ಮನುಷ್ಯನು ಗೋವನ್ನು ಸಾಕುಪ್ರಾಣಿಯಾಗಿಸಿ ಗೋವಿನ ಅವಲಂಬನೆಯಿಂದ ಜೀವಿಸಲು ಪ್ರಾರಂಬಿಸಿದ್ದು ಅನಾದಿಕಾಲದಿಂದ. ಸಾಕುಪ್ರಾಣಿಗಳ ವರ್ಗದಲ್ಲಿ ಹಲವಾರು ಇದ್ದರೂ ಗೋವಿನಷ್ಟು ಅನನ್ಯವಾದ ಬಹೂಪಯೋಗಿ ಸಾಕುಪ್ರಾಣಿ ಇನ್ನೊಂದಿಲ್ಲ. ಭಾರತದ ದೇಶದ ಹಲವಾರು ರಾಜ್ಯಗಳಲ್ಲಿ ಕಂಡುಬರುವ ವಿವಿಧ ದೇಶೀ ಜಾನುವಾರುಗಳು ಅಲ್ಲಿನ ವಾತಾವರಣ,ಪ್ರಾಕೃತಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಬೆಳೆದುಬಂದಿರುವುದು ಕಂಡುಬರುತ್ತದೆ. ಕಾಲಕ್ರಮೇಣ ರಾಜ್ಯದಿಂದ ರಾಜ್ಯಕ್ಕೆ ದೇಶವಿದೇಶಗಳಿಗೆ ವಿನಿಮಯಗೊಂಡಿರುವ ಉಲ್ಲೇಖಗಳೂ ಸಿಗ್ತವೆ. ಹೀಗೆ ಸಾಗಿಸಲ್ಪಟ್ಟು ಒಂದು ತಳಿ ಇನ್ನೊಂದು ತಳಿಯೊಂದಿಗೆ ಸಂಕರಗೊಂಡು ಹೊಸದಾದ ಲಕ್ಷಣಗಳ ತಳಿಗಳು ಉಗಮಿಸಿದ ಸಂಗತಿಗಳೂ ಆಗಿವೆ.
ದೇಶೀ ತಳಿಗಳಲ್ಲಿ ಒಂದಾದ ಮಲೆನಾಡಗಿಡ್ಡ ತಳಿಯು ಸಹ್ಯಾದ್ರಿ ಪರ್ವತ ಶ್ರೇಣಿಯ ತಪ್ಪಲುಪ್ರದೇಶದಲ್ಲಿ ವ್ಯಾಪಕವಾಗಿ ಹರಡಿಕೊಂಡಿದ್ದ ತಳಿ. ಇವುಗಳೂ ಕೂಡ ದಕ್ಷಿಣದ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ, ಬೇರೆ ಬೇರೆ ಸ್ವರೂಪದಲ್ಲಿದ್ದರೂ, ಹಾಗೂ ಪ್ರದೇಶಾನುಸಾರ ವಿವಿಧ ಹೆಸರುಗಳಲ್ಲಿ ಇದ್ದರೂ,ಕೆಲವು ಸಾಮ್ಯತೆಗಳಿಂದ ಕಂಡುಬರುವ ಕಾರಣ ಸಾಮಾನ್ಯವಾಗಿ ಗಿಡ್ಡ ದೇಹದ ಇವು ಮೂಲದಲ್ಲಿ ಬಹುಶಃ ಒಂದೇ ಕುಟುಂಬದಿಂದ ಉಗಮಿಸಿ, ಕಾಲಕ್ರಮೇಣ ಪ್ರದೇಶವಾರು ಹರಡುತ್ತಾ ಹೋದಂತೆ ಅಲ್ಲಲ್ಲಿ ಆಹಾರ ನೀರು,ಹವಾಗುಣ ಗಳಿಗೆ ಅನುಸಾರವಾಗಿ ಸ್ವಲ್ಪಮಟ್ಟಿನ ವ್ಯತ್ಯಾಸಗಳನ್ನು ಪಡೆದುಕೊಂಡು ಸ್ಥಳೀಯ ಹೆಸರುಗಳಿಂದ ಗುರುತಿಸಿರುವುದು ಕಾಣ್ತದೆ. ಆದ್ದರಿಂದ ಗಿಡ್ಡಶರೀರದ ಮಲೆನಾಡಗಿಡ್ಡ,ಕಾಸರಗೋಡುಗಿಡ್ಡ,ವೆಚ್ಚೂರ್,ಕುಳ್ಳನ್,ಪುಂಗನೂರ್ ಇತ್ಯಾದಿ ಜಾನುವಾರುಗಳು ಮೂಲದಲ್ಲಿ ಒಂದೇ ತಳಿಯಿಂದ ಕವಲೊಡೆದ ಸಂತತಿಯಾಗಿರುವ ಸಾಧ್ಯತೆ ಇದೆ.
