ರಾಜ್ಯದ್ಯಾಂತ ಕಳೆದ ಏಳು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ ರೈತರಿಗೆ ಪ್ರತಿ ಟನ್ ಕಬ್ಬಿಗೆ 3300 ರೂಪಾಯಿ ನೀಡಲು ನಿರ್ಧರಿಸಿದೆ.
ವಿಧಾನಸೌಧದಲ್ಲಿಂದು ಕಾರ್ಖಾನೆ ಮಾಲೀಕರು ಹಾಗೂ ರೈತರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರೈತರ ಹಿತದೃಷ್ಟಿಯಿಂದ ಪ್ರತಿ ಟನ್ ಕಬ್ಬಿಗೆ 3300 ರೂಪಾಯಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ 12 ಕಾರ್ಖಾನೆ ಹೊರತು ಪಡಿಸಿ ಉಳಿದೆಲ್ಲಾ ಸಕ್ಕರೆ ಕಾರ್ಖಾನೆಗಳು ಖಾಸಗಿ ಮಾಲಿಕತ್ವದಲ್ಲಿವೆ ಎಂದು ಹೇಳಿದ್ದಾರೆ. ಕಬ್ಬಿನ 11.25 ರಿಕವರಿಗೆ ಸಕ್ಕರೆ ಕಾರ್ಖಾನೆಗಳು 3252 ರೂಪಾಯಿ ಪಾವತಿಸಬೇಕು. ಇದಕ್ಕೆ ಸರ್ಕಾರ 50 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಲಿದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಿತ ಸಚಿವರನ್ನು ಭೇಟಿ ಮಾಡಲು ನಿರ್ಧರಿಸಿದ್ದು, ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ, ಸಕ್ಕರೆ ರಫ್ತು ಹಾಗೂ ಎಥೆನಾಲ್ ಹಂಚಿಕೆ ಕುರಿತಂತೆ ಚರ್ಚಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.




