ಗೋವಿಂದ ಭಟ್ಟರ ಗೋಪೂಜೆ ಕಾರ್ಯಕ್ರಮ….. | ಬಹುತೇಕ ಮಲೆನಾಡಿಗರ ಕೃಷಿ ಮೂಲದ ಕಥೆ..!

November 14, 2023
1:01 PM
ಬಹುತೇಕ ಮಲೆನಾಡಿಗರ ಕೃಷಿ ಮೂಲದ ಕಥೆಯನ್ನು ಕೃಷಿಕ ಪ್ರಬಂಧ ಅಂಬುತೀರ್ಥ ಹೆಣೆದಿದ್ದಾರೆ...

ದೀಪಾವಳಿ ಗೋ ಪೂಜೆ ಬಂದರುಕೂಳೆ ಎಲ್ಲಾ ಮಲೆನಾಡಿಗರ ಮನೆಗಳಂತೆ ಗೋವಿಂದ ಭಟ್ಟರ ಮನೇಲೂ ಅದೇನೋ‌ ಧಾವಂತ. ಹಬ್ಬ ಕಳೆದರೂ ಸಾಕು… ಎಂಬುವ ಗಡಿಬಿಡಿ…..

Advertisement
Advertisement

ಗೋವಿಂದ ಭಟ್ಟರ ಮನೇಲಿ ಆಗ ಎಮ್ಮೆಗಳನ್ನು ಬಿಟ್ಟೇ ಇಪ್ಪತ್ತೈದು ಗೋವುಗಳು ಇದ್ವು… ನಾಳೆ ಗೋಪೂಜೆ ಅಂದರೆ ಇವತ್ತು
ಗೋವಿಂದ ಭಟ್ಟರು ಗಂಡ ಹೆಂಡತಿ ಮನೆ ಕೆಲಸದಾಳು ತಂದ ಪಚ್ಚೆತನೆ ಹಣ್ಣಡಿಕೆ ಸಿಂಗಾರದ ಕೊನೆ , ಚೆಂಡು ಹೂ, ಉಗಣೇಕಾಯಿ ಇತರ ಗೋ ಸಿಂಗಾರ ಸಾಮಾಗ್ರಿಯನ್ನ ಬಾಳೆ ಪಟ್ಟೆ ದಾರದಲ್ಲಿ ಹಾರ ಮಾಡುವ ಸಡಗರದ ಸಂಭ್ರಮ. ಆದರೆ ಜಾನುವಾರುಗಳಿಗೆ ಹೊಟ್ಟೆ ತುಂಬಾ ತಿನ್ನುವ ಸಂಭ್ರಮ ‌ಮಾತ್ರ .

Advertisement
Advertisement

ಭಟ್ಟರು ಗಂಡ ಹೆಂಡತಿ ಒಂದು ಕಡೆಯಿಂದ ಜಾನುವಾರುಗಳ ಮೈ ಸ್ನಾನ ಮಾಡಿಸಿ, ಕೆಮ್ಮಣ್ಣು ಮತ್ತು ಜೇಡಿಯನ್ನ ದಪ್ಪ ದ್ರಾವಣ ಮಾಡಿ ಒಂದು ಲೋಟವನ್ನ ಈ ದ್ರಾವಣದಲ್ಲಿ ಅದ್ದಿ ಗೋವುಗಳ ಮೈ ಮೇಲೆ ಸೀಲ್ ಗುದ್ದುವ ಶಾಸ್ತ್ರ ಮಾಡಿ , ಒಂದು ಬದಿಯಿಂದ ಗೌರಿ- ದಾಸಿ- ಚಂದ್ರ- ಕಿಟ್ಟ- ಗುಂಡ- ಕುಂಟ- ಬಚ್ಚ ಅಂತ ಹೆಸರಿರೋ ಎಲ್ಲ ಗೋವುಗಳ ಕುತ್ತಿಗೆಗೂ ಚೆಂಡು ಹೂವು ಪಚ್ಚೆತನೆ ಹಾರ ಕಟ್ಟುತ್ತಾ ಬರೋದು ಈ ಕಡೆಯಿಂದ ಒಂದರ ಹಾರ ನ ಇನ್ನೊಂದು ಹಸು ಕಿತ್ತುಕೊಂಡು ತಿನ್ನೋದು…!!

ಗಂಗಮ್ಮ ಗೋವಿಂದ ಭಟ್ಟರಿಗೆ ಹುಸಿ ಹಸಿ ಕೋಪ ಬಂದು ತಮ್ಮ ಪ್ರೀತಿಯ ಗೋವುಗಳಿಗೆ “ಒಂದಿನದ ಅಲಂಕಾರನೂ ಇವಕ್ಕೆ ಇಟ್ಟುಕಣಕೆ ಆಗುದಲ.. ” ಅಂತ ಬೈಯೋದು ಮಾಮೂಲಿ. ‌ಹಿಂದಿನವರು ಈ ಚೆಂಡು ಹೂವಿನ ಹಾರ ಪಚ್ಚೆತನೆ ಅರಿಷಿಣದ ಎಲೆ ಹಾರವನ್ನು ಹಸುಗಳಿಗೆ ಬರೀ ಅಲಂಕಾರಕ್ಕಾಗಿ ಹಾಕುವ ಸಂಪ್ರದಾಯ ಮಾಡದೇ ಗೋವುಗಳು ಈ ಹಾರ ತಿನ್ನಲಿ ಆ ಮೂಲಕ ಅವುಗಳಿಗೆ ಔಷಧೀಯ ಅಂಶಗಳು ಹೊಟ್ಟೆಗೆ ಹೋಗಲಿ‌ ಎನ್ನುವ ದೂರದೃಷ್ಟಿ ಯೂ ಇತ್ತು.

Advertisement

ಕೊಟ್ಟಿಗೆಯಲ್ಲಿ ಇತ್ತೀಚೆಗೆ ಕರು ಹಾಕಿ‌ ಶುದ್ಧವಾದ ಗೋ ಕುಟುಂಬಕ್ಕೆ “ಗೋ ಪೂಜೆ ” ಮಾಡುವುದು ಮುಂದಿನ‌ ಕಾರ್ಯಕ್ರಮ.

ಈ ತಾಯಿ ಮಗಳಿಗೆ ವಿಶೇಷ ಪೂಜೆ. ವಿಶೇಷ ಅಲಂಕಾರ. “ದನ ಕಾಯುವ” ವೆಂಕಟೇಶ ತಂದು ಕೊಟ್ಟ “ಉಗಣೇ ಕಾಯಿ ” ಯಲ್ಲಿ ತಾಯಿಗೊಂದು ಮಗಳಿಗೊಂದು ಚಂದದ ನೆಕ್ಲೆಸ್ ಸಿದ್ದ ಮಾಡಿ ಅದನ್ನು ತಾಯಿ ಮಗಳಿಗೆ ನಾಜೂಕಾಗಿ ಕಟ್ಟಿ… ಅವುಗಳ ಹಣೆಗೆ ಎಣ್ಣೆ ಹಚ್ಚಿ, ಅವುಗಳಿಗೆ ಅಕ್ಕಿ ಬೆಲ್ಲ ಬಾಳೆ ಹಣ್ಣಿನ ನೈವೇದ್ಯ ಮಾಡಿ ಆರತಿ ಎತ್ತಿ ಪೂಜೆ ಮಾಡಿ ಪೂರೈಸುವಾಗ ಭಟ್ಟರು ಗಂಡ ಹೆಂಡತಿ ಗೆ ಸಾಕು ಬೇಕಾಗುತ್ತಿತ್ತು.

