ನಾನು ಪ್ರತಿದಿನ ಏಳುವುದು ಬೆಳಗಿನ 4 ಗಂಟೆಗೆ…. ಎದ್ದ ತಕ್ಷಣ ಗ್ಯಾಸ್ ಸ್ಟವ್ ಹಚ್ಚಿ ಸ್ನಾನಕ್ಕೆ ನೀರು ಕಾಯಿಸಲು ಇಟ್ಟು ರಾತ್ರಿಯ ಊಟದ ಪಾತ್ರೆ ತಟ್ಟೆ ಲೋಟಗಳನ್ನು ತೊಳೆಯುತ್ತೇನೆ. ಅಷ್ಟರಲ್ಲಿ ನೀರು ಬಿಸಿಯಾಗಿರುತ್ತದೆ. ನನ್ನ ಗಂಡನನ್ನು ಎಚ್ಚರಿಸಿ ಸ್ನಾನಕ್ಕೆ ಕಳಿಸುತ್ತೇನೆ. ಏಕೆಂದರೆ ಅವರು 6 ಗಂಟೆಗೆಲ್ಲಾ ಮನೆ ಬಿಡಬೇಕು. 5 ಕಿಲೋಮೀಟರ್ ದೂರದಲ್ಲಿರುವ ATM ನಲ್ಲಿ ಅವರು SECURITY GUARD. 7 ಗಂಟೆಯ ಡ್ಯೂಟಿಗೆ ಅವರು ಇಲ್ಲಿಂದ ನಡೆದುಕೊಂಡೇ ಹೋಗುತ್ತಾರೆ.
ಅವರು ಸ್ನಾನಕ್ಕೆ ಹೋಗುತ್ತಿದ್ದಂತೆ ಸ್ಟವ್ ಮೇಲೆ ಅನ್ನಕ್ಕೆ ಇಡುತ್ತೇನೆ. ಅನ್ನ ಆಗುತ್ತಿರುವಂತೆ ಚಿತ್ರಾನ್ನ ಮಾಡಲು ಬೇಕಾದ ಈರುಳ್ಳಿ, ಮೆಣಸಿನಕಾಯಿ, ಒಗ್ಗರಣೆ ಸಾಮಾನು ರೆಡಿ ಮಾಡಿಕೊಂಡಿರುತ್ತೇನೆ. ಅವರು ಸ್ನಾನ ಮಾಡಿ ಯೂನಿಫಾರಂ ಡ್ರೆಸ್ ಹಾಕಿಕೊಂಡು ರೆಡಿಯಾಗಿ ಬರುವಷ್ಟರಲ್ಲಿ ಚಿತ್ರಾನ್ನದ ತಟ್ಟೆ ಅವರ ಮುಂದಿರುತ್ತದೆ. ಅವರು ತಿನ್ನುವಷ್ಟರಲ್ಲಿ ಮಧ್ಯಾಹ್ನದ ಊಟಕ್ಕೆ ಅದೇ ಚಿತ್ರಾನ್ನವನ್ನು ಒಂದು ಬಾಕ್ಸ್ ಗೆ ಹಾಕಿ ಒಂದು ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಹಿಡಿದು ಊಟದ ಚೀಲ ರೆಡಿ ಮಾಡಿರುತ್ತೇನೆ.
ಈ ಮಧ್ಯೆ ಮತ್ತೆ ನೀರು ಕಾಯಿಸಲು ಇಟ್ಟಿರುತ್ತೇನೆ. ಅದು ಕಾಯುತ್ತಿದ್ದಂತೆ ನನ್ನ ಮಗನನ್ನು ಎಚ್ಚರಿಸುತ್ತೇನೆ. ಅವನು 4 ನೇ ತರಗತಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾನೆ. 7 – 30 ಕ್ಕೆ ಅವನನ್ನು ಕರೆದೊಯ್ಯಲು ಆಟೋ ಬರುತ್ತದೆ. ಶಾಲೆ ಸ್ವಲ್ಪ ದೂರ ಇರುವುದರಿಂದ ಒಂದಷ್ಟು ಜನ ಸೇರಿ ಆಟೋ ಮಾಡಿದ್ದೇವೆ. ಅಷ್ಟರಲ್ಲಿ ಅವನ ಊಟದ ಡಬ್ಬಿ, ನೀರಿನ ಬಾಟಲ್, ಸ್ಕೂಲ್ ಬ್ಯಾಗು ರೆಡಿ ಮಾಡಬೇಕು. ಇತ್ತೀಚೆಗೆ ಅವನೇ ಸ್ವಂತವಾಗಿ ಸ್ನಾನ ಮಾಡಿಕೊಳ್ಳುವುದರಿಂದ ನನಗೆ ಸ್ವಲ್ಪ ಆರಾಮ. ಅವನಿಗೆ ಚಿತ್ರಾನ್ನದ ಜೊತೆ ಬೇರೆ ಕುರುಕಲು ತಿಂಡಿಯನ್ನೂ ಕಟ್ಟಬೇಕು. ಶಾಲೆಯಲ್ಲಿ ಮಧ್ಯಾಹ್ನದ ಊಟ ಕೊಡುತ್ತಾರೆ. ಆದರೂ ಪಾಪ ಮಗು, ಅದು ಅಷ್ಟು ರುಚಿಯಾಗಿರುವುದಿಲ್ಲ ದಿನವೂ ಅದೇ ತಿಂದು ಬೇಜಾರಾಗುತ್ತದೆ ಎನ್ನುತ್ತಾನೆ, ಅದಕ್ಕೆ ಬಾಕ್ಸ್ ಕೊಡುತ್ತೇನೆ.
