಹ ಧನಕ್ಕಾಗಿ ತಿಂಗಳಾನುಗಟ್ಟಲೆ ಕಾಯುವ ಪ್ರಮೇಯ. ಇದರ ಪರಿಣಾಮವೇ ಹಳ್ಳಿಯ ಹಟ್ಟಿಗಳ ಸಾಮೂಹಿಕ ಖಾಲಿಯಾಗುವಿಕೆಯ ಸಮೂಹ ಸನ್ನಿ.

ರೈತರಾಗಿ ನಾವು ಯೋಚಿಸಬೇಕಾದದ್ದು ದನಗಳೆಂದರೆ ಕೇವಲ ಹಾಲು ಉತ್ಪಾದಿಸುವ ಯಂತ್ರಗಳಲ್ಲ. ಅದೊಂದು ಸಂಸ್ಕಾರ, ಅದು ಕೃಷಿಯ ಆಧಾರ ಸ್ತಂಭ, ಶಿಸ್ತನ್ನು ಸಮಯಪ್ರಜ್ಞೆಯನ್ನು ಒತ್ತಾಯಪೂರ್ವಕವಾಗಿ ಹೇರುವ ಸಂಸ್ಕೃತಿ, ಸ್ವಾವಲಂಬನೆಯ ಪ್ರತೀಕ, ಸ್ವಾಭಿಮಾನದ ಸಂಕೇತ. ಆದರೆ ವೈಜ್ಞಾನಿಕ ಯುಗದ ಮೆದುಳು ತೊಳೆಯುವಿಕೆಯಲ್ಲಿ (ಬ್ರೈನ್ವಾಶಿನಲ್ಲಿ) ಸಹಸ್ರಮಾನಗಳಿಂದ ಕಟ್ಟಿ ಬೆಳೆಸಿದ ನಮ್ಮ ಹೈನು ಸಂಸ್ಕೃತಿ ನಶಿಸಿ ಹೋಗುವಂತಾದದ್ದು ದುರಂತ. ನಮ್ಮಲ್ಲಿ ಅನೇಕ ಚಿಂತಕರಿದ್ದಾರೆ. ಕಳೆದ ಹತ್ತಿಪತ್ತು ವರ್ಷಗಳಿಂದ ಆಧುನಿಕ ಹೈನುಗಾರಿಕೆಗೆ ಬದಲಿಯಾಗಿ ನಮ್ಮ ದೇಶಿ ತಳಿಗಳ ಕ್ರಾಂತಿಯನ್ನೇ ಎಬ್ಬಿಸಿದ್ದಾರೆ. ಆದರೆ ಕೃಷಿಕನ ಮನಮುಟ್ಟುವಲ್ಲಿ ಯಶಸ್ವಿಯಾದದ್ದು ಕಡಿಮೆ ಅಂತಲೇ ಅನಿಸುತ್ತದೆ. ಯಾಕೆಂದರೆ ಆಧುನಿಕ ಮನುಷ್ಯನ ಯೋಚನೆ ಯೋಜನೆಗಳೆಲ್ಲ ಸುಲಭೀಕರಣದತ್ತ, ಸಮಸ್ಯಾರಹಿತ ಜೀವನದತ್ತ, ಹಣ ಒಂದಿದ್ದರೆ ಎಲ್ಲವೂ ಕೊಂಡುಕೊಳ್ಳಬಹುದು ಎಂಬ ಚಿಂತನೆಯತ್ತ. ಸರಕಾರವೇ ಎಲ್ಲವನ್ನೂ ಉಚಿತವಾಗಿಯೇ ಕೊಡಬೇಕು ಎಂಬ ಹಂಬಲದತ್ತ.

Advertisement

ನಾವು ದಕ್ಷಿಣ ಕನ್ನಡಿಗರು ಹೇಳಿಕೇಳಿ ಬುದ್ಧಿವಂತರ ಜಿಲ್ಲೆ ಅಂತ ಅನಿಸಿಕೊಂಡವರು. ಬುದ್ಧಿವಂತರಾದ ನಾವು ಪರಾವಲಂಬನೆಯತ್ತಲೇ ಬುದ್ಧಿವಂತಿಕೆಯನ್ನು ಉಪಯೋಗಿಸುದು ಮಾತ್ರ ದುಃಖದ ಸಂಗತಿ. ಉಣ್ಣುವ ಅನ್ನ ಕೈಬಿಟ್ಟೆವು, ತಿನ್ನುವ ತರಕಾರಿ ಕೈ ಬಿಟ್ಟೆವು, ಕುಡಿಯುವ ಹಾಲು ಬಳಸುವ ಗೊಬ್ಬರ ಕೈಬಿಟ್ಟೆವು, ಉಚಿತವಾಗಿ ಸಿಗುತ್ತಿದ್ದ ಅನಿಲ ಸ್ಥಾವರ ಕೈಬಿಟ್ಟೆವು. ಇನ್ನೇನಿದೆ ನಾವು ಬಿಡಲು ಬಾಕಿ? ಎತ್ತ ಸಾಗುತ್ತಿದ್ದೇವೆ ನಾವು ದಕ್ಷಿಣ ಕನ್ನಡದ ಮಂದಿ?