Advertisement

ಏಕೆಂದರೆ ಇದು ಮನೆಯೊಳಗಿನ‌ ದೇವರ ಮನೆಯ ತರ” ಜಡ ” ದೇವರಲ್ಲ..!! “ಜೀವಂತ ದೇವರು… ” ಆರತಿಗೆ ಕಣ್ಣರಳಿಸುತ್ತವೆ..‌!!
ನೈವೇದ್ಯ ಚಪ್ಪರಸಿ ಸ್ವೀಕರಿಸುತ್ತವೆ…!!ಈ ನಿಜ ದೇವರಿಗೆ ಪೂಜೆ ಮಾಡೋದು ಕಷ್ಟವೇ ಸರಿ‌. ಆದರೆ ಹೀಗೆ ವರ್ಷ ಕ್ಕೊಂದು ಸಾರಿ ಗೋ ಪೂಜೆ ಮಾಡುವಾಗ ಗಂಡ ಹೆಂಡತಿಯಿಬ್ಬರಿಗೂ ಒಂಥರ ಟೆಂಕ್ಷನ್ನು. ಗೋವಿಂದ ಭಟ್ಟರಿಗೆ ಎಲ್ಲ ಕೆಲಸವೂ ದೇವರಿಗೆ ಸಮವಾಗಿ‌ ಆಗುಕ್ಕು.

ಮಕ್ಕಳು ” ಎಲ್ಲಾ ಇಪ್ಪತ್ತೈದು ಮೂವತ್ತು ಹಸುಗಳಿಗೂ ಪಚ್ಚೆತನೆ ಚೆಂಡು ಹೂವಿನ ಹಾರ ಯಾತಕ್ಕೆ…? ಒಂದು ಕಡೆಯಿಂದ ಹಸುಗಳ ಕುತ್ತಿಗೆಗೆ ಹಾರ ಕಟ್ಟಿ ಮತ್ತೊಂದು ಕಡೆ ಬರೋದರೊಳಗೆ ಒಂದರು ಕುತ್ತಿಗೆ ಹಾರ ನ ಇನ್ನೊಂದು ಹಸುಗಳು ತಿಂಥಾವೆ.‌..
ಪೂಜೆ ಮಾಡೋ ತಾಯಿ ಮಗಳಿಗೆ ಮಾತ್ರ ಹಾರ ಮಾಡಿ ಅಲಂಕಾರ ಮಾಡಿರ ಸಾಕಲ…? ” ಎಂದರೆ … ಭಟ್ಟರು ಈ ಮಾತನ್ನು ಬಿಲ್ ಕುಲ್ ಒಪ್ತಿರಲಿಲ್ಲ. ಇವತ್ತು ಗೋ ಹಬ್ಬ.

Advertisement

ಅವು ತಿಂಥಾವೋ ಇಟ್ಟಕಂತಾವೋ ಗೊತ್ತಿಲ್ಲ.. ಅವುಗಳ ಕುತ್ತಿಗೆಲೆ ಹಾರ ಇರಲೇ ಬೇಕು … ಎಂದು ಕಟ್ಟಪ್ಪಣೆ ಮಾಡಿ ಎಲ್ಲಾ ಹಸುಗಳಿಗೂ ಹಾರ ಮಾಡಿಸಿ ಎಲ್ಲಾ ಹಸುಗಳಿಗೂ ಹಾರ ಕಟ್ಟಿಸುತ್ತಿದ್ದರು.ಬಹುತೇಕ ಹಸುಗಳ ಹಾರ ಗೋಪೂಜೆ ಮುಗಿಯೋದರೊಳಗೆ ತಿಂದು ಖಾಲಿ ಯಾದರೂ ಕೋಡು ಚೂಪ ಇರೋ ಕೆಲ “ಅಗ್ರಸೀವ್ ಹಸುಗಳ” ಹಾರ ಎರಡು ದಿನ‌ ಉಳಿಯೋದಿತ್ತು.

ಅದು, ಕುಂಬ್ರಿಗುಡ್ಡ ಗೋವಿಂದ ಭಟ್ಟ ಮತ್ತು ಗಂಗಮ್ಮ ಗೋವಿಂದ ಭಟ್ಟರು ಎಂಬ ಶ್ರಮಿಕ ಕೃಷಿಕನ ಮನೆಯದು.
ಗೋವಿಂದ ಭಟ್ಟರಿಗೆ ಎರಡು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗ. ಗೋವಿಂದ ಭಟ್ಟರ ಅಪ್ಪಯ್ಯ ಸುಬ್ರಾಯ ಭಟ್ಟರು ಈ ಕುಂಬ್ರಿಗುಡ್ಡದ ಒಂದೂವರೆ ಎಕರೆ ತೋಟದ ತಲೆಲಿ‌ ಒಂದು ಆಶ್ರಯ ಮನೆಯಾಕಾರದ ಮನೆ ಕಟ್ಟಿ ಗೋವಿಂದ ಭಟ್ಟರ ಕುಟುಂಬನ ತಂದು ಹಾಕಿದ್ದರು.

Advertisement

ಇದು ಬಹುತೇಕ ಮಲೆನಾಡಿಗರ ಕೃಷಿ ಮೂಲದ ಕಥೆ.

ಗೋವಿಂದ ಭಟ್ಟರು ಗಂಗಮ್ಮ ಈ ಕಂದಕದಲ್ಲಿ ಗೆಯ್ದು ಒಂದೂವರೆ ಎಕರೆ ಅಡಿಕೆ ತೋಟಾನ್ನ ನಾಲ್ಕು ಎಕರೆ ಗೆ ಏರಿಸಿ ಹತ್ತು ಕ್ವಿಂಟಾಲ್ ನ ಅಡಿಕೆ ಉತ್ಪತ್ತಿನ ನಲವತ್ತು ಕ್ವಿಂಟಾಲ್ ಅಡಿಕೆ ಉತ್ಪತ್ತಿಗೇರಿಸಿ‌ ಸಾಧನೆ ಮಾಡಿದ್ದರು. ಮೂರೂ ಮಕ್ಕಳನ್ನು ಅತ್ಯಂತ ಜವಾಬ್ದಾರಿ ಯುತವಾಗಿ ಈ ಕಾನು ಮುಲ್ಲೆಯಲ್ಲಿ ಇಟ್ಟುಕೊಂಡು ಅವುಗಳ ವಿಧ್ಯಾಭ್ಯಾಸ ಹಾಳಾಗಬಾರದು ಅಂತ ಪೇಟೆಯಲ್ಲಿ ಒಂದು ರೂಮ್ ಮಾಡಿ ಕೊಟ್ಟು , ಮಕ್ಕಳಿಗೆ ಅಡಿಗೆ ಊಟಕ್ಕೆ ವ್ಯವಸ್ಥೆ ಮಾಡಿ ವಿಧ್ಯಾಭ್ಯಾಸ ಮಾಡಿಸುತ್ತಿದ್ದರು.

