ದೇಶದೆಲ್ಲೆಡೆ ಕ್ರಿಕೆಟ್ ಹವಾ ಒಂದು ಕಾಲದಲ್ಲಿ ಜೋರಿತ್ತು. ಅಲ್ಲಲ್ಲಿ ತಮ್ಮ ಕ್ರಿಕೆಟ್ ತಾರೆಯರ ಪ್ಲೆಕ್ಸ್ ಹಾಕಿ ಸಂಭ್ರಮಿಸುತ್ತಿದ್ದರಯ. ವಿಶ್ವಕಪ್ ನಂತಹ ಸಮಯದಲ್ಲಂತೂ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಇದೀಗ ಫೀಫಾ ಹವಾ ಜೋರಿದೆ. ಸುಳ್ಯದಂತಹ ಗ್ರಾಮೀಣ ಭಾಗದಲ್ಲಿ ಫುಟ್ ಬಾಲ್ ಪ್ರೇಮ ಉಕ್ಕಿ ಹರಿದಿದೆ. ಸುಳ್ಯ ಪಟ್ಟಣದ ಹಲವೆಡೆ ಫೀಫಾ ಫ್ಲೆಕ್ಸ್ ರಾರಾಜಿಸುತ್ತಿದೆ.
ಸುಳ್ಯ ತಾಲೂಕಿನಲ್ಲಿ ವಾಲಿಬಾಲ್, ಕಬಡ್ಡಿ, ಟೆನ್ನಿಸ್ ಬಾಲ್ ಕ್ರಿಕೆಟ್ ಸಾಮಾನ್ಯವಾಗಿ ಯುವಕರು ಆಡುವ ಆಟ. ಇದಕ್ಕಾಗಿ ಆಗಾಗ ಟೂರ್ನಮೆಂಟ್ ಕೂಡಾ ನಡೆಯುತ್ತದೆ, ಯುವಕರೂ ಸೇರಿದಂತೆ ಅನೇಕರು ಸಂಭ್ರಮಿಸುತ್ತಾರೆ. ಇದೀಗ ಫೀಫಾ ಆರಂಭವಾಗುತ್ತಿದ್ದಂತೆ ಫುಟ್ ಬಾಲ್ ಪ್ರೇಮ ಹಠಾತ್ ಉಕ್ಕಿ ಹರಿದಿದೆ. ಸುಳ್ಯ ಪಟ್ಟಣದ ಹಲವೆಡೆ ಫೀಫಾ ಫ್ಲೆಕ್ಸ್ ರಾರಾಜಿಸುತ್ತಿದೆ.
ಇದೊಂದು ಉತ್ತಮ ಅವಕಾಶ. ಅನೇಕ ವರ್ಷಗಳಿಂದಲೂ ಈ ಕ್ರೀಡಾ ಪ್ರೇಮ ಸುಳ್ಯದಲ್ಲಿದೆ.
ಕೆಲವು ಸಮಯದ ಹಿಂದೆ ಸುಳ್ಯದಲ್ಲೂ ಫುಟ್ ಬಾಲ್ ಸ್ಫರ್ಧೆಯೂ ನಡೆದಿತ್ತು. ಸುಳ್ಯ ಯುನೈಟೆಡ್ ಅರ್ಪಿಸಿದ ಇಂಡಿಪೆಂಡೆನ್ಸ್ ಕಪ್ ಪಂದ್ಯಾಟ ಸುಳ್ಯದ ಗಾಂಧಿನಗರ ಶಾಲಾ ಕ್ರೀಡಾಂಗಣದಲ್ಲಿ ನಡೆದಿತ್ತು. ಅಂದು ಫೈನಲ್ ಪಂದ್ಯಾಟವು ಕೊನೆ ಹಂತದವರೆಗೂ ಅತ್ಯಂತ ರೋಮಾಂಚಕಾರಿಯಾಗಿತ್ತು. ಟೈ ಬ್ರೇಕರ್ ನಲ್ಲಿ ಜೈ ಭಾರತ್ ಗಾಂಧಿನಗರ ವಿರುದ್ಧವಾಗಿ ಟೌನ್-ಟೀಂ ಸುಳ್ಯ ವಿಜಯಶಾಲಿಯಾಗಿತ್ತು. ಅದಕ್ಕೂ ಹಿಂದಿನ ದಿನಗಳನ್ನು ಸುಳ್ಯದಲ್ಲಿ ನೆನಪಿಸಿಕೊಂಡರೆ ಸುಳ್ಯ ತಾಲೂಕಿನವರಾದ ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕಾಲೇಜು ದಿನಗಳಗಲ್ಲಿ ವಿಶ್ವವಿದ್ಯಾಲಯ, ಅಂತರ್ ವಿಶ್ವವಿದ್ಯಾಲಯ, ರಾಷ್ಟ್ರ ಮಟ್ಟದ ವಿಜ್ಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಆಡಿದವರು. ಕೊಲ್ಕೊತ್ತದ ಈಡನ್ ಗಾರ್ಡನ್ ಮೈದಾನದಲ್ಲೂ ಆಡಿದವರು. ಅದೇ ರೀತಿ ಕಲ್ಮಡ್ಕದ ಪದ್ಯಾಣ ಗೋಪಾಲಕೃಷ್ಣ ರಾಷ್ಟ್ರ ಮಟ್ಟದ ಚೆಸ್ ಆಟಗಾರರಾಗಿದ್ದರು. ಅದೇ ರೀತಿ ಅನೇಕರು ವಿವಿಧ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸ್ಫರ್ಧಿಸಿದ್ದಾರೆ. ಅದೇ ಮಾದರಿ ಫುಟ್‌ಬಾಲ್ ಕ್ರೀಡಾಪಟುಗಳೂ ಬೆಳೆಯಲಿ.
