ಒಂದು ಸಂದರ್ಶನಕ್ಕೆ ಇಂಜಿನಿಯರಿಂಗ್‍ನಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದ ಅಭ್ಯರ್ಥಿ ಹಾಜರಾಗಿದ್ದ. ಅಂಕಪಟ್ಟಿ ಹಾಗೂ ಪದವಿ ಸರ್ಟಿಫಿಕೇಟ್‍ಗಳನ್ನೆಲ್ಲ ಪರಿಶೀಲಿಸಿದ ಬಳಿಕ ಮುಖಾಮುಖಿ ಸಂದರ್ಶನ ನಡೆಯಿತು.
“ನಿಮ್ಮ ಅಂತಿಮ ವರ್ಷದ ಪ್ರಾಜೆಕ್ಟ್‍ನ್ನು ನೀವೇ ಮಾಡಿದ್ದೀರಾ?” ಈ ಪ್ರಶ್ನೆಗೆ “ಹೌದು” ಎಂಬುದಾಗಿ ಸುಳ್ಳು ಹೇಳುವುದಾಗಿ ಆತ ಮೊದಲೇ ತೀರ್ಮಾನಿಸಿದ್ದ. ಆಮೇಲೆ ಕೆಲವು ಪ್ರಶ್ನೆಗಳಿಗೆ ಆತ ಉತ್ತರಿಸಿದ್ದ.
“ಇನ್ನು ಕೊನೆಯ ಪ್ರಶ್ನೆ. ನಮ್ಮ ಕಂಪೆನಿ ನಿಮ್ಮನ್ನು ಯಾಕೆ ನೇಮಿಸಿಕೊಳ್ಳಬೇಕು?” ಸಂದರ್ಶಕರು ಕೇಳಿದರು. ಇಂಥದೊಂದು ಪ್ರಶ್ನೆ ಆತನಿಗೆ ಅನಿರೀಕ್ಷಿತವಾಗಿತ್ತು. ಏನೆಂದು ಹೇಳಬೇಕೆಂದೇ ತೋಚಲಿಲ್ಲ. ಕಂಪೆನಿಗೆ ಯಾಕೆ ನೇಮಕ ಮಾಡಿಕೊಳ್ಳಬೇಕೆಂಬುದು ಅವರಿಗೆ ಬಿಟ್ಟ ವಿಚಾರ. ನಾನು ಅದನ್ನು ಹೇಗೆ ಹೇಳುವುದು? “ಇದೆಂಥಾ ಪ್ರಶ್ನೆ ಯಾಕೆ ಕೇಳ್ತಾರಪ್ಪಾ ಇವರು?” ಎಂದೆನ್ನಿಸಿತು. ಏನಾದರೂ ಉತ್ತರಿಸಬೇಕಲ್ಲ? “ನನಗೆ ಉದ್ಯೋಗ ಬೇಕು. ಅದಕ್ಕಾಗಿ” ಎಂದು ಹೇಳಿದ. “ಬೇರೇನಾದರೂ ಉತ್ತರವಿದೆಯಾ?” ಎಂದರು. ಏನೂ ಹೊಳೆಯದಿದ್ದುದರಿಂದ “ಇಲ್ಲ” ಎಂದ. ಅವರು ಕಿರುನಗೆ ಬೀರಿ “ಓಕೆ. ನೀವಿನ್ನು ಹೋಗಬಹುದು” ಎಂದರು. ಹೊರಗೆ ಬಂದ ಬಳಿಕ ಅಭ್ಯರ್ಥಿಗೆ ದಿಗಿಲಾಗಿತ್ತು. ಸಂದರ್ಶನವೆಲ್ಲ ಯಶಸ್ವಿಯಾಗಿತ್ತು. ಆದರೆ ಕೊನೆಯ ಪ್ರಶ್ನೆ ‘ಎಲ್ಲಾ ಬಣ್ಣ ಮಸಿ ನುಂಗಿದಂತೆ’ ಆಗಿತ್ತು. “ಬೇರೇನು ಉತ್ತರವಿದೆ ಈ ಪ್ರಶ್ನೆಗೆ?” ತಲೆ ಕೊಡವಿಕೊಂಡ. “ನಿಮಗೆ ಬೇಕಿದ್ದರೆ ನೇಮಿಸಿಕೊಳ್ಳಿ. ಬೇಡದಿದ್ದರೆ ಬೇಡ” ಎನ್ನಬಹುದಿತ್ತು. ಆದರೆ “Beggars are not choosers” ಎಂತ ಆತ ತಿಳಿದಿದ್ದ. ಹಾಗಾಗಿ ಸರಿಯಾದ ಉತ್ತರಕ್ಕಾಗಿ “Soft skill trainer” ಬಳಿಗೆ ಹೋದ. “ಈ ಪ್ರಶ್ನೆ ಅಸಂಬದ್ಧವಲ್ಲ. ಅದಕ್ಕೂ ಗುಣಾತ್ಮಕ ಉತ್ತರವಿದೆ. ಅವರ ಕಂಪೆನಿಯ ಕೆಲಸದಲ್ಲಿ ಉಪಯುಕ್ತ ಆಗಬಹುದಾದ ಯಾವ ಜ್ಞಾನ ಮತ್ತು ಕೌಶಲ್ಯ ನಿನ್ನಲ್ಲಿದೆ ಎಂಬುದನ್ನು ನೀನು ಹೇಳಬೇಕಾಗಿತ್ತು. ಏಕೆಂದರೆ ಅವರ ಕಂಪೆನಿಯ ಬಗ್ಗೆ ನೀನೇನು ತಿಳಿದುಕೊಂಡಿದ್ದೀ ಎಂಬುದು ಅವರಿಗೆ ಬೇಕಾಗಿತ್ತು.” ಎಂದರು. “ನನಗೆ ಅದು ಹೊಳೆಯಲೇ ಇಲ್ಲ. ಛೇ” ಅನ್ನಿಸಿತು ಅಭ್ಯರ್ಥಿಗೆ.
ಈತನ ಈ ಅನುಭವವು ಹೊಸ ಅಭ್ಯರ್ಥಿಗಳಿಗೊಂದು ಪಾಠ. ಆದರೆ ಅಲ್ಲಿಗೇ ಮುಗಿಯುವುದಿಲ್ಲ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸಾಂದರ್ಭಿಕವಾಗಿ ಪ್ರತಿಕ್ರಿಯಾತ್ಮಕ ಮನಸ್ಸಿನಿಂದ ಉತ್ತರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದೇ ಮುಖ್ಯ. ಈ ಬೆಳವಣಿಗೆಯ ಪ್ರಯತ್ನ ಸ್ವಂತದ್ದು. ಅಂದರೆ ವಿದ್ಯಾರ್ಥಿಗಳು ಸ್ವಾಧ್ಯಾಯ ಮತ್ತು ಸ್ವಯಂ ಚಿಂತನದ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಈ ದಿಸೆಯಲ್ಲಿ ಶಾಲೆ ಮತ್ತು ಮನೆಗಳಲ್ಲಿ ಎಳವೆಯಿಂದಲೇ ತರಬೇತಿ ನೀಡಬೇಕು. ಹೀಗೆ ತರಬೇತಿಗೆ ಒಳಗಾದವರು “ನಂಗೊತ್ತಿಲ್ಲಪ್ಪ”, “ನನ್ನಿಂದಾಗೋಲ್ಲಪ್ಪ” ಎಂಬ ಉತ್ತರಗಳನ್ನು ನೀಡುವುದಿಲ್ಲ. ಬದಲಾಗಿ ಒಂದು ಸವಾಲು ಎದುರಾದಾಗ ಅದರ ಬಗ್ಗೆ ಯೋಚಿಸಲು ತೊಡಗುತ್ತಾರೆ. ಇಂತಹ ಯೋಚನೆಗೆ ಸಮಯ ಕೊಡುವ ತಾಳ್ಮೆಯನ್ನು ಹಿರಿಯರು ಮತ್ತು ಗುರುಗಳು ತೋರಿದರೆ ಮಕ್ಕಳಲ್ಲಿ ಸೃಜನಶೀಲ ಚಿಂತನೆ ಬೆಳೆಯುತ್ತದೆ. ಅವರಲ್ಲಿ ಪ್ರತ್ಯುತ್ಪನ್ನಮತಿಯ ಉದ್ದೀಪನವಾಗುತ್ತದೆ. ಅಂತಹ ಸಾಮರ್ಥ್ಯವಂತ ಮಕ್ಕಳು ಉದ್ಯೋಗ ಮತ್ತು ಸಾಮಾಜಿಕ ಜೀವನದಲ್ಲಿ ಯಶಸ್ಸು ಕಾಣುತ್ತಾರೆ.
