ಗುಜರಾತ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಆರಂಭಿಕ ಹಂತದಲ್ಲಿ ಆಡಳಿತಾರೂಢ ಬಿಜೆಪಿಯು ಭರ್ಜರಿ ಮುನ್ನಡೆ ಸಾಧಿಸಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದ್ದು ಬಹುಮತದತ್ತ ದಾಪುಗಾಲು ಹಾಕಿದೆ. ಎಎಪಿಯು ಗುಜರಾತ್‌ನಲ್ಲಿ ಖಾತೆ ತೆರೆಯುವ ನಿರೀಕ್ಷೆಯಲ್ಲಿದ್ದರೆ ಹಿಮಾಚಲ ಪ್ರದೇಶದಲ್ಲಿ ಹಿನ್ನಡೆ ಅನುಭವಿಸಿದೆ.
ಸದ್ಯ ಗುಜರಾತ್‌ನಲ್ಲಿ182 ಸ್ಥಾನಗಳಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಹೊಂದಿದ್ದು ಕಾಂಗ್ರೆಸ್ 16 ಮತ್ತು ಎಎಪಿ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಹಿಮಾಚಲ ಪ್ರದೇಶದಲ್ಲಿ 68 ವಿಧಾನಸಭಾ ಸ್ಥಾನಗಳಲ್ಲಿ ಪ್ರತಿಪಕ್ಷ ಕಾಂಗ್ರೆಸ್ 30 ರಲ್ಲಿ ಮುನ್ನಡೆ ಸಾಧಿಸಿದರೆ, ಆಡಳಿತಾರೂಢ ಬಿಜೆಪಿ 30, ಸ್ವತಂತ್ರ ಅಭ್ಯರ್ಥಿಗಳು ಐದರಲ್ಲಿ ಮುಂದಿದ್ದಾರೆ. ಆಮ್ ಆದ್ಮಿ ಪಕ್ಷ (ಎಎಪಿ) ಇನ್ನೂ ತನ್ನ ಖಾತೆಯನ್ನು ತೆರೆದಿಲ್ಲ.
1985ರ ನಂತರ ಹಿಮಾಚಲದಲ್ಲಿ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರಗಳು ಎರಡು ಬಾರಿ ಅಧಿಕಾರ ಗಳಿಸಿಲ್ಲ. ಈ ಬಾರಿ ಬಿಜೆಪಿ ಅದನ್ನು ಹುಸಿಗೊಳಿಸಲು ಪ್ರಯತ್ನಿಸುತ್ತಿದೆ.
1995 ರಿಂದ ರಾಜ್ಯದಲ್ಲಿ ಯಾವುದೇ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿಲ್ಲ. ಈ ಬಾರಿ ಭರ್ಜರಿ ಸ್ಥಾನ ಗಳಿಸುವ ನಿರೀಕ್ಷೆ ಇದೆ.
ಗುಜರಾತ್ ನಲ್ಲಿ ಬಿಜೆಪಿಯು ತನ್ನ ಅಭಿವೃದ್ಧಿ ಅಜೆಂಡಾ ಗೆದ್ದಿದೆ ಎಂದು ಹೇಳಿದೆ. ಈ ಗೆಲುವು ತನ್ನ ಅಭಿವೃದ್ಧಿ ಕಾರ್ಯಸೂಚಿಯ ಪ್ರತಿಬಿಂಬ ಮತ್ತು ಕಾಂಗ್ರೆಸ್‌ನ “ನಕಾರಾತ್ಮಕ ರಾಜಕೀಯ” ದ ಸೋಲು ಎಂದು ಬಣ್ಣಿಸಿದೆ. ಗುಜರಾತ್‌ನಲ್ಲಿ ದಾಖಲೆಯ ಏಳನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಮರಳಲು ಸಜ್ಜಾಗಿದೆ. ಜನರ ತೀರ್ಪು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮೇಲಿನ ಜನರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಪಕ್ಷವು ರಾಜ್ಯದಲ್ಲಿ ನಡೆಸಿದ ಅಭಿವೃದ್ಧಿಯ ಅಜೆಂಡಾದ ವಿಜಯವಾಗಿದೆ ಎಂದು ಗುಜರಾತ್ ಬಿಜೆಪಿ ವಕ್ತಾರ ಯಮಲ್ ವ್ಯಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.