ಅಡುಗೆ ಮನೆ ಅಂದ್ರೆ ಅದು ಒಂದು ಮನೆಯ ಹೃದಯ ಭಾಗ ಇದ್ದಂತೆ. ಇನ್ನು ಅಲ್ಲಿ ಅಡುಗೆಗೆ ನಾವು ಕೂಡಿಟ್ಟ ಪ್ರತಿ ಸಾಮಾನು ಅಮೃತ ಸಮಾನ. ಅಡುಗೆಗೆ ಬೇಕಾದ ಸಾಮಾನುಗಳ ಆಯ್ಕೆಯಿಂದಲೇ ನಮ್ಮ ಆರೋಗ್ಯ ನಿರ್ಧಾರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತೂ ಅಡುಗೆ ಮನೆಯ ಸಾಮಾನು ಡಬ್ಬಿಗಳು ಬರೀ ನಕಲಿ ಅಡುಗೆ ಪದಾರ್ಥಗಳಿಂದನೇ ತುಂಬಿರುತ್ತದೆ. ಎಲ್ಲವೂ ಮಾಲ್ ನಲ್ಲಿ ಸಿಗುವ ಹೈಬ್ರೀಡ್ ತಳಿಯ, ಪಾಲೀಶ್ ಮಾಡಿದ ಅಕ್ಕಿ, ಬೇಳೆ, ಮಾತ್ರ ಲಭ್ಯವಾಗುತ್ತವೆ. ಇದು ಯಾವ ರೀತಿಯಿಂದಲೂ ನಮ್ಮ ಆರೋಗ್ಯಕ್ಕೆ ಸಹಕಾರ ನೀಡುವುದಿಲ್ಲ. ಆದರೇನು ಮಾಡುವುದು.. ಅನಿವಾರ್ಯ. ಕುಲಾಂತರಿ ತಳಿಗಳದ್ದೇ ಕಾರುಬಾರು. ಬದನೆ, ಹತ್ತಿ ಈಗ ಸಾಸಿವೆ..
ಭಾರತದಲ್ಲಿ ಸಾಸಿವೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಹೊಸ ಕುಲಾಂತರಿ ತಳಿಯು ಸ್ಥಳೀಯ ತಳಿಗಿಂತ 28% ಹೆಚ್ಚಿನ ಇಳುವರಿಯನ್ನು ಕೊಡುತ್ತದೆ. ಇದರ ಕಳೆ ನಿರ್ವಹಣೆ ಅತಿ ಸುಲಭವಾಗಿದೆ. ಕಳೆನಾಶಕ ಸಿಂಪಡಿಸಿದರೆ ಕಳೆ ಮಾತ್ರವೇ ನಾಶವಾಗುತ್ತದೆ. ಸಾಸಿವೆ ಗಿಡಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ಭಾರತವು ಖಾದ್ಯ ತೈಲ ಉತ್ಪಾದನೆಯಲ್ಲಿ ತೀರಾ ಹಿಂದಿದೆ. ಪ್ರತಿ ವರ್ಷ ಬಳಕೆಯ ಮೂರನೇ ಎರಡರಷ್ಟನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇದೆ. 2020-21ರಲ್ಲಿ ₹1,17,000 ಕೋಟಿ ವೆಚ್ಚದಲ್ಲಿ ಸುಮಾರು 13.3 ಮಿಲಿಯನ್ ಟನ್ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ. ಅದನ್ನು ತಪ್ಪಿಸಬೇಕಾದರೆ ಹೆಚ್ಚು ಇಳುವರಿ ಕೊಡುವ ಕುಲಾಂತರಿ ತಳಿ ಬಳಕೆ ಅನಿವಾರ್ಯ.