ಇಷ್ಟರಲ್ಲಿ ಮತ್ತೆ ನೀರು ಕಾಯಿಸಲು ಇಟ್ಟಿರುತ್ತೇನೆ. ನನ್ನ 4 ವರ್ಷದ ಮಗಳು ಈ ವರ್ಷದಿಂದ ಅಂಗನವಾಡಿಗೆ ಹೋಗುತ್ತಿದ್ದಾಳೆ. ಅದು 8 – 30 ಕ್ಕೆ ಇದೆ. ಅವಳಿಗೆ ನಾನೇ ಸ್ನಾನ ಮಾಡಿಸಿ ತಿಂಡಿ ತಿನ್ನಿಸಿ ಕೊನೆಗೆ ಹಾಲು ಕುಡಿಸಬೇಕು. ನಮ್ಮ ಮನೆಯಲ್ಲಿ ಅವಳಿಗೆ ಮಾತ್ರ ದಿನವೂ ಹಾಲು. ನಮಗೆಲ್ಲಾ ಭಾನುವಾರ ಮಾತ್ರ ಕಾಫಿ. ಅವಳಿಗೆ ಮೂರು ಬಾಕ್ಸ್ ರೆಡಿ ಮಾಡಬೇಕು. ಪಕ್ಕದಲ್ಲೇ ಇರುವ ಅಂಗನವಾಡಿಗೆ ನಾನೇ ಬಿಟ್ಟು ಬರುತ್ತೇನೆ.
ಬರುತ್ತಿದ್ದಂತೆ ಮತ್ತೆ ನೀರು ಕಾಯ್ದಿರುತ್ತದೆ. ಬೇಗ ಬೇಗ ಸ್ನಾನ ಮುಗಿಸಿ ತಿಂಡಿ ತಿಂದು ಬಾಕ್ಸ್ ರೆಡಿ ಮಾಡಿಕೊಂಡು 9 – 15 ಕ್ಕೆ ಬಸ್ ಸ್ಟ್ಯಾಂಡಿನಲ್ಲಿ ಇರಬೇಕು. ಆ ಬಸ್ ಮಿಸ್ ಆದರೆ ಕಷ್ಟ. ನಾನು ಕೆಲಸ ಮಾಡುವ ಗಾರ್ಮೆಂಟ್ಸ್ ನವರು 10 ಗಂಟೆಯ ಮೇಲೆ 5 ನಿಮಿಷ ಲೇಟಾದರೂ ಒಳಗೆ ಸೇರಿಸುವುದಿಲ್ಲ. ಕೇವಲ 6 ಕಿಲೋಮೀಟರ್ ಹೋಗಲು 35 ನಿಮಿಷ ಬೇಕು. ಅಷ್ಟೊಂದು ಟ್ರಾಪಿಕ್. ನನ್ನ ಕೆಲಸ ಮುಗಿಯುವುದು ಸಂಜೆ 6 ಗಂಟೆಗೆ. SECURITY CHECK ಎಲ್ಲಾ ಮುಗಿದು ಹೊರಬರಲು 6 – 30 ಆಗುತ್ತದೆ. ಮತ್ತೆ ಬಸ್ಸುಹಿಡಿದು ಮಾರ್ಕೆಟ್ಟಿನಲ್ಲಿ ತರಕಾರಿ ತಗೊಂಡು ಮನೆಗೆ ಬರಲು 7 – 30 ಆಗುತ್ತದೆ. ನನ್ನ ಗಂಡ ಬರುವುದು ಸಂಜೆ 6 – 30 ಕ್ಕೆ.
