ಅಡಿಕೆ ಬೆಲೆ #ArecanutPrice ಅದೆಷ್ಟೇ ಏರಿಕೆ ಆದರೂ ಅಡಿಕೆ ಬೆಳೆಯುವ ನಾಡಿನ ರೈತರ ಬದುಕು ಕೆಲವು ಕಡೆ ಸಂಕಷ್ಟದಲ್ಲೇ ಇದೆ. ರೇಟು ಜಾಸ್ತಿಯಾಯ್ತು ಅನ್ನೋ ಖುಷಿಗಿಂತ, ಅಡಿಕೆ ಬೆಳೆಗೆ ಕಾಣಿಸಿಕೊಳ್ಳುವ ವಿವಿಧ ರೋಗಗಳದ್ದೇ ಚಿಂತೆ ಹೆಚ್ಚು. ಹಳದಿ ರೋಗ, ಎಲೆ ಚುಕ್ಕಿ ರೋಗ, ಬೇರು ಹುಳ ರೋಗ, ಕಾಂಡ ಕೊರಕ, ಸಿಂಗಾರ ರೋಗ, ನಳ್ಳಿ ಬಿಳೋದು.. ಹೀಗೆ ಒಂದಾ.. ಎರಡಾ..? ಬೆಳೆ ಕೈಗೆ ಬರುವಷ್ಟಕ್ಕೆ ಅರ್ಧಕ್ಕಿಂತ ಕಡಿಮೆ ಉಳಿದರೆ ಹೆಚ್ಚು. ಅದರಲ್ಲೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹಳದಿ ರೋಗ, ಎಲೆಚುಕ್ಕಿ ರೋಗ ಅಡಿಕೆ ಬೆಳೆಗಾರರ ಬದುಕನ್ನು ಅತಂತ್ರ ಮಾಡಿದೆ. ನಿರಂತರವಾಗಿ ಹೆಚ್ಚುತ್ತಿರುವ ಹಳದಿ ರೋಗ ಎಲೆಚುಕ್ಕಿ ರೋಗಕ್ಕೆ ಅಡಿಕೆ ಬೆಳೆ ನಾಶವಾಗಿದ್ದು, ಆರ್ಥಿಕ ಸಂಕಷ್ಟದಿಂದಾಗಿ.. ಹುಟ್ಟಿ ಬೆಳೆದ ಊರಿನ ಮನೆ, ಅಡಿಕೆ ತೋಟ ಮಾರಿ ಅಡಿಕೆ ಬೆಳೆಗಾರರು ಊರು ಬಿಡುತ್ತಿದ್ದಾರೆ.
ಅಡಿಕೆ ಬೆಳಗೆ ನಿರಂತರವಾಗಿ ಎಲೆಚುಕ್ಕಿ ರೋಗದ ಜೊತೆಗೆ ಹಳದಿರೋಗ ಹೆಚ್ಚಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕಳಸ, ಕೊಪ್ಪ ,ಎನ್ ಆರ್ ಪುರ ಭಾಗದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕಣ್ಣ ಮುಂದೆಯೇ ಅಡಿಕೆ ಮರಗಳು ನಾಶವಾಗುತ್ತಿದ್ದರೂ ಅಡಿಕೆ ಮರಗಳನ್ನ ರಕ್ಷಿಸಿಕೊಳ್ಳಲು ಯಾವುದೇ ಔಷಧಿಗಳಿಲ್ಲದೆ ಕೈ ಚೆಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಅಡಿಕೆ ಬೆಳೆ ನಂಬಿ ಬದುಕು ಕಟ್ಟಿಕೊಂಡಿದ್ದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಊರುಗಳನ್ನ ಬಿಡುತ್ತಿದ್ದು, ಮನೆ ಅಡಿಕೆ ತೋಟವನ್ನ ಮಾರಿ ಪಟ್ಟಣ ಸೇರಿ ಕೆಲಸ ಮಾಡುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಊರು ಬಿಟ್ಟ ಒಂದೇ ಗ್ರಾಮದ 18 ಕುಟುಂಬ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೆಳವಿನ ಕೊಡಿಗೆ ಗ್ರಾಮದ ಅಡಿಕೆ ಬೆಳೆಗಾರರು ಒಬ್ಬರೇ ಊರು ಬಿಡುವ ಸ್ಥಿತಿ ತಲುಪಿದೆ. ಬೆಳವಿನಕೊಡಿಗೆ ಗ್ರಾಮದಲ್ಲಿದ್ದ 40 