ಮಧ್ಯಾಹ್ನ ಹೊತ್ತು ಕೋತಿ ಸೈನ್ಯವನ್ನು ಹುಡುಕುತ್ತಾ ಕಾಡಂಚಿನಲ್ಲಿ ನಡೆದು ಹೋಗುತ್ತಿದ್ದೆ. ಇದ್ದಕ್ಕಿದ್ದಂತೆ ಜೇನಿನ ಝೇಂಕಾರದ ಶಬ್ದ ಕೇಳಿಬಂತು. ಅಲ್ಲೆಲ್ಲೋ ಜೇನುಕುಟುಂಬದ ಇರುವಿಕೆಯ ಕುರುಹು ಅದಾಗಿತ್ತು. ಆದರೆ ನನ್ನ ಊಹೆ ತಪ್ಪಾಯಿತು…..!
ಅದೇ ಹೊತ್ತಿಗೆ ಮೂಗಿಗೆ ಘಮಘಮಿಸುವ ಮಕರಂದದ ಪರಿಮಳ ತೇಲಿಬಂತು. ಇಪ್ಪತ್ತೈದು ವರುಷಗಳ ಹಿಂದೆ ನೆಟ್ಟ ಚೋರ ಪೈನೆ ಮರ ಈ ವರ್ಷ ಪ್ರಥಮ ಬಾರಿಗೆ ಹೂ ಬಿಟ್ಟಿತ್ತು. ತೆಳು ಹಳದಿ ಬಣ್ಣದ ಹೂವಿನ ಕದುರುಗಳು ಮರವನ್ನೆಲ್ಲ ಸಿಂಗರಿಸಿತ್ತು. ಸರ್ವಾಂಗ ಸುಂದರಿಯಾಗಿ ಮರ ನಳನಳಿಸುತ್ತಿತ್ತು. ಹೂವಿನ ಮಕರಂದಕ್ಕಾಗಿ ಜೇನುನೊಣಗಳು ತಮ್ಮ ಪ್ರಾಕೃತಿಕ ಹಕ್ಕನ್ನು ಸ್ಥಾಪಿಸಿದ್ದವು. ಜೇನಿನ ಝೇಂಕಾರದ ಗುಟ್ಟು ಇದಾಗಿತ್ತು. ಮಕರಂದದ ಪರಿಮಳ, ಜೇನುನೊಣಗಳ ಹಾರಾಟದ ಶಬ್ದ ಮುದ ನೀಡಿದ ಮನಕ್ಕೆ ಹಳೆಯ ನೆನಪುಗಳ ಮೆಲುಕು ಹಾಕುವಂತಾಯಿತು.
ಖಾಲಿಬಿದ್ದಿದ್ದ ಗುಡ್ಡದಲ್ಲಿ ಕಾಡೆಬ್ಬಿಸಿದ ಪರಿಣಾಮವಾಗಿ ಕರಗಿ ಹೋಗುವ ಮಣ್ಣು ಇಂದು ಮೇಲ್ ಮಣ್ಣಾಗಿ ನಿಂತಿರುವ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಇಂದು ನನ್ನ ತೋಟದ ಸುತ್ತಲಿನ ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ( ನನ್ನ ಚಿಕ್ಕಪ್ಪಂದಿರ ಜಾಗವನ್ನು ಹೊರತುಪಡಿಸಿ ) ಕಾಡು ಹಸಿರಿನ ಪ್ರದೇಶವನ್ನು ನಾ ಕಾಣಲಿಲ್ಲ. ಎಲ್ಲಾ ಕಡೆಯೂ ಅಡಿಕೆ ತೋಟದ ಹಸಿರೇ ಹಸಿರು. ಸುಮಾರು ಇನ್ನೂರರಷ್ಟು ತೂತು ಬಾವಿಗಳು ಭೂಮಿಗೆ ನೀರುಣಿಸುತ್ತಿವೆ. ಈ ಮಧ್ಯೆ ನೀರು ಸಿಗದೇ ಇದ್ದುದನ್ನು, ಸಿಕ್ಕಿ ಬರಡಾಗಿದ್ದುದನ್ನು