ಮುಂದಿನ ಸಂಸತ್ ಅಧಿವೇಶನದಲ್ಲಿ ಸರ್ಕಾರ ನಕಲಿ ರಸಗೊಬ್ಬರಗಳು ಹಾಗೂ ಕೀಟನಾಶಕಗಳ ವಿರುದ್ಧ ಮಸೂದೆಯನ್ನು ಮಂಡಿಸಲಿದೆ ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ದೆಹಲಿಯಲ್ಲಿ ಕಿಸಾನ್ ಟ್ರಸ್ಟ್ ಆಯೋಜಿಸಿದ್ದ ಚೌಧರಿ ಚರಣ್ ಸಿಂಗ್ ಕಿಸಾನ್ ಸಮ್ಮಾನ್ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಹಕರು ಮತ್ತು ಕೃಷಿಕರನ್ನು ದಾರಿತಪ್ಪಿಸುವ ಟ್ಯಾಗ್ ಗಳ ಅಡಿಯಲ್ಲಿ ನಕಲಿ ರಸಗೊಬ್ಬಕ ಕೀಟನಾಶಕ ಮತ್ತು ಅನಧಿಕೃತ ಜೈವಿಕ ಉತ್ತೇಜಕಗಳ ಮಾರಾಟ ಕಳವಳಕಾರಿಯಾಗಿದೆ. ಇವುಗಳ ನಿಗ್ರಹಕ್ಕೆ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಲಾಗುವುದು, ಅಪ್ರಾಮಾಣಿಕ ವ್ಯಾಪಾರಿಗಳ ವಿರುದ್ಧ ಸರ್ಕಾರ ಸಮಗ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ಅಂಗೀಕರಿಸಲ್ಪಟ್ಟ ವಿಕಸಿತ ಭಾರತ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ ಖಾತ್ರಿಪಡಿಸಲಾದ ಉದ್ಯೋಗ ದಿನಗಳನ್ನು ನೂರರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ವಿಜ್ಞಾನಿಗಳು ಮತ್ತು ರೈತರ ನಡುವಿನ ನೇರ ಸಂವಾದದ ಮಹತ್ವವನ್ನು ಹೇಳಿದ ಅವರು, ಸಂಶೋಧನಾ ಸಂಶೋಧನೆಗಳನ್ನು ನೇರವಾಗಿ ಕ್ಷೇತ್ರಗಳಿಗೆ ತರುವ ‘ಪ್ರಯೋಗಾಲಯದಿಂದ ಭೂಮಿಗೆ’ ಎಂಬ ದೃಷ್ಟಿಕೋನ ಅಗತ್ಯ ಇದೆ ಎಂದರು. ರೈತರೊಂದಿಗೆ ನೇರ ಸಂವಹನ ಮತ್ತು ಜ್ಞಾನ ವಿನಿಮಯಕ್ಕಾಗಿ ವಿಜ್ಞಾನಿಗಳು ವರ್ಷಕ್ಕೊಮ್ಮೆ ಕೃಷಿ ಜಮೀನುಗಳಿಗೆ ಭೇಟಿ ನೀಡಬೇಕೆಂದು ಸರ್ಕಾರ ನಿರ್ಧರಿಸಿದೆ ಎಂದರು.


