ಮಲೆನಾಡು ಭಾಗದ ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಹಾಗೂ ಸಂಪರ್ಕ ವ್ಯವಸ್ಥೆ ಯಾವತ್ತೂ ಕಷ್ಟಕರ. ಅದರಲ್ಲೂ ಮಳೆಗಾಲದಲ್ಲಿ ಗ್ರಾಮಗಳ ಜನರು ಹೊಳೆಗಳನ್ನು ದಾಟಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಹರಸಾಹಸವೇ ಸರಿ. ಇದೀಗ ಈ ಸಂಕಷ್ಟದಿಂದ ದೂರ ಮಾಡಲು ಸರ್ಕಾರವು ಕಾಲುಸಂಕ ನಿರ್ಮಾಣಕ್ಕೆ ಮುಂದಾಗಿದೆ. ಸಾಗರ ಮತ್ತು ಹೊಸನಗರ ತಾಲೂಕು ಭಾಗದಲ್ಲಿ 234 ಕಾಲು ಸಂಕಗಳನ್ನು ನಿರ್ಮಾಣ ಮಾಡಲು ಯೋಜನೆ ಸಿದ್ಧವಾಗಿದೆ.
ಶರಾವತಿ ನದಿ ತೀರದ ಕರೂರು, ಬಾರಂಗಿ, ಬೇಳೂರು, ಸಾಗರ, ಹೊಸನಗರ ಸೇರಿದಂತೆ ಸಾಕಷ್ಟು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವುದು ಸಾಮಾನ್ಯ. ಈ ವೇಳೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ರೈತರು, ಮಹಿಳೆಯರು ಸೇರಿದಂತೆ ಜನರು ಹೊಳೆಗಳನ್ನು ದಾಟಲು ತೀವ್ರ ತೊಂದರೆ ಎದುರಿಸುತ್ತಾರೆ. ಈ ಸಮಸ್ಯೆ ಹಲವು ಸಮಯಗಳಿಂದ ಇದೆ. ಮಲೆನಾಡಿನ ಜನರು ಹಲವಾರು ವರ್ಷಗಳಿಂದ ಅನುಭವಿಸುತ್ತಾ ಬಂದಿದ್ದು, ಈ ಸಮಸ್ಯೆ ಬಗೆಹರಿಸಲು ಕಿರುಸೇತುವೆ ನಿರ್ಮಿಸುವಂತೆ ಈ ಭಾಗದ ಜನರು ಸ್ಥಳೀಯ ಮುಖಂಡರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಅದಕ್ಕೆ ಸರ್ಕಾರ ಸ್ಪಂದಿಸಿದ್ದು, ಕಾಲು ಸಂಕ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡಿದೆ. ಈ ಭಾಗದಲ್ಲಿ ಸುಮಾರು 234 ಕಾಲು ಸಂಕ ನಿರ್ಮಾಣ ಮಾಡಲು 60 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು, ಅದಕ್ಕೆ ಲೋಕೋಪಯೋಗಿ ಇಲಾಖೆ ಕೈಜೋಡಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..
ತುಂಗಾ ಮೇಲ್ದಂಡೆ ಯೋಜನೆ ವೃತ್ತ ಅಧೀಕ್ಷಕ ಅಭಿಯಂತರ ನಟರಾಜ್ ಎಸ್ ಪಾಟೀಲ್ಈ ಬಗ್ಗೆ ಮಾತನಾಡಿ, ಸಾಗರ ಮತ್ತು ಹೊಸನಗರ ತಾಲೂಕು ಭಾಗದಲ್ಲಿ 234 ಕಾಲು ಸಂಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರದಿಂದ ಅರವತ್ತು ಕೋಟಿ ರೂಪಾಯಿ ಹಣ ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಶರಾವತಿ ನೀರಿನ ಪ್ರದೇಶದಲ್ಲಿ ಕಾಲು ಸೇತುವೆ ನಿರ್ಮಾಣ ಮಾಡುತ್ತಿರುವುದು ಸಂತಸದ ಸಂಗತಿ, ಸ್ಥಳೀಯರ ಬಹುದಿನಗಳ ಕನಸನ್ನು ರಾಜ್ಯ ಸರ್ಕಾರ ನನಸು ಮಾಡುತ್ತಿದೆ. ವ್ಯವಸ್ಥಿತವಾಗಿ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ ಎಂದು ಸ್ಥಳೀಯರಾದ ದೇವೇಂದ್ರ ಮಾರಲಗೋಡು ಹೇಳುತ್ತಾರೆ.
ಮಳೆಗಾಲದಲ್ಲಿ ಸಣ್ಣ ಹೊಳೆಯನ್ನೂ ದಾಟಲು ಸ್ಥಳೀಯರು ಸಾಕಷ್ಟು ಹರಸಾಹಸ ಪಡಬೇಕಿತ್ತು. ಕಿರುಸೇತುವೆ ನಿರ್ಮಾಣ ಮಾಡುತ್ತಿರುವುದರಿಂದ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಓಂಕಾರ್ ಜೈನ್ ಹೇಳುತ್ತಾರೆ.
ಮಲೆನಾಡಿನ ಜನರು ವಿಶೇಷವಾಗಿ ಮಳೆಗಾಲದಲ್ಲಿ ಹೊಳೆ ದಾಟಲು ಎದುರಿಸುತ್ತಿದ್ದ ಸಮಸ್ಯೆ ನಿವಾರಣೆಗೆ ಸರ್ಕಾರ ಎಚ್ಚೆತ್ತುಕೊಂಡಿರುವುದು ಆ ಭಾಗದ ಜನರಲ್ಲಿ ಸಂತಸ ಮೂಡಿಸಿದೆ. ಮಲೆನಾಡಿದ ಹಲವು ಕಡೆಗಳಲ್ಲಿಇಂತಹ ಸಮಸ್ಯೆ ಇದೆ. ಎಲ್ಲಾ ಕಡೆಯಲ್ಲೂ ಇಲಾಖೆ, ಆಯಾ ಕ್ಷೇತ್ರದ ಪ್ರತಿನಿಧಿಗಳು ಗಮನಹರಿಸಿದರೆ ಸಮಸ್ಯೆ ಪರಿಹಾರ ಸಾಧ್ಯ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..