ಲೆಕ್ಕ ಇಟ್ಟವರಿಲ್ಲ. 400 ಅಡಿಯಿಂದ ಆರಂಭವಾಗಿ 700 ಅಡಿಯವರೆಗೂ ತೂತುಗಳಾದ ಲೆಕ್ಕವಿದೆ. ಖಾಲಿಬಿದ್ದಿರುವ ಗುಡ್ಡೆಯಲ್ಲಿ ರಬ್ಬರ್ ತೋಟವನ್ನು, ಅಡಿಕೆ ತೋಟವನ್ನು ವಿಸ್ತರಿಸುವ ಬಗ್ಗೆ, ಅಂತರ್ಜಲದ ಹೊಸ ಆವಿಷ್ಕಾರದ ಬಗ್ಗೆ ಸಲಹೆಗಳು ಬಂದಿದ್ದರೂ ಕೂಡ ಅದು ಯಾವುದಕ್ಕೂ ಗಮನಕೊಡದೆ ಕಾಡು ಎಬ್ಬಿಸಿದ್ದರ ಪರಿಣಾಮವಾಗಿ ಇಂದು ನನ್ನ ತೋಟದಲ್ಲಿ ಕೇವಲ ಮೂರು ಅಡಿಯಲ್ಲಿ ಜಲಮಟ್ಟವಿದೆ. ಮಾರ್ಚ್ ಅಂತ್ಯದೊಳಗೆ ನೆಲ ಕಾಣುತ್ತಿದ್ದ ಕೆರೆಗಳು ಮೇ ತಿಂಗಳ ಆರಂಭದಲ್ಲಿ ನೆಲ ಕಾಣುವಂತಾಗಿದೆ. ಆ ನಂತರದಲ್ಲೂ ಪ್ರತಿನಿತ್ಯ ಎರಡು ಗಂಟೆಯಾದರೂ ತುಂತುರು ನೀರಾವರಿಗಾಗಿ ನೀರನ್ನು ಒಸರುತ್ತಿರುತ್ತವೆ . ಮುಂಗಾರು ಪೂರ್ವದ ಮಾರುತನ ಅಬ್ಬರಕ್ಕೆ ಸಿಕ್ಕಿ ನುಲಿಯುತ್ತಿದ್ದ ಅಡಿಕೆ ಮರಗಳು ಇಂದು ತನ್ನ ಪೂರ್ಣ ಆಯುಷ್ಯವನ್ನು ಕಾಣುತ್ತಿವೆ. ಹಕ್ಕಿ ಪಕ್ಕಿಗಳ ಇಂಪಾದ ಗಾನ ಸುಂದರ ಬೆಳಗನ್ನು ಸೃಷ್ಟಿಸುತ್ತಿವೆ.
ಮನವರಿಕೆಯಾದ ಸಂಗತಿಯೆಂದರೆ, ಎಲ್ಲಿಯೋ ಇರುವ ಕಾಡುಗಳು ನಮ್ಮ ಭೂಮಿಯಲ್ಲಿ ನೀರಿಂಗಿಸಿ ಕೊಡಲಾರವು. ಅವರವರ ಆಹಾರವನ್ನು ಅವರವರೇ ಸಂಪಾದಿಸಿದಂತೆ, ಕೃಷಿಭೂಮಿಯ ಜಲಮೂಲವನ್ನು ಮರುಪೂರಣ ಗೊಳಿಸುವುದು ಅವರವರ ಕರ್ತವ್ಯ. ಜಲತಜ್ಞ ಶ್ರೀ ಪಡ್ರೆಯವರ ಲೆಕ್ಕಾಚಾರದಂತೆ ದಕ್ಷಿಣ ಕನ್ನಡದಲ್ಲಿ ಒಂದು ಎಕ್ರೆ ಜಾಗದಲ್ಲಿ ಬೀಳುವ ಮಳೆನೀರು 1.4 ಕೋಟಿ ಲೀಟರ್ ನಷ್ಟು!. ಆ ಅಂದಾಜಿನಂತೆ ನನ್ನ ಸುಮಾರು 10 ಎಕರೆ ಜಾಗದಲ್ಲಿ ಬೀಳುವ ನೀರು ಹತ್ತು ಕೋಟಿ ನಲುವತ್ತು ಲಕ್ಷ ಲೀಟರ್ ಗಳು! ಅಷ್ಟೂ ನೀರನ್ನು ಭೂಮಿಯ ಅಡಿಗೆ ಇಂಗಿಸಿದ ತೃಪ್ತಿ ಇಂದು ನನ್ನದು.
