ಮಧ್ಯಾಹ್ನದ ಹೊತ್ತು ನೆತ್ತಿಯ ಮೇಲೆ ಸೂರ್ಯ ರಾರಾಜಿಸುತ್ತಿದ್ದ. ತೋಟಕ್ಕೆ ಕೋತಿಗಳ ಸೈನ್ಯ ಭೇಟಿಯಾದ ಸದ್ದು ಕೇಳಿತು. ಕೋವಿಯೊಂದು ಕೈಯಲ್ಲಿದ್ದರೆ ಮಾತ್ರ ಮಂಗಗಳು ಓಡುತ್ತವೆ ಎಂಬ ಕಾರಣದಿಂದ ಕೋವಿಯೊಂದಿಗೆ ಹೊರಬಿದ್ದೆ. ನೇಸರನ ಕಿರಣಗಳು ಚರ್ಮವನ್ನು ಸುಡುವಂತೆ ಭಾಸವಾಗುತ್ತಿತ್ತು. ಓಡಿಸುತ್ತಾ ಓಡಿಸುತ್ತಾ ಕಾಡು ಹೊಕ್ಕೆ. ಆ ಕ್ಷಣಕ್ಕೆ ಹರಿಶ್ಚಂದ್ರ ಕಾವ್ಯದ ಷಟ್ಪದಿಯ ತುಣುಕೊಂದು ನೆನಪಾಯಿತು.
ಸುಡುಸುಡುನೇ ಸುಡುವ ಬಿರು ಬಿಸಿಲು ಸೆಕೆಯುಸಿರು,
ಉರಿ ಹತ್ತಿ ಬಾಯಿ ಬತ್ತಿ ಡಗೆ ಸುತ್ತಿ,
ಸಾವಡಿಸುತಿದೆ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜ ಎಂದರು.
ಕಾಡು ಹೊಕ್ಕಂತೆ ಅದೇನು ಹವಾಮಾನದ ಬದಲಾವಣೆ, ಸತ್ತಿಗೆಯನ್ನು ಬಯಸಿ ನಿಂತಿರುತ್ತಾಳೆ ಭೂರಮೆ ಎಂದು ಯಾರಿಗಾದರೂ ಅನಿಸದೆ ಇರದು. ರಾಜನಿಗೆ ಮುತ್ತಿನ ಕೊಡೆಯಾದರೆ, ಭೂತಾಯಿಗೆ ಮರಗಳೇ ಕೊಡೆ. ಹಾಗೆಯೇ ನನ್ನ ಮನಸ್ಸು 30ವರ್ಷದ ಹಿಂದಕ್ಕೋಡಿತು.
ತೋಟದ ಒಂದು ಬದಿಯ ಇಳಿಜಾರು ಗುಡ್ಡದಲ್ಲಿ ದೂರದೂರಕ್ಕೆ ಬೆರಳೆಣಿಕೆಯ ಮರಗಳನ್ನು ಬಿಟ್ಟರೆ ಹೆಚ್ಚು ಕಮ್ಮಿ ಬೋಳು ಬೋಳೇ ಆಗಿತ್ತು. ಆಗಿನ್ನು ಜೆಸಿಬಿಗಳ ಹಾವಳಿ ಇರಲಿಲ್ಲ. ಇಳಿಜಾರು ಗುಡ್ಡದಲ್ಲಿ ಗೇರುಬೀಜದ ಗಿಡವನ್ನು ನೆಟ್ಟೆ. ಮಣ್ಣು ಮಳೆಗಾಲದಲ್ಲಿ ಸತತವಾಗಿ ಕರಗಿ ಹೋಗುವುದರಿಂದ ಗಿಡಗಳು ಉದ್ಧಾರವಾಗಲಿಲ್ಲ. ಕೆಲವು ಗಿಡಗಳು ಸೂಕರನ ಧಾಳಿಗೆ ಒಳಗಾದವು. ಗೇರುಬೀಜ ಕದ್ದರೆ ಕಳ್ಳತನವಲ್ಲ ಎಂಬ ಕಾಲವಾಗಿತ್ತು ಅದು. ಅಳಿದುಳಿದ ಫಲ ಮಾತ್ರ ನನಗೆ ಸಿಗುತ್ತಿತ್ತು. ಏಪ್ರಿಲ್ ತಿಂಗಳು ಬಂತೆಂದರೆ ತೋಟಕ್ಕೆ ನೀರಿನ ಒತ್ತಡ ಜೋರಾಗಿ ಇರುತ್ತಿತ್ತು. ತೂತು ಬಾವಿಗಳ ಕೊರೆತವಾದರೂ ನಿರೀಕ್ಷಿತ ಫಲ ದೊರೆಯಲಿಲ್ಲ.
