ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿಯಾಗಿ ಸುರಿದ ಮಳೆ ಈಗ ಸ್ವಲ್ಪ ವಿರಾಮ ನೀಡಿದೆ. ಈಗ ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಸೇರಿದಂತೆ ದೆಹಲಿಗೂ ಮುಂಗಾರು ಮಳೆ ವಿಸ್ತರಣೆಯಾಗುತ್ತಿದೆ.
ಹಿಮಾಚಲ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಪ್ರವಾಹವನ್ನು ಎದುರಿಸುತ್ತಿದೆ, ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಭೂಕುಸಿತಗಳು ಸಂಭವಿಸಿವೆ. ಜೂನ್ 22, 23, 25 ಮತ್ತು 26 ರಂದು ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಕೆಲವು ಕಡೆ ರಸ್ತೆಗಳು ಕುಸಿದು ಸಂಚಾರ ದುಸ್ತರವಾಗಿದೆ. ಬೆಟ್ಟಗಳಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಮಣ್ಣು ಕುಸಿತ ಸಂಭವಿಸಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಪ್ರಬಲವಾಗಲಿದೆ.
ಇದೇ ವೇಳೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಮುಂಬೈ, ಥಾಣೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಬೈನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ 142.6 ಮಿ.ಮೀ ಮಳೆಯಾಗಿದ್ದು, ಭಾರೀ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ 142.6 ಮಿ.ಮೀ ಮಳೆಯಾಗಿದ್ದು, ರಾಯಗಢ ಜಿಲ್ಲೆ (134.1 ಮಿ.ಮೀ), ಪಾಲ್ಘರ್ (120.9 ಮಿ.ಮೀ), ಥಾಣೆ (90.3 ಮಿ.ಮೀ) ಮತ್ತು ಮುಂಬೈ ಉಪನಗರ ಪ್ರದೇಶಗಳಲ್ಲಿ (60.5 ಮಿ.ಮೀ) ಮಳೆಯಾಗಿದೆ. ಜೂನ್ 21 ಮತ್ತು ಜೂನ್ 22 ರಂದು ಭಾರೀ ಮಳೆ ಮುಂದುವರಿಯುವ ಮುನ್ಸೂಚನೆ ಇದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಂದಿನ ಐದು ದಿನಗಳಲ್ಲಿ ಮಳೆ, ಗುಡುಗು ಸಹಿತ ಮಳೆ ಮತ್ತು ಬಿರುಗಾಳಿಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಐಎಂಡಿ ಪ್ರಕಾರ, ಶುಕ್ರವಾರ ದೆಹಲಿಯ ಗರಿಷ್ಠ ತಾಪಮಾನವು 36 ಡಿಗ್ರಿಗಿಂತ ಕಡಿಮೆ ಇತ್ತು.