ಫೀಫಾ ಮುಗಿದೊಡನೆ ಫುಟ್ ಬಾಲ್ ಪ್ರೀತಿ ನಿಲ್ಲಬಾರದು. ಹೈಸ್ಕೂಲ್ ಮಟ್ಟದಲ್ಲಿ ಮಕ್ಕಳಿಗೆ ಫುಟ್ ಬಾಲ್ ಆಡಲು ಪ್ರೋತ್ಸಾಹಿಸಬೇಕು. ಸಂಘಟನೆಗಳು ತಾಲೂಕು ಮಟ್ಟದಲ್ಲಿ ಫುಟ್‌ಬಾಲ್ ಟೂರ್ನಿ ಏರ್ಡಿಸಬೇಕು. ಮುಂದೊಂದು ದಿನ ರಾಜ್ಯ, ರಾಷ್ಟ್ರ ಮಟ್ಟದ, ಅಂತಾರಾಷ್ಟ್ರೀಯ ಮಟ್ಟದ ಫುಟ್ ಬಾಲ್ ತಾರೆ ಸುಳ್ಯದಿಂದಲೂ ಉದಯಿಸಲಿ ಎಂದು ಆಶಿಸೋಣ.
ಕೇರಳದಲ್ಲೂ ಫೀಫಾ ವಿಶ್ವಕಪ್ ಸಂಭ್ರಮ ಜೋರಿದೆ. ಕೊಚ್ಚಿಯಲ್ಲಿ 17 ಮಂದಿ ಫುಟ್ಬಾಲ್ ಅಭಿಮಾನಿಗಳು ಹಳೆಯ ಮನೆಯೊಂದನ್ನು 23 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದಾರೆ. ಸ್ನೇಹಿತರೊಂದಿಗೆ ಕೂತು ಫುಟ್ಬಾಲ್ ಪಂದ್ಯ ವೀಕ್ಷಣೆಗಾಗಿಯೇ ಈ ಮನೆಯನ್ನು ಖರೀದಿಸಿರುವುದು ವಿಶೇಷವಾಗಿದೆ. ಫೀಫಾ ಪ್ರಾರಂಭಕ್ಕೂ ಮುನ್ನವೇ ಅಲ್ಲಿನ ಹ್ಯಾರಿಸ್ ಹಾಗೂ ಆತನ ಸ್ನೇಹಿತರು ವಿಶ್ವಕಪ್ ಪಂದ್ಯದ ಪ್ರದರ್ಶನಕ್ಕೆ ಸೂಕ್ತವಾಗುವ ಸ್ಥಳವನ್ನು ಹುಡುಕುತ್ತಿದ್ದರು. ಈ ಹಿಂದೆ ಪ್ರದರ್ಶನ ಮಾಡಲಾಗುತ್ತಿದ್ದ ಜಾಗಗಳ ಪೈಕಿ ಬಹುತೇಕ ಜಾಗಗಳು ಒಂದೋ ಮಾರಾಟವಾಗಿವೆ ಇಲ್ಲವೇ ಆ ಖಾಲಿ ಜಾಗಗಳ ಪೈಕಿ ಕಟ್ಟಡಗಳು ನಿರ್ಮಾಣವಾಗಿದೆ. ಆಗ ಈ ಮನೆ ಖರೀದಿಗೆ ಇರುವುದು ತಿಳಿಯಿತು. ಹಣ ಒಗ್ಗೂಡಿಸಿ ಮನೆ ಖರೀದಿಸಿದೆವು ಎಂದು ಪಿಡಬ್ಲ್ಯುಡಿ ಗುತ್ತಿಗೆದಾರನಾಗಿರುವ ಹ್ಯಾರಿಸ್ ಹೇಳಿದ್ದರು.
ಈ ಗುಂಪಿನಲ್ಲಿ ಅರ್ಜೆಂಟೀನಾ, ಬ್ರೆಜಿಲ್, ಪೋರ್ಚುಗಲ್, ಫ್ರಾನ್ಸ್ ನ್ನು ಬೆಂಬಲಿಸುವವರೇ ಹೆಚ್ಚಾಗಿದ್ದಾರೆ. ಕಳೆದ 15 ವರ್ಷಗಳಿಂದ ಫುಟ್ಬಾಲ್ ವಿಶ್ವಕಪ್ ನ್ನು ಒಟ್ಟಿಗೆ ಕುಳಿತು ವೀಕ್ಷಿಸುವ ಕ್ರೀಡಾಭಿಮಾನಿಗಳು ಮುಂದಿನ ಪೀಳಿಗೆಗೂ ಮುಂದುವರೆಸುವುದಕ್ಕಾಗಿ ಈ ಮನೆ ಖರೀದಿಸಿದೆವು ಎಂದು ಹ್ಯಾರಿಸ್ ಹೇಳಿದ್ದಾರೆ. ಫೀಫಾದಲ್ಲಿ ಭಾಗಿಯಾಗುತ್ತಿರುವ ಎಲ್ಲಾ 32 ತಂಡಗಳ ಧ್ವಜವನ್ನೂ ಈ ಮನೆಯಲ್ಲಿ ಅಳವಡಿಸಲಾಗಿದೆ.