ಸುಳ್ಯ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಒಂದು ಕೊಲ್ಲಮೊಗ್ರ-ಕಲ್ಮಕಾರು-ಬಾಳುಗೋಡು-ಐನೆಕಿದು. ರಸ್ತೆಯಿಂದ ತೊಡಗಿ ಮೂಲಭೂತ ಸಮಸ್ಯೆಗಳಿಂದ ಈ ಗ್ರಾಮಗಳು ಈಚೆಗಿನವರೆಗೂ ಪರದಾಟ ನಡೆಸುತ್ತಿತ್ತು. ಕೆಲವು ವರ್ಷದ ಹಿಂದೆ ಸೇತುವೆ ಇಲ್ಲದೆ, ಪರದಾಟ ನಡೆಸುತ್ತಿದ್ದ ಫೋಟೊ ಒಂದು ವೈರಲ್ ಆದ ಬಳಿಕ ಒಂದಷ್ಟು ರಾಜಕೀಯ ಚರ್ಚೆಯಾದ ಊರು ಕೂಡಾ ಇದೇ ಗ್ರಾಮೀಣ ಭಾಗದಿಂದ ಸುದ್ದಿಯಾಗಿತ್ತು. ಇದೀಗ ಪತ್ರಕರ್ತರ ಗ್ರಾಮ ವಾಸ್ತವ್ಯದ ಕಾರಣದಿಂದ ಸಮಸ್ಯೆಗಳಿಗೆ ಪರಿಹಾರ ದೊರಕೀತು ಎನ್ನುವ ನಿರೀಕ್ಷೆ ಹಾಗೂ ವಿಶ್ವಾಸದಿಂದ ಜನರು ಇದ್ದಾರೆ.
ನಮಗೆ ಜನಪ್ರತಿನಿಧಿಗಳ ಮೇಲೆ ವಿಶ್ವಾಸ ಇಲ್ಲ, ಅಧಿಕಾರಿಗಳ ಮೇಲೆ ಇದೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಡಿ… ! ಇಂತಹ ಮಾತುಗಳೂ ಗ್ರಾಮ ವಾಸ್ತವ್ಯದಲ್ಲಿ ಕೇಳಿ ಬಂದಿರುವುದು ಪತ್ರಕರ್ತರ ಮೇಲಿನ ವಿಶ್ವಾಸವೂ ಆಗಿದೆ. ಈ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಈಗ ಅಧಿಕಾರಿಗಳು, ಜನಪ್ರತಿನಿಧಿಗಳ ಮೂಲಕ ಕೆಲಸ ಮಾಡಿಸಬೇಕಾಗಿದೆ. ಕಲ್ಮಕಾರು-ಕೊಲ್ಲಮೊಗ್ರ-ಬಾಳುಗೋಡು ಪ್ರದೇಶಗಳು ಬಹುಪಾಲು ಅರಣ್ಯಗಳಿಂದ ಕೂಡಿದೆ. ಹೀಗಾಗಿ ಪಂಚಾಯತ್ ಆದಾಯಗಳೂ ಹೆಚ್ಚೇನೂ ಇಲ್ಲ. ಈ ಕಾರಣದಿಂದಲೂ ಪಂಚಾಯತ್ ಮೂಲಕ ಭಾರೀ ಅಭಿವೃದ್ಧಿ ಮಾಡಿಸುವುದೂ ದೂರದ ಮಾತು. ಹಾಗಿದ್ದರೂ ಸ್ಥಳೀಯ ಪಂಚಾಯತ್‌ಗಳು ಅಲ್ಲಿ ಉತ್ತಮವಾದ ಕೆಲಸ ಮಾಡುತ್ತಿದೆ. ಈಗ ಹೆಚ್ಚಿನ ಅನುದಾನಗಳು ಪಂಚಾಯತ್ ಗೆ ಲಭ್ಯವಾಗುವಂತೆ ಮಾಡಿದರೆ ಆಯಾ ಪಂಚಾಯತ್ ಮೂಲಕ ಅಭಿವೃದ್ಧಿ ಕಾರ್ಯಗಳು ನಡೆಸಲು ಸಾಧ್ಯ ಇದೆ.
