ಪ್ರತೀ ಚುನಾವಣೆಯ ಸಂದರ್ಭ ಕೃಷಿಕರಿಗೆ ಸಮಸ್ಯೆ ಕೋವಿ ಠೇವಣಾತಿಯದ್ದು. ಕಳೆದ ಕೆಲವು ಸಮಯಗಳಿಂದ ಈ ಬಗ್ಗೆ ವಿವಾದ, ಚರ್ಚೆ ನಡೆಯುತ್ತಿತ್ತು. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ 56 ಕೃಷಿಕರು ಒಟ್ಟಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ತೀರ್ಪು ಕೂಡಾ ಪ್ರಕಟವಾಗಿದೆ. ಚುನಾವಣೆ ಘೋಷಣೆ ಜೊತೆಗೇ ಸ್ಕ್ರೀನಿಂಗ್ ಕಮಿಟಿ ಕೂಡಾ ರಚನೆಯಾಗಿ, ಕೃಷಿಕರು ಈ ಕಮಿಟಿಗೆ ಕೋವಿ ವಿನಾಯತಿಗೆ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಸ್ಕ್ರೀನಿಂಗ್ ಕಮಿಟಿಯು ಚುನಾವಣೆ ಘೋಷಣೆಯ ಜೊತೆಗೇ ರಚನೆಯಾಗಬೇಕಿದೆ.
ಚುನಾವಣಾ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರು ತೀವ್ರ ಅಸಮಾಧಾನಗೊಂಡಿದ್ದರು. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇಡೀ ದೇಶಕ್ಕೆ ಚುನಾವಣೆ ನಡೆಯಲು ಆಯೋಗಕ್ಕೆ ಒಂದೇ ನಿಯಮ ಇದ್ದರೂ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಆಯಾ ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಆದರೆ ಇಲ್ಲಿ ಕೃಷಿಕರು ಕೋವಿ ಠೇವಣಾತಿ ಇರಿಸುವುದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಪರಿಹಾರ ಸಿಕ್ಕಿರಲಿಲ್ಲ.
ಈ ಬಗ್ಗೆ ಸುಳ್ಯ ತಾಲೂಕಿನ ಗುತ್ತಿಗಾರಿನ ಗಂಗಾಧರ ಭಟ್ ಪುಚ್ಚಪ್ಪಾಡಿ ಅವರ ನೇತೃತ್ವದಲ್ಲಿ 56 ಮಂದಿ ಕೋವಿ ಲೈಸನ್ಸ್ ಹೊಂದಿದವರು ದಕ ಜಿಲ್ಲೆಯ ಚುನಾವಣಾಧಿಕಾರಿಗಳು ಚುನಾವಣೆಯ ಸಮಯದಲ್ಲಿ ಹೊರಡಿಸಿದ ಆದೇಶದಲ್ಲಿ ಕಂಡುಬಂದಿರುವ ಕೋವಿ ಠೇವಣಾತಿಯ ವಿನಾಯಿತಿ ಕೃಷಿಕರಿಗೆ ಸಿಗಬೇಕು ಎಂದು ಒತ್ತಾಯಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ ನಾಗಪ್ರಸನ್ನ ಅವರು, ಚುನಾವಣೆಯ ಘೋಷಣೆ ಸಂದರ್ಭದಲ್ಲಿಯೇ ಸ್ಕ್ರೀನಿಂಗ್ ಕಮಿಟಿ ರಚನೆ ಮಾಡಿ ಕೃಷಿಕರು ಈ ಸಮಿತಿಗೆ ಅರ್ಜಿ ಸಲ್ಲಿಸಿ ವಿನಾಯಿತಿ ಪಡೆಯಬೇಕು ಹಾಗೂ ಠೇವಣಾತಿಗೆ ಸಂಬಂಧಿಸಿ ನೋಟೀಸು ಬಂದ 7 ದಿನಗಳ ಒಳಗಾಗಿ ಕೋವಿ ಠೇವಣಾತಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಹೀಗಾಗಿ ಇನ್ನು ಚುನಾವಣೆಯ ಸಮಯದಲ್ಲಿ ತಕ್ಷಣವೇ ಸ್ಕ್ರೀನಿಂಗ್ ಕಮಿಟಿ ರಚನೆಯಾಗಿ ಕೃಷಿಕರು ಅರ್ಜಿ ಸಲ್ಲಿಸುವ ವ್ಯವಸ್ಥೆ ಹಾಗೂ ಕೃಷಿಕರಿಗೆ ಕೋವಿ ಠೇವಣಾತಿ ವಿನಾಯತಿಗೆ ಅವಕಾಶ ಸಿಗಬೇಕಿದೆ.
ಕೃಷಿಕರ ಪರವಾಗಿ ಹೈಕೋರ್ಟ್ ನ್ಯಾಯವಾದಿ ಕೃಷ್ಣಮೂರ್ತಿ ಡಿ ವಾದಿಸಿದ್ದರು. ಸುಳ್ಯದ ನ್ಯಾಯವಾದಿ ಶಂಕರ್ ಕುಮಾರ್ ಕೆ, ಕರಿಕಳ ಸಹಕರಿಸಿದ್ದರು.