ನೇಪಾಳದಲ್ಲಿ ನಡೆಯುತ್ತಿರುವ ಗಲಭೆ, ಗಲಾಟೆ, ದೊಂಬಿ ಈಗ ಸುದ್ದಿಯಲ್ಲಿದೆ. ಇದಕ್ಕೆ ಕಾರಣ, ಒಂದಲ್ಲ ಹಲವು. ಅಂತಹ ಹಲವು ಕಾರಣಗಳಲ್ಲಿ ಭ್ರಷ್ಟಾಚಾರವೂ ಒಂದು. ಅಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ನಿರುದ್ಯೋಗ ಸಮಸ್ಯೆ, ಬಡತನ, ಹದಗೆಟ್ಟ ಆಡಳಿತ ಯಂತ್ರ, ಈ ನಡುವೆಯೇ ಸೋಶಿಯಲ್ ಮೀಡಿಯಾ ನಿಷೇಧ. ಇದೆಲ್ಲಾ ಒಂದುಗೂಡಿ ಗಲಭೆ, ದೊಂಬಿ ನಡೆಯಿತು. ಇಂದು ಇಡೀ ಪ್ರಪಂಚವು ನೇಪಾಳದ ಈ ದೊಂಬಿಯಿಂದ ಪಾಠ ಕಲಿಯಬೇಕು. ಏಕೆಂದರೆ ಭ್ರಷ್ಟಾಚಾರವನ್ನು ಜನರು ಒಂದಷ್ಟು ಸಹಿಸಿಕೊಳ್ಳುತ್ತಾರೆ. ಈ ತಾಳ್ಮೆ , ಸಹನೆಗೂ ಮಿತಿ ಇರುತ್ತದೆ. ತಾಳ್ಮೆಯ ಕಟ್ಟೆ ಒಡೆದರೆ ಇಡೀ ಆಡಳಿತವನ್ನೇ ಬದಲಾಯಿಸುವ ಶಕ್ತಿಯನ್ನು ಜನರು ಹೊಂದಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಬಳಿಕ ನಿಯಂತ್ರಣ ಯಾರ ಕೈಯಲ್ಲೂ ಇರುವುದಿಲ್ಲ..!.
ಈ ಘಟನೆ ಏಕೆ ನೆನಪಾಯಿತು ಎಂದರೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅತ್ಯಂತ ಗ್ರಾಮೀಣ ಭಾಗವಾದ ಕೊಲ್ಲಮೊಗ್ರ ಗ್ರಾಮ ಪಂಚಾಯತ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಭ್ರಷ್ಟಾಚಾರದ ವಿರುದ್ಧ ಧ್ವನಿ ಗಟ್ಟಿಯಾಗುತ್ತಿದೆ. ಆದರೆ, ಜನಪ್ರತಿನಿಧಿಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು, ಕೆಲವು ಪ್ರತಿನಿಧಿಗಳು, ತನಿಖಾ ಅಧಿಕಾರಿಗಳು… ಹೀಗೇ ಎಲ್ಲರೂ ಭ್ರಷ್ಟಾಚಾರದ ಪರವಾಗಿರುವಂತೆ ಭಾಸವಾಗಿದೆ. ಈಗ ಜನರ ಸಹನೆಯ ಕಟ್ಟೆ ಒಡೆದಿದೆ, ಹೋರಾಟಕ್ಕೆ ಇಳಿದಿದ್ದಾರೆ. ಬಹುಶ: ಗ್ರಾಮೀಣ ಭಾಗದಲ್ಲಿ, ಅಂದರೆ ಮುಗ್ದ ಜನರು ಇರುವ ಪ್ರದೇಶದಲ್ಲಿಯೇ ಭ್ರಷ್ಟಾಚಾರದ ವಿರುದ್ಧ ಧ್ವನಿ ಏಳುತ್ತಿದೆ ಎಂದರೆ, ಎಚ್ಚರವಾಗಬೇಕಾದ್ದು ಆಡಳಿತ ಹಾಗೂ ಜನಪ್ರತಿನಿಧಿಗಳು ಮತ್ತು ಸರ್ಕಾರ. ತಕ್ಷಣ ಇಲ್ಲಿ ತನಿಖೆ ನಡೆಸಿ ಸೂಕ್ತವಾದ ಕ್ರಮ ಅಗತ್ಯ ಕೈಗೊಳ್ಳುವ ಇದೆ.
