ಚಿನ್ನದ ಬೆಲೆ ಏರಿಕೆಯಾಗಿದೆ,ಇಳಿಯುವ ಸೂಚನೆಗಳು ಕಾಣುತ್ತಿಲ್ಲ.ಇಷ್ಟಕ್ಕೆಲ್ಲ ಕಾರಣಗಳೇನು,ಇದರ ಇಳಿಕೆ ಸಾಧ್ಯವೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ…
ಚಿನ್ನದ ಉತ್ಪಾದನೆ ಎಷ್ಟು ? : ಜಾಗತಿಕವಾಗಿ 2024 ರ ಸಮಯದಲ್ಲಿ ಉತ್ಪಾದನೆ ಆದ ಚಿನ್ನದ ಒಟ್ಟು ಪ್ರಮಾಣ ಸುಮಾರು 3,300 ಟನ್. ಇದರ ಉತ್ಪಾದನೆಯಲ್ಲಿ ಚೀನಾ 380 ಟನ್ ಗಳೊಂದಿಗೆ ಮೊದಲನೇ ಸ್ಥಾನದಲ್ಲಿದೆ. ಆ ಬಳಿಕದ ಸ್ಥಾನಗಳಲ್ಲಿ ರಷ್ಯಾ, ಆಸ್ಟ್ರೇಲಿಯ,ಕೆನಡಾ, ಅಮೇರಿಕಾಗಳು ಇದ್ದು ಇವುಗಳ ಉತ್ಪಾದನೆ ಕ್ರಮವಾಗಿ 310 ಟನ್, 290 ಟನ್, 200 ಟನ್ ಮತ್ತು 160 ಟನ್ಗಳಾಗಿವೆ.ಭಾರತದ ಉತ್ಪಾದನೆ ಕೇವಲ 1.6 ರಿಂದ 1.8 ಟನ್ ವಾರ್ಷಿಕವಾಗಿ ಆಗುತ್ತಿದೆ. ವಿಶ್ವದ ಚಿನ್ನದ ಒಟ್ಟು ಉತ್ಪಾದನೆಯಲ್ಲಿ ಚೀನಾ, ರಷ್ಯಾ ಮತ್ತು ಆಸ್ಟ್ರೇಲಿಯಾ ದೇಶಗಳ ಪಾಲು ಶೇಕಡಾ 31 ರಷ್ಟು ಆಗಿದೆ.
ಕೇಂದ್ರ ಬ್ಯಾಂಕುಗಳಲ್ಲಿ ಮೀಸಲು ಚಿನ್ನ ಎಷ್ಟು? : ಹಣದುಬ್ಬರವನ್ನು ನಿಯಂತ್ರಿಸಲು, ಆರ್ಥಿಕ ಸ್ಥಿರತೆಯನ್ನು ಕಂಡುಕೊಳ್ಳಲು ಮತ್ತು ಯುದ್ಧ ಮತ್ತಿತರ ವಿಪತ್ತುಗಳ ಸಂದರ್ಭದಲ್ಲಿ ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಚಿನ್ನ ಆಸರೆ ಆಗುವ ಕಾರಣ ಇವು ಇದನ್ನು ಮೀಸಲು ಆಗಿ ಇಡುತ್ತವೆ. ವಿಶ್ವ ಚಿನ್ನದ ಮಂಡಳಿ ಪ್ರಕಾರ ಅಮೇರಿಕಾದ ಕೇಂದ್ರ ಬ್ಯಾಂಕಿನಲ್ಲಿ ಈ ಪ್ರಮಾಣ 8,133.43 ಟನ್ ಆಗಿದ್ದು,ಜರ್ಮನಿಯಲ್ಲಿ 3,351.53 ಟನ್ ಆಗಿದೆ. ಭಾರತ 880 ಟನ್ ಹೊಂದಿಕೊಂಡು ಒಂಬತ್ತನೇ ಸ್ಥಾನದಲ್ಲಿದೆ.