Advertisement

ಮಕ್ಕಳು ಪೇಟೆಯಿಂದ ಹಬ್ಬ ಹರಿದಿನಕ್ಕಷ್ಟೇ ಕುಂಬ್ರಿಗುಡ್ಡ ಊರಿಗೆ ಅಪ್ಪ ಅಮ್ಮ ನ ಸಾಮೀಪ್ಯಕ್ಕೆ ಬರುತ್ತಿದ್ದದ್ದು.
ಎಲ್ಲಾ ತಂದೆ ತಾಯಿಗಳಂತೆ ಗೋವಿಂದ ಭಟ್ಟ ಗಂಡ ಹೆಂಡತಿಗೂ ತಮ್ಮ ಮಕ್ಕಳ ಬಗ್ಗೆ ಅತೀವ ಪ್ರೀತಿ ಇದ್ದರೂ ” ಈ ಮೂಲೆ ಯಲ್ಲಿ ಉಳಿದು” ಮಕ್ಕಳ ವಿಧ್ಯಾಭ್ಯಾಸ ಹಾಳಾಗಬಾರದು ಎಂಬ ಕಾರಣಕ್ಕೆ ಮಕ್ಕಳ ಬಾಲ್ಯ ಆಟೋಟ ಮುಗ್ದತೆ ಯನ್ನು ತಾವು ಅನುಭವಿಸುವ ಅನುಭೂತಿ ಯನ್ನು ತ್ಯಾಗ ಮಾಡಿದ್ದರು.

ಹೀಗಾದ ಮೇಲೆ ಗೋವಿಂದ ಭಟ್ಟ ಗಂಡ ಹೆಂಡತಿ ಗೆ “ಗೋವುಗಳೇ ಮಕ್ಕಳಾದವು”. ಹಳ್ಳಿ ಮನೆ ಆಗಿನ್ನೂ ಟಿವಿ‌ ಫೋನು‌ ಮೊಬೈಲ್ ಇಲ್ಲದ ಕಾಲ. ಮನೆಯವರಿಗೆ ಹೊತ್ತು ಹೋಗಲು ಈ ಕೊಟ್ಟಿಗೆ ಜಾನುವಾರುಗಳ ಆರೈಕೆ ಕೃಷಿಯೇ ಮನೋರಂಜನೆಯಾಗಿತ್ತು. ಇದರ ಜೊತೆಗೆ ಆಗಿನ ಕಾಲದಲ್ಲಿ ಹೆಚ್ಚಿನ‌ ಎಲ್ರ ಮನೇಲೂ ಈ ಜಾನುವಾರು ಮನೆ ಕೆಲಸ ಮಾಡಿ ಬಡ್ಡು ಬಳಿಯೋಕೆ ಸಂಬಳ ವಿಲ್ಲದೇ ದುಡಿಯೋ ಜನ‌ ಸಿಗ್ತಿದ್ದರು‌ . ಮುಟ್ಟು, ಬಸರು , ಬಾಣಂತನ ವಿಶೇಷಗಟ್ಟಲೇಲಿ ” ಲಿಮಿಟ್ ಇಲ್ಲದೇ ನಿರೀಕ್ಷೆ ಇಲ್ಲದೇ” ದುಡಿಯೋಕೆ ” ಅಮಣತ್ತೆ ತಂಗತ್ತೆಯಂತಹ ” ನತದೃಷ್ಟ ತಲೆ ಬೋಳಿಸಿದ ವಿಧವೆಯರು ತಯಾರಿರು ತ್ತಿದ್ದರು.

Advertisement

ಇದೆಲ್ಲಾ ಕಾಲ ಕಳೆದು ಮಲೆನಾಡಿನ ಗುಡ್ಡ ಬೆಟ್ಟ ಖಾಲಿ ಜಾಗಗಳೆಲ್ಲಾ ಒತ್ತುವರಿ ಯಾಗಿ ಮನೆಯೊಳಗೂ ಜನ ಕಾಲಿಯಾಗಿ
ಬಡ್ಡು ಬಳಿಯೋ ಜನಗಳು ಮಣ್ಣು ಸೇರಿ ಬೂದಿಯಾದ ಮೇಲೆ ನಿಧಾನವಾಗಿ ಕೊಟ್ಟಿಗೆಯೂ ಖಾಲಿಯಾಗುತ್ತಾ ಸಣ್ಣ ವಾಗುತ್ತಾ ಹೋಯಿತು.

ಇದು ಮಲೆನಾಡಿನ ಪ್ರತಿ ಮನೆಯ ಸಂಗತಿ. ಹಾಗೆಯೇ ಗೋವಿಂದ ಭಟ್ಟರ ಮನೆಯ ಕಥೆ ಕೂಡ..

Advertisement

ಮೊದಲು “ಗಂಡು ಮಗ” ಮನೆಗೆ ಅಂತಿದ್ದರೆ ಈಗ ಹೆಣ್ಣು ಗಂಡು ಶಿಕ್ಷಣ ಪಡೆದ ಮೇಲೆ ಚೆನ್ನಾಗಿ ಓದಿ ವಿಧ್ಯಾಭ್ಯಾಸ ಮಾಡಿದ ಎಲ್ಲಾ ಮಕ್ಕಳೂ “ಪೇಟೇಗೇ…” ಈಗ ಹತ್ತು ಎಕರೆಯವರ ಮನೇಲೂ ಮುಂದಿನ ತಲೆಮಾರಿಗೆ ಕೃಷಿ ಮಾಡಿಕೊಂಡು ಹೋಗಲು ಮಕ್ಕಳು ಇಲ್ಲ.ಒಂದು ಎಕರೆ ತೋಟದವರ ಮನೇಲೂ ಮುಂದಿನ ಪೀಳಿಗೆಯಿಲ್ಲ….!!

ಈಗ ಹಳ್ಳಿಯ ಯಾರ ಮನೆ ಬಾಗಿಲು ಕದ ತಟ್ಟಿ‌ “ಹೋಯ್ ಯಾರಾದರೂ ಇದೀರ ?”
ಎಂದರೆ ಮನೆ ಬಾಗಿಲು ತೆರದು ಹೊರ ಬರೋರು “ಐವತ್ತು ವರ್ಷ ವಯಸ್ಸಿನ ಮೇಲಿನವರೇ…”..
ಯುವಕರು ಊರಿಗೆ ಬರೋದು ವಿಶೇಷ ದಿನಗಳಲ್ಲಿ ಮಾತ್ರ.

Advertisement

ಗೋವಿಂದ ಭಟ್ಟರ ಮಕ್ಕಳೂ ಪೇಟೇಲಿ ಮನೆ ಮಠ ಕಟ್ಟಿಕೊಂಡರು. ಹೀಗಿರುವಾಗ ಮೂರೂ ಮಕ್ಕಳ ಬಸರು ಬಾಣಂತನ‌ ಅಂತ ಗಂಗಮ್ಮ ಬೆಂಗಳೂರು ಮನೆ ಓಡಾಡೋದೇ ಮಾಡಿದರು.‌ ಯಾವಾಗ ‌ನೋಡಿದರೂ ಮನೇಲಿ ಒಂಟಿ ಪಿಶಾಚಿ ತರ ಗೋವಿಂದ ಭಟ್ಟರು ಕೈ ಸುಟ್ಟುಕೊಂಡು ಅನ್ನ ಮಾಡಿಕೊಂಡ ತಿನ್ನುವ ಪರಿಸ್ಥಿತಿ ಬಂತು. ಗೋವಿಂದ ಭಟ್ಟರು ಮನೆಯೊಳಗಿನ‌ ಕೆಲಸ ನೊಡಕಣದ ? ಕೊಟ್ಟಿಗೆ ಕೆಲಸ ಮಾಡಕಣದ…?

ಮನೆಯಲ್ಲಿ ಹೆಂಗಸರು ಕೊಟ್ಟಿಗೆ ಯಿಂದ ಹೊರ ಕಾಲಿಟ್ಟ ಕ್ಷಣದಿಂದ ಕೊಟ್ಟಿಗೆಯೊಳ ಗೆ ಜಾನುವಾರಗಳ ಅವನತಿ‌ ಆರಂಭ ವಾಯಿತು. ಎಲ್ಲರ ಮನೆಯಲ್ಲೂ ಇದೇ ಕಾರಣಕ್ಕೆ ಗಿಡ್ಡ ತಳಿ ಜಾನುವಾರುಗಳ ವಿನಾಶಕ್ಕೆ ಮೊದಲ ಕಾರಣ.
ನಂತರ ಹೆಚ್ಚು ಹಾಲು ಕೊಡೋ ಜೆರ್ಸಿ‌ ಜಾನುವಾರುಗಳು ಇನ್ನಿತರ ಕಾರಣ .

