ಹಲವು ದಿನಗಳ ನಂತರ ಹೈನುಗಾರಿಕೆ ಮಾಡುತ್ತಿರುವ ರೈತರಿಗೆ ಸಿಹಿಸುದ್ದಿ ಸಿಕ್ಕಿದೆ. ಹೈನುಗಾರಿಕೆ ಸುಲಭದ ಕೆಲಸ ಅಲ್ಲ. ಆದರೂ ರೈತರು ಇದಕ್ಕೆಲ್ಲ ಜಗ್ಗದೇ ದನ ಸಾಕಿ ತಮ್ಮ ಜೀವನ ನಡೆಸುತ್ತಿದ್ದಾರೆ.ಸಮಾಜಕ್ಕೂ ತಮ್ಮ ಬೆವರ ಶ್ರಮವನ್ನು ಉಣಿಸುತ್ತಿದ್ದಾರೆ. ಆ ಬೆವರಿಗೆ ತಕ್ಕ ಪ್ರತಿಫಲ ದೊರೆತರೆ ಅವರಿಗೂ ಖುಷಿ. ಈ ಬಾರಿ ರಾಜ್ಯ ಸರ್ಕಾರ ರೈತರ ಹೈನುಗಾರರ ಪಾಲಿಗೂ ಕೊಂಚ ದಯೆ ತೋರಿದೆ.
ನಂದಿನಿ ಹಾಲಿನ #NandiniMilk ದರವನ್ನು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡುವ ಕೆಎಂಎಫ್ #KMF ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಶುಕ್ರವಾರ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ #Siddaramaiah ನೇತೃತ್ವದಲ್ಲಿ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಅಧ್ಯಕ್ಷರ ಸಭೆ ನಡೆಸಲಾಯಿತು. ಈ ವೇಳೆ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ಒಪ್ಪಿಕೊಂಡಿದೆ. ಆಗಸ್ಟ್ 1 ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.
KMF ಪ್ರತಿ ಲೀಟರ್ ಹಾಲಿನ ದರದಲ್ಲಿ 5 ರೂ. ಹೆಚ್ಚಳ ಮಾಡುವಂತೆ ಪ್ರಸ್ತಾವ ಸಲ್ಲಿಸಿತ್ತು. ಕೊನೆಗೆ ಸರ್ಕಾರ 3 ರೂ. ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಹೆಚ್.ಡಿ.ರೇವಣ್ಣ, 5 ರೂ. ದರ ಏರಿಕೆಗೆ ಪ್ರಸ್ತಾಪವಿತ್ತು. 3 ರೂ. ದರ ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ. ರೈತರಿಂದ ಖರೀದಿ ಮಾಡುವ ಹಾಲಿಗೆ ಪ್ರತಿ ಲೀಟರ್‌ಗೆ 3 ರೂ. ದರ ಹೆಚ್ಚಳವಾದಂತಾಗಿದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು.