ಮಣ್ಣು ಸವಕಳಿ(Soil Erosion) ಬಗ್ಗೆ ಎಲ್ಲರೂ ಶಾಲಾ ಪಠ್ಯ ಪುಸ್ತಕದಲ್ಲಿ ಓದಿರುತ್ತೀರಿ. ಇದನ್ನು ತಡೆಯಲು ಮರಗಳನ್ನು ನೆಡಬೇಕು(Planting trees) ಹಾಗೆ ಹುಲ್ಲುಗಾವಲನ್ನು(Grass land) ಸೃಷ್ಠಿಸಿದರೆ ಮಣ್ಣಿನ ಸವಕಳಿ ನಿಲ್ಲುತ್ತದೆ ಎನ್ನುವ ಬಗ್ಗೆ ಕೇಳಿದ್ದೇವೆ. ಅದೇ ರೀತಿ ನಮ್ಮ ಹಿರಿಯರು ಅದನ್ನು ಅನುಸರಿಸ್ತಿದ್ರು ಕೂಡ. ಆದರೆ ಆಧುನಿಕತೆ(Modernization) ಹೊಕ್ಕಂತೆ ಹುಲ್ಲು ನೆಡುವ ಬದಲು ಕಾಂಕ್ರೀಟೀಕರಕ್ಕೆ ಹೆಚ್ಚು ಒತ್ತು ನೀಡಲಾಯ್ತು. ಆದರೆ ಸಿಕ್ಕ ಫಲಿತಾಂಶ ಶೂನ್ಯ. ಆದರೆ ಈಗ ಮತ್ತೆ ಮರಳಿ ಅದೇ ಹಳೇ ಕ್ರಮಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ(NHDA) ಮುಂದಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬದಿ ಕಾಮಗಾರಿ ನಡೆಯುವ ಜಾಗದಲ್ಲಿ ಮಣ್ಣು ಸಡಿಲಗೊಂಡು ಕುಸಿಯುವ ಭೀತಿ ಇರುವ ಹಿನ್ನೆಲೆಯಲ್ಲಿ ಅದಕ್ಕೆ ಹಸಿರು ಹೊದಿಕೆಹಾಕಲು ಕಾಮಗಾರಿ ಪಡೆದುಕೊಂಡ ಗುತ್ತಿಗೆ ಸಂಸ್ಥೆಗಳ ಮೂಲಕ ಹಸಿರು ಹುಲ್ಲು(Green grass) ನೆಡುವ ಕೆಲಸ ಮಾಡಿಸುತ್ತಿದೆ.
ಈಗಾಗಲೇ ಬಿ.ಸಿ.ರೋಡ್ನ ಮುಖ್ಯ ವೃತ್ತದಿಂದ ಪಾಣೆಮಂಗಳೂರು ಸೇತುವೆವರೆಗೆ ಹಾಕಲಾದ ಮಣ್ಣು ಜರಿಯುವುದನ್ನು ತಡೆಯಲು ಹೆದ್ದಾರಿಯ ಇಕ್ಕೆಲಗಳಲ್ಲಿ ಹಸಿರು ಹುಲ್ಲು ನೆಡುವ ಕಾರ್ಯವನ್ನು ನಡೆಸಲಾಗಿದೆ. ಬಿ.ಸಿ.ರೋಡ್ನಿಂದ ಅಡ್ಡಹೊಳೆವರೆಗೆ ಚತುಷ್ಪಥ ರಸ್ತೆ ಕಾಮಗಾರಿಯ ಹಲವೆಡೆ ಮಣ್ಣು ತುಂಬಿಸಿ ರಸ್ತೆ ಎತ್ತರಗೊಳಿಸಲಾಗಿದ್ದರೆ, ಕೆಲವೆಡೆ ಗುಡ್ಡ ಅಗೆದು, ರಸ್ತೆ ಅಗಲಗೊಳಿಸಲಾಗಿತ್ತು.
ಮಳೆಗಾಲ ಆರಂಭಗೊಂಡು ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ನಿರ್ಮಿಸಲಾದ ಕಡೆಗಳಲ್ಲಿ ಮಣ್ಣು ಸಡಿಲಗೊಂಡು, ಜರಿಯುವ ಸಾಧ್ಯತೆ ಇದೆ. ಈ ಸಂದರ್ಭ ರಸ್ತೆ ಸಂಪರ್ಕ ಕಡಿತವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಹೊಸದಾಗಿ ಮಣ್ಣು ತುಂಬಿಸಿ, ರಸ್ತೆ ನಿರ್ಮಿಸಲಾಗಿದ್ದು, ರೋಲರ್ ಹಾಕಿ ಮಣ್ಣನ್ನು ಹದ ಮಾಡಿ ಕೂರಿಸಲಾಗಿದೆ. ಇಲ್ಲಿನ ಅತಿಯಾದ ಮಳೆಗೆ ಹೊದಿಕೆಯೊಳಗಿನಿಂದ ಮಣ್ಣು ಜರಿಯಲು ಆರಂಭವಾದರೆ, ನಿಲ್ಲುವುದು ಕಷ್ಟ ಎಂಬ ಅಭಿಪ್ರಾಯ ಸ್ಥಳೀಯರದ್ದು. ಕಲ್ಲು ಕಟ್ಟಿದರಷ್ಟೇ ಈ ಭಾಗದಲ್ಲಿ ಬಾಳಿಕೆ ಬರುತ್ತದೆ ಎಂಬ ಮಾತುಗಳಿವೆ.
ಆದರೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹೆದ್ದಾರಿ ಇಕ್ಕೆಲಗಳಲ್ಲೂ ಹುಲ್ಲು ನೆಡುವ ಕಾರ್ಯವನ್ನು ತಮಿಳುನಾಡಿನ ಸಂಸ್ಥೆಯೊಂದಕ್ಕೆ ಗುತ್ತಿಗೆ ವಹಿಸಿ ನೀಡಿದೆ. ತೆಂಗಿನ ಸಿಪ್ಪೆಯಿಂದ ತಯಾರಿಸಿದ ಹೊದಿಕೆ ಹಾಕಿ, ಲಾವಂಚವನ್ನು ನಾಟಿ ಮಾಡಲಾಗುತ್ತಿದೆ. ಹುಲ್ಲು ಬೆಳೆದು ಮಣ್ಣಿನ ರಕ್ಷಣೆ ಮಾಡಲು ಒಂದು ವರ್ಷವಾದರೂ ಬೇಕು. ಆದರೆ ಮಣ್ಣು ಮಳೆನೀರಿಗೆ ಕೊಚ್ಚಿಕೊಂಡು ಹೋಗದಂತೆ ರಕ್ಷಣೆ ನೀಡಲು, ತೆಂಗಿನಕಾಯಿ ಸಿಪ್ಪೆಯಿಂದ ತಯಾರಿಸಿದ ಹೊದಿಕೆ ಹಾಸಲಾಗಿದೆ. ಅದರ ಮೇಲೆ ನೆಡುವ ಹುಲ್ಲು ಒಂದು ವರ್ಷದ ಬಳಿಕ ಶಕ್ತಿಶಾಲಿಯಾಗಿ ಮಣ್ಣು ಕರಗದಂತೆ ರಕ್ಷಣೆ ನೀಡುತ್ತದೆ ಎಂದು ಹೇಳಲಾಗುತ್ತಿದೆ.
- ಅಂತರ್ಜಾಲ ಮಾಹಿತಿ