Advertisement

ಇದೆಲ್ಲಾ ಆಗಿ ಇಪ್ಪತ್ತು ವರ್ಷವಾಯಿತು. ಈಗ ಗಂಗಮ್ಮ ನಿಗೆ ಸೊಂಟ ನೋವು ಕೈಕಾಲು ಬಲ ಇಲ್ಲ. ಇದರ ಜೊತೆಗೆ ಮಂಡಿ ಸಮತ (ಸವೆತ) ಶುರು ವಾಗಿದೆ. ಹತ್ತು ಹೆಜ್ಜೆ ನೆಡಿಯುಕಾರೂ ವಾಕರ್ ಬೇಕು. ಈಗ ಮೊದಲಿನಂತೆ ಬೆಂಗಳೂರಿನ ಮಕ್ಕಳ ಮನೇಗೂ ಗಂಗಮ್ಮ ಹೋಗುದಲ. ಹದಿನೈದು ವರ್ಷಗಳ ಹಿಂದೆ ಗಂಗಮ್ಮ ಮನೇಲಿ ಇದ್ದಾಗ ವಯಸು ಹುಡುಗರ ನಮೂನೆಯಲ್ಲಿ ಫೋನಿನಲ್ಲೇ ಇರ್ತಿದ್ದರು.

ಈಗ ಅತ್ತ ಕಡೆಯಿಂದಲೂ ಫೋನ್ ಬರದು ಕಮ್ಮಿ ಆಗಿದೆ. ಕಾರಣ “ಅಮ್ಮ ನಿಗೆ ಕೂಡುದಲ” . ಗಂಗಮ್ಮನಿಗೆ ಈಗ ಗಂಡ ಎಂದರೆ ಪ್ರಾಣ ಎನಿಸುತ್ತಿದೆ. ಆಗ ಮಕ್ಕಳು ಕರದಾಗಲೆಲ್ಲಾ ಕೈ ಹಿಡಿದ ಗಂಡನ ಬಗ್ಗೆ ಒಂದು ಕ್ಷಣವೂ ಯೋಚಿಸದೇ ಮಕ್ಕಳ ಮನೆಗೆ ಓಡ್ತಿದ್ದರು. ಆದರೆ ಈ ಇಳಿ ಹೊತ್ತಿನಲ್ಲಿ ಕೂತು “ತಾನು ಆಗ ಮಕ್ಕಳ ಮನೆಗೆ ಇವರನ್ನು ಬಿಟ್ಟು ಬಿಟ್ಟು ಹೋಗಬಾರದಿತ್ತು ” ಅನಿಸುತ್ತಿದೆ.

Advertisement

ಗಂಗಮ್ಮ ಹತ್ತು ಹದಿನೈದು ವರ್ಷಗಳ ಕಾಲ ಸತತ ಗಂಡ ಗೋವಿಂದ ಭಟ್ಟರನ್ನ ಬಿಟ್ಟು ಮಕ್ಕಳ ಬೆಂಗಳೂರು ಮನೆಗೆ ಹೋಗಿ ಹೋಗಿ ಗೋವಿಂದ ಭಟ್ಟರಿಗೆ ಹೆಂಡತಿ ಇದ್ದೂ ಒಂಥರ “ವಿಧುರತನ” ಅಭ್ಯಾಸ ವಾಗಿ ಮೌನಿಯಾಗಿದ್ದಾರೆ. ಗೋವಿಂದ ಭಟ್ಟರಿಗೆ ಈಗ ಹೆಂಡತಿ ಬೇಕೇ ಬೇಕು ಅಂತ ಅನ್ನಿಸುತ್ತಿಲ್ಲ.

ಕೊನೆಗಾಲದಲ್ಲಿ ಮಕ್ಕಳು ನಮ್ಮ ನೋಡಿ ಕೊಳ್ಳೋಕೆ ಬೇಕು ಎಂಬ ಮತ್ತು ಮಕ್ಕಳು ಕಡೆ ಕಾಲದಲ್ಲಿ ನಮ್ಮ ನೋಡಿಕೊಳ್ತಾರೆ …
ಎಂಬಾಸೆಗೆ ಗಂಗಮ್ಮ ಬೆಂಗಳೂರು ಮನೆ ಓಡಾಡಿದರು. ದುರಂತ ಎಂದರೆ ಈಗ ಮಕ್ಕಳಿಗೆ ತಾಯಿ ಯ ಅವಶ್ಯಕತೆ ಮುಗಿ ದಿದೆ…!! ಇನ್ನು ಬೆಂಗಳೂರಿಗೆ ಅಮ್ಮ ನ ಕರೆದು ಮಾಡಿದರೆ “ಅಮ್ಮನ್ನೇ ನಾವೇ ನೋಡಬೇಕು..” ಎಂಬ ಕಾಲ ಬಂದ ಈ ಸಮಯದಲ್ಲಿ ನಿಧಾನವಾಗಿ ಅಮ್ಮ ನನ್ನು ಬುದ್ದಿವಂತ ಮಕ್ಕಳು ದೂರ ಮಾಡ್ತಾ ಬಂದರು.

Advertisement

ಈಗ ಸಿದ್ದಾಂತ ಬದಲಾಗಿದೆ… “ಮಕ್ಕಳು ನಮಗೆ ಬೇಕಂತಾದರೆ ನಾವು ಮಕ್ಕಳ ಮನೆಗೆ ಓಡಾಡಬೇಕು ” ಎಂಬ ಮಾತು ಗಂಗಮ್ಮನ ನಂಬಿಕೆ ಸುಳ್ಳಾಗಿದೆ. ಗಂಗಮ್ಮನ ದೂರ ದೃಷ್ಟಿ ವಿಫಲವಾಗಿದೆ‌.

ಗಂಗಮ್ಮ ಈ ವರ್ಷ ದ ದೀಪಾವಳಿಯ ಗೋ ಪೂಜೆಯ ಸಂಧರ್ಭದಲ್ಲಿ ಈ ಕಹಿ ನೆನಪು ಮಾಡಿಕೊಳ್ತಾ ಗೋಪೂಜೆ ಮಾಡ್ತಿದ್ದಾರೆ.
ಗೋವಿಂದ ಭಟ್ಟರಿಗೆ ಹೆಂಡತಿ ಗಂಗಮ್ಮ “ರೀ ದನಿನ ಜೊತೆಗೆ ಕರೀಗೂ ಒಂಚೂ ನೀರು ಹಾಕಿ ತೊಳಿರಿ… ರೀ ಕರೀಗೂ ದನಿಗೂ ಸೇರಿಸಿ ಹಾರ ಹಾಕಿ… ಅಂತ ಗಂಡನಿಗೆ ಹೆಂಡತಿ ಪೂಜೆಯ ಅದ್ವೈರ್ಯ ಮಾಡತೊಡಗಿದರು.

