ಹಲವಾರು ಮಂದಿ ಮಹಿಳೆಯರು ಸ್ವ ಉದ್ಯೋಗ ಮಾಡುತ್ತಿದ್ದಾರೆ. ಕನಸಿನ ಉದ್ಯಮ ನಡೆಸುತ್ತಿದ್ದಾರೆ. ಆರಂಭದಲ್ಲಿ ಅವರಿಗೆ ಬೆಂಬಲ ಹಾಗೂ ಆರ್ಥಿಕ ನೆರವುಗಳು ಅಗತ್ಯ. ಅಂತಹ ನೆರವಾಗುವ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ ಒಂದು. ಬಾಗಲಕೋಟೆಯಲ್ಲಿ ಯಶಸ್ವಿಯಾಗಿ ಉದ್ಯಮ ನಡೆಸುತ್ತಿರುವ ಪದವೀಧರ ಮಹಿಳೆಯ ಯಶೋಗಾಥೆ ಇದು.
ಬಾಗಲಕೋಟೆಯ ತೇರದಾಳದ ವಿದ್ಯಾ ಶಿವಾನಂದ ಕೋಲೂರುಮಠ ಎಂಬ ಮಹಿಳೆ ಪದವಿ ಶಿಕ್ಷಣ ಪೂರೈಸಿ, ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ಇದೀಗ ಸ್ವಂತ ಉದ್ಯೋಗದ ಮೂಲಕ ಯಶಸ್ಸು ಗಳಿಸುತ್ತಿದ್ದಾರೆ. ವಿದ್ಯಾ ಅವರ ಉದ್ಯಮದ ಕನಸಿಗೆ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ ನೆರವಾಗಿದೆ. ಕೇಂದ್ರ ಸರ್ಕಾರದ ಯೋಜನೆಯ ಮೂಲಕ 21.5 ಲಕ್ಷ ರೂಪಾಯಿ ಸಹಾಯಧನ ಪಡೆದು ಗಾರ್ಮೆಂಟ್ಸ್ ಉದ್ಯಮವನ್ನು ಆರಂಭಿಸಿ, ವಿವಿಧ ಖಾದಿ ವಸ್ತ್ರಗಳನ್ನು ತಯಾರಿಸುತ್ತಿದ್ದಾರೆ. ವಿದ್ಯಾ ಅವರಿಗೆ ಪತಿ ಹಾಗೂ ಕುಟುಂಬಸ್ಥರು ನೆರವಾಗಿದ್ದು, ಹತ್ತಾರು ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದ್ದಾರೆ. ಇವರು ತಯಾರಿಸುವ ಉತ್ಪನ್ನಗಳನ್ನು ರಾಜ್ಯದ ವಿವಿಧ ಖಾದಿ ಮಳಿಗೆಗಳಿಗೆ ಹಾಗೂ ಅನ್ಯ ರಾಜ್ಯಗಳಿಗೂ ಪೂರೈಕೆ ಮಾಡುತ್ತಿದ್ದಾರೆ.
ಪದವಿ ಶಿಕ್ಷಣದ ಬಳಿಕ ಎರಡು ವರ್ಷ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದೆ. ಈ ಸಂದರ್ಭದಲ್ಲಿ ಏನಾದರೊಂದು ಸ್ವಂತ ಉದ್ಯಮ ಪ್ರಾರಂಭಿಸಬಹುದೇ ಎಂಬ ಆಲೋಚನೆ ಬಂದಾಗ ಮನೆಯವರಿಂದ ಖಾದಿ ಗಾರ್ಮೆಂಟ್ಸ್ ನಡೆಸುವ ಬಗ್ಗೆ ಬೆಂಬಲ ದೊರೆಯಿತು. ಕೇಂದ್ರದ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಅನುದಾನ ಪಡೆದು ಉದ್ಯಮ ಆರಂಭಿಸಿದೆ. ಇದೀಗ ತಮ್ಮ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ದೊರೆತಿದೆ ಎಂದು ವಿದ್ಯಾ ಶಿವಾನಂದ ಕೋಲೂರಮಠ ಹೇಳುತ್ತಾರೆ.
ಉದ್ಯಮಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಕೇಂದ್ರ ಸರ್ಕಾರದ ಯೋಜನೆಯಿಂದ ಬದುಕು ರೂಪಿಸಿಕೊಳ್ಳಲು ಅನುಕೂಲವಾಗಿದೆ ಎನ್ನುತ್ತಾರೆ ವಿದ್ಯಾ ಅವರ ಪತಿ ಶಿವಾನಂದ ಕೋಲೂರಮಠ.