ಸರ್ಕಾರಿ ಶಾಲೆಗಳನ್ನು ಸರಿಪಡಿಸಿ | ಅವೇ ಬದುಕು ಕಲಿಸುವ ಉತ್ತಮ ಮಾರ್ಗ – ಬೇಳೂರು ಸುದರ್ಶನ |

February 3, 2024
12:46 PM
ಹಿರಿಯ ಪತ್ರಕರ್ತ ಬೇಳೂರು ಸುದರ್ಶನ ಅವರು ತಮ್ಮ ಪೇಸ್‌ ಬುಕ್‌ ವಾಲಿನಲ್ಲಿ ಸರ್ಕಾರಿ ಶಾಲೆಗಳ ವ್ಯವಸ್ಥೆಯ ಬಗ್ಗೆ ಬರೆದಿದ್ದಾರೆ. ಅದನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ. ಗ್ರಾಮೀಣ ಅಭಿವೃದ್ಧಿಗೆ ಇದು ಪೂರಕ ವಿಷಯವಾಗಿದೆ.

ರಮ್ಯತೆಯನ್ನು ಬದಿಗಿಟ್ಟೇ ಹೇಳುತ್ತೇನೆ: ನನ್ನ ವಿಶ್ವ ದೃಷ್ಟಿಕೋನವನ್ನು ರೂಪಿಸಿದ್ದು ಸರ್ಕಾರಿ ಶಾಲೆಗಳೇ(Govt School). ನಲವತ್ತು ವರ್ಷಗಳ ನಂತರ ನಾನು ಓದಿದ ಸರ್ಕಾರಿ ಶಾಲೆಗಳನ್ನು ನೆನಪಿಸಿಕೊಂಡಾಗ ರಮ್ಯತೆಯೇ ಮೆರೆಯುವ ಸಾಧ್ಯತೆ ಇದೆ. ಈ ಶಾಲೆಗಳು ಹೇಗಿದ್ದವು ಎಂಬುದನ್ನು ಹದಿನೈದು ವರ್ಷಗಳ ಹಿಂದೆ ಮತ್ತೆ ಖುದ್ದು ಹೋಗಿ ಕಂಡುಕೊಂಡು, ಈಗ ಎಲ್ಲವನ್ನೂ ನೆನಪಿಸಿಕೊಂಡು ಬರೆಯುವಾಗ ರಮ್ಯತೆ ಬೆರೆಯಲು ಸಾಧ್ಯವೇ ಇಲ್ಲ.

Advertisement

2009 ರಲ್ಲಿ, ಈ ಶಾಲೆಗಳನ್ನು ಬಿಟ್ಟ ಐದು ದಶಕಗಳ ನಂತರ, ನಾನು ನನ್ನ ಪುಟ್ಟ ಕಾರಿನಲ್ಲಿ ಪತ್ನಿ ಮತ್ತು ಮಗನೊಂದಿಗೆ ನಾನು ಓದಿದ ಎಲ್ಲ ಶಾಲೆಗಳನ್ನೂ ನೋಡಲು ಹೋಗಿದ್ದೆ. ಅವೆಲ್ಲವೂ ಹೆಚ್ಚು ಕಡಿಮೆ ಪಶ್ಚಿಮ ಘಟ್ಟದ ಒಳಗೋ, ಅಂಚಿಗೋ ಇದ್ದಿದ್ದರಿಂದ ಒಂದೇ ಸಾಲಿನಲ್ಲಿ ಎಲ್ಲವನ್ನೂ ನೋಡಲು ಸಾಧ್ಯವಾಯಿತು. ಈಗಲೂ ಆ ಪ್ರವಾಸ ಕಣ್ಣಿಗೆ ಕಟ್ಟಿದಂತಿದೆ. ಕೆಲವು ಊರುಗಳಲ್ಲಿ ನನ್ನ ಶಾಲೆಯನ್ನು ಹುಡುಕುವುದೇ ದೊಡ್ಡ ಕೆಲಸವಾಯಿತು! ಅವುಗಳ ಛಾಯಾಚಿತ್ರಗಳನ್ನು ನನ್ನ ಮಗನಿಂದಲೇ ತೆಗೆಸಿದೆ. ನೋಡು, ಇಂತಿಂಥ ಶಾಲೆಯಲ್ಲಿ ನಾನು ಓದಿದ್ದು ಎಂದು ಹೇಳುವಾಗ ಮನಸ್ಸು ಉಲ್ಲಾಸದಿಂದ ತುಂಬಿತ್ತು.