Advertisement

ಗೋವಿಂದ ಭಟ್ಟರು ಗಂಡ ಹೆಂಡತಿ ಕಳೆದ ಹತ್ತು ವರ್ಷದಿಂದ ಖಾಲಿ ಕೊಟ್ಟಿಗೆಲಿ ಒಂದು ಬೆಳ್ಳಿ ಗೋವಿನ ಮೂರ್ತಿ ಇಟ್ಟುಕೊಂಡು ನಿಜವಾದ ಗೋವಿಗೆ ಪೂಜೆ ಮಾಡಿದಂತೆ ಗೋಪೂಜೆ ಮಾಡ್ತಿದ್ದಾರೆ.

ಹೌದು, ಇದು ಈ ವರ್ಷದ ದೀಪಾವಳಿಯ ಗೋ ಪೂಜೆಯದ್ದು. ಇದೀಗ ಒಂದು ಕಾಲದಲ್ಲಿ ತುಂಬಿ ತುಳುಕುತ್ತಿದ್ದ ಕೊಟ್ಟಿಗೆ ಇಂದು ಖಾಲಿ ಖಾಲಿ.

Advertisement

ಗೋವಿಂದ ಭಟ್ಟರು ಗೋಪೂಜೆ ಮುಗಿಸಿ ಒಂದು ಸತಿ ಕೊಟ್ಟಿಗೆಯ ಉಣಗೋಲು ತನಕ ಬಂದು ಗೊಬ್ಬರದ ಗುಂಡಿ ಪಕ್ಕದ ಗ ತುಂಗೆ ದಾಸಿ ಬೆಳ್ಳಿ ಹಂಡ ಇತರ ಹಸುಗಳ ಗೋ ಬೀದಿಯನ್ನ ಕಣ್ತುಂಬಾ ನೋಡಿದರು. ಇನ್ನು ಯಾವ ಕಾಲಕ್ಕೂ ಈ ಜಾನುವಾರು ಹೋಗೋ ದಾರಿಲಿ ಜಾನುವಾರುಗಳು ಸಂಚರೋಸೋಲ್ಲ. ಈ ಕೊಟ್ಟಿಗೆಲಿ ಹಾಲು ಕರೆಯೋಲ್ಲ, ಹುಲ್ಲು ಹಾಕೋಲ್ಲ…!!
ಯಾಕೋ ಭಟ್ಟರಿಗೆ ಹೃದಯ ಭಾರವಾಯಿತು.

ಖಾಲಿ ಕೊಟ್ಟಿಗೆಯಲ್ಲಿ ಗೋವಿಂದ ಭಟ್ಟರು ಗಂಡ ಹೆಂಡತಿ ಬೆಳ್ಳಿ ಗೋವಿಗೆ ಗೋಪೂಜೆ ಮಾಡುವ ಯಾಂತ್ರಿಕತೆ ಪೂಜೆ ಇದು.
ಕೊರೋನ ಪೂರ್ವ ದ ತನಕವೂ ಮಗ ಸೊಸೆ ದೀಪಾವಳಿ ಹಬ್ಬಕ್ಕೆ ವರ್ಷ ವರ್ಷವೂ ಮನೆಗೆ ಬರುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಮಗ ಸೊಸೆ ಹಳ್ಳಿ ಮನೆಗೆ ಬರೋದು ಕಮ್ಮಿಯಾಗಿದೆ.

Advertisement

ಈ ಹಳ್ಳಿ ಮೂಲೆಯ ಈ ಮನೆಯಲ್ಲಿ ವೃದ್ಧ ದಂಪತಿಗಳ ದೀಪಾವಳಿ ಪ್ರಯುಕ್ತದ ಪೂಜೆ ಮುಂದೆ ಸಾಗಿದೆ.

ಮನೆಯ ಬತ್ತದ ಪಣತ ಕಾಲಿಯೀಗ . ಆದರೂ ಅದಕ್ಕೆ ಪೂಜೆ ; ನೇಗಿಲಿನಲ್ಲಿ ಹೂಡಿ ಗದ್ದೆ ಮಾಡದೇ ಮೂವತ್ತು ವರ್ಷಗಳೇ ಆಗಿದೆ. ಆದರೂ ನೇಗಿಲು , ನೊಗ ಕ್ಕೆ ಪೂಜೆ ; ಅಡಿಕೆ ಸುಲಿಯುವ ಯಂತ್ರ ಬಂದರೂ ಅಡಿಕೆ ಮೆಟ್ಟುಗತ್ತಿ , ಅಡಿಕೆ ಮನೆಯಲ್ಲಿ ಸುಲಿದು ಬೇಸಿ ಒಣಗಿಸುವುದು ನಿಲ್ಲಿಸಿ ಯಾವುದೋ ಕಾಲವಾದರೂ ಅಡಿಕೆ ತೋಡುವ ವಂಕ,  ಅಡಿಕೆ ಹಂಡೆ ಗೆ ಪೂಜೆ ;, ಕತ್ತಿ ಕೊಡಲಿ ಗರಗಸ ಮುಟ್ಟುವರೇ ಇಲ್ಲದ ಕಾಲದಲ್ಲಿ ಅದಕ್ಕೂ ಪೂಜೆ ; ತುಳಸಿ ಕಟ್ಟೆಯ ಪೂಜೆ…

Advertisement

ಹೀಗೆ, ಎಲ್ಲಾ ಪೂಜೆ ಮುಗಿಸಿ ಭಟ್ಟರು ಮುಂಚೆ ಕಡೆಗೆ ಬಂದು ತಮ್ಮ ಯಜಮಾನಿಕೆ ಖುರ್ಚಿಲಿ ಕೂತು ಹೊರಗಿನ‌ ಅಂಗಳಾನ ನೋಡಿದರು. ಮನೆ ಕಾಯಂ ಕೆಲಸದಾಳು “ಈರ”ಕಿಟಕಿ ಕಂಡಿಲಿ ನಿಂತು “ಅಯ್ಯಾ ಹಬ್ಬ ಮಾಡಬಕು ಉಂದು ನೂರು ರೂಪಾಯು ಕೊಡಿ ಅಯ್ಯ …” ಎಂದು ದೈನ್ಯವಾಗಿ ಕೇಳುತ್ತಾ ನಿಂತಂತೆ ಕಾಣಿಸಿತು.

ಆದರೆ ಈಗ ಕಾಲ ಬದಲಾಗಿದೆ… ಮೊನ್ನೆ ಮೊನ್ನೆ ಮನೆಯಂಗಳದಲ್ಲಿ ಅಡಿಕೆ ಸುಲಿಯಲು ಬರುತ್ತಿದ್ದ ಈರ ನ ಮಗ ಮಂಜು ಗೋವಿಂದ ಭಟ್ಟರು ಪೇಟೆಗೆ ಹೋಗಲು ನೆಡಕೊಂಡು ಊರ ಬಸ್ ನಿಲ್ದಾಣ ಕ್ಕೆ ಹೋಗುವಾಗ ಐಷಾರಾಮಿ ಕಾರಿನಲ್ಲಿ ಬಂದು ಭಟ್ಟರ ನೋಡಿ ಕಾರಿನ ಹಾರ್ನ್ ನ್ನ “ಪ್ಯಾಂಕ್ ” ಎನ್ನಿಸಿ “ಭಟ್ಟರೆ ನೀವೇನು ಮಹಾ …?” ಎಂಬಂತೆ ಭಟ್ಟರ ಕಡೆ ಓರೆ ಗಣ್ಣಿನಲ್ಲಿ ನೋಡಿ ಮುಂದೆ ಸಾಗಿದ್ದ….!!