ಚಿನ್ನಕ್ಕಿರುವ ಬೇಡಿಕೆ ಎಷ್ಟು? : ವಿಶ್ವ ಚಿನ್ನ ಮಂಡಳಿ ಕೊಡುವ ಮಾಹಿತಿ ಪ್ರಕಾರ ಫೆಬ್ರವರಿ 2025 ರ ಸಮಯದಲ್ಲಿ ವಿಶ್ವದ ಒಟ್ಟು ಚಿನ್ನದ ಬೇಡಿಕೆ 4,945.9 ಟನ್ಗಳು. ಚಿನ್ನಕ್ಕೆ ಅತೀ ದೊಡ್ಡ ಗ್ರಾಹಕ ರಾಷ್ಟ್ರಗಳು ಚೀನಾ ಮತ್ತು ಭಾರತ. ಭಾರತ ವಾರ್ಷಿಕವಾಗಿ ಸುಮಾರು 700 ರಿಂದ 800 ಟನ್ ಚಿನ್ನ ಬಳಕೆ ಮಾಡುತ್ತಿದೆ. 2025 ಮಾರ್ಚ್ನ ವರೆಗೆ ಸುಮಾರು 879.58 ಟನ್ ಚಿನ್ನ ಆಮದು ಮಾಡಿಕೊಂಡಿದೆ.
ಚಿನ್ನದ ಬಳಕೆ ಹೇಗೆ ? : ಜಾಗತಿಕ ಮಟ್ಟದಲ್ಲಿ ಚಿನ್ನದ ಒಟ್ಟು ಬೇಡಿಕೆಯ ಶೇಕಡಾ 43.68 ಆಭರಣಗಳ ತಯಾರಿಗೆ, ಶೇಕಡಾ 25.66 ಹೂಡಿಕೆಗೆ, ಶೇಕಡಾ 23.58 ಕೇಂದ್ರ ಬ್ಯಾಂಕ್ ಗೆ ಮತ್ತು ಶೇಕಡಾ 7.08 ತಂತ್ರಜ್ಞಾನದ ಬಳಕೆಗಾಗಿ ಉಪಯೋಗಿಸಲಾಗುತ್ತದೆ.
ಭಾರತದಲ್ಲಿನ ಬೇಡಿಕೆ : ನಮ್ಮಲ್ಲಿ ಚಿನ್ನವನ್ನು ಒಂದು ಸಂಪತ್ತು ಮತ್ತು ಪ್ರತಿಷ್ಠೆಯಾಗಿ, ಮದುವೆ ಮತ್ತಿತರ ಸಾಂಸ್ಕೃತಿಕ ಸಮಾರಂಭಗಳಿಗಾಗಿ, ಭವಿಷ್ಯದ ಭದ್ರತೆಗಾಗಿ ಮತ್ತು ಅದರ ಮೇಲಿನ ಮೋಹಕ್ಕಾಗಿ ಖರೀದಿಸುತ್ತಾರೆ. ಭಾರತದಲ್ಲಿ ವಾರ್ಷಿಕವಾಗಿ ಖರೀದಿಸುವ ಒಟ್ಟು ಚಿನ್ನದ ಶೇಕಡಾ 60 ಗ್ರಾಮೀಣ ಭಾಗದ್ದಾಗಿದೆ. ಇನ್ನು ವಾರ್ಷಿಕವಾಗಿ ಬಳಕೆ ಆಗುವ ಒಟ್ಟು ಚಿನ್ನದ ಶೇಕಡಾ 50 ಮದುವೆ ಆಭರಣಗಳ ತಯಾರಿಗೆ ಉಪಯೋಗ ಆಗುತ್ತದೆ.
