ಗೌರಿಬಿದನೂರು ಬಳಿಯ ಎಮ್ಮೆ ಗುಡ್ಡ ಪ್ರದೇಶದಲ್ಲಿ ಅರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿದ ಕಾರಣ ನೂರಾರು ಎಕರೆ ಪ್ರದೇಶದ ಅರಣ್ಯಕ್ಕೆ ಹಾನಿಯಾಗಿದೆ. ಇಲ್ಲಿರುವ ಅನೇಕ ಪ್ರಬೇಧದ ಗಿಡಗಳಿಗೆ ಹಾನಿಯಾಗಿದೆ ಎಂದು ಪರಿಸರವಾದಿ ಚೌಡಪ್ಪ ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಎಮ್ಮೆ ಗುಡ್ಡ ಅರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕುತ್ತಿದ್ದರು. ಹೀಗಾಗಿ ಸಂಬಂದಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು, ಪರಿಸರ ಪ್ರೇಮಿಗಳೊಂದಿಗೆ ಭೇಟಿ ನೀಡಿದರು. ಈ ಸಂದರ್ಭ ವಿಶೇಷ ತಂಡ ರಚನೆ ಮಾಡಿ ಪರಿಸರ ರಕ್ಷಣೆಯ ಕಡೆಗೆ ಗಮನಹರಿಸುವಂತೆ ಪರಿಸರ ಪ್ರೇಮಿಗಳು ಮನವಿ ಮಾಡಿದರು. ಇಲಾಖಾ ಅಧಿಕಾರಿಗಳು ಕೂಡಲೇ ಗಮನಹರಿಸಿ, ಅರಣ್ಯ ಉಳಿಸಬೇಕೆಂದು ಪರಿಸರ ಪ್ರೇಮಿಗಳು ಮನವಿ ಮಾಡಿದರು.
ಎಮ್ಮೆ ಗುಡ್ಡೆ ಈ ಪ್ರದೇಶದಲ್ಲಿ ಸುಮಾರು 400 ಎಕರೆ ಅರಣ್ಯ ಪ್ರದೇಶವು ಇದ್ದು ಪಶ್ಚಿಮ ಘಟ್ಟದ ವಿಶೇಷ ಗಿಡಗಳು ಇರುವ ಪ್ರದೇಶವೂ ಇದಾಗಿದೆ. ಈಚೆಗೆ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚುತ್ತಿರುವ ಕಾರಣದಿಂದ ಇಲ್ಲಿನ ಜೀವವೈವಿಧ್ಯಕ್ಕೆ ಹಾನಿಯಾಗಿದೆ. ಹೀಗಾಗಿ ಜನರಿಗೆ ಜಾಗೃತಿ ಹಾಗೂ ಇಲಾಖಾ ಅಧಿಕಾರಿಗಳ ಎಚ್ಚರಿಗೆ ಅಗತ್ಯವಾಗಿ ಬೇಕಿದೆ ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.