Advertisement

ಈಗ ಯಾವ ವಿಚಾರದಲ್ಲೂ ಮೊದಲಿನ ರೀತಿಯಲ್ಲಿ ಇಲ್ಲ…!! ಹಿಂದಿನವರೇ ಹಿಂದುಳಿದು ಎಲ್ಲಾ ವಿಚಾರವನ್ನೂ ಇಂದಿಗೂ ಹಿಂದಿಗೂ ಹೋಲಿಕೆ ಮಾಡಿಕೊಳ್ಳುತ್ತಾ ಕೊರಗುತ್ತಾ ಇರುತ್ತಾರೆ.

ಭಟ್ಟರು ಕುರ್ಚಿಯಲ್ಲೇ ಕೂತು ಅಂಗಳ ದ ಚಪ್ಪರದ ಕಂಬ ನೋಡಿದರು. ಒಂದು ಕಾಲದಲ್ಲಿ ಇದೇ ಅಂಗಳದ ತುಂಬಾ ಅಡಿಕೆ ಸುಲ್ತಾ ಅಡಿಕೆ ಕೊಯಿಲಿನ ಕಲರವ ನೆಡೆದ ದಿನಗಳು ಕಾಡಿದವು. ಅಡಿಕೆ ಸುಲಿಯುವವರಿಗೆ ದಿನಾ ರಾತ್ರಿ ಚರ್ಪು ಟೀ ಜೊತೆಗೆ ಅಡಿಕೆ ಸುಲಿಯುವ ವರಿಗೆ ಮನೋರಂಜನೆಗೆ ಟೇಪ್ ರೆಕಾರ್ಡರ್ ಕ್ಯಾಸೆಟ್, ನಂತರ ಟಿವಿ ವಿಸಿಪಿ ಸಿನಿಮಾ ಗಳು ಅದೂ ಮುಗಿದು ಅಡಿಕೆ ಸುಲಿತದ ಯಂತ್ರ ವೂ ಬಂದೂ ಈಗ ಅದನ್ನೂ ಮಾಡಲಾಗದೇ ಅಡಿಕೆ ಚೇಣಿ ಗುತ್ತಿಗೆ ಕೊಡುವ ಕಾಲ ಬಂದಿದೆ.
ಆದರೆ ಅಡಿಕೆ ಚಪ್ಪರದ ಕೆಳಗೆ ನೆಡೆದಿದ್ದ ಅಡಿಕೆ ಕೆಲಸಗಳ ಜೊತೆಗೆ ಮಕ್ಕಳ ಮದುವೆ ನಿಶ್ಚಿತಾರ್ಥ, ಮಗನ ಮದುವೆ ಯ ಮನೆಯೂಟ ಆ ಸಂಬ್ರಮ ಸಡಗರ ಎಲ್ಲ ಜ್ಞಾಪಕ ಕ್ಕೆ ಬಂದಿತು.

Advertisement

ಹೀಗೆ ಭಟ್ಟರು ಗತ ಕಾಲಕ್ಕೆ ಸರಿದಿದ್ದಾಗ ಕ ಗಂಗಮ್ಮ ವಾಕರ್ ಶಬ್ದ ಮಾಡುತ್ತಾ ಕುದುರೆ ಬಂದಂತೆ ಬಂದು ಭಟ್ಟರ ಖುರ್ಚಿ ಪಕ್ಕ ಬಂದು ನಿಂತರು.

ಭಟ್ಟರು ಕ್ಷೀಣವಾಗಿ “ಗಂಗಾ ನಾನೊಂದು ತೀರ್ಮಾನಕ್ಕೆ ಬಂದಿರುವೆ.. ನೀನೂ ನನ್ನ ತೀರ್ಮಾನಕ್ಕೆ ಒಪ್ಪಬಹುದು ಇಲ್ಲ ನಿನ್ನಿಚ್ಚೆ… ” ಎಂದರು. ಗಂಗಮ್ಮ – ಅಯ್ಯೋ ರೀ ನಿಮ್ಮ ಬಿಟ್ಟು‌ ನಾನೆಲ್ಲಿಗೆ ಹೋಗಲಿ..? ಭಟ್ಟರು-ನಾವು ಹಬ್ಬದ ಬೆಳಿಗ್ಗೆ ಶೃಂಗೇರಿ ಯ ವೃದ್ದಾಶ್ರಮಕ್ಕೆ ಹೋಗೋಣವಾ…? ಗಂಗಾ..‌

Advertisement

ನೋಡು ನಾವು ಐವತ್ತು ವರ್ಷಗಳ ಹಿಂದೆ ಇದೇ ಮನೆಯಲ್ಲಿ ಸಂಸಾರ ಹೂಡಿದಾಗ ಈ ಮನೆ ಒಂದು ಚಿಕ್ಕ ಕುಟೀರವಾಗಿತ್ತು.‌
ನಾವಿಬ್ಬರೂ ಹೊಡದ್ ಬಡದ್ ಕೆಲಸ ಮಾಡಿ ತೋಟ ಮನೆ ಅಂಗಳ ಬಾಗಿಲು ಮಾಡಿ ಮಕ್ಕಳು ಮರಿನ ಓದಿಸಿ ಮದುವೆ ಮಾಡಿ ಈ ಹಂತಕ್ಕೆ ಬಂದಿದೀವಿ.

ಸೊನ್ನೆಯಿಂದ ಈ ಮಟ್ಟದ ಆಸ್ತಿ ಮನೆ ಮಾಡಿದರೂ ಈ ಆಸ್ತಿ ಊರ್ಜಿತ ಮಾಡಿ ಕೊಂಡು ಆಸ್ತಿಯಲ್ಲಿ ಉತ್ಪತ್ತಿ ಪಡೆದು “ಮುಂದೆ ಜೀವನ” ಮಾಡಿಕೊಂಡು ಹೋಗಲು ನಮ್ಮ ಮಕ್ಕಳು ಇಲ್ಲಿಗೆ ಬರೋಲ್ಲ ‌…!!!

