ರೂರಲ್ ಮಿರರ್ ಸಂದರ್ಶನ
ಸಾಕ್ಷರತಾ ಆಂದೋಲನ ಆರಂಭವಾದಾಗ ಸುಳ್ಯ ತಾಲೂಕಿನ ಪಂಜದಲ್ಲಿ ಕೂಡಾ ಓದು ಬಾರದೇ ಇರುವವರಿಗೆ ಓದಿಸುವ, ಬರೆಯಿಸುವ ಆಂದೋಲನ ಆರಂಭವಾಯಿತು. ಹೀಗಾಗಿ ಪಂಜದಲ್ಲೂ 1990 ರಲ್ಲಿ ಸಾಕ್ಷರತಾ ಆಂದೋಲನ ಹೆಜ್ಜೆ ಇರಿಸಿತು. 1995 ರ ಹೊತ್ತಿಗೆ ನವಸಾಕ್ಷರರ ಪ್ರೇರಕರಾಗಿ ಜಿನ್ನಪ್ಪ ಅವರು ತೊಡಗಿಸಿಕೊಂಡರು. ಅಕ್ಷರ ಕಲಿಸುವುದು ಹಾಗೂ ಅನೇಕರ ಬದುಕಿಗೆ ಪ್ರೇರೇಪಣೆ ನೀಡುವ ಕೆಲಸ ಆರಂಭಿಸಿದರು. ರಾತ್ರಿ ಶಾಲೆ ನಡೆಸಿ ಕಾಲನಿ ನಿವಾಸಿಗಳಿಗೆ, ಅಕ್ಷರ ಬಾರದೇ ಇರುವವರಿಗೆ ಅಕ್ಷರ ಬರೆಯಲು, ಸಹಿ ಹಾಕಲು ಕಲಿಸಿದರು. 2010 ರ ವರೆಗೆ ಪ್ರೇರಕರಾಗಿ ಕೆಲಸ ಮಾಡಿ ನಂತರ 2015 ರ ವರೆಗೆ ನವಸಾಕ್ಷರರಿಗೆ ವೃತ್ತಿ ಕೌಶಲ್ಯ ತರಬೇತಿ ನೀಡಿದರು. ಅಷ್ಟವರೆಗೂ ನವಸಾಕ್ಷರರ ಸಂಘಟನೆ ಮಾಡುತ್ತಾ ಬಂದಿರುವ ಜಿನ್ನಪ್ಪ ಅವರು ನವಸಾಕ್ಷರರ ಬದುಕಿಗೆ ಪ್ರೇರಣಾದಾಯಿಯಾಗಿದ್ದರು. ಪುರುಷೋತ್ತಮ ಮುಡೂರು ಅವರಂತಹವರೂ ಮಾರ್ಗದರ್ಶನ ನೀಡಿದರು.
ನವಸಾಕ್ಷರರ ಸಂಘಟನೆಯ ಸಮಯದಲ್ಲಿ ಪಂಜದ ಪ್ರದೇಶದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದರು. ಅದರಲ್ಲಿ ನವಸಾಕ್ಷರರ ಭೂಮಿ ಸಮಸ್ಯೆ ನಿವಾರಣೆ, ಮನೆ ನಿರ್ಮಾಣ ಸೇರಿದಂತೆ ವಿವಿಧ ಕೆಲಸ ಮಾಡಿದ್ದರು. ಈಗ ಹಲವು ನವಸಾಕ್ಷರರು ಸ್ವತಂತ್ರವಾಗಿ ಯೋಚಿಸುವ ಹಂತಕ್ಕೆ ಬಂದಿದ್ದಾರೆ ಎಂದು ಜಿನ್ನಪ್ಪ ಹೇಳುತ್ತಾರೆ. ಆದರೆ ಅನೇಕ ಮೂಲಭೂತ ಸಮಸ್ಯೆಗಳು ಇದೆ. ಈ ಕಾರಣಕ್ಕೆ ಪಂಚಾಯತ್ ಗ್ರಾಮ ಸಭೆಯಲ್ಲಿ ಧ್ವನಿ ಎತ್ತುವ ಕಾರ್ಯ ಮಾಡಲಾಗಿತ್ತು. ಈ ಸಮಯದಲ್ಲಿ ಕೆಲವು ವಿರೋಧಗಳು ಬಂದಾಗ ನವಸಾಕ್ಷರರೆಲ್ಲರೂ ಒಂದಾಗಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಫರ್ಧೆ ಮಾಡಲು ನಿರ್ಧರಿಸುತ್ತಾರೆ. ಇಲ್ಲಿಂದ ಬಳಿಕ ಸಾಮಾಜಿಕವಾಗಿ ನವಸಾಕ್ಷರರ ಚಟುವಟಿಕೆ ತೆರೆದುಕೊಳ್ಳುತ್ತದೆ. ಪಂಚಾಯತ್ ಗಳು ಜನರ ಪಂಚಾಯತ್ ಆಗಬೇಕೆಂದು ಹೆಜ್ಜೆ ಇಡುತ್ತಾರೆ ಚುನಾವಣಾ ಕಣಕ್ಕೆ ಧುಮುಕುತ್ತಾರೆ. ಪಂಜ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಂಜದ 5 ವಾರ್ಡ್ ಗಳಲ್ಲಿ ಗ್ರಾಮ ಸ್ವರಾಜ್ ಎಂಬ ತಂಡದ ಮೂಲಕ ಸ್ಫರ್ಧೆ ಮಾಡುತ್ತಾರೆ. ಚುನಾವಣೆಗೆ ಸ್ಫರ್ಧೆ ಮಾಡಿದವರಲ್ಲಿ ಇಬ್ಬರು ನವಸಾಕ್ಷರರು ಉಳಿದೆಲ್ಲರೂ ವಿಧ್ಯಾಭ್ಯಾಸ ಮಾಡಿದರು.
ಚುನಾವಣಾ ಸಮಯದಲ್ಲಿ ಅಳ್ಪೆ ಚಿಂಗಾಣಿ ಗುಡ್ಡೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ರಚನೆ, ವಿದ್ಯುತ್ ಸಮಸ್ಯೆ ನಿವಾರಣೆ ಹೀಗೇ ವಿವಿಧ ಯೋಜನೆ ಹಾಗೂ ಗುರಿ ಇರಿಸಿ ಸ್ಫರ್ಧೆ ಮಾಡಿದ್ದರು. ಸೋತರೂ ತಾವು ಕೆಲಸ ಮಡುವುದಾಗಿ ಜನರಿಗೆ ತಿಳಿಸಿದ್ದರು. ಈಗ ಕೆಲಸ ಮಾಡುತ್ತಿದ್ದಾರೆ.
ನವಸಾಕ್ಷರರು 1990 ರಲ್ಲಿ 50 ಪೈಸೆ, ಒಂದು ರೂಪಾಯಿ ಹಣ ಸಂಗ್ರಹಿಸಿ, ನವ ಸಾಕ್ಷರರು ಪ್ರತಿಯೊಬ್ಬರೂ ಎರಡು ರೂಪಾಯಿ ಸಂಗ್ರಹಿಸಿ ಕಟ್ಟಿದ ಧ್ವಜ ಸ್ಥಂಭ ತೆಗೆದಿದ್ದಾರೆ, ಆಗ ನೀಡಿದ ಭರವಸೆಯಂತೆ ಪುನರ್ ನಿರ್ಮಾಣ ಮಾಡಬೇಕು ಎಂಬುದು ಒತ್ತಾಯವಾಗಿದೆ.