ಮಗುವಿನ ಶಿಶುವಿಹಾರ ಮುಗಿಯುವುದು ಮಧ್ಯಾಹ್ನ 2 ಗಂಟೆಗೆ. ಆದರೆ ನಾನು ಅಂಗನವಾಡಿಯಲ್ಲಿರುವ ಆಯಾ ಒಬ್ಬರಿಗೆ ವಾರಕ್ಕೆ 200 ರೂಪಾಯಿ ಕೊಡುತ್ತೇನೆ. ಅವರು ಮಗುವನ್ನು ಸಂಜೆ 5 ರ ವರೆಗೂ ಅಲ್ಲಿಯೇ ನೋಡಿಕೊಳ್ಳುತ್ತಾರೆ. ಅಷ್ಟರಲ್ಲಿ ನನ್ನ ಮಗ ಶಾಲೆಯಿಂದ ಬಂದು ಅವಳನ್ನು ಮನೆಗೆ ಕರೆತರುತ್ತಾನೆ. ಅಪ್ಪ ಬರುವವರೆಗೆ ಇಬ್ಬರೂ ಆಟವಾಡಿಕೊಂಡು ಇರುತ್ತಾರೆ. 6 – 30 ಕ್ಕೆ ಬರುವ ನನ್ನ ಗಂಡ ಅವರಿಗೆ ಬಿಸ್ಕತ್ ಮತ್ತು ಚಾಕೋಲೆಟ್ ಕೊಡಿಸಿ ಟಿವಿ ನೋಡುತ್ತಾ ಕುಳಿತಿರುತ್ತಾರೆ. ನಾನು ಮನೆಗೆ ಬಂದ ತಕ್ಷಣ ಬಟ್ಟೆ ಬದಲಾಯಿಸಿ ಬೆಳಗಿನ ಪಾತ್ರೆಗಳನ್ನೆಲ್ಲಾ ತೊಳೆದು ಬೇಗ ಬೇಗ ಅನ್ನ ಸಾಂಬರ್ ಮತ್ತು ಚಪಾತಿ ರೆಡಿ ಮಾಡುತ್ತೇನೆ.
ಸುಮಾರು ರಾತ್ರಿ 9 ಗಂಟೆಯಷ್ಟೊತ್ತಿಗೆ ಊಟ ಸಿದ್ದವಾಗುತ್ತದೆ. ಮಕ್ಕಳಿಗೆ ಇಷ್ಟವೆಂದು ಬರುವಾಗ ಚೌ ಚೌ ಅಥವಾ ಬೊಂಡ, ವಡೆ ಕಟ್ಟಿಸಿಕೊಂಡು ಬಂದಿರುತ್ತೇನೆ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತೇವೆ. ಮಕ್ಕಳು ಊಟವಾಗುತ್ತಿದ್ದಂತೆ ಹಾಗೇ ನಿದ್ದೆ ಮಾಡುತ್ತಾರೆ. ನನ್ನ ಗಂಡ ಎಂದಿನಂತೆ ಊಟಕ್ಕೆ ಮೊದಲೇ ಸ್ವಲ್ಪ ಡ್ರಿಂಕ್ಸ್ ತಗೊಂಡಿರುತ್ತಾರೆ. ಅವರೂ ಬೇಗನೆ ಮಲಗುತ್ತಾರೆ. ನನಗೆ ಟಿವಿಯಲ್ಲಿ 10 ಗಂಟೆಗೆ ಬರುವ ” ಆ ” ಧಾರಾವಾಹಿ ಬಹಳ ಇಷ್ಟ. ಅದರಲ್ಲಿನ ಆ ನಾಯಕಿಯ ಡ್ರೆಸ್ಸು, ಅವಳ ರೂಪ, ಅವಳ ಗಂಡ ಅವಳಿಗೆ ತೋರಿಸುವ ಪ್ರೀತಿ, ಗಂಡನನ್ನು ಆಕೆ ಹಿಂದಿನಿಂದ ತಬ್ಬಿಕೊಂಡು ಮುದ್ದುಮಾಡುವ ರೀತಿ ನನಗೆ ಬಹಳ ಖುಷಿ. ಅದನ್ನು ನೋಡುತ್ತಾ ಹಾಗೇ ನಿದ್ರೆಯೆಂಬ ಕನಸಿಗೆ ಜಾರುತ್ತೇನೆ …
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…