ನಮ್ಮ ಊರಲ್ಲಿ ಯಾವುದೇ ವಿಶೇಷ ಸಂದರ್ಭದಲ್ಲಿ ಮಕ್ಕಳು ಅಪ್ಪ ಅಮ್ಮನಲ್ಲಿ ಡಿಮಾಂಡ್ ಮಾಡಿ ತಿನ್ನುತ್ತಿದ್ದುದು ಗಡ್ ಬಡ್ ಐಸ್ ಕ್ರೀಂ. ಹಣ್ಣುಗಳು ಹಾಗೂ ಐಸ್ ಕ್ರೀಂ ಗಳ ಅಚ್ಚುಕಟ್ಟಾದ ಮಿಶ್ರಣ ಗಡ್ ಬಡ್. ಯಾವ ಹೋಟೆಲ್ ಗಳಿಗೆ ಹೋದರು ಮೆನು ಇಡೀ ಓದಿ ಕೊನೆಯಲ್ಲಿ ಕೇಳುವುದು ಇದೇ ಗಡ್ ಬಡ್. ಎಂತ ಮಕ್ಕಳೊ ಏನೋ ಒಳ್ಳೆಯ ಹೋಟೆಲ್ , ಇಲ್ಲಿನ ಬನ್ಸ್ ರುಚಿ, ಮಸಾಲಾ ದೋಸೆ ಸೂಪರ್, ಹಾಗಿದ್ದೂ ಮತ್ತದೇ ಗಡ್ ಬಡ್. ಪ್ರತಿ ಹೋಟೆಲ್ ನ ಗಡ್ ಬಡ್ ಬೇರೆ ಬೇರೆಯೇ. ರುಚಿಯಲ್ಲಿ , ಬಣ್ಣದಲ್ಲಿ ಹಣ್ಣು , ಒಣ್ ಹಣ್ಣುಗಳ ಮಿಶ್ರಣ, ಬಳಸುವ ಐಸ್ ಕ್ರೀಂ ಗಳು ವಿಭಿನ್ನ ರೀತಿಯಲ್ಲಿರುತ್ತವೆ. ಆದರೆ ಅವುಗಳೆಲ್ಲವೂ ಗಡ್ ಬಡ್ ಐಸ್ ಕ್ರೀಂ ಎನ್ನುವುದರಲ್ಲಿ ಸಂಶಯವಿಲ್ಲ.
ನಮ್ಮ ಕರಾವಳಿ ಪ್ರದೇಶದಲ್ಲಿನ ವಾತಾವರಣ ಯಾರನ್ನಾದರೂ ಐಸ್ ಕ್ರೀಂ ಸೇವಿಸಲು ಪ್ರೇರೇಪಿಸುತ್ತದೆ. ಅಲ್ಲದೇ ಒಂದು ಕಪ್ ತಿಂದರೆ ಇನ್ನೊಂದು ಬೇಕೆನಿಸುವಷ್ಟು ಇಷ್ಟವಾಗಿ ಬಿಡುವಂತಹುದೇ ಆಗಿದೆ ಈ ಐಸ್ ಕ್ರೀಂ . ಹಾಗಾಗಿ ಇಲ್ಲಿ ನಿತ್ಯವೂ ಹೊಸ ಹೊಸ ರುಚಿಯ , ನವೀನ ಬಣ್ಣ, ಪರಿಮಳಗಳ ಐಸ್ ಕ್ರೀಂ ಗಳ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುತ್ತವೆ.
ಸದ್ಯ ಕೊರೋನಾ ಸಮಯದಲ್ಲಿ ತಣ್ಣಗೆ ಏನೂ ತಿನ್ನಬೇಡಿ, ಕುಡಿಯ ಬೇಡಿ ಅಂತ ಎಲ್ಲೆಡೆಯೂ ಕೇಳಿ ಬರುತ್ತಿರುವ ಮಾತು. ಆದರೆ ಏನು ಮಾಡೋಣ, ಮನೆಯಲ್ಲಿ ಮಕ್ಕಳು ಒಂದೇ ಸಮನೆ ಪ್ರುಟ್ ಸಲಾಡ್ ಬೇಕು, ಬೇಕು ಎಂದು ಬೊಬ್ಬೆ ಹೊಡೆಯುವಾಗ , ಮನೆಯಲ್ಲೇ ಇದ್ದ ಹಣ್ಣುಗಳಿಂದಲೇ ವಿಶೇಷವಾಗಿ ಮಿಶ್ರ ಹಣ್ಣುಗಳ ಸಲಾಡ್ ಮಾಡಿ ಕೊಟ್ಟಾಯಿತು. ಮಾವಿನ ಹಣ್ಣಿನ ಹೋಳುಗಳು, ಅನನಾಸಿನ ಸಣ್ಣ ಸಣ್ಣ ತುಂಡುಗಳು, ಪಪ್ಪಾಯ, ಒಣದ್ರಾಕ್ಷಿ, ಜೇನು ಬಳಸಿ ಮಾಡಿದ ಫ್ರುಟ್ ಸಲಾಡ್ ಬಹಳ ಇಷ್ಟವಾಗಿ ಇನ್ನೊಮ್ಮೆ ಮಾಡ ಬೇಕೆಂಬ ಬೇಡಿಕೆ ಬಂದಲ್ಲಿಗೆ ನಮ್ಮ ಮನೆ ಪಾಕ ಯಶಸ್ವಿಯಾಯಿತು . ನೀವು ಮಾಡಿ ನೋಡಿ!!!!
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