ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಮಾರ್ಗದರ್ಶನ ನೀಡಲು ಮೋದಿ ನೇತೃತ್ವದ ಸರ್ಕಾರವು ಪಿಎಂ ಗತಿ ಶಕ್ತಿ, ನ್ಯಾಷನಲ್ ಮಾಸ್ಟರ್ ಪ್ಲಾನ್ ಯೋಜನೆಯನ್ನು ಪರಿಚಯಿಸಿದೆ. 2021 ಅಕ್ಟೋಬರ್‌ನಲ್ಲಿ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿತ್ತು. ಮೂಲಸೌಕರ್ಯ ಯೋಜನೆಗಳ ಯೋಜನೆ ಮತ್ತು ಅನುಷ್ಠಾನದ ವಿಷಯದಲ್ಲಿ ಸಮನ್ವಯಕ್ಕಾಗಿ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಒಂದೇ ಡಿಜಿಟಲ್ ವೇದಿಕೆಯಲ್ಲಿ 16 ವಲಯಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ತರಲಾಗುತ್ತದೆ. ಇದರಲ್ಲಿ ರೈಲ್ವೆ ಮತ್ತು ರಸ್ತೆಗಳು ಒಳಗೊಂಡಿವೆ. 100 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಯೋಜನೆಯು ಮುಂದಿನ 25 ವರ್ಷಗಳ ದೀರ್ಘಾವಧಿಯ ಗುರಿ ಸಾಧಿಸುವ ಉದ್ದೇಶ ಹೊಂದಿದೆ. ಪಿಎಂ ಗತಿ ಶಕ್ತಿ ಯೋಜನೆ ಮೂಲಕ ರಸ್ತೆ, ರೈಲ್ವೆ, ವಾಯುಯಾನ, ಬಂದರು, ಸಾರ್ವಜನಿಕ ಸಾರಿಗೆ, ಜಲಮಾರ್ಗ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯಗಳ ಕ್ಷೇತ್ರಗಳಿಗೆ ಸರ್ಕಾರ ಆದ್ಯತೆ ನೀಡಲಿದೆ. ರಾಜ್ಯ ಸರ್ಕಾರಗಳು ಅಭಿವೃದ್ಧಿಪಡಿಸುತ್ತಿರುವ ಮೂಲಸೌಕರ್ಯ ಯೋಜನೆಗಳು ಕೂಡ ಪಿಎಂ ಗತಿಶಕ್ತಿ ಮಾಸ್ಟರ್ ಪ್ಲಾನ್‌ನ ಭಾಗವಾಗಿದೆ.
2022-23ರಲ್ಲಿ ಪಿಎಂ ಗತಿಶಕ್ತಿ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಸಾವಿರಾರು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣವನ್ನು ತ್ವರಿತಗೊಳಿಸಲು ಸರ್ಕಾರ ನಿರ್ಧರಿಸಿದೆ. 2022-23ರ ವೇಳೆಗೆ 25,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಿಸಲು ಯೋಜನೆ ಹಾಕಿದೆ. ಬಹು ಮಾದರಿ ಲಾಜಿಸ್ಟಿಕ್ಸ್ ಪಾರ್ಕ್‌ಗಳನ್ನು ಸ್ಥಾಪಿಸಲು ಹೊರಟಿದೆ. ಸಾರ್ವಜನಿಕರಿಗೆ ಪಾರ್ಸೆಲ್‌ಗಳನ್ನು ವೇಗವಾಗಿ ತಲುಪಿಸಲು ಅಂಚೆ ಮತ್ತು ರೈಲ್ವೆ ಜಾಲಗಳು ಪ್ರಧಾನ ಪಾತ್ರ ವಹಿಸಿವೆ. ಸ್ಥಳೀಯ ವ್ಯಾಪಾರಿಗಳು ಮತ್ತು ಪೂರೈಕೆ ಸರಪಳಿಗಳಿಗೆ ಸಹಾಯ ಮಾಡಲು ‘ಒಂದು ನಿಲ್ದಾಣ-ಒಂದು ಉತ್ಪನ್ನ’ ವಿಧಾನವನ್ನು ಅಳವಡಿಸಲಾಗುತ್ತಿದೆ.
ಮುಂದಿನ ಮೂರು ವರ್ಷಗಳಲ್ಲಿ ಭಾರತವು 400 ಹೊಸ ತಲೆಮಾರಿನ ರೈಲುಗಳನ್ನು ನಿರ್ಮಿಸುತ್ತಿದೆ.
ಬಹು ಮಾದರಿ ಲಾಜಿಸ್ಟಿಕ್ ಸೌಲಭ್ಯಗಳಿಗಾಗಿ 100 ಪಿಎಂ ಗತಿಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಮೆಟ್ರೋ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ತ್ವರಿತ ಹಣಕಾಸು ನೀಡಲಾಗುತ್ತಿದೆ. ಆದ್ಯತೆಯ ಆಧಾರದ ಮೇಲೆ ಸಾಮೂಹಿಕ ನಗರ ಸಾರಿಗೆ ಮತ್ತು ರೈಲು ನಿಲ್ದಾಣಗಳ ನಡುವೆ ಮಲ್ಟಿಮಾಡೆಲ್ ಸಂಪರ್ಕ ಒದಗಿಸಲಾಗುತ್ತದೆ.
ಈ ಯೋಜನೆ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಹೊಸ ಚೈತನ್ಯ ನೀಡಲಿದೆ. ಮಲ್ಟಿಮಾಡೆಲ್ ಸಂಪರ್ಕದೊಂದಿಗೆ ಭಾರತಕ್ಕೆ ಹೆಚ್ಚಿನ ಹೂಡಿಕೆಗಳು ಬರುತ್ತಿವೆ. ಒಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಈ ಯೋಜನೆ ದೇಶದ ಮೂಲಸೌಕರ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ. ದೇಶಕ್ಕೆ ಹೊಸ ದಿಕ್ಸೂಚಿಯಾಗಲಿದೆ.