2025 ನೇ ಸಾಲಿನಲ್ಲಿ ದೀಪಾವಳಿ ಹಬ್ಬ ಹಾಗೂ ತುಳಸಿ ಪೂಜೆ ಪ್ರಯುಕ್ತ ಮೈದಾನದಲ್ಲಿ/ ತೆರೆದ ಪ್ರದೇಶದಲ್ಲಿ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆಯನ್ನು ಕೋರಿ (ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ) ಆಸಕ್ತರು ಅರ್ಜಿಯನ್ನು ಜಿಲ್ಲಾಧಿಕಾರಿಯವರ ಕಛೇರಿಗೆ ಅಕ್ಟೋಬರ್ 10 ರೊಳಗಾಗಿ ಸಲ್ಲಿಸುವಂತೆ ತಿಳಿಸಲಾಗಿದ್ದು, ಪ್ರಸ್ತುತ ಅರ್ಜಿಯೊಂದಿಗೆ ವರದಿಯನ್ನು ಈ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲು ಅಕ್ಟೋಬರ್ 16 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಅರ್ಜಿಯನ್ನು ನಿಗದಿತ ನಮೂನೆ -5 ರಲ್ಲಿ ಸಲ್ಲಿಸಬೇಕಾಗಿದ್ದು, ಅರ್ಜಿಯೊಂದಿಗೆ ತಾತ್ಕಾಲಿಕ ಅಂಗಡಿ ತೆರೆಯಲು ಉದ್ದೇಶಿಸಿರುವ ಸ್ಥಳದ (ರಸ್ತೆ, ಕಟ್ಟಡ ಇತ್ಯಾದಿ ವಿವರ) ನೀಲಿ ನಕ್ಷೆ, ಅರ್ಜಿದಾರರ ಭಾವಚಿತ್ರ, ಪ್ರಸ್ತಾವಿತ ಜಮೀನಿನ ಪಹಣಿ, ಖಾಸಗಿ ಜಮೀನಾಗಿದ್ದಲ್ಲಿ ಜಮೀನಿನ ಮಾಲಕರ ಒಪ್ಪಿಗೆ ಪತ್ರ (100 ರೂ ಸ್ಟಾಂಪ್ ಪೇಪರ್), ಸರಕಾರಿ ಜಾಗವಾಗಿದ್ದಲ್ಲಿ ಜಮೀನು ಯಾವ ಇಲಾಖೆಯ ಸುಪರ್ದಿಯಲ್ಲಿದೆಯೋ ಆ ಇಲಾಖೆಯ ನಿರಾಕ್ಷೇಪಣಾ ಪತ್ರದೊಂದಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ರೂ.200 ಪರಿಶೀಲನಾ ಶುಲ್ಕವನ್ನು ಹಾಗೂ ಪರವಾನಿಗೆ ಮಂಜೂರು ಮಾಡುವ ಸಂದರ್ಭದಲ್ಲಿ ರೂ 500 ಪರವಾನಿಗೆ ಶುಲ್ಕವನ್ನು ಪಾವತಿಸಬೇಕು.
ಅರ್ಜಿದಾರರು ಈ ಕಚೇರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಇಲಾಖೆ ನಿರಾಕ್ಷೇಪಣಾ ಪತ್ರ, ಪೊಲೀಸ್ ಅಧೀಕ್ಷಕರ ನಿರಾಕ್ಷೇಪಣಾ ಪತ್ರ, ಸಂಬಂಧಪಟ್ಟ ತಹಶೀಲ್ದಾರರ ನಿರಾಕ್ಷೇಪಣಾ ಪತ್ರ, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ನಿರಾಕ್ಷೇಪಣಾ ಪತ್ರಪಡೆದು ಸಲ್ಲಿಸಬೇಕು.
ಕಡ್ಡಾಯವಾಗಿ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶವಿರುತ್ತದೆ. ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಬಂದಲ್ಲಿ, ಸ್ಫೋಟಕ ಕಾಯಿದೆ/ನಿಯಮಾವಳಿಗಳಿಗೆ ಒಳಪಟ್ಟು ಈ ಕಚೇರಿಯಿಂದ ಪರವಾನಿಗೆ ಮಂಜೂರು ಮಾಡಲಾಗುತ್ತದೆ. ಅಕ್ಟೋಬರ್ 16 ರ ನಂತರ ಬಂದ ಅರ್ಜಿಗಳನ್ನು ಹಾಗೂ ಅಪೂರ್ಣವಾದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.


