ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾದಾಗ ವೈದ್ಯರು, ಇಲ್ಲವೇ ಸಿಬ್ಬಂದಿಯವರು ರೋಗಿಗಳಿಗೆ ದಾಖಲೆಗಳನ್ನು ಕೇಳಿ ಚಿಕಿತ್ಸೆ ನೀಡಲು ವಿಳಂಬ ಮಾಡಿ ಅವರ ಸಾವಿಗೆ ಕಾರಣರಾದರೆ ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಸಿದೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಸೇವೆಗಳ ಆಯುಕ್ತರು ಮಾರ್ಗಸೂಚಿಯನ್ನು ಹೊರಡಿಸಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಪಡಿತರಚೀಟಿ ಇಲ್ಲದೆಯೇ ಆಸ್ಪತ್ರೆಗೆ ದಾಖಲಿಸಿಕೊಂಡು ಆರೋಗ್ಯ ಸೇವೆಗಳನ್ನು ಒದಗಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಈವರೆಗೂ ರೋಗಿಗಳು, ತಾಯಿ, ಶಿಶುಗಳು, ಮಕ್ಕಳು ಸೇರಿದಂತೆ ಯಾವುದೇ ಒಬ್ಬ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ದಾಖಲೆಗಳು ಅವಶ್ಯವಿರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ರೋಗಿಯು ದಾಖಲೆಗಳನ್ನು ವೈದ್ಯರಿಗೆ ಇಲ್ಲವೇ ಸಂಬಂಧಪಟ್ಟವರಿಗೆ ಹಾಜರುಪಡಿಸಬೇಕೆಂಬ ನಿಯಮವಿಲ್ಲ. ತಾಯಿ ಕಾರ್ಡ್, ಆಧಾರ್ ಕಾರ್ಡ್ ಪಡಿತರಚೀಟಿ ಸೇರಿದಂತೆ ಯಾವುದೇ ದಾಖಲೆಗಳಿಲ್ಲದಿದ್ದರೂ ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆ ನೀಡುವುದು ಆಸ್ಪತ್ರೆಗಳ ಕರ್ತವ್ಯ ಎಂದು ಹೇಳಿದೆ.
ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ತುರ್ತು ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ದಾಖಲೆಗಳನ್ನು ನೀಡುವಂತೆ ಯಾರಿಗೂ ಒತ್ತಾಯಿಸಬಾರದೆಂದು ಆಯುಕ್ತರು ಸೂಚನೆಯಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.
ತುಮಕೂರಿನಲ್ಲಿ ಬಾಣಂತಿ ಮತ್ತು ನವಜಾತ ಶಿಶುಗಳಿಗೆ ಆಧಾರ್ ಮತ್ತು ತಾಯಿ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿ ಸಾವನ್ನಪ್ಪಿದ ಪ್ರಕರಣದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚೆತ್ತುಕೊಂಡಿದೆ.