ಗೌರಿ ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಜನರು ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿ, ಪೂಜಿಸುವ ಸಡಗರ. ಬೆಂಗಳೂರು ಸೇರಿ ರಾಜ್ಯಾದ್ಯಂತ ಪರಿಸರ ಸ್ನೇಹಿ ಗಣಪನ ಮೂರ್ತಿಗಳ ಕಡೆಗೇ ಆದ್ಯತೆ ನೀಡಲಾಗುತ್ತಿದ್ದು, ರಾಜ್ಯದ ಪ್ರತೀ ಜಿಲ್ಲಾ ಆಡಳಿತವು ಜನರಿಗೆ ಮನವಿ ಮಾಡುತ್ತಿದೆ. ಜನರು ಕೂಡಾ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನನ್ನು ಬಳಸದೆ ಪರಿಸರ ಸ್ನೇಹಿ ಗಣೇಶನನ್ನೇ ಕೂರಿಸಿ, ಹಬ್ಬ ಆಚರಿಸಲು ಜನರು ಸಿದ್ಧತೆ ನಡೆಸಿದ್ದಾರೆ.
ರಂಜಕ, ಗಂಧಕ, ಮೆಗ್ನೀಷಿಯಂ ಸೇರಿದಂತೆ ವಿವಿಧ ರಾಸಾಯನಿಕ ಬಳಸಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಗಣಪತಿ ತಯಾರಿಸಿ ಪೂಜಿಸುವುದನ್ನು ನಿಷೇಧಿಸಲಾಗಿದೆ. ಇಂತಹ ಪಿಓಪಿ ಮೂರ್ತಿಗಳಿಂದ ಜಲ, ಜಲಚರ, ಪಶುಪಕ್ಷಿಗಳು ಸೇರಿ ಪರಿಸರಕ್ಕೆ ಹಾನಿಯಾಗುತ್ತದೆ. ಜೊತೆಗೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಜನರು ಪರಿಸರ ಸ್ನೇಹಿ ಮಣ್ಣಿನ ಗಣಪತಿ ತಯಾರಿಸಿ, ಪೂಜಿಸಲು ಮುಂದಾಗಿದ್ದಾರೆ. ರಾಜ್ಯದ ಎಲ್ಲೆಡೆ ಇಂತಹ ಪರಿಸರ ಸ್ನೇಹಿ ಗಣಪನ ಮೂರ್ತಿಗಳು ತಲೆ ಎತ್ತಿದ್ದು, ಪರಿಸರಕ್ಕೆ ಪೂರಕವಾದ ಮಣ್ಣಿನ ಗಣಪತಿ ವೈಜ್ಞಾನಿಕವಾಗಿ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಶ್ರೇಷ್ಠ ಎಂಬುದು ಜನರ ಭಾವನೆಯಾಗಿದೆ.
ಜತೆಗೆ ಮಣ್ಣಿನ ಗಣಪತಿಯನ್ನು ತಯಾರಿಸಿ, ಪೂಜಿಸಿದರೆ ಮಾನವನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನೀರಿನಲ್ಲಿ ಬೇಗ ಕರಗುವುದರ ಜತೆಗೆ ಜಲಚರಗಳಿಗೂ ತೊಂದರೆ ಆಗುವುದಿಲ್ಲ ಎಂಬ ಉದ್ದೇಶದಿಂದ ಬಹುತೇಕ ಮಂದಿ ಪರಿಸರ ಸ್ನೇಹಿ ಗಣಪನ ಮೊರೆ ಹೋಗಿದ್ದಾರೆ. ಸಾಕಷ್ಟು ಮಂದಿ ಹಲವು ವರ್ಷಗಳಿಂದ ಇದನ್ನೇ ಉದ್ಯೋಗವನ್ನಾಗಿ ಮಾಡುತ್ತಿದ್ದು, ಪ್ರತಿ ವರ್ಷ ಹಬ್ಬದ ವೇಳೆ ವಿಶೇಷವಾದ ಜೇಡಿ ಮಣ್ಣಿನಿಂದ ತಯಾರಿಸಿದ ಗಣಪತಿಯ ನಾನಾ ರೂಪದ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಆದರೆ, ಆ ಮೂರ್ತಿಗಳಿಗೆ ಯಾವುದೇ ರೀತಿಯ ರಾಸಾಯನಿಕವನ್ನು ಬಳಸುವುದಿಲ್ಲ. ಜತೆಗೆ ಎಲ್ಲರೂ ಇಂತಹ ಪರಿಸರ ಸ್ನೇಹಿ ಗಣೇಶನನ್ನೇ ಬಳಸಿ ಎಂಬುದು ತಯಾರಕರ ಮನವಿ. ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ ಅಡಿ ರಾಜ್ಯದ ಕೆರೆ, ಕಟ್ಟೆ, ಬಾವಿ, ನದಿ ಸೇರಿದಂತೆ ಜಲಮೂಲದಲ್ಲಿ ಪಿಓಪಿ ಮೂರ್ತಿಗಳನ್ನು ವಿಸರ್ಜಿಸುವುದನ್ನು ನಿಷೇಧಿಸಲಾಗಿದ್ದು, ಪ್ರಜ್ಞಾವಂತ ನಾಗರಿಕರು, ಧಾರ್ಮಿಕರು ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಪೂಜಿಸುವಂತೆ ಸರ್ಕಾರ ಕೂಡ ಇತ್ತೀಚೆಗೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….