ಮನೆಗಳ ಪೈಕಿ 18 ಕುಟುಂಬಗಳು ಅಡಿಕೆ ತೋಟ ಮನೆಯನ್ನ ಮಾರಿ ಪಟ್ಟಣ ಸೇರಿದ್ದಾರೆ . ಅಡಿಕೆ ಬೆಳೆಗೆ ಹೆಚ್ಚಾದ ಹಳದಿ, ಎಲೆಚುಕ್ಕಿ ರೋಗದಿಂದ ಬೆಳೆ ನಾಶವಾಗಿ ಬೆಳೆಗಾರರು ಅರ್ಥಿಕ ಸಂಕಷ್ಟಕ್ಕೆ ಸಿಲುಕಿ ಮನೆ ಅಡಿಕೆ ತೋಟವನ್ನ ಮಾರಿ ಊರು ಬಿಟ್ಟು ಪಟ್ಟಣ ಸೇರುತ್ತಿರುವ ಅಂಶ ಮಲೆನಾಡಿನಲ್ಲಿ ಬೆಳಕಿಗೆ ಬಂದಿದೆ
ಅಡಿಕೆ ಬೆಳೆಗಾರರು ಕಂಗಾಲು : ವರ್ಷದಿಂದ ವರ್ಷಕ್ಕೆ ವಾಣಿಜ್ಯ ಬೆಳೆ ಅಡಿಕೆಗೆ ಹಳದಿ ರೋಗ ,ಎಲೆಚುಕ್ಕಿ ರೋಗ ಹೆಚ್ಚಾಗಿದ್ದು ಅಡಿಕೆ ಬೆಳೆ ಮಲೆನಾಡು ಭಾಗದಲ್ಲಿ ನಾಶವಾಗುತ್ತಿದೆ. ಅಡಿಕೆ ಬೆಳೆಗೆ ತಗುಲಿರುವ ಹಳದಿ ರೋಗ ಎಲೆಚುಕ್ಕಿ ರೋಗ ನಿಯಂತ್ರಿಸುವ ಔಷಧಿಗಳೂ ಇಲ್ಲವಾಗಿದೆ. ಇದೀಗ ಅಡಿಕೆ ರೋಗ ಹೆಚ್ಚುತ್ತಿದ್ದು ಅಡಿಕೆ ಬೆಳೆಗಾರರು ಕಂಗಲಾಗಿದ್ದಾರೆ.
ಮಲೆನಾಡಿನಲ್ಲಿ ಹೆಚ್ಚಿದ ಲ್ಯಾಂಡ್ ಮಾಫಿಯಾ: ಸಂಕಷ್ಟದಲ್ಲಿ ಇರುವ ಅಡಿಕೆ ಬೆಳೆಗಾರರ ಸ್ಥಿತಿಯನ್ನು ಬಳಸಿಕೊಳ್ಳುತ್ತಿರುವ ಲ್ಯಾಂಡ್ ಮಾಫಿಯಾ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಗ್ರಾಮದಲ್ಲಿ ಅಡಿಕೆ ತೋಟ ಖರೀದಿ ಮಾಡಿ ಬೆಂಗಳೂರು ಸೇರಿದಂತೆ ಹೊರ ರಾಜ್ಯದ ಉದ್ಯಮಿಗಳು, ಪ್ರಭಾವಿ ರಾಜಕಾರಣಿಗಳಿಗೆ ಮಾರಾಟ ಮಾಡುತ್ತಿವೆ. ಮೊದಲೇ ಅರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಡಿಕೆ ಬೆಳೆಗಾರರು ಕಡಿಮೆ ಬೆಲೆಗೆ ಅಡಿಕೆ ತೋಟ, ಮನೆ ಮಾರಾಟ ಮಾಡಿ ಪಟ್ಟಣ ಸೇರುತ್ತಿದ್ದಾರೆ.
ರೈತರೇ ಪರ್ಯಾಯ ಬೆಳೆಯ ಕಡೆಗೆ ಗಮನಿಸಿ : ಅಡಿಕೆ ಆರ್ಥಿಕ ಬೆಳೆ. ಹೀಗಾಗಿ ಅಡಿಕೆಗೆ ಪರ್ಯಾಯ ಬೆಳೆ ಇನ್ನೊಂದಿಲ್ಲ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ವಿವಿಧ ರೋಗಗಳಿಂದ ಕಂಗೆಟ್ಟಿರುವ ಅಡಿಕೆ ಬೆಳೆಗಾರರು ತಕ್ಷಣಕ್ಕೆ ಪರ್ಯಾಯ ಬೆಳೆಯತ್ತ ಹೆಜ್ಜೆ ಇಡಲೇಬೇಕಿದೆ. ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡುವ ಸ್ಥಿತಿಗೆ ಅಡಿಕೆ ಬೆಳೆಗಾರರು ಬರಬೇಕಾಗಿಲ್ಲ. ಅಡಿಕೆಯ ಬಗ್ಗೆ ವಿವಿಧ ಅಧ್ಯಯನ ನಡೆಯುತ್ತಿದೆ. ಅದುವರೆಗೂ ತಕ್ಷಣಕ್ಕೆ ಪರ್ಯಾಯ ಬೆಳೆಯತ್ತ ಅಡಿಕೆ ಬೆಳೆಗಾರರು ಮನಸ್ಸು ಮಾಡಬೇಕಿದೆ.