ಹಸಿರು ಕ್ರಾಂತಿಯ ನಂತರ ಭಾರತದ ಕೃಷಿ ಕ್ಷೇತ್ರ ಬೆಳವಣಿಗೆಯಾದ ಬಳಿಕ ಇದೀಗ ಆಧುನಿಕ ತಂತ್ರಜ್ಞಾನಗಳು ಭಾರತದ ಕೃಷಿಯ ತಳಹದಿಯಾಗಿದೆ. ಹವಾಮಾನ ವ್ಯತ್ಯಾಸವೂ ಕೃಷಿಯನ್ನು ನಿಯಂತ್ರಿಸುತ್ತಿದೆ. ಹೀಗಾಗಿ ಆಧುನಿಕ ತಂತ್ರಜ್ಞಾನಗಳು ಭಾರತದ ಕೃಷಿ ಬೆಳವಣಿಗೆಯಲ್ಲಿ ಪೂರಕ ಕೆಲಸ ಮಾಡಲಿದೆ. ಇದಕ್ಕಾಗಿ ಕೃಷಿಕರು ತಂತ್ರಜ್ಞಾನಗಳನ್ನು ಮುಕ್ತವಾಗಿ ಸ್ವಾಗತಿಸಬೇಕಿದೆ, ಬೆಳವಣಿಗೆಗೆ ಪೂರಕ ಸಲಹೆಯನ್ನೂ ನೀಡಬೇಕಿದೆ.
ಇದೀಗ ಕೃಷಿಯಲ್ಲಿ ರೊಬೊಟಿಕ್ಸ್, ತಾಪಮಾನ ಮತ್ತು ವೈಮಾನಿಕ ಛಾಯಾಚಿತ್ರಗಳು ಮತ್ತು ಜಿಪಿಎಸ್ ತಂತ್ರಜ್ಞಾನದಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಕೃಷಿಯ ಭವಿಷ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿವೆ. ಭಾರತೀಯ ಆರ್ಥಿಕತೆಯ ವಿಸ್ತರಣೆಯೊಂದಿಗೆ, ದೇಶೀಯ ಜಿಡಿಪಿ ಗೆ ಕೃಷಿಯ ಕೊಡುಗೆಯು ಕಡಿಮೆಯಾಗಿದೆ ಮತ್ತು ಈಗಲೂ ಸಹ, ವಿವಿಧ ಕೃಷಿ ಉತ್ಪನ್ನಗಳ ಉತ್ಪಾದಕತೆಯು ಇತರ ದೇಶಗಳಿಗಿಂತ ಕಡಿಮೆಯಾಗಿದೆ. ಇದರ ಹೊರತಾಗಿಯೂ, ಭಾರತೀಯ ಕೃಷಿ ಕ್ಷೇತ್ರವು ಬೆಳವಣಿಗೆಯನ್ನು ಹೊಂದುತ್ತಿದೆ. ಆಧುನಿಕ ಪದ್ಧತಿ ಕೃಷಿಯತ್ತ ಬರುತ್ತಿದೆ.
ದೇಶದ ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ತಾಂತ್ರಿಕ ಆವಿಷ್ಕಾರಗಳಿಂದ ಭಾರತೀಯ ಕೃಷಿ ವ್ಯವಸ್ಥೆಯು ಅಭಿವೃದ್ಧಿಗೆ ಸಾಧ್ಯವಿದೆ.ಹೀಗಾಗಿ ಈಗ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಬಡತನವನ್ನು ನಿವಾರಿಸಲು ಸುಸ್ಥಿರ ಕೃಷಿ ಬೆಳವಣಿಗೆಯನ್ನು ಉತ್ತೇಜಿಸುವುದು ಇಂದು ಅಗತ್ಯವಾಗಿದೆ.
ಸುಸ್ಥಿರವಾಗಿ ಮತ್ತು ವಾಣಿಜ್ಯಿಕವಾಗಿ ಭಾರತದ ಕೃಷಿಯನ್ನು ವಿಸ್ತರಿಸಲು ಸಾಧ್ಯವಿದೆ. ಇಲ್ಲಿ ಹವಾಮಾನ, ಜಾಗತಿಕ ತಾಪಮಾನವೂ ಪ್ರಮುಖ ಪಾತ್ರ ವಹಿಸುತ್ತಿದೆ. ಕೃಷಿ ಮಾರುಕಟ್ಟೆಯು ಇಂದಿನ ಆಧುನಿಕ ಯುಗದಲ್ಲಿ ಬಹುದೊಡ್ಡ ಸವಾಲು ಅಲ್ಲ, ಆದರೆ ಕೃಷಿ ವಿಸ್ತರಣೆ ಹಾಗೂ ಬೆಳವಣಿಗೆಯೇ ದೊಡ್ಡ ಸವಾಲಾಗಿದೆ. ಇದಕ್ಕಾಗಿಯೇ ಆಧುನಿಕ ತಂತ್ರಜ್ಞಾನಗಳು ಕೃಷಿ ಕ್ಷೇತ್ರಕ್ಕೆ ಕಾಲಿಡಬೇಕಿದೆ, ಅದನ್ನು ಸ್ವಾಗತಿಸಬೇಕಿದೆ.