Advertisement

ನನಗೆ ಮನೆ ಅಂಗಳದ ತಗ್ಗಿಳಿದು ತ್ವಾಟಕ್ಕೆ ಒಂದು ರೌಂಡ್ ಹಾಕಿಬರುವ ಚೈತನ್ಯವೂ ಇಲ್ಲ ಉಮೇದವೂ ಇಲ್ಲ.. .. ಕೆಲಸದವರು ಮಾಡಿದ್ದು ಬಿಟ್ಟಿದ್ದೂ.. ತ್ವಾಟ ಮೊದಲಿ ನಂತಿಲ್ಲ. ನಂಗೆ ತ್ವಾಟದ ಮೇಲಿನ‌ ಪ್ರೀತಿ ಕಳೆದು ಹೋಗಿದೆ..‌ ಮಕ್ಕಳಂತೆ ಪ್ರೀತಿಸು ತ್ತಿದ್ದ ನಮ್ಮ ಮನೆಯ ಗೋ ಸಂಪತ್ತನ್ನ ಈ “ಕೃತಘ್ನ ಮಕ್ಕಳಿಗಾಗಿ” ಯಾರಿ ಗೋ ದಾಟಿಸಬೇಕಾಯಿತು. ಆ ಮುಗ್ದ ಹಸು ತುಂಗೆ ಯನ್ನು ಕೊಂಡೊಯ್ಯುವವರು ವ್ಯಾನ್ ಗೆ ಹತ್ತಿಸುವಾಗ ಆ ಹಸು ನನ್ನ ನೋಡಿ ಕಣ್ಣೀರು ಹಾಕಿದ ಚಿತ್ರ ನನ್ನ ಕಣ್ಣಿನ ಪಾಪೆಯ ಮೇಲೆ ಅಚ್ಚೊತ್ತಿ ಕೂತಿದೆ. ನಮಗೆ ಮಕ್ಕಳೂ ಇಲ್ಲ.. ‌ನಮಗೆ ನಮ್ಮ ಮಕ್ಕಳ ಹಾಗೆ ವಂಚಿಸದೇ ಪ್ರೀತಿ ಕೊಡು ತ್ತಿದ್ದ ಗೋವುಗಳೂ ಇಲ್ಲ….
ಈಗ ನಾವು ಅಡಿಕೆ ಕೊಯ್ಲು ಮಾಡೋಕೆ ಆಗೋಲ್ಲ…, ಜಾನುವಾರು ಕಟ್ಟಲ್ಲ, ‌ಮತ್ತೆ ನಾವು ಇಲ್ಲಿ ಈಗ ಯಾವ ಕಾರಣಕ್ಕೆ ಯಾರಿಗಾಗಿ ಇಲ್ಲಿರಬೇಕು…? ನಿಜಕ್ಕೂ ನಮ್ಮ ಮನೆಯ “ಕೆಲಸದಾಳು ಪದ್ದು” ಗಾಗಿ ಇಲ್ಲಿ ನಾವಿರೋದಾ..? ಪದ್ದು ಒಬ್ಬಳು ದಿನಾ ನಮ್ಮ ಮನೆಗೆ ಬರದಿದ್ದರೆ ನಾವು ಸತ್ತು ಹೋದರೆ ಊರಿಗೆ ವಾಸನೆ ಬಂದೇ ಗೊತ್ತಾಗಬೇಕಿತ್ತೇನೋ…!! ಪಾಪ… ಅವಳೊಬ್ಬಳು ಜಾತಿಯ ಆಚೆಯೂ ನಿರಪೇಕ್ಷಿತ ಪ್ರಾಮಾಣಿಕ ಪ್ರೀತಿ ತೋರಿಸುವ ಬಂಧು…!! ಆದರೆ ಮೊನ್ನೆ ಪದ್ದು ನನ್ನ ಬಳಿ “ಅಯ್ಯಾ ನಂಗೂ ಮನೆಯಿಂದ ಇಲ್ಲಿತಂಕ ಬರೋಕೆ ಕೂಡದಲ ಅಯ್ಯ.. ನೀವು ಮನೆಗೆ ದಿನಾಳು ಬೇರೆ ಯಾರನ್ನಾದರೂ ಮಾಡಕಳಿ ” ಎಂದಳು.‌ ಆದರೆ ಪದ್ದು ತರಹ ನಂಬಿಗೆ ಜವಾಬ್ದಾರಿ ಯ ಮತ್ತೊಬ್ಬ ಆಳು ನಮಗೆ ಮತ್ತೆ ಸಿಕ್ತಾರ..? ಅದೆಲ್ಲಾ ರಿಸ್ಕ್ ನಮಗೆ ಬೇಕಾ..? ನಾವು ಯಾಕೆ ಇಲ್ಲಿ “ದಿನ ದೂಡಬೇಕು…?”, ಬೆಳಿಗ್ಗೆ ಎದ್ದು ಬಚ್ಚಲಿಗೆ ಹೋಗುಕಾರೆ ಅನಾಯಾಸವಾಗಿ ನನ್ನ ಕಣ್ಣಿಗೆ ಖಾಲಿ ಕೊಟ್ಟಿಗೆ ಕಾಣಿ ಸುತ್ತದೆ…. ಕೊಟ್ಟಿಗೆಯಿಂದ ಗೌರಿ ದಾಸಿಯರು ನನ್ನ ನೀಕಿ ನೋಡಿದಂತೆ ಅನ್ನಿಸಿ ಚೂರಿ ಹಾಕಿ ಇರಿದಂತಾಗುತ್ತದೆ….
ಈ ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ ಮಕ್ಕಳ ಓಡಾಟ ಮಾಡಿದ ಜ್ಞಾಪಕ ಬರುತ್ತದೆ, ವೈದೀಕ ಪಾರಾಯಣ ಇತ್ಯಾದಿ ಗಳಲ್ಲಿ ಇಡೀ ಮನೆ ತುಂಬಾ ನೆಂಟರಿಷ್ಟರಿಗೆ ಊಟ ಹಾಕಿದ ಜ್ಞಾಪಕ ಬರುತ್ತದೆ…

ಆದರೆ ಇದ್ಯಾವ ದಿನಗಳೂ ಮತ್ತೆ ಈ ಮನೆಯಲ್ಲಿ ನೆಡೆಯಲ್ಲ.. ‌ ಇದ್ಯಾವ ಸಂಗತಿಗಳೂ ಮತ್ತೆ ಈ ಮನೆಯಲ್ಲಿ ಮತ್ತೆಂದೂ ಸಂಭವಿಸೋಲ್ಲ.. ಇಲ್ಲಿ ಕೂತಲ್ಲಿ ನಿಂತಲ್ಲಿ ಅದೇ ಜ್ಞಾಪಕ ಮರಳಿ ಮರಳಿ ಬಂದು ಮನಸು ಹೃದಯ ವನ್ನು ತಿವಿಯುತ್ತದೆ… ಈ ಜ್ಞಾಪಕ ಗಳ‌ ಸಹವಾಸವೇ ಸಾಕಾಗಿದೆ… ಈ ಮನೆಗೆ ಶಾಶ್ವತವಾಗಿ ವಿದಾಯ ಹೇಳೋಣ..‌‌.

Advertisement

ಈ ಮನೆಯ ಗತ ದಿನಗಳ ನೆನಪುಗಳು ಕಾಡದ ಜಾಗಕ್ಕೆ ಹೋಗೋಣ.‌‌ ಶೃಂಗೇರಿ ಯ ವೃದ್ದಾಶ್ರಮ ಚೆನ್ನಾಗಿದೆಯಂತೆ. ಅಲ್ಲಿ ನಮ್ಮಂಥ ಅನಾಥ ವೃದ್ದರು ಬೇಕಾದಷ್ಟು ಜನ ಇದ್ದಾರೆ. ನಮ್ಮ ಬಳಿ ಬ್ಯಾಂಕ್ ಡಿಪಾಸೆಟ್ಟು , ಬಾಂಡು ಎಲ್ಲಾ ಸೇರಿ ಎರಡು ಕೋಟಿ‌ ಯಷ್ಟು ಹಣ ಇರಬಹುದು. ಅಷ್ಟು ಹಣ ನಾವಿಬ್ಬರೂ ಇನ್ನೂ ಐವತ್ತು ವರ್ಷ ಬದುಕಿದರೂ ಸಾಕು… ನಮ್ಮ ಬಗ್ಗೆ ಪ್ರೀತಿ ಇಲ್ಲದ ಮಕ್ಕಳ ಸೇವೆಯೂ ನಮಗೆ ಬೇಡ ಅವರು ನಮಗೆ ಬೊಜ್ಜ ಮಾಡುವುದೂ ಬೇಡ…

ಈ ಆಸ್ತಿ ಮನೆನ ಮಕ್ಕಳು ಏನಾದರೂ ಮಾಡಲಿ…. ಇಲ್ಲಿದ್ದು ಪ್ರತಿ ಕ್ಷಣವೂ ಕಳೆದ ಮತ್ತೆ ಬಾರದ ದಿನಗಳ ಜ್ಞಾಪಕ ಶೂಲದ ಇರಿತದಿಂದ ಪಾರಾಗುವ ದಾರಿ ಹುಡುಕೋಣ… ಎಂದು ಮಾತು ನಿಲ್ಲಿಸಿದರು. ಗಂಗಮ್ಮ ಕಣ್ಣು ತುಂಬಿಕೊಂಡು ಸೆರಗಿನಲ್ಲಿ ಬಾಯಿ ಮುಚ್ಚಿಕೊಂಡರು.