ಇಷ್ಟೂ, ಆಕ್ರೋಶಕ್ಕೆ ಇಲ್ಲಿ ಕಾರಣ ಏನು..?. ಕೆಲವು ಸಮಯದ ಹಿಂದೆ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಗೆ ಸರ್ಕಾರದಿಂದ ಕೆಲವು ಪೀಠೋಪಕರಣಗಳು ಬಂದವು. ಈ ಪೀಠೋಪಕರಣಗಳು ಪಂಚಾಯತ್‌ಗೆ ಬರುವ ವೇಳೆ ತಡವಾದ್ದರಿಂದ ಕೆಲವು ಸಿಬಂದಿಗಳು ಮಾತ್ರಾ ಇದ್ದರು. ಪೀಠೋಪಕರಣ ಇಳಿಸಿ ವಾಹನ ತೆರಳಿತು. ಅದಾದ ಬಳಿಕ ದಾಖಲೆಯನ್ನು ಪಂಚಾಯತ್ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಕೆಲವು ಪೀಠೋಪಕರಣಗಳು ನಾಪತ್ತೆಯಾಗಿದ್ದರು. ಪಂಚಾಯತ್ ಆಡಳಿತವು ಒಬ್ಬ ಸಿಬಂದಿಯ ಮನೆಗೆ ಭೇಟಿ ನೀಡಿದಾಗ ಆ ಪೀಠೋಪಕರಣ ಪತ್ತೆಯಾಯಿತು. ಇದು ಸುದ್ದಿಯಾಯಿತು. ಈ ವಿಷಯ ಗ್ರಾಮ ಸಭೆಯಲ್ಲಿ ಪ್ರಸ್ತಾಪವಾಯಿತು. ಗ್ರಾಮ ಸಭೆಯಲ್ಲಿ ಚರ್ಚೆಯಾಗಿ ಪೀಠೋಪಕರಣ ನಾಪತ್ತೆಯಾದ್ದು ಹಾಗೂ ಸಿಬಂದಿಯ ಮನೆಯಲ್ಲಿ ಪತ್ತೆಯಾದ ಬಗ್ಗೆಯೂ ಪ್ರಸ್ತಾಪವಾಯಿತು. ಹೀಗಾಗಿ ಪೊಲೀಸ್ ದೂರು ನೀಡುವುದು ಹಾಗೂ ಮುಂದಿನ ತನಿಖೆ ನಡೆಸುವುದು ಮತ್ತು ಅದುವರೆಗೂ ಆ ಸಿಬಂದಿಯನ್ನು ಅಮಾನತು ಮಾಡಲು ಗ್ರಾಮಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು, ಈ ನಿರ್ಣಯವನ್ನು ಗ್ರಾಮಸಭೆಯಲ್ಲಿ ಓದಿ ಹೇಳಲಾಗಿತ್ತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.. …… ಮುಂದೆ ಓದಿ……

ಗ್ರಾಮ ಸಭೆ ಮುಗಿದು ತಿಂಗಳು ಕಳೆದರೂ ಯಾವುದೇ ಬೆಳವಣಿಗೆ ಕಾಣದ ಹಿನ್ನೆಲೆಯಲ್ಲಿ ಜನರು ಮತ್ತೆ ಪಂಚಾಯತ್‌ನಲ್ಲಿ ಪ್ರಶ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ನಡುವೆ ತಪ್ಪೊಪ್ಪಿಗೆ ಪತ್ರವನ್ನೂ ಸಿಬಂದಿಯು ಪಂಚಾಯತ್ ನೀಡಿದ್ದ. ಆದರೆ ತನಿಖೆ ನಡೆಯಲಿಲ್ಲ ಹಾಗೂ ಪೊಲೀಸ್ ದೂರು ನೀಡಿರಲಿಲ್ಲ. ಸಿಬಂದಿಯ ರಕ್ಷಣೆ ಮಾಡುತ್ತಿರುವ ಕಾರಣ ಯಾವುದೇ ಬೇರೆಯೇ ಇರಬೇಕು ಎಂದು ವಿಷಯದ ಹಿಂದೆ ಗ್ರಾಮಸ್ಥರು ಬಿದ್ದರು. ಆಗ ಉದ್ಯೋಗ ಖಾತ್ರಿ ಯೋಜನೆ ಸಹಿತ ತಹಶೀಲ್ದಾರ್ ಕಚೇರಿಯ ಕೆಲವು ಮಳೆಹಾನಿ ನಿಧಿ ಇತ್ಯಾದಿಗಳು ಕೊಲ್ಲಮೊಗ್ರ ಪಂಚಾಯತ್ ಗೆ ಬಂದಿರುವ ಬಗ್ಗೆ ಸುಳಿವು ಲಭ್ಯವಾಗಿದೆ. ಮಳೆಹಾನಿ ಹಣ ದುರುಪಯೋಗ, ಉದ್ಯೋಗ ಖಾತ್ರಿ ಯೋಜನೆಯಲ್ಲೂ ಅವ್ಯಹಾರದ ಶಂಕೆ ಜನರಿಗೆ ಬಂದಿದೆ. .….. ಮುಂದೆ ಓದಿ……
ಈ ಕಾರಣದಿಂದ ಇಲ್ಲಿ ಭ್ರಷ್ಟಾಚಾರ ನಡೆದಿರುವುದು ಜನರಿಗೆ ಸ್ಪಷ್ಟವಾಗುತ್ತಿದ್ದಂತೆಯೇ ಕೊಲ್ಲಮೊಗ್ರದ ಗ್ರಾಮಸ್ಥರು ಅಮಾನತುಗೊಂಡಿದ್ದ ಪಂಚಾಯತ್ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸದೆ ಪುನಃ ಕರ್ತವ್ಯಕ್ಕೆ ನೇಮಕ ಮಾಡಿರುವುದನ್ನು ವಿರೋಧಿಸಿ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತಕ್ಷಣ ನ್ಯಾಯಸಮ್ಮತ ತನಿಖೆ ನಡೆಯಬೇಕು. ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದರು.
ಇದಿಷ್ಟು ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಚೆಗೆ ನಡೆದ ಬೆಳವಣಿಗೆ. ಇಷ್ಟಾದರೂ ಕ್ಷೇತ್ರದ ಯಾವುದೇ ಜನಪ್ರತಿನಿಧಿ ಕೊಲ್ಲಮೊಗ್ರದ ಜನರ ಹೋರಾಟದ ಬಗ್ಗೆ ಮಾತನಾಡಿಲ್ಲ, ಬೆಂಬಲ ವ್ಯಕ್ತಪಡಿಸಿಲ್ಲ, ಭ್ರಷ್ಟಾಚಾರವನ್ನು ಬೆಳಕಿಗೆ ತರೋಣ ಎಂದಿಲ್ಲ. ಬದಲಾಗಿ ಯಾರ ಮೇಲೆ ಆರೋಪ ಇದೆಯೋ ಅವರ ರಕ್ಷಣೆ ನಡೆಸುತ್ತಿರುವುದು ದುರಂತ. ಅಂದರೆ ಭ್ರಷ್ಟಾಚಾರದ ಪೋಷಣೆ ನಡೆಯುತ್ತಿದೆ ಎಂದೇ ಅರ್ಥ. ಈಗ ಜನರು ಪಕ್ಷಾತೀತವಾಗಿ ಒಂದಾಗಿದ್ದಾರೆ. ಈ ಹೋರಾಟಕ್ಕಾಗಿಯೇ ವ್ಯಾಟ್ಸಪ್ ಗುಂಪು ರಚನೆ ಮಾಡಿದ್ದಾರೆ. ಗುಂಪಿನ ಮೂಲಕ ಬಹಿರಂಗವಾಗಿ ಚರ್ಚೆ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತ್‌ನಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಅದಕ್ಕೆ ಬೆಂಬಲ ವ್ಯಕ್ತಪಡಿಸುವ ಯಾರೇ ಆದರೂ ಅದು ತಿಳಿಯಬೇಕು ಎಂಬುದು ಜನರ ಒತ್ತಾಯ. ಈ ಹಿನ್ನೆಲೆಯಲ್ಲಿ ಇನ್ನೊಂದು ಸಭೆ ನಡೆಸಿ ಮುಂದಿನ ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ ಇಲ್ಲಿ.
ಗ್ರಾಮೀಣ ಭಾಗದಲ್ಲಿ ಯುವಕರ ತಂಡವೊಂದು ತನ್ನ ಗ್ರಾಮದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಗ್ರಾಮಸಭೆಯಲ್ಲಿ ಕೇಳಿ, ಅಲ್ಲಿ ಭ್ರಷ್ಟಾಚಾರ ನಡೆದಿರುವು ಬೆಳಕಿಗೆ ಬಂದು, ಗ್ರಾಮ ಸಭೆಯ ನಿರ್ಣಯದಂತೆ ಯಾವ ಕ್ರಮವೂ ಆಗದೇ ಇರುವಾಗ ಈ ಯುವಕರ ತಂಡ ಆಕ್ರೋಶಗೊಂಡು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿದೆ. ಇಂತಹ ಹೋರಾಟಗಳಿಗೆ ಎಲ್ಲೆಡೆಯಿಂದಲೂ ಬೆಂಬಲ ಅಗತ್ಯ ಇದೆ. ಇನ್ನೊಂದು ನೇಪಾಳ ನಮ್ಮ ಭಾರತ ಆಗಬಾರದು ಎನ್ನುವ ಅಭಿಲಾಷೆ ಉಳ್ಳ ಎಲ್ಲರೂ ಭ್ರಷ್ಟಾಚಾರವನ್ನು ಗ್ರಾಮೀಣ ಹಂತದಲ್ಲಿಯೇ ಹಿಮ್ಮೆಟ್ಟಿಸಬೇಕಿದೆ. ಆಡಳಿತವು ತಕ್ಷಣವೇ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..