ಕೃಷಿ ತಜ್ಞರ ಪ್ರಕಾರ, ರೊಬೊಟಿಕ್ಸ್, ತಾಪಮಾನ , ವೈಮಾನಿಕ ಛಾಯಾಚಿತ್ರಗಳು ಮತ್ತು ಜಿಪಿಎಸ್ ತಂತ್ರಜ್ಞಾನದಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಕೃಷಿಯ ಭವಿಷ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಅತ್ಯಾಧುನಿಕ ಯಂತ್ರೋಪಕರಣಗಳು, ರೊಬೊಟಿಕ್ ವ್ಯವಸ್ಥೆಗಳು ಕೃಷಿಯನ್ನು ನಿಖರವಾಗಿ ಬೆಳೆಸುತ್ತವೆ. ಹೆಚ್ಚು ಉತ್ಪಾದಕತೆಯನ್ನು ಮಾಡಲು ಸಾಧ್ಯವಾಗುತ್ತವೆ. ಬಿತ್ತನೆ, ನಾಟಿ, ಕಳೆ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ನೂತನ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬಹುದು. ರೋಗ ನಿಯಂತ್ರಣ, ಸಿಂಪರಣೆ, ನೀರಾವರಿ, ಕೊಯ್ಲು, ಪ್ಯಾಕಿಂಗ್ ಇತ್ಯಾದಿಗಳೂ ಅತ್ಯಂತ ನಿಖರವಾಗಿ ಆಧುನಿಕ ತಂತ್ರಜ್ಞಾನಳಿಂದ ಸಾಧ್ಯವಿದೆ. ರೋಬೋಟಿಕ್ಸ್ ಮತ್ತು ಡ್ರೋನ್‌ಗಳನ್ನು ಬೆಳೆಯ ಮೇಲ್ವಿಚಾರಣೆ, ಕೀಟ ಪತ್ತೆ ಮತ್ತು ಇಳುವರಿಯ ಮುನ್ಸೂಚನೆಗಾಗಿ ಬಳಸಲಾಗುತ್ತಿದೆ. ಈ ತಂತ್ರಜ್ಞಾನಗಳು ನೀರು, ರಸಗೊಬ್ಬರಗಳು ಮತ್ತು ಕೀಟನಾಶಕಗಳಂತಹ ಸಂಪನ್ಮೂಲಗಳ ಬಳಕೆಯನ್ನು ಅತ್ಯುತ್ತಮವಾಗಿಸಲು ರೈತರಿಗೆ ಸಹಾಯ ಮಾಡುತ್ತವೆ..
ಭಾರತವು ವೈವಿಧ್ಯಮಯ ಮಣ್ಣಿನ ಮಾದರಿಯನ್ನು ಹೊಂದಿದೆ. ಈ ಆಧಾರದಲ್ಲಿ ಕೃಷಿಯನ್ನೂ, ಬೆಳೆಯನ್ನೂ ಮಾಡಲಾಗುತ್ತಿದೆ. ಭಾರತದಂತಹ ಪ್ರದೇಶಗಳಲ್ಲಿ ಸಣ್ಣ ರೈತರಿಗೆ ಆಧುನಿಕ ತಂತ್ರಜ್ಞಾನಗಳ ಬಳಕೆ ತುಸು ಕಷ್ಟಕರ ಎನಿಸಿದರೂ ಸರ್ಕಾರಗಳು ಈ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಭಾರತದ ಗ್ರಾಮೀಣ ಭಾಗಗಳಲ್ಲಿ ಕೃಷಿ ಬೆಳವಣಿಗೆಗೆ ಇಂತಹ ವ್ಯವಸ್ಥೆ ಅಗತ್ಯ ಇದೆ. ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡುವುದರಿಂದ ಕೃಷಿಯಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವುದರ ಜೊತೆಗೆ ಕೃಷಿ ಬೆಳವಣಿಗೆಯೂ ಸಾಧ್ಯವಿದೆ.