ಮಾತನಾಡುತ್ತಾ ಯೋಚನೆ ಮುಗಿಯುವಾಗ ಪತ್ನಿ ಹಾಕಿದ್ದ ಆಡಿಯೋ ಒಂದು ಕೇಳುತ್ತಲಿತ್ತು. ರಾಮಚಂದ್ರಾಪುರ ಮಠದ ಪ್ರಸಿದ್ಧ ಹಾಡು ತೇಲಿ ಬರುತ್ತಲಿತ್ತು.
ಗೋವಿಂದ ಬಾಳ್ ಗೋವಿಂದ, ಗೋವಿರದಿರೆ ಗತಿ ಗೋವಿಂದ |
ತೋಟದ ಕೃಷಿಯು ಗೋವಿಂದ,
ಊಟದ ರುಚಿಯು ಗೋವಿಂದ,
ಜನತೆಗೆ ನೆಮ್ಮದಿ ಗೋವಿಂದ,
ಭರತ ಸಂಸ್ಕೃತಿ ಗೋವಿಂದ,
ಭಾರತ ಪ್ರಗತಿ ಗೋವಿಂದ,
ಜನತೆಗೆ ನೆಮ್ಮದಿ ಗೋವಿಂದ,
ಗೋವಿಂದ ಬಾಳ್ ಗೋವಿಂದ ಗೋವಿರದಿರೆ ಗತಿ ಗೋವಿಂದ ||

ಬರಹ :
ಎ ಪಿ ಸದಾಶಿವ ಮರಿಕೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

ಹವಾಮಾನ ವರದಿ | 22-05-2025 | ಮೇ ಕೊನೆಯ ತನಕವೂ ಉತ್ತಮ ಮಳೆ ಸಾಧ್ಯತೆ | ಇನ್ನೊಮ್ಮೆ ವಾಯುಭಾರ ಕುಸಿತದ ಲಕ್ಷಣ |

ಅರಬ್ಬಿ ಸಮುದ್ರದ ವಾಯುಭಾರ ಕುಸಿತವು ಉತ್ತರ ಮಹಾರಾಷ್ಟ್ರ ಕರಾವಳಿ ತಲುಪಿದ್ದು, ಇನ್ನೆರಡು ದಿನಗಳಲ್ಲಿ…

30 minutes ago

ಅಕಾಲಿಕ ಮಳೆ | ಮಾವು ಇಳುವರಿ ಕುಸಿತ | ಬೆಲೆ ಕುಸಿತ | ರೈತರಿಗೆ ನಿರಾಸೆ |

ಮಾವು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿರುವ ರಾಮನಗರ ಜಿಲ್ಲೆಯಲ್ಲಿ ಈ ಬಾರಿ…

8 hours ago

ಶಾಲೆ ಆರಂಭ | ಯೋಜಿತ ಮತ್ತು ಪರಿಣಾಮಕಾರಿ ಆರಂಭದ ಅಗತ್ಯ

ಶಾಲೆಯ  ಯೋಜಿತ ಮತ್ತು ಪರಿಣಾಮಕಾರಿ ಆರಂಭಕ್ಕೆ  ವಿದ್ಯಾರ್ಥಿ – ಪೋಷಕ – ಶಿಕ್ಷಕ …

8 hours ago

ಛದ್ಮ ವೇಷದಲ್ಲಿ ನಮ್ಮ ಪ್ರಜಾಪ್ರಭುತ್ವ

ಬಡವರಿಗೆ, ಹಳ್ಳಿಗರಿಗೆ, ದಲಿತರಿಗೆ, ನಿರಕ್ಷಕ ಕುಕ್ಷಿಗಳಿಗೆ, ನಿರುದ್ಯೋಗಿಗಳಿಗೆ ಸಮಾನತೆಯೆಂಬುದು ಮತದಾನದ ಸಂದರ್ಭದಲ್ಲಿ ಮಾತ್ರವೇ…

8 hours ago

ಸಂಜೆ ದೀಪ ಹಚ್ಚುವಾಗ ಪಾಲಿಸಬೇಕಾದ ಕೆಲವು ನಿಯಮಗಳು

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳಲ್ಲಿ ಸಂಪರ್ಕಿಸಿ 9535156490

8 hours ago

ಆಂಧ್ರಪ್ರದೇಶಕ್ಕೆ ನಾಲ್ಕು ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ರಾಜ್ಯಸರ್ಕಾರ

ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಎಂದು…

16 hours ago