ಹಿಂದೂಧರ್ಮದ ವೈದಿಕ ಇತಿಹಾಸದ ಪ್ರಕಾರ ಎಲ್ಲ ಭಾರತೀಯ ಗೋವುಗಳೂ ಕೂಡ ಸ್ವರ್ಗದ ಹಸುವಾದ ಕಾಮಧೇನುವಿನ ಸಂತತಿ. ಇಲ್ಲಿ ಭಾರತೀಯ ಗೋ ಸಂತತಿ ಮಾತ್ರವೇ ಕಾಮಧೇನುವಿನ ಮಕ್ಕಳೇ? ವಿದೇಶೀ ಹಸುಗಳು ಅಲ್ಲವೇ? ಎಂಬ ಪ್ರಶ್ನೆ ಬರಬಹುದು. ಹೌದು ಭಾರತೀಯ ಗೋ ಸಂತತಿ ಮಾತ್ರವೇ ಕಾಮಧೇನುವಿನ ಸಂತತಿ. ಯಾಕೆಂದರೆ ವೈದಿಕ ಶಾಸ್ತ್ರಪುರಾಣಗಳು ಕೂಡ ಹುಟ್ಟಿದ್ದು ಭಾರತದಲ್ಲಿಯೇ, ವೇದ ಪುರಾಣಗಳ ಇತಿಹಾಸದಪ್ರಕಾರ ಭಾರತ ಮಾತ್ರವೇ ಕರ್ಮಭೂಮಿ.
ದೇವಾನುದೇವತೆಗಳೂ ಕೂಡ ತಮ್ಮ ಪುಣ್ಯಕ್ಷೀಣವಾದಾಗ ಭಾರತದೇಶದಲ್ಲಿ ಹುಟ್ಟಿ ಪುಣ್ಯಸಂಪಾದನೆ ಮಾಡಿ ಪುನಃ ಸ್ವರ್ಗಕ್ಕೆ ಹೋಗಲು ಸಾಧ್ಯವಿದೆ ಹೊರತು ಅನ್ಯ ದೇಶಗಳ ಭೂಮಿಯಲ್ಲಿ ಅಲ್ಲ ಎಂಬುದು ಪುರಾಣ ನಿರ್ಣಯ. ಪ್ರಪಂಚವೇ ಭಗವಂತನ ಸೃಷ್ಟಿ. ಅದರಲ್ಲಿ ವಿಶೇಷವಾದದ್ದು ಜಂಬೂದ್ವೀಪದಲ್ಲಿರುವ ಭಾರತ ದೇಶ ಹಾಗೂ ಇಲ್ಲಿರುವ ಎಲ್ಲವಿಧದ ಸಂಪತ್ತು. ಆದ್ದರಿಂದ ಭಾರತೀಯ ಗೋ ಸಂಪತ್ತು ಇತರ ದೇಶಗಳ ಗೋವುಗಳಿಗಿಂತ ಭಿನ್ನವೇ ಆಗಿದೆ. ಅದಕ್ಕೆ ಕಾರಣ ಸ್ವರ್ಗಧೇನುವಾದ ಕಾಮಧೇನುವೇ ಕಾರಣ ಎಂಬುದು ಸನಾತನ ನಂಬಿಕೆ ಹಾಗೂ ಗೋವಿನ ಶರೀರದಲ್ಲೇ ದೇವತೆಗಳ ಸಾನ್ನಿಧ್ಯವಿದೆ ಎಂಬ ಕಾರಣಕ್ಕಾಗಿಯೇ ಅದು ಪೂಜನೀಯ.ಜೊತೆಗೆ ಅವುಗಳು ಯಾವ ಪರಿಯಲ್ಲಿ ಮನುಷ್ಯನನ್ನು ಸಲಹಿವೆ ಎಂದು ಅರ್ಥಮಾಡಿಕೊಂಡರೆ ಮತ್ತಷ್ಟು ಅಭಿವಂದನೀಯ. ಆ ನಿಟ್ಥಿನಲ್ಲಿ ಮಲೆನಾಡಗಿಡ್ಡಗಳ ಇತಿಹಾಸವನ್ನು ಸ್ಥೂಲವಾಗಿ ಅವಲೋಕಿಸಿದರೆ ಅರ್ಥವಾದೀತು.