ನಾನು ಒಂದನೇ ಕ್ಲಾಸು ಓದಿದ ಹೊರಬೈಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಸೊರಬ ತಾಲೂಕಿನ ಉಳವಿಯಿಂದ ದೊಡ್ಡೇರಿ ಮಾರ್ಗವಾಗಿ ಬನವಾಸಿಗೆ ಹೋಗುವ ಹಾದಿಯಲ್ಲಿ ಮೊದಲು ಸಿಗುವ ಶಾಲೆ. ಎಡಕ್ಕೆ ಹೋದರೆ ಹೊರಬೈಲು. ಬಲಕ್ಕೆ ತಿರುಗಿದರೆ ಹೊಡಬಟ್ಟೆ. ಈ ಶಾಲೆಗೆ ಇನ್ನೂ ಹಲವು ಕೋಣೆಗಳು ಸೇರಿಕೊಂಡಿವೆ. ಈ ಶಾಲೆಯು ಅಂದು ಏಕೋಪಾಧ್ಯಾಯ ಶಾಲೆಯಾದಾಗ ನಾನು ಮೊದಲನೇ ಬೆಂಚಿನಲ್ಲಿ ಒಂದನೇ ಕ್ಲಾಸಿನ ವಿದ್ಯಾರ್ಥಿಯಾಗಿದ್ದೆ…. ಎರಡನೇ ಬೆಂಚು ಎರಡನೇ ಕ್ಲಾಸಿಗೆ… ಮೂರನೇ ಬೆಂಚು … ಗೊತ್ತಾಯ್ತಲ್ಲ….. ಅಲ್ಲಿ ಒಟ್ಟು ಐದು ಬೆಂಚುಗಳಿದ್ದ ನೆನಪು! ನಾನು 2015 ರಲ್ಲಿ ಹೋದಾಗ ಬೆಂಚುಗಳೂ ಇರಲಿಲ್ಲ; ಹೆಚ್ಚು ಮಕ್ಕಳೂ ಇರಲಿಲ್ಲ. ಸುಜಾತಾ (ಕಣ್ಮರೆಯಾದ ನನ್ನ ಅಕ್ಕನ ಹೆಸರು!) ಟೀಚರ್‌ ನನ್ನನ್ನು ಸಂತೋಷದಿಂದ ಮಾತನಾಡಿಸಿ ಕಳಿಸಿದರು.

ನಮಗೇನೋ ಬೆಂಚಿತ್ತು. ಆದರೆ ಹೊಲೇರು ಎಂದು ನಾವು ಆಗ ಕರೆಯುತ್ತಿದ್ದ ದಮನಿತ ವರ್ಗದ ಮಕ್ಕಳಿಗೆ ಬೆಂಚೂ ಇರಲಿಲ್ಲ ಎಂದು ಈಗ ನೆನಪಾಗುತ್ತಿದೆ. ನನ್ನ ಓರಗೆಯ ಆ ಮಿತ್ರರು ಏನೂ ಇಲ್ಲದೆ ಬರಿ ನೆಲದಲ್ಲೇ ಕೂತು ಅಕ್ಷರ ಕಲಿತರು ಎಂಬುದು ಎಂಥ ಸಾಧನೆ ಎಂದು ನನಗೀಗ ಅರಿವಾಗುತ್ತಿದೆ.

ಈ ಶಾಲೆಯಲ್ಲಿದ್ದಾಗ ಒಂದು ದಿನ, (ಬಹುಶಃ ಸ್ವಾತಂತ್ರ್ಯ ದಿನವೇ ಇರಬೇಕು) ಪ್ರಭಾತಫೇರಿಗೆಂದು ಹೊಡಬಟ್ಟೆಯ ಬೀದಿಯಲ್ಲಿ ತಿರುಗುತ್ತಿದ್ದಾಗ ಕೆಸರಿನಲ್ಲಿ ಕಾಲಿಡಲಾಗದೆ, ಮೇಸ್ಟ್ರು ಹೇಳಿದ್ದನ್ನು ವಿರೋಧಿಸಲಾಗದೆ ಪಟ್ಟ ಪಾಡಿನ ನೆನಪು ಈಗಲೂ ಹಸಿಯಾಗಿದೆ. ನಮ್ಮ ಶಾಲೆಯ ಆಟದ ಮೈದಾನದಲ್ಲಿ ಊರಿನ ಜನ ಯಾವಾಗಲೂ ವಾಲಿಬಾಲ್ ಆಡುತ್ತಿದ್ದರು, ಬ್ಯಾಡ್ಮಿಂಟನ್ ಕೂಡಾ ಆಡುತ್ತಿದ್ದರು ಎಂಬೆಲ್ಲ ನೆನಪುಗಳು ಮಬ್ಬಾಗಿವೆ.