ಚಿನ್ನದ ಬಳಕೆ ದೃಷ್ಟಿಯಿಂದ ನೋಡುವುದಾದರೆ ಭಾರತದಲ್ಲಿ ಅತೀ ಹೆಚ್ಚು ಚಿನ್ನವನ್ನು ದಕ್ಷಿಣ ಭಾರತದ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಮಾಡಲಾಗುತ್ತಿದ್ದು, ಈ ಪ್ರಮಾಣ ದೇಶದ ಒಟ್ಟು ಬಳಕೆಯ ಶೇಕಡಾ 40 ಆಗಿದೆ. ದೇಶದಲ್ಲಿ ಸುಮಾರು 2,50,000 ದಷ್ಟು ಚಿನ್ನದ ಮಳಿಗೆಗಳಿದ್ದು ಇವುಗಳಲ್ಲಿ ಬಹುಪಾಲು ಅಸಂಘಟಿತ ವಲಯದಲ್ಲಿ ಇವೆ. ಕೇರಳ ಒಂದರಲ್ಲೇ ಸುಮಾರು ಹದಿನೈದು ಸಾವಿರ ಚಿನ್ನದ ಮಳಿಗೆಗಳಿವೆ. ದೇಶದ ಒಟ್ಟು ಚಿನ್ನದ ಬೇಡಿಕೆಯಲ್ಲಿ ಸುಮಾರು 200 ರಿಂದ 250 ಟನ್ ಚಿನ್ನ ಕೇರಳದಲ್ಲಿ ಬಳಕೆ ಆಗುತ್ತಿದೆ.
ಪ್ರಜೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಇರುವ ಚಿನ್ನ ಎಷ್ಟು? : ಭಾರತದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಂಗ್ರಹಿಸಲ್ಪಟ್ಟ ಚಿನ್ನದ ಒಟ್ಟು ಪ್ರಮಾಣ ಸುಮಾರು ಇಪ್ಪತೈದು ಸಾವಿರ ಟನ್ಗಳು. ಇದು ನಾಣ್ಯ,ಗಟ್ಟಿ ಮತ್ತು ಆಭರಣಗಳ ರೂಪದಲ್ಲಿವೆ. ಇದರಲ್ಲಿ ಸುಮಾರು 3,000 ದಿಂದ 4,000 ಟನ್ ದೇವಾಲಯಗಳಲ್ಲಿ ಇವೆ ಎಂದು ಅಂದಾಜಿಸಲಾಗಿದೆ. ನಮ್ಮಲ್ಲಿಗೆ ವಾರ್ಷಿಕವಾಗಿ ಆಮದಾಗುವ ಒಟ್ಟು ಚಿನ್ನದಲ್ಲಿ ಶೇಕಡಾ 50 ಆಭರಣಗಳ ತಯಾರಿಗೆ, ಶೇಕಡಾ 40 ಹೂಡಿಕೆಗೆ ಮತ್ತು ಶೇಕಡಾ 10 ಕೈಗಾರಿಕೆಗಳಲ್ಲಿ ಬಳಕೆ ಆಗುತ್ತಿದೆ.
ಚಿನ್ನದ ಕ್ಯಾರೆಟ್ ಅಂದರೇನು? : ಮಾರುಕಟ್ಟೆಯಲ್ಲಿ ಲಭ್ಯವಿರುವ ಚಿನ್ನದ ಶುದ್ಧತೆಗೆ ಅನುಗುಣವಾಗಿ ಅಂದರೆ ಅದರಲ್ಲಿರುವ ಚಿನ್ನದ ಅಂಶಗಳಿಗೆ ಅನುಗುಣವಾಗಿ ಕ್ಯಾರೆಟ್ ಎಂದು ವಿಂಗಡಿಸಲಾಗಿದೆ.
- 24 ಕ್ಯಾರೆಟ್ ಅಂದರೆ ,ಇದರಲ್ಲಿ ಶೇಕಡಾ 99.9 ಚಿನ್ನವಿದ್ದು ಇದು ಶುದ್ಧ ಚಿನ್ನವಾಗಿದೆ.ಇದು ಹೆಚ್ಚಾಗಿ ಹೂಡಿಕೆಗಾಗಿ ಉಪಯೋಗವಾಗುತ್ತದೆ.ಇದರಿಂದ ತಯಾರಿಸಿದ ಆಭರಣಗಳು ಮೃದು ಆಗಿರುವುದರಿಂದ ಇದು ಹೆಚ್ಚು ಬಾಳಿಕೆ ಬರುವುದಿಲ್ಲ.
- 22 ಕ್ಯಾರೆಟ್ ಚಿನ್ನದಲ್ಲಿ 22 ಪಾಲು ಚಿನ್ನವಿದ್ದರೆ ಉಳಿದ 2 ಪಾಲು ತಾಮ್ರ ಮತ್ತಿತರ ಲೋಹಗಳು ಇರುತ್ತದೆ.ಇದರಲ್ಲಿರುವ ಚಿನ್ನದ ಪಾಲು ಶೇಕಡಾ 91.6 ಆಗಿದೆ.ಇದನ್ನು ಆಭರಣಗಳ ತಯಾರಿಗೆ ಬಳಸಲಾಗುತ್ತದೆ.
- 18 ಕ್ಯಾರೆಟ್ ಚಿನ್ನದಲ್ಲಿ ಶೇಕಡಾ 75 ರಷ್ಟು ಚಿನ್ನವಿದೆ.ಉಳಿದ ಅಂಶ ಇತರ ಲೋಹಗಳದ್ದಾಗಿದೆ.ಇದು ಕೂಡ ಆಭರಣಗಳ ತಯಾರಿಗೆ ಬಳಸಲಾಗುತ್ತದೆ.
- 14 ಕ್ಯಾರೆಟ್ ಚಿನ್ನದಲ್ಲಿ ಶೇಕಡಾ 58.3 ಚಿನ್ನ ಇದ್ದು ಉಳಿದ ಪಾಲು ಇತರ ಲೋಹಗಳಾದ್ದಾಗಿದೆ.
- 10 ಕ್ಯಾರೆಟ್ ಚಿನ್ನದಲ್ಲಿ ಶೇಕಡಾ 41.7 ಚಿನ್ನ ಇದೆ.ಉಳಿದ ಪ್ರಮಾಣ ಇತರ ಲೋಹಗಳದ್ದಾಗಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಚಿನ್ನದ ಅಂಶ ಹೆಚ್ಚಾದ ಹಾಗೆ ಗಟ್ಟಿತನ ಕಡಿಮೆ ಮತ್ತು ಇತರ ಲೋಹಗಳ ಪಾಲು ಹೆಚ್ಚಾದ ಹಾಗೆ ಗಟ್ಟಿತನ ಅಧಿಕ ಆಗುತ್ತದೆ.
ಚಿನ್ನದ ಬೆಲೆ ಏರಿಕೆಗೆ ಕಾರಣಗಳೇನು? : ಚಿನ್ನದ ಬೆಲೆ ಹೆಚ್ಚಾಗಲು ಮಾರುಕಟ್ಟೆ ನಾನಾ ಕಾರಣಗಳನ್ನು ಹೆಸರಿಸುತ್ತಿದೆ. ಅವುಗಳೆಂದರೆ…
- ಜಾಗತಿಕ ಮಟ್ಟದಲ್ಲಿ ಕಂಡು ಬರುತ್ತಿರುವ ಭೌಗೋಳಿಕ ಮತ್ತು ರಾಜಕೀಯ ಅಸ್ಥಿರತೆ. ಇವು ಯುದ್ಧಗಳು ಮತ್ತಿತರ ವಿಚಾರಗಳ ರೂಪದಲ್ಲಿವೆ.
- ಕೇಂದ್ರ ಬ್ಯಾಂಕುಗಳು ಹೆಚ್ಚಿನ ಚಿನ್ನವನ್ನು ಖರೀದಿಸುತ್ತಿರುವುದು.
- ಅಮೇರಿಕಾದ ವ್ಯಾಪಾರ ನೀತಿಯಲ್ಲಿನ ಬದಲಾವಣೆಗಳು.