ಕಾರವಾರ ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಾಗ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಪಿಓಪಿ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸಿರುವ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಮತ್ತು ವಿಸರ್ಜನೆ ಸಮಯದಲ್ಲಿ ಯಾವುದೇ ರೀತಿಯ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ಆಗದಂತೆ ನೋಡಿಕೊಳ್ಳಬೇಕು. ಪೆಂಡಾಲ್‌ಗಳ ನಿರ್ಮಾಣ ಮತ್ತು ಅಲಂಕಾರದಲ್ಲಿಯೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಉಡುಪಿ ಜಿಲ್ಲೆಯಲ್ಲಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣದ ವಿಗ್ರಹಗಳನ್ನು ಕೆರೆ, ಬಾವಿ ಹಾಗೂ ಇನ್ನಿತರ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ಅವುಗಳ ಭೌತಿಕ ಹಾಗೂ ರಾಸಾಯನಿಕ ಸ್ಥಿತಿಗಳ ಬದಲಾವಣೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೇ ಪ್ರಾಣಿ, ಪಕ್ಷಿ ಹಾಗೂ ಇತರೇ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಅಲ್ಲದೇ ಇಂತಹ ಕಲುಷಿತ ನೀರಿನಿಂದ ಸಾರ್ವಜನಿಕ ಆರೋಗ್ಯಕ್ಕೂ ಹಾನಿ ಉಂಟಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ ಉಚ್ಚ ನ್ಯಾಯಾಲಯದ ಆದೇಶದಂತೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುತ್ತೋಲೆ ಅನ್ವಯ ಹಬ್ಬದ ಆಚರಣೆಯಿಂದ ಉಂಟಾಗುವ ಮಾಲಿನ್ಯದಿಂದ ನೈಸರ್ಗಿಕ ಜಲ ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ಗೌರಿ ಮತ್ತು ಗಣೇಶ ವಿಗ್ರಹಗಳನ್ನು ರಾಜ್ಯದ ಯಾವುದೇ ಕೆರೆ, ಬಾವಿ, ಕಟ್ಟೆ ಮತ್ತು ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದ್ದು, ಆದ್ದರಿಂದ ಸಾರ್ವಜನಿ ಪರಿಸರಸ್ನೇಹಿ ಗೌರಿ-ಗಣೇಶ ಹಬ್ಬವನ್ನು ಆಚರಿಸಿ, ನೈಸರ್ಗಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಲು ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಹೀಗೇ ಎಲ್ಲಾ ಜಿಲ್ಲಾಡಳಿತವೂ ಜನರಿಗೆ ಜಾಗೃತಿಯನ್ನು ಮೂಡಿಸಿದೆ.