ಹೊಡಬಟ್ಟೆಯ ಅಜ್ಜಿ ಮನೆಯಿಂದ ದಿನಾಲೂ ಮಣ್ಣಿನ ರಸ್ತೆಯಲ್ಲಿ ಎರಡು ಫರ್ಲಾಂಗು ನಡೆದು ಶಾಲೆಗೆ ಬರೋದೇ ದೊಡ್ಡ ವಾಕಿಂಗ್. ಮಳೆಗಾಲ ಅಂದ ಕೂಡಲೇ ಧೋ ಎಂದು ಸುರಿಯುತ್ತಿದ್ದ ಮಳೆ, ಕರ್ರಗೆ ಕವುಚಿಕೊಂಡಿರುತ್ತಿದ್ದ ಇನ್ನೇನು ಕೈ ಚಾಚಿದರೆ ಸಿಕ್ಕೇ ಬಿಡುತ್ತೆ ಅನ್ನೋಹಾಗೆ ಮೋಡಗಳೇ ತುಂಬಿದ್ದ ಆಕಾಶ ನಮ್ಮ ಜೊತೆಯಾಗಿದ್ದವು. ಬೇಸಗೆ ಆದರೆ ಕವಳಿ ಮಟ್ಟಿ, ದೀಪಾವಳಿ ಹತ್ತಿರ ಬಂದ್ರೆ ನೆಲ್ಲಿ ಮಟ್ಟಿ ಅಲೆಯೋದು ನಮ್ಮೆಲ್ಲರ ಹವ್ಯಾಸವಾಗಿತ್ತು. ಜೊತೆಗೆ ಮುಳ್ಳುಹಣ್ಣನ್ನು ಸವಿಯೋ ಕನಸು ಬೇರೆ!

ಹೊಡಬಟ್ಟೆ ಶಾಲೆಯಲ್ಲಿ ನಾನು ಕಳೆದಿದ್ದು / ಕೂಡಿದ್ದು ಒಂದೇ ವರ್ಷ. ಆದರೆ ಈ ಶಾಲೆ ನನಗೆ ತುಂಬಾ ಇಷ್ಟ. ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನಲ್ಲಿ ಅಕ್ಷರ ಕಲಿತ ನಾನು ಆಮೇಲೆ ಹೊರನಾಡಿನ ಪಕ್ಕದಲ್ಲೇ ಇದ್ದ ಕಳಸದಲ್ಲಿ ನರ್ಸರಿ ಶಾಲೆಗೆ ಹೋದೆ. ಇನ್ನೂ ನೆನಪಿದೆ. ಕಳಸದ ಒಂದು ಘಟನೆ ಇನ್ನೂ ನೆನಪಿದೆ: ಡ್ಯಾನ್ಸ್ ಮಾಡಲು ಸುತಾರಾಂ ಒಪ್ಪದೆಯೇ ಮೂತಿ ಊದಿಸಿಕೊಂಡು ಅತ್ತಿದ್ದು….. ಮರುದಿನ ಮಾತ್ರ ಡ್ಯಾನ್ಸ್ ಮಾಡಿದವರಿಗೆ ಕೊಟ್ಟಿದ್ದ ಬಾಚಣಿಗೆಯನ್ನು ನಾನೂ ಬಹುಮಾನವಾಗಿ ಗಿಟ್ಟಿಸಿದ್ದು….! 1971 ರಲ್ಲಿ ನನ್ನ ಒಂದನೇ ಕ್ಲಾಸಿಗೆ ಸಾಕ್ಷಿಯಾದ ಈ ಶಾಲೆ ಈಗಲೂ ಎಷ್ಟು ವಿನಮ್ರವಾಗಿ ನಿಂತಿದೆ…… ಎಷ್ಟೋ ಜನರಿಗೆ ಈ ಶಾಲೆ ಏನೆಲ್ಲ ಕಲಿಸಿಕೊಟ್ಟಿದೆ.

