ಚುನಾವಣೆಯ ಹಿನ್ನೆಲೆಯಲ್ಲಿ ರೈತರು ಕೋವಿ ಡಿಪಾಸಿಟ್ ಮಾಡುವ ಆದೇಶದಲ್ಲಿ ಕೊಂಚ ವಿನಾಯಿತಿ ರೈತರಿಗೆ ಲಭ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ರೈತರು ಕೋವಿ ಡಿಪಾಸಿಟ್ ಬಗ್ಗೆ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದರೆ ಅನಿವಾರ್ಯತೆ ಪರಿಶೀಲಿಸಿ ವಿನಾಯಿತಿ ನೀಡಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಚುನಾವಣೆ ಸಂದರ್ಭ ಶಾಂತಿ ಮತ್ತು ಮುಂಜಾಗ್ರತಾ ಕ್ರಮವಾಗಿ ಶಸ್ತ್ರಾಸ್ತ್ರ ಠೇವಣಿಗೆ ಆದೇಶಿಸಲಾಗುತ್ತದೆ. ಪ್ರತೀ ಬಾರಿಯೂ ಚುನಾವಣೆಯ ಸಮಯದಲ್ಲಿ ಈ ನಿಯಮ ಇರುತ್ತದೆ. ಕಳೆದ ಎರಡು ಮೂರು ಚುನಾವಣೆಯಿಂದಲೇ ರೈತರು ಈ ನಿಯಮ ಸಡಿಲಿಕೆ ಮಾಡಬೇಕು. ಕೋವಿ ಡಿಪಾಸಿಟ್ ಇಡುವ ನಿಯಮ ಸಡಿಲಿಕೆ ಮಾಡಬೇಕು ಎಂದು ಒತ್ತಾಯ ಮಾಡುತ್ತಲೇ ಬಂದಿದ್ದರು. ಈ ಬಾರಿಯೂ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ರೈತರಿಗೆ ಆಗುವ ಸಮಸ್ಯೆ ಬಗ್ಗೆಯೂ ಮಾಹಿತಿ ನೀಡಿದ್ದರು. ಕ್ರಿಮಿನಲ್ ಹಿನ್ನಲೆಯುಳ್ಳವರಿಗೆ ಡಿಪಾಸಿಟ್ ಮಾಡಲು ಸೂಚನೆ ನೀಡಿ, ಉಳಿದ ಕೃಷಿಕರಿಗೆ ವಿನಾಯಿತಿ ನೀಡಿ ಎಂದೂ ಹೇಳಿದ್ದರು. ಇದೀಗ ದ ಕ ಜಿಲ್ಲಾಧಿಕಾರಿಗಳು ನಿಯಮದಲ್ಲಿ ಕೊಂಚ ಸಡಿಲಿಕೆ ಮಾಡಲು ದ ಕ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಪರಾಧ ಹಿನ್ನಲೆ, ಜಾಮೀನಿನಲ್ಲಿ ಬಿಡುಗಡೆಯಾದವರು, ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ದೊಂಬಿ ಗಲಾಟೆಯಲ್ಲಿ ಭಾಗಿಯಾದವರನ್ನು ಹೊರತುಪಡಿಸಿ ಉಳಿದ ರೈತರಿಗೆ ಶಸ್ತ್ರಾಸ್ತ್ರ ಠೇವಣಿಯಲ್ಲಿ ವಿನಾಯಿತಿ ನೀಡಿದ್ದಾರೆ.
ಆದರೆ ರೈತರು ಬೆಳೆ ರಕ್ಷಣೆಗಾಗಿ ಕೋವಿಯ ಆವಶ್ಯಕತೆ ಇದ್ದರೆ ಪೂರಕ ದಾಖಲೆಗಳೊಂದಿಗೆ ತಾಲೂಕು ತಹಶೀಲ್ದಾರರಿಗೆ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸ್ಕ್ರೀನಿಂಗ್ ಸಮಿತಿಗಳನ್ನು ರಚಿಸಲಾಗಿದೆ.ಈ ಸಮಿತಿ ಅಹವಾಲುಗಳ ಪರಿಶೀಲಿಸಿ ಅರ್ಹ ಪ್ರಕರಣಗಳಲ್ಲಿ , ಅವಶ್ಯಕತೆ ಇದ್ದವರಿಗೆ ಠೇವಣಿ ಇಡುವುದರಿಂದ ವಿನಾಯಿತಿ ನೀಡಲು ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.