- ರುಪಾಯಿಯ ವಿನಿಮಯ ದರದಲ್ಲಿನ ಏರು ಪೇರು.
- ಶೇರ್ ಮಾರುಕಟ್ಟೆಯಲ್ಲಿನ ಅಸ್ಥಿರತೆ.
- ಹಣದುಬ್ಬರ.
- ಹೂಡಿಕೆದಾರರ ಆಸಕ್ತಿ.
- ಆಭರಣಗಳಿಗೆ ಹೆಚ್ಚುತ್ತಿರುವ ಬೇಡಿಕೆ.
ನಮ್ಮ ಸಮಾಜದಲ್ಲಿ ಚಿನ್ನ ಪ್ರತಿಷ್ಠೆಯ ಸಂಕೇತವಾಗಿದ್ದು,ಇದರೊಂದಿಗೆ ಗೃಹಿಣಿಯರ ಅಚ್ಚು ಮೆಚ್ಚಿನ ಸಂಗಾತಿ ಚಿನ್ನ ಆಗಿರುವುದರಿಂದ,ಅಲ್ಲದೆ ಚಿನ್ನದ ನಾಣ್ಯ ಮತ್ತು ಗಟ್ಟಿಗಳ ಮೇಲಿನ ಹೂಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಮ್ಮಲ್ಲಿ ಇದರ ಬೇಡಿಕೆ ಹೆಚ್ಚಾಗಿ ಬೆಲೆಯೂ ಗಗನಕ್ಕೆ ಏರುತ್ತಿದೆ.ಇವೆಲ್ಲದರೊಂದಿಗೆ ಅಂತರಾಷ್ಟ್ರೀಯ ಸಮಸ್ಯೆಗಳು ಮತ್ತು ಆಂತರಿಕ ಹಾಗೂ ಬಾಹ್ಯ ನೀತಿಗಳು ಬೆಲೆ ಏರಿಕೆಗೆ ಅವಕಾಶ ಕಲ್ಪಿಸುತ್ತಿದೆ.
ಬೆಲೆ ಇಳಿಕೆಗೆ ದಾರಿಗಳಿವೆಯೇ ? : ಚಿನ್ನದ ಬೆಲೆ ಇಳಿಕೆ ಆಗಬೇಕಾದರೆ ಮೊದಲನೆಯದಾಗಿ ಅದಕ್ಕಿರುವ ಬೇಡಿಕೆ ಕುಸಿಯಬೇಕು ಇಲ್ಲವೇ ಪೂರೈಕೆ ಪ್ರಮಾಣ ಹೆಚ್ಚಾಗಬೇಕು.ಇವೆರಡೂ ನಮ್ಮಿಂದ ಆಗದ ಸಂಗತಿ.ಹೀಗಿದ್ದರೂ ಕೆಳಗೆ ಹೆಸರಿಸಿದ ಅಂಶಗಳು ಬೆಲೆ ಇಳಿಕೆಗೆ ಸಹಾಯವಾಗಬಲ್ಲವು.
- ಬ್ಯಾಂಕುಗಳಲ್ಲಿ ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಳವಾದರೆ ಚಿನ್ನದ ಮೇಲಿನ ಹೂಡಿಕೆ ಕಡಿಮೆ ಆಗಿ ಬೆಲೆ ಇಳಿಕೆಗೆ ದಾರಿ ಆಗಬಹುದು.
- ಅಂತರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ,ರಾಜಕೀಯ ಮತ್ತು ಇತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು.
- ಅಮೇರಿಕಾದ ಡಾಲರ್ ಪ್ರಭಲವಾಗುವುದು
- ಚಿನ್ನದ ಉತ್ಪಾದನೆ ಹೆಚ್ಚಿಸಿ ಪೂರೈಕೆ ಹೆಚ್ಚಿಸುವುದು.
