ಮಾನವ-ವನ್ಯಜೀವಿ ಸಂಘರ್ಷ ಇರುವ ವಲಯಗಳಲ್ಲಿ ಉನ್ನತಾಧಿಕಾರಿಗಳು ಸತತ ನಿಗಾ ಇಟ್ಟು, ಜನರ ಅಮೂಲ್ಯ ಜೀವ ಮತ್ತು ರೈತರ ಬೆಳೆ ರಕ್ಷಣೆಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ, ಎನ್.ಆರ್. ಪುರ ತಾಲೂಕು ಬಾಳೆ ಹೊನ್ನೂರು ಬಳಿ ಕಳೆದ 4 ದಿನಗಳ ಅಂತರದಲ್ಲಿ ಆನೆದಾಳಿಯಿಂದ ಇಬ್ಬರು ಮೃತಪಟ್ಟಿರುವ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಆನೆಗಳು ನಾಡಿನಲ್ಲಿ ಕಾಣಿಸಿಕೊಂಡ ಕೂಡಲೇ ಅರಣ್ಯಾಧಿಕಾರಿಗಳು ಕ್ರಮವಹಿಸಬೇಕು. ಸ್ಥಳೀಯರಿಗೆ ಮಾಹಿತಿ ನೀಡಿ ಆನೆಗಳನ್ನು ಕಾಡಿಗೆ ಮರಳಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ. ಆನೆ ಕಂದಕಗಳು ಸತತ ಮಳೆಯಿಂದ ಮುಚ್ಚಿಹೋಗಿವೆ, ಸೌರ ತಂತಿ ಬೇಲಿ, ಟೆಂಟಕಲ್ ಫೆನ್ಸಿಂಗ್ ಮರಬಿದ್ದು ಸಂಪರ್ಕ ಕಡಿದುಕೊಂಡಿದ್ದು, ಕೂಡಲೇ ಇವುಗಳ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದ್ದಾರೆ. ಆನೆಗಳಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ಹೆಚ್ಚುವರಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಕೂಡಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಕಾಮಗಾರಿ ಆರಂಭಿಸಿ, ನಿಗದಿತ ಕಾಲಮಿತಿಯಲ್ಲಿ ಕಾಮಾಗಾರಿ ಪೂರ್ಣಗೊಳಿಸಿ ಜನರ ಅಮೂಲ್ಯ ಜೀವ ಮತ್ತು ರೈತರ ಬೆಳೆ ರಕ್ಷಣೆಗೆ ಅರಣ್ಯ ಸಿಬ್ಬಂದಿ ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಕಾಡಾನೆ ದಾಳಿಗೆ ಕಳೆದ ಒಂದು ವಾರದಲ್ಲಿ 4 ಜನರು ಮೃತಪಟ್ಟಿದ್ದಾರೆ. ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಯಾಗಿದೆ. ಹೀಗಾಗಿ ಆನೆಗಳ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಇಬ್ಬರು ಹಾಗೂ ಮಡಿಕೇರಿಯಲ್ಲಿ ಇಬ್ಬರು ಮೃತರಾಗಿದ್ದಾರೆ. ಕಳೆದ 7 ವರ್ಷಗಳಲ್ಲಿ ಆನೆಗಳಿಂದಾಗಿ 20 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