ಇಂದು ದೈಹಿಕ ರಚನೆ ಹಾಗೂ ವಂಶವಾಹಿಗಳ ಭಿನ್ನತೆಯ ಆಧಾರದಲ್ಲಿ ಭಾರತೀಯ ತಳಿಗಳೆಂದು ಗುರುತಿಸಲ್ಪಟ್ಟವುಗಳಲ್ಲಿ ಮಲೆನಾಡ ಗಿಡ್ಡಗಳು ಕರಾವಳಿ ಹಾಗೂ ಮಲೆನಾಡ ಜಿಲ್ಲೆಗಳಲ್ಲಿ ಹಿಂದಿನಿಂದಲೂ ವ್ಯಾಪಕವಾಗಿ ಜನ ಜೀವನ ಹಾಗೂ ಕೃಷಿ ಉತ್ಪಾದನೆಗೆ ತನ್ನದೇ ತನ್ನದೇ ಆದ ಕೊಡುಗೆಯನ್ನು ನೀಡಿವೆ. ಇದೊಂದು ರೀತಿ ಮಲೆನಾಡ ಗಿಡ್ಡ ದನ ಕರುಗಳ ತವರೂರೆಂಬಂತೆ ಆಗಿದೆ. ಇಲ್ಲಿನ ಮಳೆ-ಸೆಖೆ-ಛಳಿ ಎಲ್ಲವನ್ನೂ ಸಹಿಸಿಕೊಂಡಿವೆ. ಬೆಟ್ಟಗುಡ್ಡಗಳನ್ನು ಹತ್ತಿಳಿದು ಕಾಡಸೊಪ್ಪು-ತೋಡ ನೀರು ಗಳಿಂದ ಬದುಕಿ,ಶೂನ್ಯ ಬಂಡವಾಳದಿಂದ ಇಲ್ಲಿನ ಮಂದಿಗೆ ಸರಳ ಬದುಕಿನ ಮಾರ್ಗ ತೋರಿವೆ.
ಮಲೆನಾಡಗಿಡ್ಡಗಳಲ್ಲಿ ಹುಟ್ಟುವ ಕಪಿಲಗಳೂ ಸೇರಿದಂತೆ ಗೋವಿನ ಸಂಬಂಧಿತ ಅನೇಕ ಕಥೆಗಳೂ ಸ್ಥಳಪುರಾಣ-ಐತಿಹ್ಯಗಳೂ ಅಲ್ಲಲ್ಲಿ ಜನಮಾನಸದಲ್ಲಿ ಹರಡಿವೆ. ಒಂದು ಕಾಲದಲ್ಲಿ ಜನರ ಸಂಪತ್ತಿನ ಮಾನದಂಡವಾಗಿದ್ದ ಈ ಗೋವುಗಳು ಹಾಲಿನ ಇಳುವರಿಯಿಂದಲೋ, ಏರು ತಗ್ಗಿನ ಅಂಕಣಗಳ ಗದ್ದೆಯಲ್ಲಿ ಗಿಡ್ಡಹೋರಿಗಳು ಹೂಟೆಯ ಉಪಯೋಗದಿಂದಲೋ ಮನುಷ್ಯರ ಕುಲವನ್ನು ಗುರುತಿಸುವಂತೆ ಗುರುತಿಸಲ್ಪಡುತ್ತಿದ್ದವು. ಕಂಬಳ, ಹೂಟೆ, ಹಾಲು ಬೆಣ್ಣೆ ತುಪ್ಪಗಳ ಹೆಚ್ಚಿನ ಉಪಯೋಗವಿದ್ದವರಿಗೆ ಕೋಣ ಎಮ್ಮೆಗಳ ಮೇಲೆ ಆಸಕ್ತಿಯಾದರೆ,ದೈವ ದೇವರ ಕಾರ್ಯದಲ್ಲಿ ಮಲೆನಾಡಗಿಡ್ಡಗಳ ಉತ್ಪನ್ನಗಳ ಬಳಕೆಯೇ ಅನಿವಾರ್ಯವಾದ ಕಾರಣ ಅವುಗಳು ಪೂಜನೀಯವೂ ಆಗಿ ತಮ್ಮದೇ ಆದ ಸ್ಥಾನ ಪಡೆದಿದ್ದವು.