ನಾನು ಓದಿದ ಶಾಲೆಗಳ, ಬೆಳೆದ ಊರುಗಳ ಪಟ್ಟಿ ನೋಡಿ: ಪ್ರಿನರ್ಸರಿ – ಹೊರನಾಡು; ನರ್ಸರಿ – ಕಳಸ; ಒಂದು-ಹೊರಬೈಲು ಪ್ರಾಥಮಿಕ ಶಾಲೆ; ಎರಡು: ಸಿದ್ಧೇಶ್ವರ ಶಾಲೆ, ವಿನೋಬ ನಗರ, ಸಾಗರ; ಮೂರು – ನಗರ (ಬಿದನೂರು); ನಾಲ್ಕು – ತೀರ್ಥಹಳ್ಳಿ; ಐದು- ಸುಬ್ರಹ್ಮಣ್ಯ; ಆರು,ಆರೂವರೆ- ಸಾಗರ ವಿನೋಬನಗರ ಶಾಲೆ; ಏಳರ ಇನ್ನರ್ಧ- ಕೆ ಬಿ ಬಡಾವಣೆ ಶಾಲೆ, ದಾವಣಗೆರೆ; ಎಂಟು,ಎಂಟೂವರೆ – ಪ್ರೌಢಶಾಲೆ, ದಾವಣಗೆರೆ; ಒಂಬತ್ತರ ಇನ್ನರ್ಧ – ಸಾಗರ; ಹತ್ತು (ಎಸೆಸೆಲ್ಸಿ) – ಪೊನ್ನಂಪೇಟೆ ಜ್ಯೂನಿಯರ್‌ ಕಾಲೇಜು.

ಮೂರನೇ ಕ್ಲಾಸಿನ ಹನುಮಯ್ಯ, ಆರನೇ ಕ್ಲಾಸಿನ ವೆಂಕಟೇಶ, ಗುಡಿಗಾರ ಮಾಸ್ತರು, ಎಂಟನೇ ತರಗತಿಯ ಬಿ ಎಂ ಸದಾಶಿವಯ್ಯ, ಎಚ್‌ ಆರ್ ರಾಮಚಂದ್ರ, ಎಸೆಸೆಲ್ಸಿಯ ಗಣಿತ ಟೀಚರ್ ಜಯಲಕ್ಷ್ಮಿ ಮೇಡಂ – ಇವರೆಲ್ಲ ನನಗೆ ನೆನಪಿದ್ದರೆ ನನ್ನ ಜ್ಞಾಪಕಶಕ್ತಿ ಕಾರಣವಲ್ಲ; ಆ ಶಿಕ್ಷಕರೆಂಬ ಶ್ರದ್ಧೆಯ ಚೇತನಗಳೇ ಕಾರಣ. ಅದರಲ್ಲೂ ಎಸೆಸೆಲ್ಸಿ ಟೀಚರ್ ಜಯಲಕ್ಷ್ಮಿ ಮೇಡಂ ನನ್ನ ವಾರಕ್ಕೆ ಒಮ್ಮೆಯಾದರೂ ನೆನಪಾಗುತ್ತಾರೆ; ಅವರನ್ನು ಈಗಲೂ ಸಂಪರ್ಕದಲ್ಲಿ ಇಟ್ಟುಕೊಳ್ಳಲು ಯತ್ನಿಸಿದ್ದೇನೆ. ಕೆಲವೊಮ್ಮೆ ಅವರ ದೂರವಾಣಿ ಸಂಪರ್ಕವೇ ಇರದೆ ಬೇಜಾರಾಗುತ್ತದೆ. ಮೂರು ವರ್ಷಗಳ ಹಿಂದೆ ಸಾಗರದ ವಿನೋಬಾ ಶಾಲೆಗೆ ಹೋದಾಗ, ಶಾಲಾ ಮಕ್ಕಳು ತುಂಬಾ ಅಕ್ಕರೆ ವಹಿಸಿ ಕಸ ಗುಡಿಸುತ್ತಿದ್ದರು. ನನ್ನ ಶಾಲೆ ಎಷ್ಟು ಚಂದ, ಎಷ್ಟು ಹಸಿರಾಗಿದೆ ಎಂದು ನೋಡಿ ಮನಸ್ಸು ತುಂಬಿ ಬಂದಿತು. ನಾನು ನನ್ನೆಲ್ಲ ವ್ಯಸನಗಳನ್ನು ಮರೆತು ಮನುಷ್ಯನಾಗುವುದು ಈ ಶಾಲೆಗಳನ್ನು ನೋಡಿದಾಗಲೇ ಅನ್ನಿಸುತ್ತದೆ. ಭಾವುಕತೆಯನ್ನೋ, ರಮ್ಯತೆಯನ್ನೋ ಬಿಡಿ; ನಿಮ್ಮ ಬಾಲ್ಯದ ಶಾಲೆಯ ಮುಂದೆ ನಿಂತಾಗ ನೀವೊಬ್ಬ ಪುಟ್ಟ ಹುಡುಗನೋ, ಹುಡುಗಿಯೋ ಆಗಿ ಬದಲಾಗುವುದನ್ನು ಅನುಭವಿಸುವುದು ಮಾತ್ರ ನಿಜ.

