ಹವಾಮಾನ ಬದಲಾವಣೆಯ ಸಮಸ್ಯೆಯನ್ನು ತಪ್ಪಿಸಲು ಕಾಡುಗಳ ಅಭಿವೃದ್ಧಿ, ಅರಣ್ಯೀಕರಣದ ಅನಿವಾರ್ಯತೆ ಇದೆ.ಈ ನಿಟ್ಟಿನಲ್ಲಿ ಕಾಡು ಬೆಳೆಸುವ ಹಾಗೂ ಉಳಿಸುವ ಉದ್ದೇಶದಿಂದ ವೇಗವಾಗಿ ಬೆಳೆಯುವ ಮರಗಳ ಕಡೆಗೆ ಆದ್ಯತೆ ನೀಡುವುದು ಹಾಗೂ ಕೃಷಿ ಭೂಮಿಯಲ್ಲಿ ಅರಣ್ಯೀಕರಣಕ್ಕೆ ಪ್ರೋತ್ಸಾಹ ಸೇರಿದಂತೆ ವಿವಿಧ ಯೋಜನೆಗಳ ಕಡೆಗೆ ಗಮನಹರಿಸಲು ಕಾರ್ಯತಂತ್ರಗಳನ್ನು ರಚಿಸಲಾಗುತ್ತಿದೆ. ಜಾಗತಿಕವಾಗಿಯೂ ಕೂಡಾ ಈ ಬಗ್ಗೆ ಚಿಂತನೆ ನಡೆಯುತ್ತಿದೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಆಯೋಜಿಸಿರುವ ಗೋಷ್ಟಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿವೆ. ವೇಗವಾಗಿ ಬೆಳೆಯುವ ಮರಗಳನ್ನು ಉಳಿಸಿಕೊಳ್ಳುವ ಮೂಲಕ ಮತ್ತು ಪರಿಸರವನ್ನು ಉಳಿಸಿಕೊಳ್ಳುವ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಯೋಜನೆಗಳು ನಡೆಯುತ್ತಿವೆ. ಇದಕ್ಕಾಗಿಕೆಲವು ಮಾರ್ಗಸೂಚಿಗಳನ್ನು ಕೂಡಾ ಪ್ರಕಟಿಸಲಾಗಿದೆ. ಈ ಮೂಲಕ ಅರಣ್ಯದ ಉಳಿವು, ಪರಿಸರದಲ್ಲಿ ಹವಾಮಾನ ಬದಲಾವಣೆಯನ್ನು ತಪ್ಪಿಸುವ ಹೆಜ್ಜೆಗಳ ಕಡೆಗೆ ಆದ್ಯತೆ ನೀಡಲಾಗುತ್ತಿದೆ.
ವೇಗವಾಗಿ ಬೆಳೆಯುವ ಮರಗಳ ಸುಸ್ಥಿರ ನಿರ್ವಹಣೆಯ ಬಗ್ಗೆ ಗಮನ ಕೊಡಲು ನಿರ್ಧರಿಸಲಾಗಿದೆ. ಪ್ರಪಂಚದಾದ್ಯಂತ ವೇಗವಾಗಿ ಬೆಳೆಯುವ ಇತರ ಪ್ರಬೇಧದ ಮರಗಳೊಂದಿಗೆ ವಿವಿಧ ಜಾತಿಗಳ ಗುಣಗಳನ್ನು ಮತ್ತು ಸುಸ್ಥಿರ ನಿರ್ವಹಣಾ ವಿಧಾನಗಳನ್ನು ಗಮನಿಸಿಕೊಂಡು ಆಯಾ ಪ್ರದೇಶಕ್ಕೆ ಸೂಕ್ತವಾದ ಗಿಡಗಳನ್ನು ನೆಡುವ ಬಗ್ಗೆ ಯೋಜಿಸಲಾಗುತ್ತಿದೆ. ಹೀಗಾಗಿ ಇತ್ತೀಚಿನ ವಿಜ್ಞಾನ ಮತ್ತು ಹೊಸ ವಿಧಾನಗಳನ್ನು ಬಳಸಿಕೊಂಡು ಜಾಗತಿಕವಾಗಿ ಇದರ ಪ್ರಯೋಜನಗಳನ್ನು ಗರಿಷ್ಟವಾಗಿ ಪಡೆಯಲು ಕೃಷಿಯನ್ನು ಹಾಗೂ ಕೃಷಿವಲಯದ ಆರ್ಥಿಕ ವೃದ್ಧಿಗೂ ಸಹಕಾರಿಯಾಗುವಂತೆಯೂ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಹೀಗಾದರೆ ಅವು ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯವನ್ನು ಒದಗಿಸುತ್ತವೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಸಾಮರ್ಥ್ಯವನ್ನು ಕೂಡಾ ಹೊಂದುತ್ತವೆ ಎಂದು ಅಭಿಪ್ರಾಯ ಪಡಲಾಗಿದೆ.
