ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ರಾಜ್ಯ ಸರ್ಕಾರ 8 ಕೋಟಿ ರೂಪಾಯಿ ಅನುದಾನ ನಿಗದಿ ಮಾಡಿದ್ದು ಅದರಲ್ಲಿ 4 ಕೋಟಿ ಋೂಪಾಯಿಯನ್ನು ತಕ್ಷಣಕ್ಕೆ ರೈತರಿಗೆ ವಿತರಿಸಲು ಬಿಡುಗಡೆ ಮಾಡಲಾಗಿದೆ ಎಂದು ಗೃಹ ಸಚಿವ, ಅಡಿಕೆ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಹಾಸನ ಜಿಲ್ಲೆಯಲ್ಲಿ ಒಟ್ಟು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ಹಬ್ಬಿದ್ದು, ತೋಟಗಾರಿಕೆ ಇಲಾಖೆಯಿಂದ ಔಷಧಿ ಹಾಗೂ ಸಿಂಪಡಣೆ ವೆಚ್ಚ ಭರಿಸಲು ಅನುದಾನ ಬಿಡುಗಡೆಗೊಳಿಸಲಾಗಿದೆ. ರೋಗ ನಿಯಂತ್ರಣಕ್ಕೆ ಗುಣಮಟ್ಟದ ಸಸ್ಯ ಸಂರಕ್ಷಣೆ ಔಷಧ ಕೊಳ್ಳಲು ಪ್ರತಿ ಹೆಕ್ಟೇರ್ ಗೆ ರೂಪಾಯಿ 4000 ಹಾಗೂ ಮೊದಲ ಸಿಂಪಡಣೆಗಾಗಿ 1.5 ಹೆಕ್ಟೇರ್ ತೋಟಗಾರಿಕಾ ಪ್ರದೇಶ ಮಿತಿಗೊಳಪಟ್ಟು ಅನುದಾನ ಒದಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅಡಿಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ಸರ್ಕಾರ ಕಟಿಬದ್ಧವಾಗಿದೆ. ಇದಕ್ಕಾಗಿ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ ಎಂದು ಅರಗ ಜ್ಞಾನೇಂದ್ರ ಅವರು ಇದೇ ವೇಳೆ ಹೇಳಿದ್ದಾರೆ.