ಯಥಾ ರಾಜ ತಥಾ ಪ್ರಜೇ ಅನ್ನ ಬೇಕೋ, ಅಥವಾ ಮಕ್ಕಳು ದೊಡ್ಡವರನ್ನು ನೋಡಿ ಕಲಿತಾರೆ ಅನ್ನಬೇಕೋ.. ಆದರೆ ಮಕ್ಕಳ ವಿಷಯಕ್ಕೆ ಬಂದರೆ ಇಂತಹ ವಿಷಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸುವುದು ಯಾಕೋ ಸರಿ ಅನ್ನಿಸುತ್ತಿಲ್ಲ. ರಾಜಕೀಯನೇ ಬೇರೆ ವಿದ್ಯಾಭ್ಯಾಸವೇ ಬೇರೆ. ಅದು ಒಂದಕ್ಕೊಂದು ಬೆರೆತರೆ ಮಕ್ಕಳು ಯಾವುದನ್ನು ಆದರ್ಶವಾಗಿ ತೆಗೆದುಕೊಳ್ಳಬಹುದು..?
ಈ ರೀತಿ ಕೈಯ್ಯಲ್ಲೊಂದು ಭಿತ್ತಿಪತ್ರ, ಅದರಲ್ಲಿ ವಿವಿಧ ಉಚಿತ ಭಾಗ್ಯ ಯೋಜನೆಗಳ ಘೋಷಣೆ. ಹೀಗೆ ಗ್ಯಾರಂಟಿಗಳ ಮೇಲೆ ಚುನಾವಣೆ ಗೆಲ್ಲಲು ಸಿದ್ಧರಾಗಿದ್ದಾರೆ ಈ ವಿದ್ಯಾರ್ಥಿ ಅಭ್ಯರ್ಥಿಗಳು #Candidate ಈ ಪ್ರಣಾಳಿಕೆ #Election Manifesto ಯಲ್ಲಿ ಏನೆಲ್ಲಾ ಭಾಗ್ಯಗಳನ್ನು ಘೋಷಿಸಿದ್ದಾರೆ..? ಯಾವ ಶಾಲೆಯ ಮಕ್ಕಳು ಇವರು..? ಹೇಳ್ತಿವಿ ಓದಿ
ಚುನಾವಣೆ ದಿನ ಘೋಷಣೆ ಆಗಿದೆ. ಮಕ್ಕಳು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ನೀಡಿದ ಉಚಿತ ಭಾಗ್ಯಗಳ ರೀತಿಯಲ್ಲೇ.. ಮತದಾರನ ಮನಸ್ಸು ಗೆಲ್ಲಲು ಬಗೆಬಗೆಯ ಉಚಿತ ಭಾಗ್ಯ ಘೋಷಣೆ ಮಾಡಿದ್ದಾರೆ ಈ ವಿದ್ಯಾರ್ಥಿಗಳು. ಇವ್ರೆಲ್ಲ ಮೈಸೂರಿನ ಸರಗೂರು ತಾಲೂಕಿನ ಎಂಸಿ ತಾಳಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಶಾಲಾ ಸಂಸತ್ತಿನ ಮಂತ್ರಿ ಮಂಡಲಕ್ಕೆ ನಡೆಯಲಿರುವ ಚುನಾವಣೆಗೆ ಈ ಎಲ್ಲ ಕಸರತ್ತು ನಡೆಸುತ್ತಿದ್ದಾರೆ.
ತಾವೇನಾದ್ರೂ ಗೆದ್ರೆ ಮಕ್ಕಳಿಗೆ ಪೆನ್ಸಿಲ್, ಪೆನ್ನು, ಪುಸ್ತಕ, ಎರೇಸರ್ ಹೀಗೆ ಉಚಿತ ಭಾಗ್ಯಗಳ ಘೋಷಣೆಯೇ ಮಾಡಿದ್ದಾರೆ. ಈ ಮೂಲಕ ಶಾಲಾ ಚುನಾವಣೆಯಲ್ಲೂ ಉಚಿತ ಗ್ಯಾರಂಟಿಗಳ ಪ್ರಣಾಳಿಕೆ ಹವಾ ಜೋರಾಗಿದೆ. ಹುಲಿ ಹಾಗೂ ನವಿಲು ಹೆಸರು ಮತ್ತು ಚಿಹ್ನೆಯಡಿ ಎರಡು ಪಕ್ಷಗಳನ್ನ ಸೃಷ್ಟಿ ಮಾಡಿಕೊಂಡು ಈ ಚುನಾವಣೆ ನಡೆಯಲಿದೆ. ಇದಕ್ಕಾಗಿ ಮಕ್ಕಳು ಭಾರೀ ಸಿದ್ಧತೆ ಮಾಡಿಕೊಂಡಿದ್ದಾರೆ. ಶಿಕ್ಷಕರ ಮುಂದೆ ಪ್ರಣಾಳಿಕೆ ಬಿಡುಗಡೆಗೊಳಿಸಿ ತಮಗೆ ವೋಟ್ ಹಾಕುವಂತೆ ಅಭ್ಯರ್ಥಿಗಳು ಮಕ್ಕಳಲ್ಲಿ ಮನವಿ ಮಾಡಿಕೊಂಡರು.
ಮಕ್ಕಳು ಈ ರೀತಿ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಚುನಾವಣೆ ನಡೆಸುತ್ತಿರುವುದು ಎಷ್ಟು ಸರಿ ಅನ್ನೋದೆ ಪ್ರಶ್ನೆ. ಮುಂದೆ ಮಕ್ಕಳೆಲ್ಲ ಉಚಿತ ಪೆನ್ನು, ಪೆನ್ಸಿಲ್, ಬೇಕು ಅಂದ್ರೆ ಎಲ್ಲಿಂದ ಕೊಡ್ತಾರೆ. ಇದಕ್ಕಾಗಿ ಗೆದ್ದ ಮಕ್ಕಳ ಹೆತ್ತವರು ದುಡ್ಡು ಕೊಡುತ್ತಾರಾ..? ಕೊಡದಿದ್ರೆ ಓಟು ಹಾಕಿದ ಮಕ್ಕಳು ಏನು ಮಾಡಬಹುದು..? ನಮ್ಮ ನಾಗರೀಕ ಸಮಾಜ ಮಾಡಿದಂತೆ ಪ್ರತಿಭಟನೆಗಳಂತ ಯೋಚನೆಗಳನ್ನು ಮಕ್ಕಳು ಮಾಡಿದ್ರೆ ಏನು ಗತಿ..? ಮಕ್ಕಳು ಶಾಲೆಗೆ ವಿದ್ಯಾರ್ಜನೆಗೆ ಹೋಗಬೇಕು. ಅದು ಬಿಟ್ಟು ಸಾಮಾಜಕ್ಕೆ ವಿರುದ್ಧ, ಅದು ಮಕ್ಕಳಿಗೆ ಸಂಬಂಧ ಪಡದ ವಿಷಯಗಳನ್ನು ಶಾಲೆಯಲ್ಲಿ ಮಾಡುತ್ತಿರುವುದು ಎಷ್ಟು ಸರಿ..?