ಸರ್ಕಾರಿ ಶಾಲೆಯಲ್ಲಿ ಓದಿರುವ ಬಗ್ಗೆ ಈಗ ಚರ್ಚೆ ನಡೆಯುತ್ತಿರುವುದಕ್ಕೂ, ಆಗಿನ ವಾತಾವರಣಕ್ಕೂ ತುಂಬಾ ವ್ಯತ್ಯಾಸವಿದೆ. ೭೦ರ ದಶಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಮಟ್ಟ ಹೆಚ್ಚಿತ್ತು ಎಂಬುದು ನನ್ನ ನಂಬಿಕೆ. ಉದಾಹರಣೆಗೆ ಸುಬ್ರಹ್ಮಣ್ಯದ ಶಾಲೆಯಲ್ಲಿ ನಾನು ಇಂಗ್ಲಿಶ್‌ ಅಕ್ಷರ ಬರೆಯುವುದನ್ನು ಕಲಿತೆ. ಅಲ್ಲಿ ಚಾಚೂ ತಪ್ಪದೆ ಕಾಪಿ ಬರೆಯಬೇಕಾಗಿತ್ತು. ಪ್ರತಿದಿನವೂ ಯಾವ ತರಗತಿಯನ್ನೂ ತಪ್ಪಿಸುವ ಪ್ರಮೇಯ ಬರಲಿಲ್ಲ. ಮಧ್ಯಾಹ್ನದ ಬಿಸಿ ಊಟವೂ ಇತ್ತು. ಹೊರಗೆ ಭಾರೀ ಮಳೆ ಸುರಿಯುವಾಗ, ಮೊಗಸಾಲೆಯಲ್ಲಿ ಕೂತು ಬಿಸಿ ಬಿಸಿ ಸಜ್ಜಿಗೆ (ಕೇರ್ ರವೆ ಇರಬೇಕು) ತಿನ್ನುವುದು ಎಂದು ಮಜಾ ಅನುಭವ ಆಗಿದ್ದಂತೂ ಹೌದು. ಅಲ್ಲಿ ಯಾವ ಸಮವಸ್ತ್ರದ ಸಮಸ್ಯೆ ಇಲ್ಲದೆ ದಿನಗಳನ್ನು ಕಳೆದೆ. ದಾವಣಗೆರೆ ಹೈಸ್ಕೂಲಿನಲ್ಲಿ ಮಾತ್ರ ಖಾಕಿ ಚೆಡ್ಡಿ, ಬಿಳಿ ಅಂಗಿ ಹೊಂದಿಸಲು ಪಡಬಾರದ ಕಷ್ಟ ಅನುಭವಿಸಿದೆ.