ಸೇರು,ಪಾವು,ಕುಡತೆಯ ಅಳತೆಗಳಲ್ಲಿ ಹಾಲಿನ ಇಳುವರಿಯನ್ನು ನಿರ್ಣಯಿಸಿ,ಅಂತಹ ಹಸುಗಳ ಹೆಣ್ಣುಕರುಗಳ ಗುಣಮಟ್ಟವನ್ನೂ ಮುಂದಾಗಿ ಜನ ಅಂದಾಜಿಸುತ್ತಿದ್ದರು. ವರ್ಷವೂ ಗದ್ದೆ ತೋಟಗಳನ್ನು ಬಿದಿರಮುಳ್ಳಿನ ಬೇಲಿಯಿಂದ ಸುರಕ್ಷಿತಗೊಳಿಸಿ ಬೆಟ್ಟಗುಡ್ಡಗಳಿಗೆ ಜಾನುವಾರುಗಳನ್ನು ಮೇಯಲು ಬಿಟ್ಟು ,ಭತ್ತದ ಹುಲ್ಲು,ಅಕ್ಕಿಯ ತೌಡುಗಳ ಬಳಕೆ ಹಾಗೂ ಅಗತ್ಯಬಿದ್ದರೆ ಹಳ್ಳಿಯ ಪರಿಣತ ನಾಟಿವೈದ್ಯರ ಗಿಡಮೂಲಿಕೆ ಔಷಧಿಗಳ ಸಹಾಯದಿಂದ ಜತನದಿಂದ ಕಾಪಾಡಿಕೊಂಡು ಬಂದ ಜಾನುವಾರುಗಳಿವು. ಹುಲಿ ಚಿರತೆಗಳ ಸಂಖ್ಯೆ ಹೆಚ್ಚಿದ್ದ ಕಾಡಿನ ಪಕ್ಕದ ಊರುಗಳಲ್ಲಿ ಸಾಕಲ್ಪಡುತ್ತಿದ್ದ ಪರಿಸ್ಥಿಯಲ್ಲಿ ಕಾಡಿಗೆ ಮೇಯಲು ಹೋದ ದನಕರುಗಳು ಕಣ್ಮರೆಯಾಗುವುದು, ಮೇಯಲು ಹೋದಾಗ ಗಬ್ಬದ ದನಗಳು ಅಲ್ಲೇ ಕರು ಹಾಕಿ ಕರುವಿನೊಂದಿಗೆ ಹಿಂದಿರುಗುವುದು.ಗಟ್ಟಿಮುಟ್ಟಾದ ಹೋರಿಗಳು ಗೋ ಮಂದೆಯ ರಕ್ಷಕರಂತೆ ವರ್ತಿಸಿ ಕಾಪಾಡುವುದು,ಸಹಚರ ಗೋವುಗಳು ಅಪಾಯಕ್ಕೆ ಸಿಲುಕಿದಾಗ ಮನೆಗೆ ಬಂದು ಕೂಗಿ ವಿಶಿಷ್ಟವಾದ ಧ್ವನಿಯಿಂದ ಸೂಚನೆಕೊಡುವುದು ಅಥವಾ ಗಂಡಿ ಗುಂಡಿಗಳಿಗೆ ಬಿದ್ದ ಹಸು ಕರುಗಳನ್ನು ಬಿಟ್ಟು ಬರದೆ ಕೂಗಿ ತನ್ನ ಮಾಲೀಕರನ್ನು ಎಚ್ಚರಿಸಿವುದು ಇತ್ಯಾದಿ ಸಂಗತಿಗಳು ಇಲ್ಲಿವರಿಗೆ ಅಂದು ಸಾಮಾನ್ಯ ವಿಚಾರವಾಗಿತ್ತು. ಇಂದಿನವರಿಗೆ ಮೂಕಜೀವಿಗಳ ಆ ಕಥೆಗಳು ಅಚ್ಚರಿಯನ್ನುಂಟು ಮಾಡ್ತವೆ.
