ಸ್ವಾತಂತ್ರ್ಯ ನಮ್ಮ ಜನ್ಮ ಸಿದ್ಧ ಹಕ್ಕು. ವ್ಯಕ್ತಿಗತವಾಗಿಯೇ ನಾವು ಇದಕ್ಕೆ ಬಹಳ ಮಹತ್ವ ಕೊಡುತ್ತೇವೆ. ಹಾಗಿದ್ದಾಗ ದೇಶ ಇನ್ನೊಬ್ಬರ ಅಡಿಯಾಳಾಗಿರುವದನ್ನು ಸಹಿಸುವುದು ಸಾದ್ಯವೇ? ವ್ಯಾಪಾರದ ಉದ್ದೇಶದಿಂದ ಭಾರತದ ಬಂದರಿನಲ್ಲಿ ಇಳಿದ ಆಂಗ್ಲರನ್ನು ಇಲ್ಲಿನ ಸಮೃದ್ಧ ಸಂಪತ್ತನ್ನು ಆಕರ್ಷಿಸಿತು. ಆ ದಿನಗಳಲ್ಲಿ ನಮ್ಮಲ್ಲಿದ್ದ ಆಡಳಿತಾರೂಢ ಗೊಂದಲಗಳು, ಅರಾಜಕತೆ, ಒಳ ಜಗಳಗಳನ್ನು ಸಮರ್ಥವಾಗಿ ಬಳಸಿಕೊಂಡ ವಿದೇಶಿಯರು ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಕ್ಕಾಗಿ ದೇಶದೆಲ್ಲೆಡೆ ಹೋರಾಟ ಆರಂಭವಾಯಿತು. ಸುಧೀರ್ಘ ವಾದ ಹೋರಾಟದಲ್ಲಿ ಹೊಸ ಅಧ್ಯಾಯ ವನ್ನು ಬರೆದವರು ಮಹಾತ್ಮ ಗಾಂಧೀಜಿಯವರು. ರಕ್ತಸಿಕ್ತ ವಾದ ಹಾದಿಯಲ್ಲಿ ಅಹಿಂಸಾತ್ಮಕ ಚಳುವಳಿಯ ಭಾಷ್ಯ ಬರೆದವರು ಗಾಂಧೀಜಿಯವರು.
ಗಾಂಧೀಜಿಯವರ ಜೀವನ ಸಿದ್ಧಾಂತವೇ ಅಪೂರ್ವ ವಾದುದು. ಅಲ್ಲಿ ಸತ್ಯಕ್ಕೆ ಪ್ರಥಮ ಸ್ಥಾನವಾದರೆ, ಅಹಿಂಸೆಯೇ ದ್ವಿತೀಯ ಪ್ರಾಮುಖ್ಯತೆ. ಸತ್ಯ ಅವರ ಸಿದ್ಧಿಯಾದರೆ, ಅಹಿಂಸೆ ಜೀವನ ಸಾಧನೆ. ಇವೆರಡಕ್ಕೂ ಗಾಂಧೀಜಿಯವರೇ ಪ್ರವರ್ತಕರಲ್ಲ. ಆದರೆ ಇವೆರಡನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಅಸ್ತ್ರ ವಾಗಿ ಬಳಸಿ ಯಶಸ್ವಿಯಾದ ನಿಜ ಹೋರಾಟಗಾರ.ಉಪವಾಸ ,ಸತ್ಯಾಗ್ರಹ, ದೇಶದುದ್ದಕ್ಕೂ ಕಾಲ್ನಡಿಗೆಯಲ್ಲಿ ಜನಜಾಗೃತಿಯನ್ನು, ದೇಶಪ್ರೇಮವನ್ನು ಉದ್ದೀಪನಗೊಳಿಸಿದ ಮಹಾತ್ಮ. ಹಾಗಾಗಿ ಮೋಹನದಾಸ ಕರಮಚಂದ್ರ ಗಾಂಧಿಯವರಾಗಿ ಉಳಿಯದೆ’ ರಾಷ್ಟ್ರಪಿತ’ರಾದರು. ಅವರೊಳಗೊಬ್ಬ ಉತ್ತಮ ಓದುಗನಿದ್ದ, ಬರಹಗಾರನಿದ್ದ, ಭಾಷಣಗಾರನಿದ್ದ., ವಕೀಲರೂ ಹೌದು.
ಸರಳತೆಯನ್ನೇ ಜೀವನ ಧರ್ಮವಾಗಿಸಿಕೊಂಡು ದೇಶವಾಸಿಗಳಲ್ಲಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದವರು. ತಾವು ಆಚರಿಸಿ ಉಳಿದವರಿಗೆ ಮಾದರಿಯಾದರು. ಗ್ರಾಮ ಗ್ರಾಮಗಳಲ್ಲಿ ಖಾದಿ ಬಟ್ಟೆಗಳ ಉಪಯೋಗದ ಮಹತ್ವ ವನ್ನು ಸಾರುತ್ತಾ ಸ್ವಾವಲಂಬನೆಯ ಪಾಠವನ್ನು ಸಾರಿದರು. ಕೃಷಿ ಹಾಗು ಗುಡಿಕೈಗಾರಿಕೆಗಳು ದೇಶದ ಅಭಿವೃದ್ಧಿಗೆ ಪೂರಕವೆಂಬುದನ್ನು ದೃಢವಾಗಿ ನಂಬಿದ್ದರು.
ಪೋರಬಂದರ್ ನಲ್ಲಿ 1869 ಒಕ್ಟೋಬರ್ 2 ರಂದು ಕರಮಚಂದ್ರ ಗಾಂಧಿ ಹಾಗೂ ಪೂತಲಿಬಾಯಿಯವರ ಮಗನಾಗಿ ಮೋಹನದಾಸ್ ಕರಮಚಂದ್ರ ಗಾಂಧಿಯವರು ಜನಿಸಿದರು. ಇವರ ಹೋರಾಟದ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತವರು ಕಸ್ತೂರಬಾ ಗಾಂಧಿ ಯವರು. ಬದುಕಿನಲ್ಲಿ ಶ್ರೀಮಂತ ವರ್ಗದವರಂತೆ ಬಾಳುವ ಎಲ್ಲಾ ಅವಕಾಶಗಳಿದ್ದರೂ , ತನ್ನ ಆವಶ್ಯಕತೆನ್ನು ಕನಿಷ್ಟ ಗೊಳಿಸಿ ಬದುಕಿ ಜಗತ್ತಿಗೇ ತೋರಿಸಿದರು.
ಒಬ್ಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯನಾಗಿ ಬೆಳೆದ ಪರಿಗೆ ಗಾಂಧೀಜಿಯವರು ಉತ್ತಮ ಉದಾಹರಣೆ. ಅವರ ಆದರ್ಶಗಳನ್ನು , ರಾಮರಾಜ್ಯದ ಕನಸುಗಳನ್ನು ನನಸಾಗಿಸುವತ್ತ ಸಾಗುವ ಆಶಯದೊಂದಿಗೆ ಗಾಂಧಿ ಜಯಂತಿಯ ಶುಭಾಶಯಗಳು.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