ಸುಳ್ಯ ಹಾಗೂ ಪುತ್ತೂರು ಸಂಪರ್ಕ ಮಾಡುವ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗಾಗಿ ಜನರು ಮಾಡಿರುವ ಪ್ರಯತ್ನ ಈಗ ಫಲ ನೀಡಿದೆ. ಸುಳ್ಯ ಹಾಗೂ ಪುತ್ತೂರು ತಾಲೂಕುಗಳನ್ನು ಸಂಪರ್ಕಿಸುವ ಪೆರ್ಲಕಣೆ – ನಿಡುವೆ – ಕೊಚ್ಚಿ -ದುಗ್ಗಳ – ಕಲ್ಲರ್ಪೆ- ಮಾವಿನಕಟ್ಟೆ ರಸ್ತೆ ಅಭಿವೃದ್ಧಿಗೆಒತ್ತಾಯಿಸಿ ಪ್ರಧಾನಿ ಕಚೇರಿವರೆಗೂ ಮನವಿ ಮಾಡಲಾಗಿತ್ತು. ಇದೀಗ ಅರಣ್ಯ ಇಲಾಖೆಯು ಸ್ಥಳ ಪರಿಶೀಲಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಬಹುದಾಗಿದೆ ಎಂದು ವರದಿ ನೀಡಿದೆ.
ಈ ರಸ್ತೆ ಅಭಿವೃದ್ಧಿಗಾಗಿ ಪೆರ್ಲಂಪಾಡಿ ಗ್ರಾಮಸ್ಥ ನಿತಿನ್ ಕೆ.ಬಿ. ಕೊಚ್ಚಿ ದೆಹಲಿಯ ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಸುಳ್ಯ ಹಾಗೂ ಪುತ್ತೂರು ತಾಲೂಕುಗಳನ್ನು ಸಂಪರ್ಕಿಸುವ ಕೊಚ್ಚಿ – ದುಗ್ಗಳ ಕಲ್ಲರ್ಪೆ ಮಾವಿನಕಟ್ಟೆ ಅಂತರ್ ತಾಲೂಕು ರಸ್ತೆಯನ್ನು ಅಭಿವೃದ್ಧಿಗೊಳಿಸಲು ಅರಣ್ಯ ಇಲಾಖೆಯಿಂದ ಆಗಿರುವ ಸಮಸ್ಯೆಯ ಬಗ್ಗೆ ತಿಳಿಸಿದ್ದರು. ಹೀಗಾಗಿ ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರು ರಸ್ತೆ ಕಾಂಕ್ರೀಟೀಕರಣಗೊಳಿಸುವ ಬಗ್ಗೆ ಸ್ಥಳ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಪುತ್ತೂರು ವಲಯ ಅರಣ್ಯಾಧಿಕಾರಿ ಅವರಿಗೆ ಸೂಚಿಸಿದ್ದರು.
ಹೀಗಾಗಿ ಸ್ಥಳ ಪರಿಶೀಲಿಸಿದ ಅರಣ್ಯ ಇಲಾಖಾ ಅಧಿಕಾರಿಗಳು, ಸುಳ್ಯ ಹಾಗೂ ಪುತ್ತೂರು ತಾಲೂಕುಗಳನ್ನು ಸಂಪರ್ಕಿಸುವ ಕೊಚ್ಚಿ -ದುಗ್ಗಳ – ಕಲ್ಲರ್ಪೆ- ಮಾವಿನಕಟ್ಟೆ ರಸ್ತೆಯು ಪೆರಿಯಬಾಣೆ ಮೀಸಲು ಅರಣ್ಯದಲ್ಲಿ ಹಾದುಹೋಗುವ ದುಗ್ಗಳ ಎಂಬಲ್ಲಿ ಮಣ್ಣಿನ ಕಚ್ಚಾ ರಸ್ತೆಯಿದ್ದು, ಪರಿಯವಾಣೆ ಮೀಸಲು ಅರಣ್ಯದೊಳಗೆ ಹಾದು ಹೋಗುತ್ತಿದ್ದು , ಅನೇಕರು ಈ ರಸ್ತೆ ಬಳಸುವುದರಿಂದ ರಸ್ತೆಯನ್ನು ಅಭಿವೃದ್ಧಿ ಗೊಳಿಸುವುದು ಮುಖ್ಯವಾಗಿದೆ. ಹೀಗಾಗಿ ಅರಣ್ಯ ಕಾಯ್ದೆ ಪ್ರಕಾರ ಪ್ರಸ್ತಾವನೆಯನ್ನು ಸಲ್ಲಿಸಿ ಅನುಮತಿ ಪಡೆದ ನಂತರ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಬಹುದಾಗಿದೆ ಎಂದು ವರದಿ ನೀಡಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದ ರಸ್ತೆ ಸಮಸ್ಯೆಯೊಂದಕ್ಕೆ ಮುಕ್ತಿ ದೊರೆತಿದೆ. ಗ್ರಾಮಸ್ಥರ ಪ್ರಯತ್ನ ಫಲ ನೀಡಿದೆ. ( ಕಳೆದ ಬಾರಿ ಪ್ರಕಟಗೊಂಡಿರುವ ವರದಿಯ ಲಿಂಕ್ ಇಲ್ಲಿದೆ…)