ಪ್ರೌಢಶಾಲೆಗಳಲ್ಲಿ ಅಥವಾ ಪದವಿ ತರಗತಿಗಳಲ್ಲಿ ಶಿಕ್ಷಕರು ಏನಾದರೂ ಪ್ರಶ್ನೆ ಕೇಳಿ ಯಾರು ಬೇಕಿದ್ದರೂ ಉತ್ತರಿಸಬಹುದೆಂಬ ಮುಕ್ತ ಅವಕಾಶ ನೀಡಿದಾಗ ಹೆಚ್ಚಿನ ವಿದ್ಯಾರ್ಥಿಗಳು ಸುಮ್ಮನಿರುತ್ತಾರೆ, ಉತ್ತರಿಸುವವರೇ ಉತ್ತರಿಸುತ್ತಾರೆ. ಆ ಅವಕಾಶವು ಯಾರಿಗೂ ಬೇಡ. ಅಂದರೆ ಎಲ್ಲರ ಮನಸ್ಸು “ನಂಗೊತ್ತಿಲ್ಲಪ್ಪ” ಎನ್ನುತ್ತಿರುತ್ತದೆ. ಯಾರಾದರೊಬ್ಬರು ಉತ್ತರ ಕೊಟ್ಟಲ್ಲಿಗೆ ಉಳಿದವರು ಮನಸ್ಸಿನಲ್ಲೇ “ಬಚಾವ್” ಎನ್ನುತ್ತಾರೆ. ವರ್ಷಾನುಗಟ್ಟಲೆ ಬಹುತೇಕ ವಿದ್ಯಾರ್ಥಿಗಳಿಗೆ ಇದೇ ಅಭ್ಯಾಸವಾಗಿರುತ್ತದೆ. ಅವರು ಬೆಳೆದು ಉದ್ಯೋಗಸ್ಥರಾದ ಬಳಿಕವೂ ಈ “ನಂಗೊತ್ತಿಲ್ಲಪ್ಪ” ಎನ್ನುವುದು ಅವರ ಸ್ವಭಾವವೇ ಆಗಿ ಬಿಡುತ್ತದೆ. ಸಾರ್ವಜನಿಕ ವೇದಿಕೆಗಳಲ್ಲಿ ಮಾತಾಡಲಾಗದ ಇವರು ಖಾಸಗಿಯಾಗಿ ಅದ್ಭುತ ಐಡಿಯಾಗಳನ್ನು ಹಂಚಿಕೊಳ್ಳಬಲ್ಲರು. ಅಂದರೆ ಅವರಲ್ಲಿ ಚಿಂತನೆಯ ಶಕ್ತಿ ಇರುತ್ತದೆ. ಆದರೆ ಅದನ್ನು ಎಲ್ಲರ ಎದುರು ಪ್ರಕಟಿಸಲು ಸಾಧ್ಯವಾಗದ ಅಸಾಮರ್ಥ್ಯವೂ ಇರುತ್ತದೆ. ಅದನ್ನು ಆ ಹಂತದಲ್ಲಿ ತುಂಬಿಕೊಳ್ಳಲಾಗುವುದಿಲ್ಲ. ಅಪರೂಪಕ್ಕೆ ಕೆಲವರು ಮಧ್ಯವಯಸ್ಸಿನಲ್ಲಿ ನಾಯಕತ್ವದ ಗುಣಗಳನ್ನು ಗಳಿಸುತ್ತಾರೆ. ಅದಕ್ಕೆ ಕಾರಣವೇನೆಂದರೆ ಅವರು ಅಕಸ್ಮಾತ್ತಾಗಿ ಗುಣಾತ್ಮಕ ಚಿಂತನೆಗಳ ಹಾದಿಯಲ್ಲಿ ಸಾಗತೊಡಗುತ್ತಾರೆ. ಆದರೆ ಪ್ರತಿಯೊಬ್ಬರೂ ಸ್ವಸಾಮರ್ಥ್ಯದ ಅರಿವನ್ನು ಎಳವೆಯಲ್ಲೇ ಪಡೆದರೆ ಆಗ ಪರಸ್ಪರ ಕ್ರಿಯಾತ್ಮಕವಾದ ಪ್ರಬುದ್ಧ ಸಮಾಜ ರೂಪುಗೊಳ್ಳುತ್ತದೆ.
