ದಕ್ಷಿಣ ಕನ್ನಡ ಜಿಲ್ಲೆಯ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಗೆ ಹೊಸ ಅಧ್ಯಾಯ ಬರೆಯಲಿರುವ ಗಂಜಿಮಠದ ಮಹತ್ವಾಕಾಂಕ್ಷೆಯ ಪ್ಲಾಸ್ಟಿಕ್ ಪಾರ್ಕ್ ಯೋಜನೆ ವೇಗ ಪಡೆದುಕೊಂಡಿದೆ. ಯೋಜನಾ ಪ್ರದೇಶಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು.
ಭೇಟಿಯ ವೇಳೆ ರಸ್ತೆ, ವಿದ್ಯುತ್, ನೀರು ಸರಬರಾಜು ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಪರಿಶೀಲಿಸಿದ ಸಂಸದರು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. ಶೀಘ್ರದಲ್ಲೇ ಪೂರ್ಣ ಪ್ರಮಾಣದ ವಾಣಿಜ್ಯ ಚಟುವಟಿಕೆಗಳಿಗೆ ಚಾಲನೆ ನೀಡಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
104 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಗೆ ಕೇಂದ್ರದ ಮಾಜಿ ಸಚಿವ ಅನಂತ ಕುಮಾರ್ ಅವರು ರಾಸಾಯನಿಕ ಸಚಿವರಾಗಿದ್ದ ಸಂದರ್ಭದಲ್ಲಿ ಮಂಜೂರಾತಿ ದೊರೆತಿತ್ತು. ಆದರೆ 9.33 ಎಕರೆ ಭೂಸ್ವಾಧೀನ ಪ್ರಕ್ರಿಯೆ ನ್ಯಾಯಾಲಯದ ವಿವಾದಕ್ಕೆ ಸಿಲುಕಿದ್ದರಿಂದ ಯೋಜನೆ ಹಲವು ವರ್ಷಗಳ ಕಾಲ ವಿಳಂಬಗೊಂಡಿತ್ತು.
ಸಂಸದರಾಗಿ ಆಯ್ಕೆಯಾದ ಬಳಿಕ ಬ್ರಿಜೇಶ್ ಚೌಟ ಅವರು ಯೋಜನೆಯನ್ನು ಆದ್ಯತೆಯಾಗಿ ಪರಿಗಣಿಸಿ, ವಿವಾದಿತ ಜಾಗವನ್ನು ತಾತ್ಕಾಲಿಕವಾಗಿ ಹೊರಗಿಟ್ಟು ಲಭ್ಯವಿರುವ ಭೂಮಿಯಲ್ಲೇ ಪರಿಷ್ಕೃತ ಯೋಜನೆ ಜಾರಿಗೊಳಿಸಲು ಕೆಐಎಡಿಬಿಗೆ ಸೂಚನೆ ನೀಡಿದ್ದರು. ಇದರ ಪರಿಣಾಮವಾಗಿ ನವೆಂಬರ್ 2024ರಲ್ಲಿ ಸಿಪೆಟ್ (CIPET) ಆಡಳಿತ ಕಟ್ಟಡದ ಪರಿಷ್ಕೃತ ನಕ್ಷೆಗೆ ಅನುಮೋದನೆ ದೊರೆತು ಕಾಮಗಾರಿ ಮರು ಆರಂಭಗೊಂಡಿತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಅಕ್ಟೋಬರ್ 2025ರಲ್ಲಿ ಕಾನೂನು ಅಡೆತಡೆಗಳು ನಿವಾರಣೆಯಾಗಿದ್ದು, ಮಾರ್ಚ್ 2026ರಲ್ಲಿ ಪರಿಷ್ಕೃತ ವಿನ್ಯಾಸಕ್ಕೆ ಸರ್ಕಾರದ ಅನುಮೋದನೆ ದೊರೆಯಿತು. ಬಳಿಕ ಏಪ್ರಿಲ್ 2026ರಲ್ಲಿ ಕೈಗಾರಿಕಾ ಪ್ಲಾಟ್‌ಗಳ ಹಂಚಿಕೆಗೆ ಕೆಐಎಡಿಬಿ ಅಧಿಕೃತ ಅಧಿಸೂಚನೆ ಹೊರಡಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬ್ರಿಜೇಶ್ ಚೌಟ ಅವರು, ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ಕರಾವಳಿ ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಮಹತ್ವದ ಮೈಲಿಗಲ್ಲಾಗಲಿದ್ದು, ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು. ಪರಿಸರ ಸ್ನೇಹಿ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡುವ ಈ ಯೋಜನೆ ಜಿಲ್ಲೆಯನ್ನು ಜಾಗತಿಕ ಕೈಗಾರಿಕಾ ನಕ್ಷೆಯಲ್ಲಿ ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.
The ambitious Plastic Park project at Ganjimath in Dakshina Kannada is gaining momentum. MP Captain Brijesh Chowta inspected the ongoing works and directed officials to complete all pending infrastructure projects on schedule, paving the way for industrial growth, investment, and employment opportunities in the coastal region.