ತಾಯಿಯೊಬ್ಬಳನ್ನು ಪ್ರಾಯಕ್ಕೆ ಬಂದ ಮಗನೊಬ್ಬ ಹಿಂಸಿಸಿದರೆ ತಾಯಿಯಾದವಳು ಪ್ರತಿಭಟಿಸದೇ ಇರುತ್ತಾಳೆಯೇ? ಎಷ್ಟೇ ಮಮಕಾರದಿಂದ ನೆಕ್ಕಿ ತಿಕ್ಕಿ ಹಾಲುಣಿಸುವ ಗೋವೊಂದು ಕೆಚ್ಚಲಿನಲ್ಲಿ ಹಾಲು ಆರಿದಾಗ ತಲೆಯಿಂದ ಗುದ್ದಿ, ಕಾಲಿನಿಂದ ಒದ್ದು ದೂರಮಾಡುವುದು ನೋಡಿರುವಿರಾ? ಭೂರಮೆ ರಮಿಸ ಬೇಕಾದರೆ ಪ್ರೀತಿಯಿಂದ ಆಕೆಯ ಸ್ವಾತಂತ್ರ್ಯಕ್ಕೆ ಅಡ್ಡಿ ಆಗದಂತೆ ನೋಡಿಕೊಳ್ಳುವ ಕರ್ತವ್ಯ ನಮ್ಮದು. ಕಾನೂನಿನಂತೆ ತಾಯಿಯೊಬ್ಬಳಿಗೆ ಸ್ಥಿರಾಸ್ತಿ ಯಲ್ಲಿ ಸಮಪಾಲು ಕೊಟ್ಟಂತೆ ಭೂ ಮಾತೆಗೂ ನಮ್ಮನಮ್ಮ ಆಸ್ತಿಯಲ್ಲಿ ಕನಿಷ್ಠ ಮೂರನೇ ಒಂದಂಶವಾದರೂ ಪಾಲು ಸ್ವಾತಂತ್ರ್ಯಕ್ಕೋಸ್ಕರ ಕೊಟ್ಟುಬಿಡೋಣ. ತಾಯಿಯೊಬ್ಬಳು, ಮಕ್ಕಳು ಮೊಮ್ಮಕ್ಕಳಿಗೆ ಉಡುಗೊರೆಯನ್ನು ಕೊಟ್ಟಂತೆ ಭೂಮಾತೆಯು ಸುಂದರವಾದ ಗಾಳಿಯ ಮೂಲಕ, ನೀರಿನ ಮೂಲಕ, ಭೂಮಿಯನ್ನು ತಂಪೆಸಗುವ ಮೂಲಕ, ಕೆಟ್ಟ ಗಾಳಿಯನ್ನು ಶುದ್ಧೀಕರಿಸುವ ಮೂಲಕ ಉಡುಗೊರೆಯನ್ನು ಸದಾ ನೀಡುತ್ತಿರುತ್ತಾಳೆ.
ಚೊಕ್ಕಾಡಿಯ ಕವಿ ಸುಬ್ರಾಯರು ಬರೆದಂತೆ,
ನಮಿಸುವೆನು ತಾಯೆ ಹಸಿರುಡೆಯ ಮಾಯೇ,
ಸಪ್ತ ವರ್ಣದ ಸೆರಗ ನೀನು ಹೊದೆದಿರುವೆ,
ತಾರೆಗಳ ಪೋಣಿಸುತ ಮುಡಿಗೇರಿಸಿರುವೆ,
ಹಕ್ಕಿಗಳ ಸಂಗೀತ ನಿನ್ನ ಕೊರಳಲ್ಲಿ,
ಜೀವಕೋಟಿಗಳೆಲ್ಲ ನಿನ್ನ ಮಡಿಲಲ್ಲಿ,
ನಮಿಸುವೆನು ತಾಯೆ ನಮಿಸುವೆನು ತಾಯೆ ಹಸಿರುಡೆಯ ಮಾಯೇ
#ಎ. ಪಿ. ಸದಾಶಿವ ಮರಿಕೆ