ಅಡಿಕೆ ಬೆಳೆಗೆ ಸಹಾಯ ಧನ ವಿಸ್ತರಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹೊಳಲ್ಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಹನಿ ನೀರಾವರಿ ಜೊತೆಗೆ ಸೇರಿಸಬೇಕೆಂದು ರೈತರ ಒತ್ತಾಯ ಇದೆ. ಇದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಡಿಕೆಗೆ ಶೇಕಡ 90 ರಷ್ಟು ಸಹಾಯಧನ ನೀಡಲಾಗುತ್ತಿದೆ. ತೋಟಗಾರಿಕೆಯಲ್ಲಿ ಅಡಿಕೆ ಸೇರಿದೆ. ಸಾಮಾನ್ಯ ವರ್ಗದವರಿಗೆ ಶೇ.50 ರಿಂದ 75 ರಷ್ಟು ಹೆಚ್ಚಿಸಿದೆ. ವ್ಯಾಪ್ತಿ ವಿಸ್ತರಣೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ರೈತರ ಬದುಕು ಹಸನಾಗಲು ಗ್ರಾಮೀಣ ಆರ್ಥಿಕ ಸ್ಥಿತಿ ಬದಲಾಗಬೇಕು:ಸಿಎಂ
ರೈತರ ಬದುಕು ಉತ್ತಮವಾಗಲು ಗ್ರಾಮೀಣ ಆರ್ಥಿಕ ಸ್ಥಿತಿ ಬದಲಾಗಬೇಕು. ಕೃಷಿಯಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿಕೆಯಾಗಬೇಕು. ಇದರಲ್ಲಿ ಬ್ಯಾಂಕ್ ಗಳ ಪಾತ್ರ ಬಹಳ ದೊಡ್ಡದಿದೆ. ಈ ಬಗ್ಗೆ ಎಲ್ಲಾ ಬ್ಯಾಂಕರ್ ಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರೈತ ಉಳಿದರೆ ಮಾತ್ರ ಕೃಷಿ ಉಳಿಯುತ್ತದೆ. ರೈತ ಕೇಂದ್ರಿತ ಕಾರ್ಯಕ್ರಮಗಳನ್ನು ರೂಪಿಸಿದಾಗ ಹಾಗೂ ರೈತರಿನಿಗೆ ಶಕ್ತಿ ತುಂಬುವ ಕಾಲ ಬಂದಿದೆ.
ಕಿಸಾನ್ ಸಮ್ಮಾನ್ , ರೈತ ವಿದ್ಯಾ ನಿಧಿ ಕಾರ್ಯಕ್ರಮಗಳು ರೈತನನ್ನು ಶಕ್ತಿಶಾಲಿಯಾಗಿ ಮಾಡುವ ಕಾರ್ಯಕ್ರಮಗಳನ್ನು ರೂಪಿಸಿ ಮೂಲಭೂತ ಬದಲಾವಣೆಗಳನ್ನು ತರಲಾಗಿದೆ. ಕೃಷಿ ಬೆಳೆಗೆ ತಕ್ಕಂತೆ ಸಾಲ ಪ್ರಮಾಣವನ್ನು ನೀಡಲು ಶೂನ್ಯ ಬಡ್ಡಿಯಲ್ಲಿ 5 ಲಕ್ಷದವರೆಗೆ ರೈತರಿಗೆ ಸಿಗುವ ಸಾಲದ ಪ್ರಮಾಣ ಹೆಚ್ಚಳ ಮಾಡಲಾಗಿದೆ.
ರೈತ ವಿದ್ಯಾನಿಧಿ ರೂಪಿಸುವ ಮೂಲಕ ರೈತರ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಬೇರೆ ವೃತ್ತಿ ಮಾಡುವ ಮೂಲಕ ಆದಾಯ ಹೆಚ್ಚಳ ಪಡೆಯುವಂತಾಗಬೇಕು. ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಬುದ್ದಿವಂತರಿರುತ್ತಾರೆ. ಅವರನ್ನು ಕಡೆಗಣಿಸಬಾರದು. 180 ಕೋಟಿ ರೂ.ಗಳ ವೆಚ್ಚದಲ್ಲಿ ರೈತರಿಗೆ ವಿಮಾ ಯೋಜನೆ ಜಾರಿಯಾಗಿದೆ. ರೈತನ ಸಹಜ ಸಾವಾದರೂ ಅವನ ಕುಟುಂಬಕ್ಕೆ 2 ಲಕ್ಷ ರೂ ವಿಮಾ ಹಣ ಬರುವಂತೆ ಮಾಡಲಾಗಿದೆ ಎಂದರು.