ಚಿಕ್ಕ ಮಗು ಬಾಣಂತಿ,ರೋಗಿಗಳು ಇರುವ ಮನೆಯವರಿಗೆ ಹಾಲುಕರೆಯುವ ಹಸುವನ್ನು ಉಚಿತವಾಗಿಯೂ ದನ ಉಳ್ಳವರು ಕೊಡುವುದಿತ್ತು. ಅಥವಾ ಹಾಲನ್ನೂ ಉಚಿತ ಕೊಡ್ತಿದ್ದರು.
ಭೂಮಿಯಿಲ್ಲದ ಮಂದಿ ಹಸುವಿಗೆ ಹುಲ್ಲು ಬೇಕಾದರೆ ತೋಟ ಇದ್ದವರ ತೋಟಗಳಿಂದ ಹೆರೆಸಿ ಕೊಂಡೋಗಲು ಕೊಡುವ ಪರಿಪಾಟವಿತ್ತು. ದನಗಳ ಕೊಟ್ಟಿಗೆಗೆ ಹಾಸಲು ಸೊಪ್ಪು,ತರಗೆಲೆ ಸಂಗ್ರಹ ಮಾಡಿ ಮಳೆಗಾಲದಲ್ಲಿ ಬೆಚ್ಚಗಿರುವಂತೆ ನೋಡಿಕೊಳ್ಳುವುದು, ದನ ಕಾಣೆಯಾದರೆ,ಅನಾರೋಗ್ಯಕ್ಕೆ ಒಳಗಾದರೆ ಹರಕೆ ಹೊತ್ತುಕೊಳ್ತಿದ್ದರು.ದೇವರಿಗೆ ಕರುಗಳನ್ನು ಹರಕೆ ಒಪ್ಪಿಸುವುದು,ಹೋರಿಕರುಗಳನ್ನು ನಂದಿ ಬಿಡುವುದು,ಗೋದಾನ ಕೊಡುವುದು. ಮಾಮೂಲಿ ಸಂಗತಿಯಾಗಿತ್ತು.
ಬೆಳ್ಳಿ,ಕಾಳಿ,ಗೌರಿ,ಗಂಗೆ,ಕಾವೇರಿ,ಕಲ್ಯಾಣಿ ಇತ್ಯಾದಿ ಹಸುಗಳಿಗೆ ನಾಮಕರಣ, ಕಾಳ, ಬೊಳ್ಳ, ಗೆಂದ, ಮೈರ, ಕರಿಯ , ಶಂಭು, ರಾಮ, ಕೃಷ್ಣ ಇತ್ಯಾದಿ ನಾಮಧೇಯಗಳಿಂದ ಹೋರಿಗಳ ಗುರುತು. ಕರು ಜನಿಸಿ ಹತ್ತು ದಿನಗಳ ತನಕ ಹಾಲಿನ ಬಳಕೆ ಇಲ್ಲ. ಹನ್ನೊಂದನೆಯ ದಿವಸ ಗ್ರಾಮದೇವರಿಗೋ ನಾಗನಿಗೋ,ಮನೆದೇವರಿಗೋ ಹಾಲಿನ ಸಮರ್ಪಣೆಯಾದ ನಂತರ ಮನೆಬಳಕೆ. ಕರು ಬಿಡದೆ ದನ ಹಾಲು ಸುರಿಸದು, ಹೆಚ್ಚಿನ ದನಗಳಿಗೆ ಹಾಲುಕರೆವಷ್ಟು ಹೊತ್ತೂ ಕರು ಮುಂದೆಯೇ ನೆಕ್ಕಲು ಸಿಗಬೇಕು. ಇನ್ನು ಕೆಲವರ ಕಾಲಿಗೆ ಹಗ್ಗ ಹಾಕಬೇಕು. ಕರುವಿಗಾಗಿ ಬಿಡುವ ಮೊಲೆಯ ಹಾಲು ಕರೆಯಲು ಬಿಡದ ಹಸುಗಳೂ ಇರ್ತಿದ್ದವು.