ಸರ್ಕಾರಿ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪುವಂತೆ ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ – ಫ್ರೂಟ್ಸ್ ಐಡಿ (FRUITS ID)ಯನ್ನು ರಾಷ್ಟ್ರ ಮಟ್ಟದಲ್ಲಿ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಈ ಯೋಜನೆಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿದಲ್ಲಿ, ದೇಶದ ಪ್ರತಿಯೊಬ್ಬ ರೈತರಿಗೆ ಒಂದೇ ಒಂದು ವಿಶಿಷ್ಟ ಗುರುತಿನ ಸಂಖ್ಯೆ ಲಭ್ಯವಾಗಲಿದೆ. ಇದರಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ರೈತರಿಗೆ ನೀಡುವ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ನಿಖರವಾಗಿ ತಲುಪಿಸಲು ಸಾಧ್ಯವಾಗಲಿದೆ.
ಫ್ರೂಟ್ಸ್ ಐಡಿ ಮೂಲಕ ಬೀಜ, ಗೊಬ್ಬರ, ತಾಂತ್ರಿಕ ಸಾಧನಗಳ ವಿತರಣೆ, ಬೆಳೆ ವಿಮೆ, ಬೆಳೆ ಪರಿಹಾರ, ಬ್ಯಾಂಕ್ ಸಾಲ ಸೌಲಭ್ಯಗಳಲ್ಲಿನ ದಾಖಲೆಗಳ ನಿರ್ವಹಣೆ ಸುಲಭವಾಗಲಿದ್ದು, ಒಂದೇ ವ್ಯಕ್ತಿ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳುವಂತಹ ಅಕ್ರಮಗಳನ್ನು ತಡೆಯಲು ಇದು ಸಹಕಾರಿಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿಯೂ ಫ್ರೂಟ್ಸ್ ಐಡಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕುರಿತು ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್, ಕರ್ನಾಟಕ ಸರ್ಕಾರದ ಮಾದರಿಯಲ್ಲಿ ಕೇಂದ್ರ ಸರ್ಕಾರ ರೈತರಿಗಾಗಿ ರಾಷ್ಟ್ರೀಯ ಮಟ್ಟದ ಗುರುತಿನ ಸಂಖ್ಯೆಯನ್ನು ರೂಪಿಸುತ್ತಿದೆ. ಇದರಿಂದ ಸರ್ಕಾರಿ ಯೋಜನೆಗಳನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಯಡ್ರಾಮಿ ತಾಲೂಕಿನ ಚಿಕ್ಕ ಹಂಗರಗಿ ಗ್ರಾಮದ ರೈತ ಸಾಹೇಬ ಗೌಡ ದೇಸಾಯಿ ಮಾತನಾಡಿ, ಈ ಹಿಂದೆ ರೈತರಿಗೆ ಸಮಗ್ರ ಗುರುತಿನ ವ್ಯವಸ್ಥೆ ಇಲ್ಲದ ಕಾರಣ, ಒಬ್ಬರ ಹೆಸರಿನಲ್ಲಿ ಹಲವರು ಸೌಲಭ್ಯ ಪಡೆದು ವಂಚನೆ ಮಾಡುತ್ತಿದ್ದರು. ಫ್ರೂಟ್ಸ್ ಐಡಿ ಜಾರಿಯಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದು ಅಭಿಪ್ರಾಯಪಟ್ಟರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ



