ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿದಲ್ಲಿ ಉತ್ತಮ ಲಾಭ ಗಳಿಸಬಹುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಹೇಳಿದ್ದಾರೆ.
ಅವರು ಶುಕ್ರವಾರ ಸುಳ್ಯ ತಾಲ್ಲೂಕಿನ ಗೌಡ ಸಮುದಾಯ ಭವನದಲ್ಲಿ ಮೀನುಗಾರಿಕೆ ಇಲಾಖೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಹಾಗೂ ಫ್ರೀಡಂ ಆ್ಯಪ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಧುನಿಕ ಮೀನು ಕೃಷಿ ತಂತ್ರಜ್ಞಾನ ಕುರಿತು ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಸರ್ಕಾರ ಮೀನುಗಾರರ ಆದಾಯವನ್ನು ದ್ವಿಗುಣಗೊಳಿಸಲು ಹಾಗೂ ಆರ್ಥಿಕ ಭದ್ರತೆ ನೀಡಲು ಮತ್ಸ್ಯ ಸಂಪದ ಯೋಜನೆಯಡಿ ಮೀನು ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದು, ತಾಲೂಕು, ಗ್ರಾಮಮಟ್ಟದಲ್ಲಿ ಮೀನುಗಾರಿಕೆಯಲ್ಲಿ ಆಸಕ್ತಿ ಇರುವ ರೈತರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯಾನ್ಮುಖವಾಗಿದೆ. ಆ ದಿಸೆಯಲ್ಲಿ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ಮಾತನಾಡಿ, ಈ ಭಾಗದಲ್ಲಿ ರೈತರು ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ತಮ್ಮ ಅಡಿಕೆ ತೋಟದಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ಮೀನು ಸಾಕಾಣಿಕೆ ಮಾಡಬಹುದಾಗಿದೆ ಎಂದರು.
ಮೀನುಗಾರಿಕೆ ನಿರ್ದೇಶಕರಾದ ರಾಮಾಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸುಳ್ಯ ಮತ್ತು ಪುತ್ತೂರು ಭಾಗದಲ್ಲಿ ಅಡಿಕೆ ಪ್ರಮುಖ ಬೆಳೆಯಲಾಗುತ್ತಿದೆ. ಅದರೊಂದಿಗೆ ರೈತರು ತಮ್ಮ ತೋಟದಲ್ಲಿ ಕೆರೆ ಹಾಗೂ ಕೃಷಿ ಹೊಂಡಗಳನ್ನು ನಿರ್ಮಿಸಿರುವುದರಿಂದ ಅಂತಹ ಕೃಷಿಕರಿಗೆ ಆಧುನಿಕ ಮೀನುಕೃಷಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಾರ್ಯಗಾರದಲ್ಲಿ ರೈತರಿಗೆ 15 ಸಾವಿರ ಮೀನು ಮರಿಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದರು. ಮೀನುಗಾರಿಕೆ ಇಲಾಖೆ ವತಿಯಿಂದ ಇದೇ ವೇಳೆ ಸಚಿವರಿಗೆ ಸನ್ಮಾನಿಸಲಾಯಿತು. ಅರ್ಹ ರೈತರಿಗೆ ಮೀನು ಮರಿಗಳನ್ನು ಸಚಿವರು ವಿತರಿಸಿದರು.
ಮೀನುಗಾರಿಕೆ ನಿರ್ದೇಶನಾಲಯದ ಅಪರ ನಿರ್ದೇಶಕರಾದ (ಕರಾವಳಿ) ದಿನೇಶ್ ಕುಮಾರ್, ಮೀನುಗಾರಿಕೆ ಜಂಟಿ ನಿರ್ದೇಶಕರಾದ ಹರೀಶ್ ಕುಮಾರ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಶಿವಕುಮಾರ ಮಗದ, ಫ್ರೀಡಂ ಆಪ್ ಸಂಸ್ಥಾಪಕರಾದ ಸುಧೀರ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಸುಶ್ಮಿತ ರಾವ್, ಸಹಾಯಕ ನಿರ್ದೇಶಕರಾದ ದಿಲೀಪ ಕುಮಾರ್, ರೈತರು, ಕಾಲೇಜು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.