ಈಗ ನೋಡಿ, ನಮ್ಮ ಸಾಸಿವೆ ಒಗ್ಗರಣೆಯ ಘಮಲು ಇನ್ನು ಮುಂದೆಯೂ ಹೀಗೆಯೇ ಇರುತ್ತಾ? ಎಂಬ ಪ್ರಶ್ನೆ ಈಗ ದೇಶದ ಜನರ ಮುಂದಿದೆ
ಯಾಕಪ್ಪಾ ಈ ಪ್ರಶ್ನೆ ಅಂದರೆ, ಇನ್ನು ಮುಂದೆ ನಾವು ಬಳಸುವ ಸಾಸಿವೆ ತಳಿ ನಮ್ಮ ನೆಲದ್ದಲ್ಲ, ನಮ್ಮ ಹಿರಿಯರು ಜೋಪಾನವಾಗಿ ಬೆಳೆಸು ಬಳಸು ಉಳಿಸು ಎಂದು ನಮಗೆ ಕೊಟ್ಟಿದ್ದ ತಳಿಯಲ್ಲ. ಸಹಜಸೃಷ್ಟಿಯ ತಳಿಯಲ್ಲ. ಇದು ಬೇರೆಯದೇ ತಳಿ. ಇದು ಕುಲಾಂತರಿ ತಳಿ. ಸಸ್ಯ ಮತ್ತು ಪ್ರಾಣಿ ಗುಣಾಣುಗಳನ್ನು ಅಸಹಜವಾಗಿ, ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ಕೂಡಿಸಿ ಸೃಷ್ಟಿಸಿರುವ ಮಾಯಾವಿ ತಳಿ. ಇನ್ನು ನಮ್ಮ ಅಡುಗೆ ಮನೆಗೆ ವಕ್ಕರಿಸಲಿರುವ ಪಿಶಾಚಿ ತಳಿ.
ನಮಗಿದು ಗೊತ್ತಿರಲಿ. ಅಸಹಜ ಅಂಶಗಳನ್ನೊಳಗೊಂಡ ಈ ಕುಲಾಂತರಿ ಸಾಸಿವೆ ತಳಿ ನಮ್ಮ ನೆಲದಲ್ಲಿ ನೆಲೆಯೂರಲಿದೆ. ತಾನು ಬೇರೂರುವ ಮಣ್ಣಲ್ಲಿ ತನ್ನಲ್ಲಿರುವ ವಿಷವನ್ನು ಕಾರಲಿದೆ. ಇದು ಇರುವ ಕಡೆ ಸಹಜ ಕೀಟಗಳು ಉಳಿಯದು. ಮಣ್ಣು ಜೀವಿಗಳು ಬದುಕಲಾರವು. ಇದನ್ನು ಬೆಳೆಯುವಾಗ, ರಾಸಾಯನಿಕಗಳ ಬಳಕೆ ಅನಿವಾರ್ಯ. ಏಕೆಂದರೆ ರಾಸಾಯನಿಕ ಹೀರಿಯೇ ಇದು ಬೆಳೆಯುವಂತೆ ಈ ತಳಿಯನ್ನು ಸೃಷ್ಟಿಸಲಾಗಿದೆ.
ಇದು ಬಂತೆಂದರೆ ನಮ್ಮಲ್ಲಿನ ಸಾಸಿವೆ ತಳಿಗಳು ಕಣ್ಮರೆಯಾದಂತೆಯೇ. ನಮ್ಮ ನೆಲದ ತಳಿಗಳು ಕಣ್ಮರೆಯಾದರೆ, ಅದನ್ನು ಇತರ ಬೆಳೆಗಳೊಂದಿಗೆ ಸಂಯೋಜಿಸಿ ಬೆಳೆಸುತ್ತಿದ್ದ ನಮ್ಮ ಅನುಭವ, ಜ್ಞಾನ, ತಿಳುವಳಿಕೆ, ಕೌಶಲ್ಯ, ಮುಂದಿನ ಹಂಗಾಮಿಗೂ ಕಾಪಿಡುತ್ತಿದ್ದ ಪದ್ಧತಿ ಇವೆಲ್ಲವೂ ಕತಿಳಿಯುತ್ದಂತಿತೆ. ಇವೆಲ್ಲವನ್ನೂ ಈವರೆಗೂ ಮಾಡಿಕೊಂಡು ಬಂದಿದ್ದ ನಮ್ಮ ನಾಡಿನ ಮಹಿಳೆಯರ ಬೇಸಾಯ ಸಂಬಂಧಿತ ಬದುಕೂ ನಾಶವಾದಂತೆ.