‘ತನ್ನಿಂದಾಗುವುದಿಲ್ಲ’ ಎನ್ನುವುದು ಕೇವಲ ಭಾಷಣ ಮಾಡುವುದು ಮತ್ತು ಲೇಖನಗಳನ್ನು ಬರೆದು ಕೊಡುವ ವಿಷಯದಲ್ಲಿ ಮಾತ್ರವಲ್ಲ. ಗಂಡಸರು ತಮ್ಮಿಂದ ಅಡುಗೆ ಮಾಡಲು ಆಗುವುದಿಲ್ಲವೆನ್ನುತ್ತಾರೆ. ಕಾಲೇಜ್ ಶಿಕ್ಷಣದಲ್ಲಿ ತೊಡಗಿದ ಹುಡುಗಿಯರೂ ಕುಕ್ಕಿಂಗ್ ಗೊತ್ತಿಲ್ಲವೆನ್ನುತ್ತಾರೆ. ಹಾಡಲು ಬರುವುದಿಲ್ಲ ಎನ್ನುವುದು ತೀರಾ ಸಾಮಾನ್ಯವಾಗಿದೆ. ಚಿತ್ರಗಳನ್ನು ಬಿಡಿಸಲಾರದವರ ಸಂಖ್ಯೆಯೂ ತುಂಬಾ ಇದೆ. ಲೆಕ್ಕ ಮಾಡಲಾರದೆ ಒದ್ದಾಡುವವರು ತಮ್ಮಿಂದ ಸಾಧ್ಯವೇ ಇಲ್ಲವೆಂದು ಸೋಲೊಪ್ಪಿಕೊಳ್ಳುತ್ತಾರೆ. ವಿಜ್ಞಾನವಂತೂ ತಲೆಗೇ ಹತ್ತದವರಿದ್ದಾರೆ. ಮನೆಯಿಂದ ಶಾಲೆ ಹತ್ತಿರವಿದ್ದರೂ ಎಷ್ಟೋ ಮಕ್ಕಳಿಂದ ನಡೆದುಕೊಂಡು ಹೋಗಲಾಗುವುದಿಲ್ಲ. ಯೋಗಾಭ್ಯಾಸ ಮಾಡುವುದು ರೋಗ ಬಂದ ಬಳಿಕವೇ ಎಂತ ತಿಳಿದವರಿದ್ದಾರೆ. ಒಂದು ದೊಡ್ಡ ನಷ್ಟವೆಂದು ಕಾಣುವ ಸಂಗತಿಯೆಂದರೆ ವಿದ್ಯಾವಂತರೆನಿಸಿಕೊಂಡವರೂ ಏನನ್ನೂ ಓದದೇ ಇರುತ್ತಾರೆ. ಅವರಿಗೆ ಪತ್ರಿಕೆಗಳೂ ಬೇಡ, ಪುಸ್ತಕಗಳೂ ಬೇಡ. ಓದಿ ತಿಳಿದುಕೊಳ್ಳುವುದರಲ್ಲಿ ಅವರಿಗೆ ಆಸಕ್ತಿಯೇ ಇಲ್ಲ. ಇವರ ಸಂತತಿ ಸಾವಿರವಾಗಲಿ ಎಂದು ಯಾರು ಹರಸಿದ್ದಾರೋ ಗೊತ್ತಿಲ್ಲ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ಹಾಗೆ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪರೀಕ್ಷೆಗೆ ಬೇಕಷ್ಟೇ ಓದುವುದು, ನಿರ್ದಿಷ್ಟ ಪ್ರಶ್ನೆಗಳಿಗೆ ತಕ್ಕಷ್ಟೇ ಓದುವುದು, ಬಾಯಿಪಾಠಕ್ಕಾಗಿ ಓದುವುದು, ಒತ್ತಾಯದಿಂದ ಓದುವುದು ಹೀಗೆ ಓದುವಿಕೆ ಎಂಬುದು ಒಂದು