ಗುತ್ತಿಗಾರಿನ ಅನೂಚಾನ ವಿದ್ಯಾ ಪ್ರತಿಷ್ಟಾನ ಹಾಗೂ ಗುತ್ತಿಗಾರು ಹವ್ಯಕ ವಲಯ ಇದರ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ವಸಂತ ವೇದ ಶಿಬಿರ ಮತ್ತು ಗಾಯತ್ರೀ ಯಜ್ಞ ಪ್ರಾರಂಭವು ನಡೆಯಿತು. ವೇ.ಮೂ.ಕರುವಜೆ ಕೇಶವ ಜೋಯಿಸರು ಶಿಬಿರವನ್ನು ಉದ್ಘಾಟಿಸಿದರು.
ವೇದ ಪರಂಪರೆ ಹಾಗೂ ಭಾರತೀಯ ಪರಂಪರೆಯ ಉಳಿವಿನ ಉದ್ದೇಶದೊಂದಿಗೆ ಕಳೆದ ಹಲವು ವರ್ಷಗಳಿಂದ ವಳಲಂಬೆಯಲ್ಲಿ ನಡೆದುಕೊಂಡು ಬರುತ್ತಿರುವ ವಸಂತ ವೇದ ಶಿಬಿರವು ಶುಕ್ರವಾರ ವಳಲಂಬೆಯಲ್ಲಿ ಉದ್ಘಾಟನೆಗೊಂಡಿತು. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಸಹಕಾರದೊಂದಿಗೆ ಗುತ್ತಿಗಾರಿನ ಅನೂಚಾನ ವಿದ್ಯಾಪ್ರತಿಷ್ಟಾನ ಹಾಗೂ ಗುತ್ತಿಗಾರು ಹವ್ಯಕ ವಲಯ ಇದರ ಆಶ್ರಯದಲ್ಲಿ 20 ದಿನಗಳ ಕಾಲ ನಡೆಯುವ ವಸಂತ ವೇದ ಶಿಬಿರವನ್ನು ಉದ್ಘಾಟಿಸಿದ ವೇ.ಮೂ.ಕರುವಜೆ ಕೇಶವ ಜೋಯಿಸರು, ಶ್ರದ್ಧಾ, ಮೇಧ, ಪ್ರಜ್ಞಾ ಶಕ್ತಿಯನ್ನು ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳುವ ಮೂಲಕ ಅಂತ:ಶಕ್ತಿ, ಚೈತನ್ಯವನ್ನು ವೃದ್ಧಿಸಿಕೊಳ್ಳಬೇಕು. ಈ ಮೂಲಕ ಜಗತ್ತಿಗೆ ಒಳಿತಾಗುವಂತಹ ಕಾರ್ಯಗಳನ್ನು ಮಾಡಬೇಕಾಗಿದೆ. ವೇದದ ಅಧ್ಯಯನ ಹಾಗೂ ಪಠಣದ ಮೂಲಕ, ನಿತ್ಯಾನುಷ್ಟಾನಗಳ ಮೂಲಕ ಮಾನಸಿಕವಾದ ದೃಢತೆಯನ್ನು , ಚೈತನ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಅನೂಚಾನ ವಿದ್ಯಾಪ್ರತಿಷ್ಟಾನ ಅಧ್ಯಕ್ಷ ಕೃಷ್ಣ ಭಟ್ ಗುಂಡಿಮಜಲು ಮಾತನಾಡಿ, ಕೊರೋನಾ ನಂತರ ಎರಡು ವರ್ಷಗಳ ಕಾಲ ವೇದ ಶಿಬಿರದ ಆಯೋಜನೆ ಸಾಧ್ಯವಾಗಿರಲಿಲ್ಲ. ಸಮಾಜದ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ಅನೂಚಾನ ವಿದ್ಯಾಪ್ರತಿಷ್ಟಾನದ ಪ್ರಾಚಾರ್ಯ ವೇ.ಮೂ.ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು. ಪ್ರತಿಷ್ಟಾನದ ಕಾರ್ಯದರ್ಶಿ ಶಿವರಾಮ ಕರುವಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ವೇ.ಮೂ.ಕರುವಜೆ ಕೇಶವ ಜೋಯಿಸರ ನೇತೃತ್ವದಲ್ಲಿ ಗಾಯತ್ರೀ ಯಜ್ಞದ ಮಹಾಸಂಕಲ್ಪ ನೆರವೇರಿತು.