ಆ ಹೊತ್ತಿಗೆ ಅಡಿಕೆ ಪತ್ರಿಕೆಯಲ್ಲಿ ಲೇಖನ ಮಾಲೆಗಳು ಆರಂಭವಾಗಿತ್ತು ನೀರು ಉಳಿಸಿ ನೂರು ವಿಧ.ಮನಕೊಂದು ಹೊಸ ಹೊಳವು ಸಿಕ್ಕಿತು.ನನ್ನ ತೋಟದ ಕೆರೆಗಳಲ್ಲಿ ಜಲ ವೃದ್ಧಿಗೆ ಇಂಗು ಗುಂಡಿಗಳು ಪರಿಣಾಮ ಆಗಬಹುದು ಎಂಬ ಆಸೆ ಮನ ಹೊಕ್ಕಿತು.
ಆ ವರುಷವೇ ಮಳೆಗಾಲದಲ್ಲಿ ಎತ್ತರದಿಂದ ಆರಂಭವಾಯಿತು ಇಂಗುಗುಂಡಿಗಳ ರಚನೆ. ಎಲ್ಲೆಲ್ಲಿ ನೀರ ಹರಿವು ಇರುವುದೋ ಅಲ್ಲೆಲ್ಲ, ಜಾಗಕ್ಕೆ ಹೊಂದಿಕೊಂಡಂತೆ ಎರಡು ಅಡಿಯಿಂದ ಹತ್ತು ಅಡಿ ಉದ್ದದ, ಎರಡು ಅಡಿ ಅಗಲದ, ಎರಡು ಅಡಿ ಆಳದ ಇಂಗುಗುಂಡಿಗಳ ರಚನೆಯಾಯಿತು. ಅತಿಯಾದ ಮಳೆಗೆ ಒಂದೆರಡು ಗುಂಡಿಗಳು ಕಟ್ಟೆ ಒಡೆದು ಹೋಗಿದ್ದು ಇದೆ. ಸಖೇದಾಶ್ಚರ್ಯ! ಮಳೆಗಾಲ ಮುಗಿಯುತ್ತಿದ್ದಂತೆ ಮಣ್ಣಿನ ಮೇಲೆ ತೆಳು ಹಸಿರು ಬಣ್ಣದ ಪಾಚಿ ರಚನೆ ಕಂಡಿತು. ಬೇಸಿಗೆಯಲ್ಲಿ ಒಣಗಿದರೂ ಮುಂದಿನ ಮಳೆಗಾಲಕ್ಕೆ ಮತ್ತೆ ಹಸುರಾಯಿತು, ಹಸುರಿನ ಮೇಲೆ ಹುಲ್ಲಿನ ಪದರವೊಂದು ಚಿಗಿತುಕೊಂಡಿತು. ಆ ಮೊದಲೇ ಕೆಲವು ಕಾಡು ಸಸ್ಯಗಳನ್ನು ನೆಟ್ಟು ಸತ್ತ ಅನುಭವವಿದ್ದ ನನಗೆ, ಈಗ ಮನದಟ್ಟಾಗಿದ್ದು ಸಸ್ಯಗಳನ್ನು ನೆಡಲು ಇದು ಸಕಾಲ. ಮಣ್ಣಿನ ಕೊರೆತವಿರುವಾಗ, ಬೇಸಿಗೆಗೆ ತೇವಾಂಶದ ರಕ್ಷಣೆ ಇಲ್ಲದಾಗ ಯಾವ ಸಸ್ಯವೂ ಬದುಕುಳಿಯಲು ಸಾಧ್ಯವಿಲ್ಲ ಎಂಬ ಅರಿವಾಯಿತು. ಜಾಲ್ಸೂರಿನ ಅರಣ್ಯ ಇಲಾಖೆಯ ನರ್ಸರಿಯಿಂದ ವರುಷ ವರುಷವೂ ನೂರಾರು ವೈವಿಧ್ಯಮಯ ಸಸ್ಯಗಳನ್ನು ತಂದು ನೆಟ್ಟೆ. ನಮ್ಮ ಸುತ್ತಮುತ್ತಲೂ ಇದ್ದ ಅನೇಕ ಮರಗಳ ಬೀಜಗಳನ್ನು ಸಂಗ್ರಹಿಸಿ ಮಳೆಗಾಲದಲ್ಲಿ ಎರಚಿದೆ. ಪ್ರಯತ್ನ ಫಲ ಕೊಟ್ಟಿತು. ಹಂತಗಳಲ್ಲಿ ನಿಧಾನವಾಗಿ ಕಾಡು ಎದ್ದು ಬಂದಿತು.