ನಾನು ಎರಡನೆಯ ತರಗತಿ ಓದಿದ ಸಾಗರದ ಶಿವಪ್ಪನಾಯಕ ಮೀನು ಮಾರುಕಟ್ಟೆ ಪಕ್ಕದ ಶಾಲೆಯ ಗೋಡೆಗಳು ಕತ್ತಲನ್ನೂ ನಾಚಿಸುವಂತೆ ಕರ್ರಗಿದ್ದವು. ನಾನು ಆ ಕೋಣೆಯಲ್ಲಿ ಎಲ್ಲರೊಂದಿಗೆ ಬೆರೆತು, ಮೀನಿನ ವಾಸನೆಯ ನಡುವೆಯೇ ಪಾಠ ಕಲಿತೆ. ವಿನೋಬಾ ನಗರದ ಆರನೇ ಕ್ಲಾಸಿನಲ್ಲಿದ್ದಾಗ ನನ್ನ ಮಿತ್ರ 1984 ರಲ್ಲಿ ಜೋಗಕ್ಕೆ ಹೋಗುತ್ತಿದ್ದಾಗ ಕಂಡಕ್ಟರನಾಗಿ ಸಿಕ್ಕಿದ! ಅದು ಬಿಟ್ಟರೆ ಹೊಡಬಟ್ಟೆಯ ಮಂಜುನಾಥನೇ ನನಗಿನ್ನೂ ಅಷ್ಟಿಷ್ಟು ಸಂಪಕ್ದಲ್ಲಿ ಇರುವ ಸರ್ಕಾರಿ ಶಾಲೆಯ ಸಹಪಾಠಿ. ಈ ಜಗತ್ತು ತುಂಬಾ ಸಂಕೀರ್ಣ. ಮತ್ತೊಮ್ಮೆ ನನ್ನ ಸರ್ಕಾರಿ ಶಾಲಾ ಸ್ನೇಹಿತರನ್ನು ಕಾಣಲು ಮನ ತವಕಿಸುತ್ತದೆ. ಹುಡುಕುವುದಾದರೂ ಹೇಗೆ?

ಸರ್ಕಾರಿ ಶಾಲೆಗಳೇ ಪಾರಮ್ಯ ಹೊಂದಿದ್ದ ಆ ದಿನಗಳಲ್ಲಿ ಶಿಕ್ಷಕರ ಗುಣಮಟ್ಟವೂ ಸರಾಸರಿಯಾಗಿ ಚೆನ್ನಾಗಿತ್ತು; ಅದಕ್ಕಿಂತ ಹೆಚ್ಚಾಗಿ ಬಹುತೇಕ ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಯಿಂದ ನಡೆಸಿಕೊಂಡಿದ್ದರು ಎಂಬುದು ನನ್ನ ಅನಿಸಿಕೆ. ಇಂದು ಶಿಕ್ಷಣ ಎಂದರೆ ಕಂಪೌಂಡಿನೊಳಗಿನ ಅಕ್ಷರ ಕಲಿಕೆ ಎಂಬಂತಾಗಿದೆ. ಹಳ್ಳಿಯ ನಡುವೆ, ಪುಟ್ಟ ಪುಟ್ಟ ನಗರಗಳಲ್ಲಿ ಇರುವ ಶಾಲೆಗಳಿಗೂ ಊರಿನವರಿಗೂ ಉತ್ತಮ ಸಂಬಂಧ ಇತ್ತು. ಆಗಲೂ ಶಿಕ್ಷಕರು ಮಕ್ಕಳನ್ನು ತಿದ್ದುವ ಹೊಣೆ ವಹಿಸಿಕೊಂಡಿದ್ದರು; ಈಗ ಶಿಕ್ಷಕರು ಉತ್ತರಪತ್ರಿಕೆ ತಿದ್ದುವುದರಲ್ಲೇ, ಹತ್ತು ಹಲವು ವರದಿಗಳನ್ನು ಬರೆದು ಕಳಿಸುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಶಿಕ್ಷಣವೇ ಶಿಕ್ಷಕರ ಮುಖ್ಯ ಕೆಲಸ ಆಗುವವವರೆಗೂ ಸರ್ಕಾರಿ ಶಾಲೆಗಳಲ್ಲಿ ಸುಧಾರಣೆ ಕಷ್ಟ. ಗತಕಾಲದಲ್ಲಿ ರಮ್ಯತೆ ಇದ್ದರೆ ಅದಕ್ಕೆ ಶಿಕ್ಷಕರು ಕೇವಲ ಕಲಿಕೆಗಷ್ಟೇ ಗಮನ ಕೊಟ್ಟ ವಾಸ್ತವವೇ ಕಾರಣ.

