ರಾಜ್ಯದಲ್ಲಿ ಮತ್ತೆ ಕಮಿಶನ್ ವ್ಯವಹಾರ ಸದ್ದು ಮಾಡುತ್ತಿದೆ. ಗುತ್ತಿಗೆದಾರರ ಸಂಘವು ಕಮಿಶನ್ ವ್ಯವಹಾರದ ಆರೋಪದ ಬೆನ್ನಲ್ಲೇ ಇದೀಗ ಮೇವು ವ್ಯವಹಾರದಲ್ಲೂ ಕಮಿಶನ್ ಬಗ್ಗೆ ಆರೋಪ ಬಂದಿದೆ. ಈ ಬಗ್ಗೆ ಉದ್ಯಮಿ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ.
ಬೆಳಗಾವಿಯ ಸಂತೋಷ್ ಅವರು ಕಮಿಶನ್ ಆರೋಪ ಮಾಡಿ ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ನಡೆದ ಬಳಿಕ ರಾಜ್ಯದಲ್ಲಿ ಕಮಿಶನ್ ವ್ಯವಹಾರವು ಬಹುದೊಡ್ಡ ಸದ್ದು ಮಾಡಿದೆ. ಗುತ್ತಿಗೆದಾರರ ಸಂಘವು ಕಮಿಶನ್ ವ್ಯವಹಾರದ ಬಗ್ಗೆ ನೇರ ಆರೋಪ ಮಾಡಿದ್ದರೆ ಇದೀಗ ಚಿಕ್ಕಬಳ್ಳಾಪುರದಲ್ಲಿ ಬಹುಕೋಟಿ ಮೇವು ಹಗರಣ ಸದ್ದು ಮಾಡಿದೆ. ಮೇವು ಪೂರೈಸಿದರೂ ಕಮಿಷನ್ ಕಾರಣ ನೀಡಿ ಬಿಲ್ ನೀಡಿಲ್ಲ ಎಂದು ಹರ್ಷ ಅಸೋಸಿಯೇಟ್ಸ್ನ ಜಿ.ಎಂ ಸುರೇಶ್ ಎಂಬವರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಇದೀಗ ತಾನು ಸಾಲಕ್ಕೆ ಸಿಲುಕಿಕೊಂಡಿದ್ದು, ಪ್ರಾಣಕ್ಕೆ ಹಾನಿಯಾದರೆ ಇದೇ ಕಾರಣ ಎಂದು ಹೇಳಿದ್ದಾರೆ.
ಸುರೇಶ್ ಅವರು ರೈತರಿಂದ ಮೇವು ಖರೀದಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ 591 ಟನ್ ಮೇವು ಸರಬರಾಜು ಮಾಡಿದ್ದರು. ಆದರೆ ಕಮಿಷನ್ ಆಸೆಗಾಗಿ ಬೇಕೆಂದೇ ಬಿಲ್ ವಿಳಂಬ ಮಾಡುತ್ತಿದ್ದಾರೆ. ಹಳೇ ಡೇಟ್ ಗೆ ಪ್ರೊಸೀಡಿಂಗ್ಸ್ ಮಾಡಿ ಅನ್ಯಾಯ ಮಾಡಿದ್ದಾರೆ. ಹೈಕೋರ್ಟ್ ಆದೇಶ ನೀಡಿದ್ದರೂ ಸಹ ಬರಬೇಕಾದ ಬಿಲ್ ಬಂದಿಲ್ಲ. 3 ಲೋಡ್ ಮೇವಿಗೆ ಒಂದು ಲೋಡ್ ಮೇವಿನ ದರ ನೀಡುತ್ತಿದ್ದಾರೆ. ಇದಕ್ಕಾಗಿ ಹೇಳೇ ಡೇಟ್ ಗೆ ದಾಖಲೆ ತಯಾರಿಸಿದ್ದಾರೆ ಎಂದು ಸುರೇಶ್ ಪತ್ರದಲ್ಲಿ ಆರೋಪಿಸಿದ್ದಾರೆ.
ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಶಸಂಗೋಪನೆ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಡಾ.ರವಿ ಅವರು ‘ಸುರೇಶ್ ಅವರು ಒಣ ಮೇವಿನ ಬದಲು ಹಸಿ ಮೇವನ್ನು ಪೂರೈಸಿದ್ದರು. 1 ಕೆಜಿ ಒಣ ಮೇವು, 3 ಕೆ.ಜಿ ಹಸಿ ಮೇವಿಗೆ ಸಮವಾಗುತ್ತದೆ. ಇದೇ ರೀತಿ ಡಿಸಿ ಆಫೀಸ್ನಿಂದ ಪೇಮೆಂಟ್ ಮಾಡಿದ್ದಾರೆ. ಆದ್ರೆ ಹೆಚ್ಚು ಪೇಮೆಂಟ್ ಬೇಕೆಂದು ಸುರೇಶ್ ಅವರು ದೂರು ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.