ಸೇತುವೆ, ನೆಟ್ವರ್ಕ್, ರಸ್ತೆಗಳು ಇದೆಲ್ಲಾ ಇಲ್ಲಿನ ಪ್ರಮುಖ ಬೇಡಿಕೆಗಳೂ ಆಗಿವೆ. ಕಲ್ಮಕಾರು ಗಡಿಭಾಗದಲ್ಲಿ ಕೊಡಗು ಜಿಲ್ಲೆಗೆ ಸೇರ್ಪಡೆಯಾಗುವುದರಿಂದ ಈ ಪ್ರದೇಶದ ಕೆಲವು ಮನೆಗಳಿಗೆ ತಾಲೂಕು, ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದರೆ ಪರದಾಟ ನಡೆಸಬೇಕಾದ ಸ್ಥಿತಿ ಇದೆ. ಇದಕ್ಕಾಗಿ ಮಡಿಕೇರಿ-ಗಾಳಿಬೀಡು-ಕಲ್ಮಕಾರು ರಸ್ತೆ ಅಭಿವೃದ್ಧಿಯ ಬೇಡಿಕೆ ಹಲವು ವರ್ಷಗಳಿಂದಲೂ ಇದೆ. ಇದೇ ಗಡಿಭಾಗದಲ್ಲಿರುವ ಸರ್ಕಾರಿ ಶಾಲೆಯೂ ಅಭಿವೃದ್ಧಿ ಕಾಣಬೇಕಿದೆ.
ವರ್ಷದ ಹಿಂದೆ ಬಾಳಿಗೋಡಿನ ಸೇತುವೆ ಅಭಿವೃದ್ಧಿ ಬಗೆಗೆ ನಡೆದ ಚರ್ಚೆ, ಸೋಶಿಯಲ್ ಮೀಡಿಯಾದಲ್ಲಿ ಓಡಾಡಿದ ಫೋಟೊವೊಂದು ಭಾರೀ ಚರ್ಚೆಯಾಗಿಯತ್ತು. ರಾಜಕೀಯ ಚರ್ಚೆಗೂ ಕಾರಣವಾಗಿ, ಕೊನೆಗೆ ಸೇತುವೆ ಕಾಮಗಾರಿಯೂ ನಡೆದಿತ್ತು. ಅಭಿವೃದ್ಧಿಯ ಬಗ್ಗೆ ಗ್ರಾಮೀಣ ಭಾಗದಲ್ಲಿ ಚರ್ಚೆಯಾಗುತ್ತದೆ. ಆದರೆ ಕೊನೆಗೆ ರಾಜಕೀಯವಾದ ತಿರುವುಗಳು ಪಡೆಯುವುದರಿಂದ ಸಮಸ್ಯೆಗಳು ಇನ್ನಷ್ಟು ಜಟಿಲವಾಗುತ್ತದೆ. ಆದರೆ ಈಗ ಪತ್ರಕರ್ತರ ಗ್ರಾಮ ವಾಸ್ತವ್ಯವಾದ್ದರಿಂದ ರಾಜಕೀಯ ಪಕ್ಷಗಳೂ ಜೊತೆಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಜನರಿಗೆ ನಿರೀಕ್ಷೆಯ ಗ್ರಾಮ ವಾಸ್ತವ್ಯ ಇದಾಗಿದೆ.