ಕಾಡು ಬಂದಂತೆ ಹಕ್ಕಿಪಕ್ಕಿಗಳ ನಲಿದಾಟ, ಕೂಗಾಟ ಜಾಸ್ತಿಯಾದವು. ಕಾಡನ್ನು ವೃದ್ಧಿಸುವ ಕೆಲಸವನ್ನು ಈಗ ಪಕ್ಷಿಗಳೇ ಮಾಡುತ್ತಿವೆ. ನಮ್ಮ ಗುಡ್ಡದ ನೀರು ಮಳೆಗಾಲದಲ್ಲಿ ಮಣ್ಣನ್ನು ಕೊಚ್ಚಿಕೊಂಡು ಸಮತಟ್ಟಾದ ಜಾಗವಾದ ನನ್ನ ಚಿಕ್ಕಪ್ಪನ ತೋಟದ ಬದಿಗೆ ಪೇರಿಸುವುದು ಆಗ ನಿಂತಿತು.ಕಾಡು ಪ್ರೀತಿಯ ನನ್ನ ಚಿಕ್ಕಪ್ಪ ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯವನ್ನು ವ್ಯಕ್ತ ಪಡಿಸುತ್ತಿದ್ದರು.
ಕಾಡು ವೃದ್ಧಿಯ ಪ್ರಕೃತಿಯ ನಡೆಯನ್ನು ಗಮನಿಸಿ. ಮಳೆಗಾಲ ಮುಗಿದು ಚಳಿಗಾಲ ಬಂದಂತೆ ಹೆಚ್ಚಿನ ಮರ-ಗಿಡಗಳು ತರಗೆಲೆಯನ್ನು ಉದುರಿಸಿ ಹಾಸಿಗೆಯನ್ನು ನಿರ್ಮಾಣ ಮಾಡುತ್ತದೆ. ಆಮೇಲೆ ಚಿಗುರಿದಾಗ ಮೆತ್ತನೆಯ ಒಂದಷ್ಟು ಎಲೆಗಳು ಬಿದ್ದು ಮೆತ್ತನೆಯ ಹಾಸಿಗೆಯನ್ನು ಹಾಸುತ್ತದೆ. ಚಿಗುರಿದ ನಂತರ ಹೂವು ಬಿಟ್ಟು ಪರಾಗ ಸ್ಪರ್ಶಗೊಂಡು ಬೀಜ ಕಾಯಿಗಳ ಸೃಷ್ಟಿಯಾಗುತ್ತದೆ. ಬಿಟ್ಟ ಹೂಗಳ ದಳಗಳು, ಕುಸುಮಗಳು ಬಿದ್ದು ಮೆತ್ತನೆಯ ಹಾಸಿಗೆಯ ಮೇಲೆ ಇನ್ನೊಂದು ಪದರದ ನಿರ್ಮಾಣವಾಗುತ್ತದೆ.ಮುಂಗಾರು ಪೂರ್ವ ಮಳೆಗೆ ಗಾಳಿಯಲ್ಲಿ ಬೀಜಗಳು ಹಾರಾಡುತ್ತ ತೂರಾಡುತ್ತಾ ಹಾಸಿಗೆಯ ಮೇಲೆ ಬಿದ್ದು ಮೊಳಕೆಯೊಡೆಯಲು ಆರಂಭಿಸುತ್ತದೆ. ಮುಂಗಾರಿಗೆ ಮೊದಲೇ ಮೆತ್ತನೆಯ ಹಾಸಿಗೆಯಲ್ಲಿ ಬೇರನ್ನು ಇಳಿಸಿ ಕೊಚ್ಚಿಹೋಗುವ ನೀರಿಗೆ ದೃಢವಾಗಿ ನಿಲ್ಲುವ ಶಕ್ತಿಯನ್ನು ಬೆಳೆಸಿಕೊಂಡಿರುತ್ತವೆ.
ಒಂದಷ್ಟು ರಕ್ಷಣೆಯನ್ನು ಕೊಟ್ಟಲ್ಲಿ ಭೂ ತಾಯಿ ತನ್ನ ರಕ್ಷಣೆಗೆ ಸತ್ತಿಗೆಯನ್ನು ಸೃಷ್ಟಿಸಿಕೊಳ್ಳುವ ಪರಿಯನ್ನು ಒಮ್ಮೆ ನೋಡಿ. ಆ ಮೂಲಕ ಜೀವ ಕೋಟಿಗಳ ಆಧಾರವಾದ ಮರಗಳನ್ನು ಹೆಚ್ಚು ಮಾಡುವತ್ತ ಗಮನ ಹರಿಸೋಣ.
ಎ. ಪಿ. ಸದಾಶಿವ.ಮರಿಕೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…