ಇನ್ನು ಕೆಲವಕ್ಕೆ ಅಕ್ಕಿನುಚ್ಚಿನ ಮಡ್ಡಿ ಹಿಂಡಿ ಇಟ್ಟು ಅದನ್ನು ತಿನ್ನುವಷ್ಟರಲ್ಲಿ ಹಾಲು ಕರೆದುಕೊಳ್ಳಬೇಕು. ಮನೆಯ ಚಿಕ್ಕ ಮಕ್ಕಳಿಗೆ ಚಿನ್ನಾಟವಾಡುವ ಕರುಗಳೆಂದರೆ ಅಚ್ಚುಮೆಚ್ಚು. ದೊಡ್ಡಾದಂತೆ ಮುದ್ದಿನಿಂದ ಸಾಕಿದ ಕರುಗಳನ್ನು ಕೊಟ್ಟರೆ ರಂಪಾಟ.ಇವೆಲ್ಲ ಬಾಲ್ಯದಿಂದಲೂ ದನಕರುಗಳ ಜೊತೆ ಅವಿನಾಭಾವದ ನಂಟನ್ನು ಬೆಳೆಸಿಬಿಟ್ಟಿದ್ದವು.
ಹಿಂದೆ ಕತ್ತೆಕಿರುಬ,ಚಿರತೆಗಳ ಹಾವಳಿಯಿದ್ದಾಗ ಕರುಗಳು ಮನೆಯೊಳಗೆ. ಅಥವಾ ಹಟ್ಟಿಯ ಪಕ್ಕ ಪಂಜರದ ಬಾಗಿಲಿನ ಕೋಣೆ. ಕೊಟ್ಟಿಗೆಯೂ ಬಂದೋಬಸ್ತ್,ಕಾಡುಬಳ್ಳಿಗಳ ಪಡಿಬಾಗಿಲು ಹೀಗೆ ಗೋ ಸಂಪತ್ತಾಗಿ ಕಾಣಲ್ಪಟ್ಟಿತ್ತು.
ಹೀಗೆ ಹಲವಾರು ಸಂಖ್ಯೆಯ ದನಕರುಗಳು,ಮನೆ ಮಂದಿಯ ಹೊಟ್ಟೆ ತಂಪಾಗಿಸಲು ಹಾಲು ಮಜ್ಜಿಗೆಗಳ ತುಪ್ಪ ಇತ್ಯಾದಿಗಳು ಹಾಗೂ ಸತ್ಯನಾರಾಯಣ ಪೂಜೆಗೆ, ಹೋಮ ಹವನ, ಶುಭಾಶುಭಕರ್ಮಗಳಿಗೆ,ದೇವಸ್ಥಾನಗಳಿಗೆ ಇತ್ಯಾದಿ ಅನೇಕ ಉಪಯೋಗಗಳಿಗೆ ನೀಡ್ತಾ, ಮನುಷ್ಯನ ಜನನದಿಂದ ಮರಣದ ತನಕ ನಿತ್ಯವೂ ಮಲೆನಾಡು ಕರಾವಳಿಗರ ಕಾಮಧೇನುವಾಗಿ, ಸಾಕುತಾಯಿಯಾಗಿ ಸಲಹಿದ ಮಲೆನಾಡಗಿಡ್ಡ ಗೋ ಸಂತತಿ ಇಂದು ಅದರ ತವರೂರವರಿಗೇ ನಿಕೃಷ್ಟವಾದಂತೆ ಕಂಡಾಗ ಮನುಷ್ಯನೆಷ್ಟು ಸ್ವಾರ್ಥಿಯೆನಿಸದೇ? ನೀನಾರಿಗಾದೆಯೋ ಎಲೆ ಮಾನವಾ?
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…