ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಕಾಂಗ್ರೆಸ್ ಸರ್ಕಾರದ 4ನೇ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ ಯೋಜನೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಚಾಲನೆ ನೀಡಿದ್ದರು. ಲಕ್ಷಾಂತರ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ ಅವರು, ಚುನಾವಣೆ ವೇಳೆ ಕಾಂಗ್ರೆಸ್ ನಾಯಕರು ಐದು ಗ್ಯಾರೆಂಟಿ ಭರವಸೆ ಕೊಟ್ಟಿದ್ದೆವು, ನಮಗೊಂದು ಬದ್ದತೆ ಇತ್ತು, ಕಾಂಗ್ರೆಸ್ ಕೊಟ್ಟ ಮಾತನ್ನ ಮಾಡಿ ತೋರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಟನ್ ಒತ್ತಿ ಕೋಟ್ಯಾಂತರ ಮಹಿಳೆಯರ ಖಾತೆಗೆ ಹಣಹಾಕಿದ್ದೇವೆ ಎಂದು ತಿಳಿಸಿದರು.
ಇದು ನಮ್ಮ ಮತ್ತು ಕರ್ನಾಟಕ ಸರ್ಕಾರದ ಭರವಸೆ. ನಾವು ಉಚಿತ ಪ್ರಯಾಣ ಬಗ್ಗೆ ಮತ್ತೊಂದು ಭರವಸೆ ಕೊಟ್ಟಿದ್ದೆವು, ಅದಕ್ಕೆ ಶಕ್ತಿ ಎಂಬ ಹೆಸರಿಟ್ಟು ಅದನ್ನ ಜಾರಿಗೊಳಿಸಿದ್ದೇವೆ. 1.10 ಕೋಟಿ ಫಲಾನುಭವಿಗಳ ಖಾತೆ ತಲಾ 2,000 ರೂಪಾಯಿ ಜಮೆಯಾಗಲಿದ್ದು, ಸಾಂಕೇತಿಕವಾಗಿ 10 ಫಲಾನುಭವಿಗಳಿಗೆ ಡಿಜಿಟಲ್ ಕಾರ್ಡ್ ವಿತರಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರರು ಉಪಸ್ಥಿತರಿದ್ದರು.