Advertisement

ಎರಡು ದಿನ ಬಿಟ್ಟು ಹಬ್ಬ ಕಳೆದು ಶೃಂಗೇರಿ ಗೆ ಹೋಗಲು ಕಾರು ಕೃಷ್ಣಮೂರ್ತಿ ಕಾರು ಬಂದಿತು. ಅಲ್ಲಿಂದ ಗೋವಿಂದ ಭಟ್ಟರ ಕುಂಬ್ರಿಗುಡ್ಡ ಮನೆ ಯಿಂದ ಋಣಮುಕ್ತವಾಗುವ ಸಮಯದ ಕೌಂಟ್ ಡೌನ್ ಶುರುವಾಯಿತು. ಭಟ್ಟರು ಒಂದಪ ಕೊಟ್ಟಿಗೆ ಯಿಂದ ಆರಂಭಿಸಿ ಇಡೀ ಮನೇಗೆ ಕಟ್ಟ ಕಡೆಯ ರವಂಡ್ ಹಾಕಿದರು…

ಕೊನೆಗೆ ಅಂಗಳದಿಂದ ತ್ವಾಟಕ್ಕೆ ಇಳಿದು ಅಡಿಕೆ ಮರದ ತಲೆ ನೋಡಿ ತೋಟಕ್ಕೆ ಉದ್ದಂಡ ನಮಸ್ಕಾರ ಮಾಡಿ ಭಾರವಾದ ಹೃದಯದಿಂದ ಮೇಲೆ ಅಂಗಳಕ್ಕೆ ಬಂದು ಮನೆಯ ಅಭಿಮುಖ ವಾಗಿ ನಿಂತು ಮನೆಗೂ ಉದ್ದಂಡ ನಮಸ್ಕಾರ ಮಾಡಿದರು.
ಗಂಗಮ್ಮ ಗಂಡನನ್ನು ನೋಡಲಾಗದೇ ಕಣ್ಮುಚ್ಚಿದರು.

Advertisement

ಇದ್ಯಾವ ಘಟನಾವಳಿಗೂ ಸಂಬಂಧಿಸಿದ ಕಾರು ಕೃಷ್ಣಮೂರ್ತಿ ಭಟ್ಟರ ಮನೆಯ ಅಂಗಳದೊಳಗೆ ಕಾರು ತಂದು ತಿರ್ಸಿ ನಿಲ್ಲಿಸಿ‌ ಲಗೇಜನ್ನ ಕಾರಿನ‌ ಡಿಕ್ಕಿಗೆ ತುಂಬಿಸಿದ. ಭಟ್ಟರು ಕಾರು ಹತ್ತಿದ ಮೇಲೆ ಮತ್ತೆ ಮನೆ ಕಡೆ ತಿರುಗಿ ನೋಡಲಿಲ್ಲ. ಗಂಗಮ್ಮ ತಲೆ ತಗ್ಗಿಸಿದರು‌. ಕಾರು ಗೇಟು ದಾಟಿದ ಮೇಲೆ ಕೃಷ್ಣಮೂರ್ತಿ ಕಾರಿಂದಿಳಿದು ಗೇಟು ಹಾಕಿದ. ಕಾರು ಮುಂದೆ ಸಾಗತೊಡಗಿತು.

ಕಾರಿನ ಕಿಟಕಿಯಿಂದ ಭಟ್ಟರು ಸುಮಾರು ಅವರಿಗೆ ಬುದ್ದಿ ಬಂದ ಎಪ್ಪತ್ತು ವರ್ಷಗಳಿಂದ ನೋಡಿ ಓಡಾಡಿದ ಕಾನ ಹಾದಿಯನ್ನು ನೋಡಿದರು. ಹಲಸು, ಮಾವು , ಹೆಬ್ಬಲಸು ಬೋಗಿ ಇತ್ಯಾದಿ ಮರಗಳು ಭಟ್ಟರಿಗೆ ಕಡೆಯ ಬಾರಿ ಎಂಬಂತೆ ಕೈ ಮಾಡಿ ವಿದಾಯ ಹೇಳಿದಂತಾಯಿತು.

Advertisement

ಸ್ವಲ್ಪ ದೂರ ಹೋದ ಮೇಲೆ ಭಟ್ಟರೇ ತಮ್ಮ ಕೆಲಸದಾಳು ಪದ್ದು ಗೆ ಕೊಟ್ಟ ತುಂಗೆ ದನದ ಪಿಳಕ ಹಸುವೊಂದು ಕಾರನ್ನೇ ದಿಟ್ಟಿಸಿ ಕಾರಿನೊಳಗೆ ಕೂತಿದ್ದ ಗೋವಿಂದ ಭಟ್ಟರ ನ್ನೇ ಕಿರೀ ನೋಡಿ ಏನೋ ಭಟ್ಟರ ಕೇಳಿದಂತೆನಿಸಿತು. ಭಟ್ಟರು ಸಂಕಟ ತಡಿಲಾರದೇ ಹೆಂಡತಿ ಗಂಗಮ್ಮನ ಕೈ ಹಿಡಿದೆಳೆದು ಆ ಹಸುವನ್ನು ತೋರಿಸಿ ಬಿಕ್ಕಿ ಬಿಕ್ಕಿ ಅಳತೊಡಗಿದರು.

ಕಾರು ಮುಖ್ಯ ರಸ್ತೆಗೆ ಸೇರಿ ಶೃಂಗೇರಿಯತ್ತ ಸಾಗತೊಡಗಿತು. ಭಟ್ಟರು ವಾನಪ್ರಸ್ಥದ ಹೊಸ ಜೀವನಕ್ಕೆ ಅಣಿಯಾಗಲು ಮಾನಸಿಕವಾಗಿ ಸಿದ್ದ ವಾಗತೊಡಗಿದರು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಇದು ಡಿಸೆಂಬರ್ ತಿಂಗಳು ಅಷ್ಟೇ. ಇನ್ನು ಏಪ್ರಿಲ್, ಮೇ ತಿಂಗಳಲ್ಲಿ ತಾಪ, ಉರಿ ಬಿಸಿಲು ಹೇಗಿರಬಹುದು?
December 8, 2023
3:39 PM
by: The Rural Mirror ಸುದ್ದಿಜಾಲ
ಅಯೋಧ್ಯೆ ಶ್ರೀರಾಮನ ಪೌರೋಹಿತ್ಯ ಸೇವೆಗೆ ಆಯ್ಕೆಯಾದ ಸಕಲ ವೇದ ಪಾರಂಗತ “ಮೋಹಿತ್ ಪಾಂಡೆ” : ಯಾರು ಈತ..? ಎಲ್ಲಿಯ ಹುಡುಗ..?
December 8, 2023
3:18 PM
by: The Rural Mirror ಸುದ್ದಿಜಾಲ
ಮಧುಮೇಹಕ್ಕೆ ಕೇವಲ ಸಿಹಿ ತಿಂಡಿಗಳೇ ಕಾರಣವಲ್ಲ… : ಹಾಗಾದರೆ ಸಕ್ಕರೆ ಕಾಯಿಲೆ ಬರಲು ಕಾರಣವೇನು..?
December 8, 2023
3:01 PM
by: The Rural Mirror ಸುದ್ದಿಜಾಲ
ಮುಳಿಯ ಜ್ಯುವೆಲ್ಸ್‌ ಸಂಸ್ಥಾಪಕರ ದಿನಾಚರಣೆ | ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ 78 ವರ್ಷ |
December 8, 2023
2:41 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror