ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಆದರೂ ಅಂತರ್ಜಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ.
ಕೋಲಾರ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೀರಿನ ಬಳಕೆ ದಕ್ಷತೆ ಹೆಚ್ಚಿಸುವ ಕುರಿತಾದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ದೇಶದ ಏಳು ರಾಜ್ಯಗಳಲ್ಲಿ ಅಂತರ್ಜಲ ಮಟ್ಟ ಆತಂಕಕಾರಿಯಾಗಿ ಕುಸಿದಿತ್ತು. ಈ ವೇಳೆ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿ 14 ಜಿಲ್ಲೆಗಳ 41 ತಾಲೂಕುಗಳಲ್ಲಿ ಅಟಲ್ ಭೂಜಲ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 645 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಎಲ್ಲ ಇಲಾಖೆಗಳು ಕಾರ್ಯಾರಂಭ ಮಾಡಿವೆ. ಅಂತರ್ಜಲದಿಂದಾಗಿ ಗೃಹ ಬಳಕೆ, ಕೈಗಾರಿಕೆ ಮತ್ತು ಕೃಷಿಗೆ ನೀರು ಲಭ್ಯವಾಗುವುದು. ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆ.ಸಿ. ವ್ಯಾಲಿ ಯೋಜನೆ(The Koramangala-Challaghatta (KC) Valley project) ಮೂಲಕ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಜನರ ಸಹಕಾರದಿಂದ ಮಾತ್ರ ಇಂತಹ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಸಚಿವ ಬೋಸರಾಜು ಹೇಳಿದರು.