ಪುತ್ತೂರಿನಲ್ಲಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಾಶ್ಮೀರದಲ್ಲಿ ದೌರ್ಜನ್ಯಕ್ಕೊಳಗಾದ ಪಂಡಿತರ ಮಕ್ಕಳಿಗೆ ಉಚಿತ ವಸತಿ ಹಾಗೂ ಶಿಕ್ಷಣವನ್ನು ಘೋಷಿಸಲಾಗಿದೆ.
ಈ ಸಂಬಂಧವಾಗಿ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಹಾಗೂ ನಟ್ಟೋಜ ಫೌಂಡೇಶನ್‍ನ ಟ್ರಸ್ಟಿ ವೈದೇಹಿ ನಟ್ಟೋಜ ಅವರು ಇತ್ತೀಚೆಗೆ ಜಮ್ಮು ಕಾಶ್ಮೀರಕ್ಕೆ ತೆರಳಿ ಅಲ್ಲಿನ ಕಾಶ್ಮೀರಿ ಪಂಡಿತ್ ಸಂಘಟನೆಯನ್ನು ಭೇಟಿಯಾಗಿ ಲಿಖಿತ ಭರವಸೆ ನೀಡಿದ್ದಾರೆ. ಅಲ್ಲದೆ ಜಮ್ಮುವಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ಮಾಹಿತಿಯನ್ನು ಅಲ್ಲಿನ ಮಾಧ್ಯಮಗಳ ಮೂಲಕವೂ ತಿಳಿಸಿಕೊಡಲಾಗಿದೆ.
Free education declarations for Children’s Of #KashmiriPandits by Ambika Educational Institutions. Located at #Puttur #Mangaluru .@ambikavidyalaya #ambikavidyalaya @CMofKarnataka @nalinkateel @s__matandoor @blsanthosh @PMOIndia @EduMinOfIndia @BCNagesh_bjp pic.twitter.com/bRoUDyEiOQ
Advertisement— theruralmirror (@ruralmirror) April 27, 2022
ಜಮ್ಮುವಿನಲ್ಲಿ ನಡೆಸಿದ ಪತ್ರಿಕಾಗೋಷ್ಟಿಗೆ ಮಾಧ್ಯಮ ವಲಯದಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದೆ. ಅನೇಕ ವಾಹಿನಿಗಳು ಹಾಗೂ ಪತ್ರಿಕೆಗಳು ಈ ಉಚಿತ ಶಿಕ್ಷಣದ ಕೊಡುಗೆಗೆ ವ್ಯಾಪಕ ಪ್ರಚಾರ ನೀಡಿವೆ. ಸಂದರ್ಶನವನ್ನೂ ನಡೆಸಿವೆ. ಕಾಶ್ಮೀರಿ ಪಂಡಿತರ ಸಂಘಟನೆಯೂ ಈ ಕೊಡುಗೆಯ ಬಗೆಗೆ ಕೃತಜ್ಞತೆ ಸಲ್ಲಿಸಿದೆ. ಮಾತ್ರವಲ್ಲದೆ ಈಗಾಗಲೇ ನಾಲ್ಕಾರು ಮಂದಿ ಕಾಶ್ಮೀರಿ ಪಂಡಿತರು ಅಂಬಿಕಾ ಸಂಸ್ಥೆಗೆ ತಮ್ಮ ಮಕ್ಕಳನ್ನು ಸೇರ್ಪಡೆಗೊಳಿಸುವ ಬಗೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಇದಲ್ಲದೆ ದೌರ್ಜನ್ಯಕ್ಕೊಳಪಟ್ಟು ನಿರಾಶ್ರಿತರಾಗಿ ಆಗಮಿಸಿದ ಕಾಶ್ಮೀರಿ ಪಂಡಿತರು ಬೆಂಗಳೂರಿನಲ್ಲಿಯೂ ಅನೇಕ ಮಂದಿ ಇದ್ದು, ಅವರ ಮಕ್ಕಳಿಗೂ ಈ ಯೋಜನೆ ಲಭ್ಯವಾಗಲಿದೆ. ಆ ನೆಲೆಯಲ್ಲಿಯೇ ಕರ್ನಾಟಕದಲ್ಲೂ ಅಂಬಿಕಾ ಸಂಸ್ಥೆಯ ಕೊಡುಗೆಯ ಬಗೆಗೆ ಮರು ಪ್ರಕಟಣೆ ನೀಡಲಾಗುತ್ತಿದೆ.
ದೇಶದ ಬಗ್ಗೆ, ನೊಂದವರ ಬಗ್ಗೆ ಅಪಾರ ಕಾಳಜಿ ಹೊಂದಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್ ಇತ್ತೀಚೆಗಷ್ಟೇ ಬಿಡುಗಡೆಯಾದ ‘ಕಾಶ್ಮೀರಿ ಫೈಲ್ಸ್’ ಚಿತ್ರವನ್ನು ತನ್ನೆಲ್ಲಾ ವಿದ್ಯಾರ್ಥಿಗಳಿಗೆ ತೋರಿಸಿ ಕಾಶ್ಮೀರದ ಪಂಡಿತರ ಮೇಲಾದ ದೌರ್ಜನ್ಯದ ಕರಾಳ ಸತ್ಯವನ್ನು ಯುವ ಸಮುದಾಯದ ಮುಂದೆ ಅನಾವರಣಗೊಳಿಸಿ ಜಾಗೃತಿ ಮೂಡಿಸಿದೆ.