ಚಿಕ್ಕಮಗಳೂರು ಮಲೆನಾಡು ಭಾಗದಲ್ಲಿ ಅತ್ಯಂತ ವಿಶೇಷವಾದಂತಹ ಹಸಿರು ಕಪ್ಪೆಗಳು ಪತ್ತೆಯಾಗಿವೆ. ಮಲೆನಾಡಿನಲ್ಲಿ ಮೇ-ಜೂನ್ ತಿಂಗಳಿನ ಮಳೆಗಾಲದಲ್ಲಿ ಮಾತ್ರ ಈ ಹಸಿರು ಕಪ್ಪೆಗಳು ಕಾಣಸಿಗುತ್ತವೆ. ಇದು ತೇವಾಂಶ ಅಧಿಕವಾಗಿರುವ ಮಳೆಕಾಡಿನಲ್ಲಿ ಕಾಣಸಿಗುವ ಕಪ್ಪೆಯ ಒಂದು ಪ್ರಭೇದವಾಗಿದೆ.
ಮಲೆನಾಡಿನಲ್ಲಿ ಪ್ರಾರಂಭದ ಮಳೆ ಬಿದ್ದಾಗ ಹಸಿರು ಕಪ್ಪೆಗಳ ಚಟುವಟಿಕೆಗಳು ನೀರು ಇರುವ ಜಾಗದಲ್ಲಿ ಶುರುವಾಗುತ್ತದೆ. ಉಳಿದ ದಿನಗಳಲ್ಲಿ ಕಾಣ ಸಿಗುವುದಿಲ್ಲ. ತಂಪಾದ ಜಾಗದಲ್ಲಿ ಹೋಗಿ ಮರ – ಗಿಡಗಳ ಸಂಧಿಯಲ್ಲಿ ವಾಸಿಸುತ್ತವೆ. ಮೊದಲ ಮಳೆ ಪ್ರಾರಂಭವಾಗುತ್ತಿದ್ದ ಹಾಗೆ ನೀರಿರುವ ಜಾಗದಲ್ಲಿ ಬಂದು ಸಂತಾನೋತ್ಪತ್ತಿಗಾಗಿ ಸೇರುವುದು ವಿಶೇಷವಾಗಿದೆ.
ಈ ಹಸಿರು ಕಪ್ಪೆಯ ಇನ್ನೊಂದು ವಿಶೇಷ ಏನೆಂದರೆ, ಮಿಲನ ಪ್ರಕ್ರಿಯೆ ಇಲ್ಲದೇ ಬಾಹ್ಯದಲ್ಲಿ ಸಂತಾನೋತ್ಪತ್ತಿ ಕ್ರಿಯೆ ಜರಗುವ ಅಪರೂಪದ ಸಂಗತಿ ಘಟಿಸುತ್ತದೆ. ನೀರು ಇರುವ ಜಾಗವನ್ನು ಆಯ್ಕೆ ಮಾಡಿ ತನ್ನ ಮೊಟ್ಟೆಯನ್ನ ನೊರೆ ರೂಪದಲ್ಲಿ ಗೂಡು ಇಡುತ್ತದೆ. ನಂತರದ ದಿನಗಳಲ್ಲಿ ಅದು ಕರಗಿ ನೀರಿಗೆ ಬಿದ್ದು ಅಲ್ಲಿ ಮರಿಗಳಾಗುವುದು ವಿಶೇಷ.