ಮುಂಗಾರು ಆರಂಭವಾಗುತ್ತಿದ್ದಂತೆ ಮೀನುಗಾರಿಕೆಯನ್ನು(Fishing) ನಿಷೇಧಿಸಲಾಗುತ್ತದೆ. ಇದು ಮೀನುಗಳು ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿ(Procreation) ಮಾಡುವ ಸಮಯ. ಹಾಗಾಗಿ ಎರಡು ತಿಂಗಳ ಕಾಲ ಆಳ ಸಮುದ್ರ ಮೀನುಗಾರಿಕೆಗೆ ವಿರಾಮ ಕೊಟ್ಟು ಕಡಲ ಮಕ್ಕಳು ಎರಡು ತಿಂಗಳು ತಮ್ಮ ಬಲೆ, ದೋಣಿ, ಹಡಗು ರಿಪೇರಿ ಮಾಡೋದ್ರಲ್ಲಿ ತಲ್ಲೀನರಾಗುತ್ತಾರೆ. ಇದೀಗ ಆ ದಿನಗಳು ಮುಗಿದು ಮತ್ತೆ ಮೀನುಗಾರಿಕೆಗೆ ಹೊರಡುವ ಸಮಯ ಬಂದಿದೆ. ಏಳುಪಟ್ಲ ಮೊಗವೀರ ಸಂಯುಕ್ತ ಸಭಾ(ಕದ್ರಿ) ಇದರ ವತಿಯಿಂದ ಸಾಮೂಹಿಕ ಸಮುದ್ರ ಪೂಜೆಯು ಸೋಮವಾರ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ನೆರವೇರಿತು. ಹೇರಳ ಮತ್ಸ್ಯಸಂಪತ್ತು ಲಭ್ಯವಾಗಲು, ಮತ್ಸ್ಯ ಸಂಪತ್ತು ಉಳಿಯಲು ಮೊಗವೀರ ಸಮಾಜ ಬಂಧುಗಳಿಂದ ನಗರದ ತಣ್ಣೀರುಬಾವಿಯ ಕಡಲ ಕಿನಾರೆಯಲ್ಲಿ ಸಮುದ್ರಪೂಜೆ ನಡೆಸಿದರು.
ಸಮುದ್ರರಾಜನಿಗೆ ಹಾಲು ಸಮರ್ಪಿಸಲು ಪ್ರತೀ ಗ್ರಾಮದಿಂದ ಹಾಲು ಸಂಗ್ರಹಣೆ ಮಾಡಲಾಯಿತು. ಎಲ್ಲಾ ಮೊಗವೀರ ಬಂಧುಗಳು ಬೊಕ್ಕಪಟ್ಣ ಬ್ರಹ್ಮ ಬಬ್ಬರ್ಯ ದೈವಸ್ಥಾನದಲ್ಲಿ ಒಂದಾಗಿ ಬಬ್ಬರ್ಯ ದೈವಕ್ಕೆ ಪ್ರಾರ್ಥನೆ ನೆರವೇರಿಸಿದರು. ಆ ಬಳಿಕ ಸಮುದ್ರ ದಡದಲ್ಲಿ ಭಜನಾ ಸಂಕೀರ್ತನೆ ಹಾಗೂ ಶ್ರೀ ಮಹಾಲಕ್ಷ್ಮಿ ಮಾತೆಗೆ ಪೂಜೆ ನೆರವೇರಿತು. ನಂತರ ಕದ್ರಿ ಜೋಗಿ ಮಠದ ಶ್ರೀರಾಜಯೋಗಿ ನಿರ್ಮಲನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಮೊಗವೀರ ಸಮಾಜ ಬಂಧುಗಳಿಂದ ಸಮುದ್ರಕ್ಕೆ ಕ್ಷೀರ ಸಮರ್ಪಣೆಯಾಯಿತು. ಜೊತೆಗೆ ಹಣ್ಣು, ಕಾಯಿಗಳನ್ನು ಸಮುದ್ರಕ್ಕೆ ಸಮರ್ಪಿಸಲಾಯಿತು.
ಮತ್ಸ್ಯೋದ್ಯಮಿ ಸಂದೀಪ್ ಪುತ್ರನ್, ಉಳ್ಳಾಲ, ಹೊಗೆ ಬಜಾರ್ ಮೊಗವೀರ ಗ್ರಾಮ ಸಭಾದ ಅಧ್ಯಕ್ಷ ಹೇಮಂತ್ ಕುಮಾರ್. ಪದಾಧಿಕಾರಿಗಳಾದ ಹೇಮಚಂದ್ರ ಸಾಲ್ಯಾನ್ ಪಡುಹೊಗೆ, ರಂಜನ್ ಕಾಂಚನ್ ಬೋಳೂರು, ಸುರೇಶ್ ಸುವರ್ಣ ನೀರೇಶ್ವಾಲ್ಯ, ಶ್ಯಾಮಸುಂದರ್ ಸೇರಿದಂತೆ ವಿವಿಧ ಗ್ರಾಮಗಳ ಗುರಿಕಾರರು, ಪ್ರತಿನಿಧಿಗಳು, ಸದಸ್ಯರು ಹಾಗೂ ಮಹಿಳಾ ಸಂಘಗಳ ಸದಸ್ಯೆಯರು ಈ ಸಂದರ್ಭ ಉಪಸ್ಥಿತರಿದ್ದರು.
- ಅಂತರ್ಜಾಲ ಮಾಹಿತಿ(ಈಟಿವಿ ಭಾರತ್)
ಮತ್ತೆ ಮೀನುಗಾರಿಗೆ ಆರಂಭ : ವಿರಾಮದಲ್ಲಿದ್ದ ಕಡಲ ಮಕ್ಕಳಿಂದ ತಣ್ಣೀರುಬಾವಿ ಕಡಲ ತೀರದಲ್ಲಿ ಸಮುದ್ರ ಪೂಜೆ https://t.co/JUCFC9d6Eb
— theruralmirror (@ruralmirror) August 20, 2024
Advertisement