ಈ ನಿಟ್ಟಿನಲ್ಲಿ ಬೆಂಗಳೂರಿನ ಸಾಣೆಗೊರವನಹಳ್ಳಿಯ ಸರ್ಕಾರಿ ಪ್ರೌಢಶಾಲೆ ನನಗೆ ನೆನಪಿಗೆ ಬರುತ್ತದೆ. ಒಂದು ದಿನ ಅಲ್ಲಿ ನಾನು ಪುಟ್ಟ ಭಾಷಣ ಮಾಡುವುದಕ್ಕೂ ಹೋಗಿದ್ದೆ. ಅಲ್ಲಿನ ಮುಖ್ಯೋಪಾಧ್ಯಾಯರು, ಶಿಕ್ಷಕರು, ಮಕ್ಕಳು – ಎಲ್ಲರಲ್ಲೂ ಕಲಿಸುವ, ಕಲಿಯುವ ಕಾಳಜಿ ಕಾಣಿಸಿತು.

ಮಕ್ಕಳು ಸಮಾಜದ, ಬದುಕಿನ ವೈವಿಧ್ಯವನ್ನು ಅರಿಯುತ್ತ ಅಕ್ಷರ ಕಲಿಯಲು ಸರ್ಕಾರಿ ಶಾಲೆಗಳೇ ಬೇಕು ಎಂಬುದು ನನ್ನ ಅಭಿಪ್ರಾಯ. ಸರ್ಕಾರಿ ಶಾಲೆಗಳ ವ್ಯವಸ್ಥೆಯೇ ಕುಸಿದಿದೆ. ಸರ್ಕಾರ ಮತ್ತು ಪಾಲಕರು ಖಾಸಗೀಕರಣ ಮತ್ತು ಉತ್ತಮ ಕಟ್ಟಡಗಳೇ ಕಲಿಕೆಗೆ ಮುಖ್ಯ ಎಂಬ ಮೂಢನಂಬಿಕೆಯಿಂದ ಹೊರಗೆ ಬಂದರೆ ಬದಲಾವಣೆ ಖಂಡಿತ ಸಾಧ್ಯವಿದೆ. ಈ ಕಾಲದ ಹಿರಿಯರೆಲ್ಲರೂ ಸರ್ಕಾರಿ ಶಾಲೆಗಳಲ್ಲೇ ಓದಿದವರು. ಅವರೆಲ್ಲ ಒಂದಾಗಿ ಶ್ರಮ ವಹಿಸಿದರೆ, ಸರ್ಕಾರವೂ ಅಲ್ಲಲ್ಲಿ ಬಿಗಿ ಮಾಡಿದರೆ, ಶಿಕ್ಷಕರಿಗೆ ಕಲಿಸುವ ಕೆಲಸವನ್ನಷ್ಟೇ ಕೊಟ್ಟು ಆಡಳಿತ ವ್ಯವಸ್ಥೆಯನ್ನು ಸರಿಪಡಿಸಿದರೆ, ನಮ್ಮೂರಿನ ಶಾಲೆಗಳನ್ನು ಮತ್ತೆ ನಿಜಕಲಿಕೆಯ ಕೇಂದ್ರಗಳನ್ನಾಗಿ ಮಾಡುವುದು ಕಷ್ಟವಲ್ಲ.

ಬರಹ :
ಬೇಳೂರು ಸುದರ್ಶನ
, ಹಿರಿಯ ಪತ್ರಕರ್ತರು

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು
April 10, 2025
9:58 AM
by: The Rural Mirror ಸುದ್ದಿಜಾಲ
ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |
April 10, 2025
8:13 AM
by: ದ ರೂರಲ್ ಮಿರರ್.ಕಾಂ
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ
April 10, 2025
7:46 AM
by: ದ ರೂರಲ್ ಮಿರರ್.ಕಾಂ
ರೆಪೋ ದರದಲ್ಲಿ ಶೇಕಡ  0.25ರಷ್ಟು  ಕಡಿತ | ಶೇಕಡ 6.25ರಿಂದ ಶೇಕಡ 6ಕ್ಕೆ  ಇಳಿಕೆ
April 10, 2025
7:35 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group