- ಕೇಂದ್ರ ಬ್ಯಾಂಕುಗಳು ಚಿನ್ನದ ಮಾರಾಟಕ್ಕೆ ಮುಂದಾದರೆ ಬೆಲೆ ಇಳಿಕೆಗೆ ದಾರಿ ಮಾಡಿಕೊಡುತ್ತದೆ.
ಕಾರಣಗಳು ಏನೇ ಇದ್ದರೂ ಚಿನ್ನದ ಬೆಲೆ ಇಂದು ಗ್ರಾಹಕರನ್ನು ಕಂಗೆಡಿಸುತ್ತಿದೆ.ಸಾಂಪ್ರದಾಯಿಕ ಖರೀದಾರರಿಗೆ ಹೊಸ ಚಿನ್ನ ಕೊಳ್ಳುವ ಸಾಮರ್ಥ್ಯ ಇಲ್ಲದೆ ಹಳತು ಚಿನ್ನವನ್ನು ಹೊಸತಾಗಿ ಪರಿವರ್ತಿಸುವ ಸ್ಥಿತಿ ನಿರ್ಮಾಣವಾಗಿದೆ.ಪರಿಣಾಮವಾಗಿ ನಮ್ಮಲ್ಲಿರುವ ಚಿನ್ನಾಭರಣಗಳ ಉದ್ದಿಮೆದಾರರು ಮುಂದೆ ಸಂಕಷ್ಟ ಎದುರಿಸಬೇಕಾಗಬಹುದು.ಈ ನಿಟ್ಟಿನಲ್ಲಿ ಉದ್ದಿಮೆದಾರರು ಗ್ರಾಹಕರನ್ನು ಸೆಳೆಯಲು ಬದಲಿ ಉಪಾಯಗಳನ್ನು ಅನುಸರಿಸಬೇಕು.ಇದಕ್ಕೆ ಕೆಳಗೆ ಹೆಸರಿಸಿದ ಅಂಶಗಳು ಪೂರಕ ಆಗಬಹುದು.
- ಅಲ್ಪ ಪ್ರಮಾಣದ ಚಿನ್ನ ಉಳ್ಳ ಆಕರ್ಷಕ ಆದುನಿಕ ಆಭರಣಗಳ ತಯಾರಿಗೆ ಒತ್ತು ನೀಡುವುದು.
- ಕಡಿಮೆ ಕ್ಯಾರೆಟ್ ಆಭರಣಗಳ ತಯಾರು ಮತ್ತು ಅವುಗಳಲ್ಲಿ ಯುವ ಜನತೆ ಮೆಚ್ಚುವ ವಿನ್ಯಾಸ ಸೃಷ್ಟಿ ಅಲ್ಲದೆ ಗೃಹಿಣಿಯರ ರುಚಿಗೆ ಅನುಗುಣವಾಗಿ ತಯಾರಿ.
- ಕನಿಷ್ಟ ಲಾಭಾಂಶಕ್ಕೆ ಒತ್ತು.
- ಗ್ರಾಹಕರನ್ನು ಆಕರ್ಷಿಸಲು ಅನ್ಯ ಲೋಹಗಳ ಬಗ್ಗೆ ಮಾಹಿತಿ ಪೂರೈಕೆ.
ನಮ್ಮ ಸಮಾಜದಲ್ಲಿ ಚಿನ್ನ ಒಂದು ಅನಿವಾರ್ಯ ಲೋಹ ಆಗಿದೆ.ಇದು ಗೃಹಿಣಿಯರಿಗೆ ಅಚ್ಚು ಮೆಚ್ಚು.ಆದರೆ ಸರಕಾರ ಚಿನ್ನವನ್ನು ಅನುಪಯುಕ್ತ ಹೂಡಿಕೆಯೆಂದು ಬಿಂಬಿಸಿದೆ.ಈ ದೃಷ್ಟಿ ಬದಲಾಗಿ ಚಿನ್ನದ ಬೆಲೆ ಇನ್ನಷ್ಟು ಏರದಂತೆ ಕ್ರಮ ಕೈಗೊಳ್ಳಬೇಕಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.


