ಎರಡು ವರ್ಷಗಳ ಕಾಲ ಇಡೀ ವಿಶ್ವವನ್ನೆ ಹಿಂಡಿ ಹಿಪ್ಪೆ ಮಾಡಿದ್ದ ಕೊರೋನಾ ಮಾಹಾಮಾರಿ ಮಾದರಿಯಲ್ಲೇ ಈಗ ಮತ್ತೆ ಶೀತ, ಕಫ ಒಕ್ಕರಿಸುವ ಭೀತಿ ಎದುರಾಗಿದೆ. ಆದರೆ ಈಗ ಕೊರೋನಾ ಇಲ್ಲ ಎಂದು ಹೇಳಲಾಗುತ್ತಿದೆ. ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ಸ್ಪಷ್ಟನೆ ನೀಡುತ್ತಿದೆ. ಆದರೆ ಭಾರಿ ಸಂಖ್ಯೆಯಲ್ಲಿ ಜನ ಶೀತ, ಕೆಮ್ಮು ನೆಗಡಿಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಜ್ಞರು ಸಲಹೆ ನೀಡುತ್ತಿದ್ದು, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸೋಮವಾರ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಭೆ ನಡೆಸುತ್ತಿದ್ದಾರೆ.
ದೇಶದಲ್ಲಿ ಹೊಸ ವೈರಾಣು ಎಚ್3ಎನ್2 ಪ್ರಬೇಧ ಪತ್ತೆಯಾಗಿದೆ. ಆದರೆ, ರಾಜ್ಯದಲ್ಲಿ ಇನ್ನೂ ಪತ್ತೆಯಾಗಿಲ್ಲ. ಈಗಾಗಲೇ ಅನುಸರಿಸಬೇಕಾದ ಕ್ರಮಗಳ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ನಾಳೆ ನಡೆಯುವ ಸಭೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ಈ ವೈರಾಣುವಿನಿಂದ ದೀರ್ಘಾವಧಿಯ ಕೆಮ್ಮು ಇರಲಿದೆ. ಆದರೆ, ರಾಜ್ಯದಲ್ಲಿ ಎಚ್3ಎನ್2 ಪ್ರಭೇಧ ಪತ್ತೆಯಾಗಿಲ್ಲ, ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಈಗಿನ ಹವಾಮಾನ ವೈಪರೀತ್ಯದ ಕಾರಣದಿಂದ ಆರೋಗ್ಯದಲ್ಲೂ ವ್ಯತ್ಯಾಸ ಕಂಡುಬರುತ್ತಿದೆ. ವಿಪರೀತ ಉಷ್ಣತೆಯ ಕಾರಣದಿಂದ ಸಾಮಾನ್ಯವಾಗಿ ಈ ಸಮಯದಲ್ಲಿ ಜ್ವರ, ಕೆಮ್ಮು, ಕಫ ಕಂಡುಬರುತ್ತದೆ. ಆದರೆ ಎರಡು ವರ್ಷಗಳ ಹಿಂದೆ ಬಾಧಿಸಿರುವ ಕೊರೋನಾ ಈಗ ಎಲ್ಲದಕ್ಕೂ ಭಯ ತಂದಿರಿಸಿದೆ.