ಯಾಂತ್ರಿಕ ಕ್ರಿಯೆಯಂತೆ ಜರಗುತ್ತದೆ. ಒಂದು ಹರಿಕೆ ಸಂದಾಯದಂತೆ ಓದುವ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಆಸಕ್ತಿ ಇರುವುದಿಲ್ಲ. ಇಂತಹ ಅನಾಸಕ್ತಿಯೇ ಮುಂದುವರಿದು ಅಗತ್ಯ ಮಾಹಿತಿಗಳನ್ನೂ ಓದಿಕೊಳ್ಳದ ಜಾಡ್ಯ ಮುಂದುವರಿಯುತ್ತದೆ. ಹಾಗಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ಮತ್ತು ಪ್ರತಿಕ್ರಿಯಾತ್ಮಕ ಓದಿನ ಅಭ್ಯಾಸ ಮಾಡಿಸಬೇಕು. ಓದಿದ್ದನ್ನು ಸಂಕ್ಷೇಪಿಸಿ ಬರೆಯುವ ಮತ್ತು ಓದಿದ್ದರ ಸಾರಾಂಶ ಬರೆಯುವ ಚಟುವಟಿಕೆಗಳನ್ನು ಐದನೇ ಆರನೇ ತರಗತಿಯಿಂದಲೇ ಆರಂಭಿಸಬೇಕು. ಓದುವ ಕಿರು ಪುಸ್ತಕಗಳ ಆಯ್ಕೆಯನ್ನು ಮಕ್ಕಳಿಗೇ ಬಿಡಬೇಕು. ಮಕ್ಕಳು ಬರೆದ ಸಂಕ್ಷೇಪ ಲೇಖನಗಳನ್ನು ಹಾಗೂ ಸಾರಾಂಶಗಳನ್ನು ಶಿಕ್ಷಕರು ಆಸಕ್ತಿ ವಹಿಸಿ ನೋಡಿ ತಮ್ಮ ಮಾರ್ಗದರ್ಶನ ಹಾಗೂ ಪ್ರಶಂಸೆಗಳನ್ನು ನೀಡಬೇಕು. ಇಂತಹ ಚಟುವಟಿಕೆಯನ್ನು ಅಳವಡಿಸುವ ಅವಕಾಶ ಶಾಲಾ ವೇಳಾಪಟ್ಟಿಯಲ್ಲಿ ಇರಬೇಕು. ಓದುವ ಸಾಮರ್ಥ್ಯವೃದ್ಧಿಯ ಇಂತಹ ಒಂದು ಚಟುವಟಿಕೆ ವಿವೇಚಿಸುವ, ವಿಶ್ಲೇಷಿಸುವ, ತರ್ಕಿಸುವ, ವಾದ ಮಂಡಿಸುವ ಹೀಗೆ ಓದಿರುವ ಮಾಹಿತಿಯನ್ನು ಬಳಸಿಕೊಂಡು ಇನ್ನಿತರ ಸಾಮರ್ಥ್ಯಗಳನ್ನು ಶಾಲೆಗಳಲ್ಲೇ ಬೆಳೆಸಬೇಕು. ಆದರೆ ಶಿಕ್ಷಣ ವ್ಯವಸ್ಥೆಯಲ್ಲಿ ಅಷ್ಟೊಂದು ಚಟುವಟಿಕೆಗಳ ವ್ಯಾಪ್ತಿ ಇಲ್ಲದಿರುವುದೇ “ನಂಗೊತ್ತಿಲ್ಲಪ್ಪ”, “ನನ್ನಿಂದಾಗೋಲ್ಲಪ್ಪ” ಎನ್ನುವ ದುರ್ಬಲತೆಗೆ ನಮ್ಮ ವಿದ್ಯಾವಂತರನ್ನು ಇಳಿಸಿದೆ.
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…