ಗ್ರಾಮೀಣ ಭಾಗದ ಜನರ ಸಮಸ್ಯೆ ಪರಿಹಾರಕ್ಕಾಗಿ ಪತ್ರಕರ್ತರ ಸಂಘವು ಗ್ರಾಮ ವಾಸ್ತವ್ಯದ ಮೂಲಕ ಸಮಸ್ಯೆ ಪರಿಹಾರದ ಕೆಲಸ ಮಾಡುತ್ತಿದೆ. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್, ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯತ್, ದ.ಕ.ಪೊಲೀಸ್ ಇಲಾಖೆ, ಸುಳ್ಯ ತಾಲೂಕು ಆಡಳಿತ, ಹರಿಹರ ಕೊಲ್ಲಮೊಗರು ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಲ್ಲಮೊಗ್ರದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕೊಲ್ಲಮೊಗ್ರ, ಹರಿಹರ ಈ ಭಾಗದ ಕಷ್ಟಗಳ ಅರಿವು ಆಗಿದೆ. ಇಲ್ಲಿ ಬಂದಿರುವ ಶೇ 70 ರಷ್ಟು ಅರ್ಜಿಗಳು ಭೂ ದಾಖಲೆ, ಹಕ್ಕು ಪತ್ರ ವಿಷಯಕ್ಕೆ ಸಂಬಂಧಿಸಿದ್ದು ಇದೆ. ಭಾಗಶಃ ಅರಣ್ಯ ಸಮಸ್ಯೆ ಹೆಚ್ಚಿರುವುದರಿಂದ ಇದನ್ನು ಆದ್ಯತೆಯಲ್ಲಿ ತೆಗೆದುಕೊಂಡು ಸರ್ವೆ ನಡೆಸಿ ಗಡಿ ಗುರುತು ಮಾಡಲಾಗುವುದು. ಕೊಲ್ಲಮೊಗ್ರ, ಹರಿಹರ ಭಾಗದಲ್ಲಿ ಪೈಲಟ್ ಯೋಜನೆಯಾಗಿ ಇದನ್ನು ಕೈಗೆತ್ತಿಕೊಂಡು ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.
ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದ ಶಾಸಕಿ ಭಾಗೀರಥಿ ಮುರುಳ್ಯ, ಗ್ರಾಮದ ಜನರಿಗೆ ಸರಕಾರಿ ಕಚೇರಿಗಳಿಗೆ ಹೋಗಿ ತಮ್ಮ ಕೆಲಸ ಕಾರ್ಯವನ್ನು ಮಾಡಲು ಕಷ್ಟ ಆಗುವ ಇಂತಹ ದಿನದಲ್ಲಿ ಗ್ರಾಮದ ಒಂದೇ ವೇದಿಕೆಯಲ್ಲಿ ಎಲ್ಲ ಅಧಿಕಾರಿಗಳು ಕುಳಿತು ಸಮಸ್ಯೆ ಪರಿಹರಿಸುವಲ್ಲಿ ಈ ಕಾರ್ಯ ಮಹತ್ವ ಪಡೆದಿದೆ ಎಂದರು.
ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಡಿ.ಎಫ್. ಒ. ಆಂಥೋನಿ ಮರಿಯಪ್ಪ, ಪುತ್ತೂರು ಉಪವಿಭಾಗದ ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ, ಸುಳ್ಯ ತಾ.ಪಂ. ಇ.ಒ. ರಾಜಣ್ಣ, ತಹಶೀಲ್ದಾರ್ ಮಂಜುನಾಥ್ ಜಿ, ಹರಿಹರ – ಕೊಲ್ಲಮೊಗ್ರ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಷ ಕುಮಾರ್ ದೇವಜನ, ಹರಿಹರ ಗ್ರಾ.ಪಂ. ಅಧ್ಯಕ್ಷ ವಿಜಯ ಅಂಙಣ, ಕೊಲ್ಲಮೊಗ್ರ ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ ಚಾಂತಾಳ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಮಹಾರಾಷ್ಟ್ರ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ರಾಜೇಶ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಇದ್ದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಹಾಗೂ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.
To solve the problems of the people in the rural areas, the journalists’ association is working to solve the problems through village stay (Grama Vastavya). village stay program for journalists was held in Kollamogra under the auspices of various associations.