ಸಾಸಿವೆ ಸಂಬಂಧಿತ ಇಷ್ಟೆಲ್ಲಾ ವಿಷಯಗಳನ್ನು ಒಮ್ಮೆಲೇ ಮೂಳೋತ್ಪಾಟನೆ ಮಾಡಿ, ನಮ್ಮ ನೆಲದ ಸಾಸಿವೆಯನ್ನು ಬದಿಗೆ ತಳ್ಳಿ, ತಾನು ನೆಲೆಯೂರುವ ಈ ಕುಲಾಂತರಿ ಸಾಸಿವೆ ವಿಷವಲ್ಲದೆ ಇನ್ನಾವ ಘಮಲು ತಂದೀತು. ಇದೇ ಕಾರಣಕ್ಕೆ ಹೇಳಿದ್ದು, ಇನ್ನು ಮುಂದೆ ಅಡುಗೆ ಮನೆಯಲ್ಲಿ ಸಾಸಿವೆ ಘಮಲು ಇರುವುದಿಲ್ಲ ಅಂತ.
ಮುಂದುವರಿದ ದೇಶಗಳ ಕಾನೂನು ಏನು ಹೇಳುತ್ತದೆ? : ಅಮೆರಿಕ, ಚೀನಾ ಸೇರಿದಂತೆ ಹಲವು ಅಭಿವೃದ್ದಿ ಹೊಂದಿದ ದೇಶಗಳು ಕುಲಾಂತರಿ ಬೀಜಗಳನ್ನು ನಿಷೇಧಿಸಿವೆ ಮತ್ತು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸಿವೆ. ಆದರೆ ಅಲ್ಲಿನ ಬಹುರಾಷ್ಟ್ರೀಯ ಕಂಪನಿಗಳು ಭಾರತದಂತಹ ತೃತೀಯ ಜಗತ್ತಿನ ರಾಷ್ಟ್ರಗಳ ಮೇಲೆ ಈ ರೀತಿಯ ಪ್ರಯೋಗಗಳನ್ನು ನಡೆಸುತ್ತವೆ ಎಂಬ ಆರೋಪವಿದೆ.
ಅಲ್ಲದೆ ಕುಲಾಂತರಿ ಬೀಜಗಳು ದೇಶದ ವೈವಿದ್ಯ ಬೀಜ ಉತ್ಪಾದನೆಗೆ ಮಾರಕವಾಗಿ ಪರಿಣಿಮಿಸಿರುವ ಉದಾಹರಣಗಳಿವೆ. ಭಾರತದಂತಹ ದೇಶದಲ್ಲಿ ಬೀಜ ಸಂರಕ್ಷಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಹೈಬ್ರೀಡ್, ಕುಲಾಂತರಿ ಬೀಜಗಳ ಪ್ರಭಾವದಿಂದಾಗಿ ನಮ್ಮ ಬೀಜ ಸ್ವಾತಂತ್ರ್ಯ ನಶಿಸಿ ಬಹುರಾಷ್ಟ್ರೀಯ ಕಂಪನಿಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಇದು ದೊಡ್ಡ ಅಪಾಯಕಾರಿ ಎಂಬುದು ಪರಿಸರ ತಜ್ಞರ ಅಭಿಮತವಾಗಿದೆ.
(ವಾಟ್ಸ್ಆಪ್ ಕೃಪೆ )