ವಿದೇಶಗಳಲ್ಲಿ ಪೋಪ್ಲರ್, ಯೂಕಲಿಪ್ಟಸ್, ಪೈನ್ ಮತ್ತು ಸ್ಪ್ರೂಸ್‌ನಂತಹ ವೇಗವಾಗಿ ಬೆಳೆಯುವ ಮರಗಳು ಸೂಕ್ತ ಪರಿಸ್ಥಿತಿಗಳಲ್ಲಿ ವೇಗವಾಗಿ ಬೆಳೆಯುತ್ತವೆ ಮತ್ತು ಇತರ ವೇಗವಾಗಿ ಬೆಳೆಯುವ ಪ್ರಭೇದಗಳನ್ನು ಪ್ರಪಂಚದಾದ್ಯಂತ ಸಹಸ್ರಾರು ವರ್ಷಗಳಿಂದ ಅಭಿವೃದ್ಧಿಪಡಿಸಲಾಗಿದೆ . ಈ ಮರಗಳು ವೇಗವಾಗಿ ಬೆಳೆಯುವುದಲ್ಲದೆ, ಜಲಸಂರಕ್ಷಣೆ, ಹವಾಮಾನ ನಿಯಂತ್ರಣ, ಉತ್ತಮ ಗುಣಮಟ್ಟದ ಮಣ್ಣಿನಂತಹ ಪರಿಸರ ಪೂರಕ ವಾತಾವರಣವನ್ನೂ ಸೃಷ್ಟಿ ಮಾಡುತ್ತದೆ.
ಪರಿಸರ ನಿರ್ವಹಣೆಯು ಸರಿಯಾದ ವ್ಯವಸ್ಥೆಯಲ್ಲಿ ಆಗದೇ ಇದ್ದರೆ ಭವಿಷ್ಯದಲ್ಲಿ ಇಡೀ ಪ್ರಪಂಚದಲ್ಲಿ ಕೃಷಿ, ಆಹಾರ ಉತ್ಪಾದನೆಯ ಮೇಲೆ ಹವಾಮಾನ ವೈಪರೀತ್ಯ ಗಂಭೀರವಾದ ಪರಿಣಾಮ ಬೀರಲಿದೆ. ಹೀಗಾಗಿ ಕೃಷಿ ಆಹಾರ ವ್ಯವಸ್ಥೆಗಳತ್ತ ಪರಿವರ್ತನೆಯನ್ನು ಬೆಂಬಲಿಸಲು ಮತ್ತು ವೇಗವಾಗಿ ಬೆಳೆಯುವ ಮರಗಳನ್ನು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಮತ್ತು ವ್ಯಾಪಕವಾಗಿ ಯೋಜಿಸುವ ಮತ್ತು ಬೆಳೆಸುವಲ್ಲಿ ಹೂಡಿಕೆಯ ಅಗತ್ಯವನ್ನು ಹೇಳುತ್ತದೆ. ವಿಶ್ವಾದ್ಯಂತ ಅರಣ್ಯ ಪ್ರದೇಶದ 93 ಪ್ರತಿಶತವು ನೈಸರ್ಗಿಕವಾದ ಕಾಡುಗಳಿಂದ ಕೂಡಿದೆ ಮತ್ತು 7 ಪ್ರತಿಶತವನ್ನು ಮಾತ್ರಾ ನೆಡಲಾಗುತ್ತದೆ ಎಂದು ಜಾಗತಿಕ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನ ವರದಿ 2020ರಲ್ಲಿ ತಿಳಿಸಿದೆ. ಹೀಗಾಗಿ ಈಗ ವೇಗವಾಗಿ ಬೆಳೆಯುವ ಮರದ ಕಡೆಗೆ ಗಮನ ನೀಡಲಾಗುತ್ತಿದೆ.
2050 ರ ವೇಳೆಗೆ ಮರದ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಮೂರನೇ ಒಂದು ಭಾಗದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದೇ ವೇಳೆ ಜಾಗತಿಕ ತಾಪಮಾನ, ತೀವ್ರ ಹವಾಮಾನಕ್ಕೆ ತ್ವರಿತ ಹೊಂದಾಣಿಕೆ ಮತ್ತು ಸ್ಥಿತಿಸ್ಥಾಪಕತ್ವ-ನಿರ್ಮಾಣದ ಅಗತ್ಯವಿದೆ.ಇದಕ್ಕಾಗಿ ವಿವಿಧ ವಿಭಾಗಗಳನ್ನು ಮಾಡಿ ಮರ ಬೆಳೆಯವ, ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುವ ಹಾಗೂ ಪರಿಸರ ಉಳಿಸುವ ಯೋಜನೆಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದು ವರದಿ ಹೇಳಿದೆ.ಇದಕ್ಕಾಗಿ ವಿಶ್ವಾದ್ಯಂತ ವೇಗವಾಗಿ ಬೆಳೆಯುವ ಮರಗಳನ್ನು ಯಶಸ್ವಿಯಾಗಿ ನೆಡುವುದನ್ನು ಹೆಚ್ಚಿಸಲು ಬೆಂಬಲ ಬೇಕಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.